ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಪೌಂಡ್‌ಗಳ ಮೇಲೆ ಶಿಲ್ಪಕಲಾಕೃತಿ ಚಿತ್ರ

Last Updated 20 ಜನವರಿ 2011, 10:05 IST
ಅಕ್ಷರ ಗಾತ್ರ

ಬೇಲೂರು: ವಿಶ್ವ ವಿಖ್ಯಾತ ಪ್ರವಾಸಿ ಕೇಂದ್ರ ವಾಗಿರುವ ಬೇಲೂರು ಪಟ್ಟಣದ ಚೆನ್ನಕೇಶವ ದೇವಾಲಯದ ಮುಖ್ಯರಸ್ತೆ ರಾತ್ರಿ ವೇಳೆಯಲ್ಲಿ ಆಕರ್ಷಣೀಯವಾಗಿ ಕಾಣಲು  ಅಂತರ ರಾಷ್ಟ್ರೀಯ ಪ್ರವಾಸಿ ಕೇಂದ್ರಕ್ಕೆ ತಕ್ಕಂತೆ ರಿಫ್ಲೆಕ್ಟರ್ ಅಳವಡಿಕೆ ಮಾಡಲು ಮತ್ತು ಕಾಂಪೌಂಡ್‌ಗಳ ಮೇಲೆ ಶಿಲ್ಪಕಲಾಕೃತಿ ಮತ್ತು ಪ್ರವಾಸಿ ತಾಣಗಳ ಚಿತ್ರವನ್ನು ಬಿಡಿಸಲು ಬುಧವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅಧ್ಯಕ್ಷ ಎಚ್.ಎಂ.ದಯಾನಂದ್ ಇಲ್ಲಿರುವ ಚೆನ್ನಕೇಶವ ದೇಗುಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಹೊಂದಿದ್ದರೂ ಪಟ್ಟಣದ ಸೌಂದರ್ಯ ಆ ಮಟ್ಟಕ್ಕೆ ಇಲ್ಲ. ಲೋಕೋಪಯೋಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಹಯೋಗದಲ್ಲಿ ದೇವಾಲಯದ ರಸ್ತೆ ರಾತ್ರಿ ವೇಳೆಯಲ್ಲಿ ಹೆಚ್ಚು ಆಕರ್ಷಣೀಯ ವಾಗಿ ಕಾಣುವಂತಾಗಲು ರಿಫ್ಲೆಕ್ಟರ್ ಅಳವಡಿಕೆ, ಜೀಬ್ರಾ ಕ್ರಾಸಿಂಗ್ ಹಾಕುವ ಉದ್ದೇಶ ಹೊಂದಲಾಗಿದೆ. ಜೊತೆಗೆ ಮುಖ್ಯ ರಸ್ತೆಗಳಲ್ಲಿನ ಅಂಗಡಿಗಳಿಗೆ ಏಕರೂಪದ ವಿದ್ಯುತ್ ನಾಮಫಲಕ ಅಳವಡಿಸಿಕೊಳ್ಳು ವಂತೆ ಕೋರಲು ನಿರ್ಧರಿಸಲಾಗಿದೆ ಎಂದರು.

ಸದಸ್ಯ ಜಿ.ಶಾಂತಕುಮಾರ್ ಮಾತನಾಡಿ, ರಿಫ್ಲೆಕ್ಟರ್ ಅಳವಡಿಕೆ ಮಾಡುವುದರ ಜೊತೆಗೆ ಪಟ್ಟಣದ ಕಾಂಪೌಂಡ್ ಮತ್ತು ಇನ್ನಿತರ ಗೋಡೆಗಳ ಮೇಲೆ ಬೆಂಗಳೂರಿನ ಮಾದರಿಯಲ್ಲಿ ಕಲಾಕೃತಿಗಳ ಚಿತ್ರಗಳನ್ನು ಬಿಡಿಸಿ ನಗರದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು. ಸದಸ್ಯ ತೊ.ಚ.ಅನಂತಸುಬ್ಬರಾಯ ಮಾತನಾಡಿ, ಪಟ್ಟಣದ ಮುಖ್ಯರಸ್ತೆ ಮತ್ತು ದೇವಾಲಯದ ರಸ್ತೆಯಲ್ಲಿನ ವ್ಯಾಪಾರಸ್ಥರು ಉತ್ತಮ ಸ್ಥಿತಿಯಲ್ಲಿದ್ದಾರೆ. ಅವರು ಏಕ ರೂಪದ ವಿದ್ಯುತ್ ನಾಮಫಲಕ ಅಳವಡಿಸಿ ಕೊಳ್ಳುವುದರಲ್ಲಿ ತಪ್ಪಿಲ್ಲ. ಪಟ್ಟಣದ ಸೌಂದರ್ಯ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದರು.

ಸದಸ್ಯ ಬಿ.ಸಿ.ಮಂಜುನಾಥ್ ಮತ್ತು ಎಂ.ಗುರುಪಾದಸ್ವಾಮಿ ಪಟ್ಟಣದ ಮುಖ್ಯರಸ್ತೆ ಮತ್ತು ದೇವಸ್ಥಾನದ ರಸ್ತೆಯ ಬದಿಯಲ್ಲಿ ತರಕಾರಿ ಹಾಗೂ ಮತ್ತಿತರ ಅಂಗಡಿಗಳು ಹಾಕಿಕೊಂಡಿರುವುದು ಸೌಂದರ್ಯಕ್ಕೆ ಧಕ್ಕೆಯುಂಟಾಗಿದೆ ಇವು ಗಳನ್ನು ತೆರವುಗೊಳಿಸುವ ಸಂಬಂಧ ಕ್ರಮ ಕೈಗೊಳ್ಳಿ ಎಂದರು. ನಂತರ ಸಭೆ ಈ ಎರಡು ಯೋಜನೆಗಳಿಗೆ ಒಪ್ಪಿಗೆ ಸೂಚಿಸಿತು.

ಪುರಸಭೆಯ ಸಾಮಾನ್ಯ ನಿಧಿಯಲ್ಲಿನ ಹಣವನ್ನು ರಸ್ತೆ, ಚರಂಡಿ ಹಾಗೂ ಮತ್ತಿತರ ಕಾಮಗಾರಿಗಳಿಗೆ ಬಳಸದೆ ಕುಡಿಯುವ ನೀರು ಹಾಗೂ ತುರ್ತು ಕಾಮಗಾರಿಗಳಿಗೆ ಮಾತ್ರ ಬಳಸುವಂತೆ ಸೂಚಿಸಿದ ಸದಸ್ಯ ತೊ.ಚ. ಅನಂತಸುಬ್ಬರಾಯ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಪಾವತಿಸಿರುವ ವಿವರವನ್ನು ದಾಖಲೆ ಪುಸ್ತಕಕ್ಕೆ ನೋಂದಾಯಿಸದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಅಧ್ಯಕ್ಷ ಎಚ್.ಎಂ.ದಯಾನಂದ್, ಸದಸ್ಯ ಎಂ.ಗುರುಪಾದಸ್ವಾಮಿ ಧನಿಗೂಡಿಸಿ ತಾವು ಕಟ್ಟಿದ್ದ ಶುಲ್ಕವೂ ನೋಂದಾವಣಿ ಆಗಿಲ್ಲ ಎಂದು ಹೇಳಿದ್ದು, ಅಚ್ಚರಿಗೆ ಕಾರಣವಾಯಿತು.

ಇದಕ್ಕೆ ಸ್ಪಷ್ಟನೆ ನೀಡಿದ ಮುಖ್ಯಾಧಿಕಾರಿ ಸುರೇಶ್‌ಬಾಬು ಕಳೆದ 10 ವರ್ಷಗಳಿಂದಲೂ ಸ್ವಯಂ ಘೋಷಿತ ಆಸ್ತಿ ತೆರಿಗೆ ಹಣ ಕಟ್ಟಿದ ವಿವರ ದಾಖಲೆ ಪುಸ್ತಕಕ್ಕೆ ನೋಂದಣಿ ಯಾಗಿರಲಿಲ್ಲ. ತಾವು ಮುಖ್ಯಾಧಿಕಾರಿಯಾಗಿ ಬಂದ ನಂತರ ಇದನ್ನು ದಾಖಲು ಮಾಡಲಾಗಿದೆ. ಜೊತೆಗೆ ಪ್ರತಿ ಖಾತೆಗೆ ಸಂಬಂಧಿಸಿದಂತೆ ಪ್ರತ್ಯೇಕ ಕಡತವನ್ನು ರಚಿಸಿ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿಡಲಾಗಿದೆ ಎಂದರು.

ಪಟ್ಟಣದಲ್ಲಿ ಸಂತೆ ನಡೆಸುವ ಸಂಬಂಧ ಸೇತುವೆ ಸಮೀಪದ ಮಲ್ಲಿಕಾರ್ಜುನ ಗ್ರೂಪ್ಸ್‌ನವರಿಗೆ ಸೇರಿದ ಜಾಗವನ್ನು ಖರೀದಿಸಲು ತಮ್ಮ ಅಧ್ಯಕ್ಷತೆಯಲ್ಲಿನ ಸಮಿತಿ ತೀರ್ಮಾನಿಸಿದೆ. ಈ ಜಾಗ ಖರೀದಿಸಲು 3 ಕೋಟಿ ಹಣದ ಅವಶ್ಯಕತೆಯಿದ್ದು, ಸರ್ಕಾರದಿಂದ ಅನುದಾನ ಪಡೆಯಬೇಕಾಗಿದೆ ಎಂದು ಸದಸ್ಯ ಬಿ.ಎಲ್.ಧರ್ಮೇಗೌಡ ಸಭೆಯ ಗಮನಕ್ಕೆ ತಂದರು. ಇದಕ್ಕೆ ಅಧ್ಯಕ್ಷ ಎಚ್.ಎಂ.ದಯಾನಂದ್ ಜನವರಿ 27 ರಂದು ಅನುದಾನ ಬಿಡುಗಡೆ ಮಾಡುವಂತೆ ಕೋರಿ ಬೆಂಗಳೂರಿಗೆ ನಿಯೋಗ ಕರೆದೊಯ್ಯ ಲಾಗುವುದು ಎಂದು ಹೇಳಿದರು. ಉಪಾಧ್ಯಕ್ಷೆ ಸುಮಿತ್ರ ಹಾಜರಿದ್ದರು.

ಪಾರ್ಕಿಂಗ್ ಶುಲ್ಕ ಸಂಗ್ರಹಕ್ಕೆ ಆಕ್ರೋಶ
ಬೇಲೂರು:
ಚನ್ನಕೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಜಿಲ್ಲಾಡಳಿತ ಪ್ರವಾಸಿಗರಿಂದ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ಮುಂದಾಗಿರುವುದಕ್ಕೆ ಪುರಸಭೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಬುಧವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಜಿಲ್ಲಾಡಳಿತ ಹಾಗೂ ವ್ಯವಸ್ಥಾಪನಾ ಸಮಿತಿಗಳ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಿಂದೆ ಇಲ್ಲಿ ಪಾರ್ಕಿಂಗ್ ಶುಲ್ಕ ನಿಗದಿ ಮಾಡಲಾಗಿತ್ತು. ಆದರೆ ದೇಗುಲಕ್ಕೆ ಬರುವ ಪ್ರವಾಸಿಗರಿಗೆ ಆಗುತ್ತಿದ್ದ ಕಿರುಕುಳ ತಪ್ಪಿಸುವ ಸಲುವಾಗಿ ಪುರಸಭೆಯೇ ಪಾರ್ಕಿಂಗ್ ಶುಲ್ಕ ರದ್ದು ಮಾಡಿತ್ತು.

ಪುರಸಭೆ ಅಧ್ಯಕ್ಷ ಎಚ್.ಎಂ.ದಯಾ ನಂದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಬಿ.ಎಲ್.ಧರ್ಮೇಗೌಡ, ಹಿಂದೆ ಗುತ್ತಿಗೆದಾರರಿಂದ ಪ್ರವಾಸಿಗರಿಗೆ ಆಗುತ್ತಿದ್ದ ಕಿರುಕುಳ ತಪ್ಪಿಸುವ ಸಲುವಾಗಿ ಪಾರ್ಕಿಂಗ್ ಶುಲ್ಕ ರದ್ದು ಪಡಿಸಲಾಗಿತ್ತು. ಆದರೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಮತ್ತು ಜಿಲ್ಲಾಡಳಿತ ಈಚೆಗೆ ಸಭೆ ನಡೆಸಿ ದೇವಾಲಯದ ಹಿಂಭಾಗದ ಖಾಲಿ ಜಾಗದಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಶುಲ್ಕ ವಸೂಲಿ ಮಾಡಿ ಅದರಿಂದ ಬರುವ ಆದಾಯವನ್ನು ಹಂಚಿಕೊಳ್ಳುವ ಹುನ್ನಾರ ನಡೆಸಿವೆ ಎಂದು ಆರೋಪಿಸಿದರು.

ಕೆಲ ಪಟ್ಟಭದ್ರ ಹಿತಾಸಕ್ತಿಗಳು ಜಿಲ್ಲಾಧಿಕಾರಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಪಾರ್ಕಿಂಗ್ ರದ್ದು ಮಾಡಿರುವ ಬಗ್ಗೆ ಪ್ರವಾಸಿಗರಿಂದ ಪ್ರಶಂಸೆ ವ್ಯಕ್ತವಾಗಿತ್ತು. ಒಂದು ವೇಳೆ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ವಾಹನ ಶುಲ್ಕ ಸಂಗ್ರಹಿಸಲು ಮುಂದಾದರೆ ಪ್ರತಿಭಟನೆ ಮಾಡುವುದರ ಜೊತೆಗೆ ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾಗುತ್ತದೆ ಎಂದು ಸದಸ್ಯರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT