ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಲ್ಲಿ ಅಸಮಾಧಾನ

Last Updated 6 ಜನವರಿ 2011, 6:50 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನಲ್ಲಿ ಕಾಂಗ್ರೆಸ್ ಶಾಸಕರಿದ್ದು, ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಹೀನಾಯ ಸ್ಥಿತಿಗೆ ತಲುಪಿರುವುದು ಸಾರ್ವಜನಿಕರಲ್ಲಿ ಚರ್ಚೆಯ ವಿಷಯವಾಗಿದ್ದರೆ, ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳು ಇದ್ದು, ಕಾಂಗ್ರೆಸ್ ಶಾಸಕರು ಇಲ್ಲದ ಸಂದರ್ಭದಲ್ಲಿಯೂ ಸಹ ಎರಡು ಜಿ.ಪಂ, ಒಂಬತ್ತು ತಾಲ್ಲೂಕು ಪಂಚಾಯಿತಿ ಸ್ಥಾನಗಳಲ್ಲಿ ಪಕ್ಷ ಜಯಗಳಿಸಿತ್ತು.

ಈ ಬಾರಿ ಕೊತ್ತಗೆರೆ, ಮಡಿಕೆಹಳ್ಳಿ ತಾ.ಪಂ. ಕ್ಷೇತ್ರಗಳಲ್ಲಿ ಮಾತ್ರ ಜಯ ಗಳಿಸಿದ್ದು, ಜಿ.ಪಂ. ಆರು ಕ್ಷೇತ್ರಗಳಲ್ಲಿ ಒಂದರಲ್ಲೂ ಗೆಲುವು ಸಾಧಿಸಿಲ್ಲ. ಮತ ಎಣಿಕೆ ದಿನದಂದು ತಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ಭ್ರಮೆಯಲ್ಲಿದ್ದ ನೂರಾರು ಕಾರ್ಯಕರ್ತರು ಶಾಸಕರ ಕಚೇರಿ ಮುಂದೆ ವಿಜಯೋತ್ಸವ ಆಚರಿಸಲು ಸೇರಿದ್ದರು. ಆದರೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ಕಾರ್ಯಕರ್ತರ ಉತ್ಸಾಹಕ್ಕೆ ತಣ್ಣೀರು ಬಿದ್ದಂತಾಯಿತು. ನಿರೀಕ್ಷಿತ ಫಲಿತಾಂಶ ಬಾರದೆ ಬಹಿರಂಗವಾಗಿ ಕೆಲ ಮುಖಂಡರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಬೆಂಗಳೂರಿಗೆ ತೆರಳಿದರು.

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗಾಯತ್ರಿರಾಜು, ತಾಲ್ಲೂಕಿನಲ್ಲಿ ಪಕ್ಷಕ್ಕಾಗಿ ದುಡಿಯುವಂತಹ ನಿಷ್ಠಾವಂತ ಕಾರ್ಯಕರ್ತರ ಸಮೂಹ ಇದೆ. ಆದರೆ, ಶಾಸಕರು ಮಾತ್ರ ಜಿ.ಪಂ.ಗೆ ಸಮರ್ಥ ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ವಿಫಲರಾಗಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ತೋಳ್ಬಲ-ಹಣ ಬಲವೆ ಪ್ರಮುಖ ಎಂದು ಪರಿಗಣಿಸಿ ಕೆಲವೆಡೆ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಕೆಲ ಮುಖಂಡರ ದಬ್ಬಾಳಿಕೆಗೆ ಮಣಿದು ಟಿಕೆಟ್ ಹಂಚಿದ್ದಾರೆ. ಅವರ ವೈಯಕ್ತಿಕ ಹಿತದೃಷ್ಟಿಯಿಂದ ಪಕ್ಷಕ್ಕೆ ಈ ಸ್ಥಿತಿ ಬಂದಿದೆ ಎಂದರು.

ಮುಖಂಡ ರಂಗಣ್ಣಗೌಡ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸೋಲಿಗೆ ಶಾಸಕರೊಬ್ಬರೆ ಕಾರಣರಲ್ಲ, ಜೆಡಿಎಸ್ ಅಲೆ ಹೆಚ್ಚಿದ್ದು, ಜತೆಗೆ ಎಚ್.ಡಿ.ಕುಮಾರಸ್ವಾಮಿ ಪ್ರಚಾರ ನಡೆಸಿದ್ದು ಸಹ ಜೆಡಿಎಸ್ ಜಯಗಳಿಸಲು ಸಹಕಾರಿಯಾಗಿತ್ತು. ಶಾಸಕರು, ಪ್ರಮುಖ ಮುಖಂಡರು ಇನ್ನಷ್ಟು ಶ್ರಮ ವಹಿಸಿದ್ದರೆ, ಪರಿಸ್ಥಿತಿ ಸುಧಾರಿಸಬಹುದಿತ್ತು ಎಂದು ಎಂದು ಹೇಳಿದರು. ಶಾಸಕರು ಒಳ್ಳೆಯವರೆ. ಆದರೆ, ಅವರ ಆಪ್ತ ವಲಯದ ಕೆಲವರು ಅವರ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅಧಿಕಾರಿ ವರ್ಗ, ಸಾರ್ವಜನಿಕ ಕ್ಷೇತ್ರಗಳಲ್ಲಿ ವಿನಾಃ ಕಾರಣ ಸಮಸ್ಯೆ ಸೃಷ್ಟಿಸಿದ್ದಾರೆ. ಇದರ ಜತೆ ತಾಲ್ಲೂಕಿನಲ್ಲಿ ಪಕ್ಷದ ಗೌರವಕ್ಕೆ, ಕ್ಷೇತ್ರದ ಅಭಿವೃದ್ಧಿಗೆ ಮಾರಕವಾಗಿದ್ದಾರೆ.

ಅಲ್ಲದೆ, ವಿಧಾನಸಭೆ ಚುನಾವಣೆಯಲ್ಲಿ ನಿಸ್ವಾರ್ಥ ಹೋರಾಟ ನಡೆಸಿದ ಮುಖಂಡರು, ಕಾರ್ಯಕರ್ತರನ್ನು (ಈಗ ಜೆಡಿಎಸ್‌ನಲ್ಲಿದ್ದಾರೆ) ಕಡೆಗಣಿಸಿದ್ದರ ಫಲವೆ ಈ ಫಲಿತಾಂಶ ಎಂದು ಹುತ್ರಿದುರ್ಗ ಹೋಬಳಿ ಕಾರ್ಯಕರ್ತರಾದ ತಿಮ್ಮಣ್ಣ, ಸುರೇಶ್, ವೆಂಕಟೇಶ್, ಶಿವಣ್ಣ, ರಮೇಶ್, ಹುಚ್ಚಯ್ಯ ಇತರರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT