ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗೆ ಯಾವ ಬಣ್ಣದ ಹಕ್ಕಿ?

Last Updated 4 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಇದೀಗಷ್ಟೇ ಹರಿದುಹೋದ ಕಾರಿನ ಟೈರಿನ ಗುರುತು, ಮಣ್ಣು ಹಾದಿಯಲ್ಲಿ ಕೊರೆದಿಟ್ಟ ಹಾಗೆ ಮೂಡಿತ್ತು. ಅವಳು ಆ ಗುರುತಿಗೆ ಸ್ವಲ್ಪ ಕೂಡ ಜಖಂ ಆಗದಂತೆ ನಡೆಯುತ್ತಿದ್ದಳು - ಕಾರಿನ ಎರಡು ಟೈರ್‌ಗಳ ಮಧ್ಯೆ ಉಳಿದಿದ್ದ ಖಾಲಿ ಜಾಗದಲ್ಲಿ.

ಹಾಗೆ, ಅಕಸ್ಮಾತಾಗಿ ಅವಳೇನಾದರೂ ನೋಡದೇ ಆ ಗುರುತಿನ ಮೇಲೆ ಕಾಲಿಟ್ಟಿದ್ದರೂ, ಮಣ್ಣು ನೆಲದಲ್ಲಿ ಪುಟ್ಟ ಪಿರಮಿಡ್ಡಿನಂತೆ ಎದ್ದಿದ್ದ ಕೆಮ್ಮಣ್ಣಿನ ಆ ಗೋಪುರಕ್ಕೆ ಯಾವ ಚ್ಯುತಿಯೂ ಬರಲು ಸಾಧ್ಯವಿರಲಿಲ್ಲ. ಏಕೆಂದರೆ ಆರಾಮವಾಗಿ ನಡೆಯುತ್ತಿದ್ದ ಅವಳು ಗಾಳಿಗೆ ಓಲಾಡುತ್ತಾ, ಹಾರುವ ಹಕ್ಕಿಯಂತೆ ಹಗುರವಾಗಿ ಕಾಲು ಬೀಸುತ್ತಾ, ಎಂದೂ ಹೆಜ್ಜೆ ಮೂಡದ ಒಂದು ಹಾದಿಯಲ್ಲಿ ನಡೆಯುತ್ತಿದ್ದಳು.

ಮಣ್ಣು ನೆಲದಲ್ಲಿ ಕೆಲವು ಪುಟ್ಟವು, ಕೆಲವು ಇನ್ನು ಚಿಕ್ಕವು, ದೊಡ್ಡವು, ಹಿರಿದಾದದ್ದು, ನಡುವಿನವರದ್ದು - ಎಂದು ಏಳೆಂಟು ಹೆಜ್ಜೆಗಳ ಗುರುತುಗಳಾದರೂ ಇದ್ದವು. ಅರೆಗತ್ತಲಲ್ಲದ, ಅರೆಬೆಳಕೂ ಕಾಣದ ಆ ಹಾದಿಯಲ್ಲಿ, ಆ ಹೆಜ್ಜೆಗಳಲ್ಲಿ ಉಳಿದಿರಬಹುದಾದ ಕೆಲ ಚಿರಪರಿಚಿತ ಹೆಜ್ಜೆಗಳನ್ನು ಅರಸುತ್ತಾ ಅವಳು ಸಾಗುತ್ತಿದ್ದಳು.
ಮೇಲೆ ಬೆಳ್ಳಕ್ಕಿಗಳು ಹಾರುತ್ತಿದ್ದವು - ಹಿಂಡುಹಿಂಡಾಗಿ.

ಪರಾವ್ ಪರಾವ್ ಎಂದು ಸಮೀಪದಲ್ಲಿ ಬಡಿದು, ಸಪ್ಪಳ ಹುಟ್ಟಿಸುತ್ತಿದ್ದ ಅವುಗಳ ರೆಕ್ಕೆಗಳು - ಹೌದು - ಕೆಲ ವರುಷಕ್ಕೆ ಮುಂಚೆ ಅವಳು ಓದಿದ್ದ ಒಂದು ಕತೆಯೊಳಗೆ ಸದ್ದಾಗಿ ಹುಟ್ಟಿ - ಕತೆಯ ಹರವಿನೊಳಗೆ ಆಳವಾಗಿ ಕಂದರ ಕೊರೆದು, ಗಟ್ಟಿಯಾಗಿ ಎಲ್ಲರಿಗೂ ಕಾಣುವ ಹಾಗೆ ಬಚ್ಚಿಟ್ಟು ಕುಳಿತಿತ್ತು. ತನ್ನ ಕೈಯಳತೆಯೊಳಗೆ ಇಳಿದು ಬಂದ ಆ ಬೆಳ್ಳಕ್ಕಿಗಳ ಹಿಂಡನ್ನ ಆಗಾಗ ಏಕಾಂತದಲ್ಲಿ ಕುಳಿತು, ತನ್ನ ಕಣ್ಣ ಮುಂದೆ ಹರವಿಕೊಂಡು ಆಸ್ವಾದಿಸುತ್ತಿದ್ದಳು.

ಹಳೇಮನೆಯ ಚಚ್ಚೌಕವಾದ ಒಂಟಿ ಚೌಕಿಯಲ್ಲಿ ನಿಂತು ಎಳೇ ಕಣ್ಣುಗಳನ್ನು ಆಕಾಶಕ್ಕೆ ನೆಟ್ಟಾಗ - ಅನಂತ ಆಕಾಶದಲ್ಲಿ ಸದ್ದಿಲ್ಲದೇ ಸರಿದು ಹೋಗುತ್ತಾವಲ್ಲ, ಅಂತಹ ಬೆಳ್ಳಕ್ಕಿಗಳ ಹಿಂಡುಗಳ ಚಿತ್ರವದು...

ಕಾರು ಎಬ್ಬಿಸಿದ ಕೆಮ್ಮಣ್ಣು ಮಣ್ಣಿನ ನೆಲದ ಆಚೀಚೆಯ ಮರಗಳಲ್ಲಿ ಢಾಳಾಗಿ ಹರಡಿಕೊಂಡಿತ್ತು. ಕಟುವಾಸನೆ. ಮಣ್ಣಲ್ಲಿ ಕೊಚ್ಚಿ, ಪೆಟ್ರೋಲ್, ಡೀಸಲ್, ಇಂಜಿನ್ ಆಯಿಲ್‌ಗಳ ಕಲಸುಮೇಲೋಗರವಾಗಿ ಗಾಳಿಯಲ್ಲಿ ಉಳಿದುಹೋದ ಘಾಟು. ಯಾರೋ ಕೆಮ್ಮಿದರು. ಯಾರು ಎಂದು ಅವಳಿಗೆ ಸರಿಯಾಗಿ ತಿಳಿಯಲಿಲ್ಲ.

ಆ ಮಬ್ಬಿನಲ್ಲಿ ಮುಚ್ಚಿಹೋದ ಯಾರಾದರೂ ದಾರಿಹೋಕ ಊರಪೋಕರಿರಬಹುದು.
`ಸಣ್ಣಮ್ಮ ಊರಿಗೆ ಎಂದು ಬಂದದ್ದಾಯಿತು?~ ಬೆನ್ನು ಬಾಗಿಸಿ, ರಸ್ತೆಯಂಚಿಗೆ ಸರಿದು, ಒಣಗಿದ ಗಿಡದ ರೆಂಬೆಯೊಂದನ್ನು ಭದ್ರವಾಗಿ ಆಸರೆಗೆ ಹಿಡಿದು, ದೈನ್ಯರಾಗಿ ಕೇಳುವುದು ವಾಡಿಕೆ. ಕಟ್ಟಲೆಯೇ?

ಬಹುಶಃ ಕೆಮ್ಮಣ್ಣಿನಲ್ಲಿ ರಸ್ತೆ ಮುಚ್ಚಿಹೋಗಿದ್ದರಿಂದ ಯಾರೂ ಕೇಳಲಿಲ್ಲ. ಪಕ್ಕದಲ್ಲಿ ಒಂಟಿ ಕೆರೆ ಬೇರೆ. ಅದರ ದಂಡೆಯಲ್ಲಿ ಅಷ್ಟೆತ್ತರ ಬೆಳೆದು ನಿಂತ ಧೂಪದ ಮರ. ಹೂವಾಗಲೀ, ಕಾಯಿಯಾಗಲೀ, ಹತ್ತಿ ಉದುರಿದ್ದಾಗಲೀ ಕಾಣದ ಆ ಮರದಲ್ಲಿ ಎಲೆಯಾದರೂ ಇತ್ತು, ಎಲ್ಲಿ?

ಒಂಟಿ ಮರ... ಅದರ ಒಂದು ರೆಂಬೆಯಲ್ಲಿ ತಲೆಕೆಳಗಾಗಿ, ಕೆಂಪು ಬಟ್ಟೆ ತೊಟ್ಟು, ಹಲವಾರು ವರುಷಗಳಿಂದ ನೇತಾಡುತ್ತಿರುವ ದೇವಿ. ಊರಿನ ರಕ್ಷಕಿ.
ಮೂವತ್ತು ವರುಷಗಳ ಹಿಂದೆ ಆ ಹಾದಿಯಲ್ಲಿ ಸಾಗಿದ್ದರೆ, ಇಂತಹ ಅನೇಕ ಕತೆಗಳನ್ನು ಯಾರಾದರೂ ಅವಳಿಗೆ ಹೇಳುವುದಿತ್ತು. ಯಾರು ಎಂದು ಯಾರಾದರೂ ಕೇಳಿದರೆ, ಈಗ ಅವಳಿಗೆ ಅಷ್ಟಾಗಿ ನೆನಪಿಗೆ ಬರುವುದಿಲ್ಲ.

ಉರುಟಾದ ಕೆಂಪು ಕಣ್ಣಿನ ಆಜಾನುಬಾಹು ಮನುಷ್ಯನೊಬ್ಬ ಮಸುಕುಮಸುಕಾಗಿ ನೆನಪಾಗುವುದೆಷ್ಟೋ ಅಷ್ಟೆ. ಪೋಲೀಸರಿಗೆ ಇರುವ ಹಾಗೆ ತುದಿ ಹುರಿಗೊಳಿಸಿದ ಪೊದೆ ಮೀಸೆ, ಸದಾ ಕುಡಿಯುವವರ ಮುಖದಂತೆ ಉಬ್ಬಿ, ಕೆಂಪುಕೆಂಪಾದ ಮುಖ. ಪ್ರಾಯಶಃ ಜೀವದಿಂದ ತುಂಬಿತುಳುಕುವ ಒಂದು ಭರ್ಜರಿ ಮನೆಯಲ್ಲಿ ಹುಟ್ಟಿಬಂದಂತಹ ಭರ್ಜರಿ ಆಳಿರಬಹುದು.
 
ಈಗವನು ಬದುಕಿದ್ದಾನೋ ಸತ್ತಿದ್ದಾನೋ, ಯಾರಿಗೆ ಗೊತ್ತು?
ಆದರೆ ಅಗೋಚರ ಚರಾಚರ ವಸ್ತುಗಳ ಬಗ್ಗೆ ಅವನು ಹೇಳುವ ಕೆಲವು ಕತೆಗಳು ರಂಜಕವಾಗಿರುತ್ತಿದ್ದವು. ಈ ಊರಿನ ಇದೇ ರಸ್ತೆಗೆ ಸಂಬಂಧಿಸಿದಂತಹ ಕತೆಗಳವು. ಮುಖ್ಯ ಟಾರು ರಸ್ತೆಯಲ್ಲಿ ಬಸ್ಸಿನಿಂದಿಳಿದು, ಊರ ಕಡೆಯ ಮಣ್ಣು ಹಾದಿಗೆ ತಿರುಗಿದ ನಂತರ ನಡೆಯಬಹುದಾದ, ನಡೆದಿರಬಹುದಾದಂತಹ ಕತೆಗಳವು.

`....ರಾತ್ರಿ ಹತ್ತು ಗಂಟೆಯ ಕಡೇ ಬಸ್ಸು ಇಳಿದು, ಮನೆಗೆ ಆದಷ್ಟು ಬೇಗ ಹೋಗಲು ನಾನಿನ್ನೂ ಮಣ್ಣು ರಸ್ತೆಯೆಡೆ ತಿರುಗಿದ್ದೆನೋ, ಇಲ್ಲವೋ, ಅಗೊಳ್ಳಿ ಆಗ - ಬೆನ್ನ ಹಿಂದೆ ಆ ಶಬ್ದ ಬಂತು, ನೋಡು. ಟಕ್....ಟಕ್...ಟಕ್...ಟಕ್... ಗಾರೆ ನೆಲದ ಮೇಲೆ ಬೂಟ್‌ಕಾಲಲ್ಲಿ ನಡೆದ್ರೆ ಹೆಂಗೆ ಶಬ್ದ ಬರುತ್ತ್ ನೋಡ್, ಹಂಗೆ -ಮಣ್ಣು ನೆಲದಲ್ಲಿ ಮರಾಯ್ತಿ....!~ 

ಟಕ್.... ಟಕ್.... ಟಕ್.... ಟಕ್......   
ಮೂವತ್ತು ವರುಷಗಳ ಹಿಂದೆ ವಿವರಿಸಲಾದ ಅದೇ ಕರಾರುವಾಕ್ಕಾದ ಸಪ್ಪಳ. ಬೂಟ್ ಕಾಲಿನದೋ, ಚಪ್ಪಲಿಯದೋ ಯಾರಿಗೆ ಗೊತ್ತು. ಯಾಕೆಂದರೆ ಹಿಂತಿರುಗಿ ನೋಡುವ ಹಾಗಿಲ್ಲ. ನೋಡಿದರೆ ಸದ್ದು ನಿಂತು ಹೋಗುತ್ತದೆ, ಕತ್ತು ಮುರಿದುಹೋಗುತ್ತದೆ, ಮುಖ ವಿಕಾರವಾಗಿ ಊರ ಬಾಗಿಲಲ್ಲಿ ರಕ್ತ ಕಾರಿ ಬೀಳಬೇಕಾಗುತ್ತದೆ.

ಹಾಗಾಗಿ ಸದ್ದು ಸದ್ದಷ್ಟೇ.... ಟಕ್... ಟಕ್... ಟಕ್.... ಟಕ್.....
ಗೋಡೆಯ ಮೇಲಿನ ಗಡಿಯಾರದ ಮುಳ್ಳು ಬಡಿದುಕೊಂಡ ಹಾಗೆ. ನಿರಂತರವಾಗಿ ಅದು ಬಡಿದುಕೊಳ್ಳುತ್ತಿರುತ್ತದೆ; ಅವಿರತವಾಗಿ. ಸದ್ದು ನಿಲ್ಲಬೇಕಾದರೆ ಕತ್ತು ಹಿಂತಿರುಗಿಸಿ ನೋಡಿ, ನಿಲ್ಲಿಸಬೇಕು. ಆಗ ನಿಜಕ್ಕೂ ಸದ್ದು ನಿಲ್ಲುತ್ತದೋ, ನಿಂತ ಹಾಗೆ ಭಾಸವಾಗುತ್ತದೋ, ಭ್ರಮೆಯೋ? ತಿಳಿಯದು.

ಆದರೆ ಕತ್ತು ಹೊರಳಿಸಿ, ರಕ್ತಕಾರಿ ಸತ್ತ ಹೆಣದ ಕತೆಯೂ ಅಲ್ಲುಂಟು. ಅದನ್ನ ಈ ಭರ್ಜರಿ ಮೀಸೆಯ ಆಳೇ ಹೇಳುತ್ತಾನೋ, ಅಥವಾ ಯಾರೂ ಊಹಿಸಿ ಹೇಳುವ ಪ್ರಮೇಯವೇ ಬರದೇ, ಎಲ್ಲರೆದುರು ನಡೆದುಹೋಯಿತೋ - ಸರಿಯಾಗಿ ಗೊತ್ತಿಲ್ಲ.

ರಸ್ತೆಯಂಚಿನಲ್ಲಿ ಕೊಲೆಯಾಗಿ ಮೂರುದಿನಗಳಿಂದ ಕೊಳೆತು ಬಿದ್ದ ಹೆಣ ರಕ್ತ ಕಾರಲಿಲ್ಲ. ಏಕೆಂದರೆ ರಕ್ತ ಜಿಲ್ಲೆನ್ನುವಷ್ಟು ತಣ್ಣಗೆ ಮಂಜುಗಡ್ಡೆಯಂತೆ ಹೆಪ್ಪುಗಟ್ಟಿತ್ತು. ಕೊರೆಯುತ್ತಿದ್ದದ್ದು ರಸ್ತೆಯಲ್ಲಿನ ಚಳಿಯೋ, ಚಳಿಗೆ ಬಿದ್ದ ಹೆಣವೋ ಯಾರಿಗೆ ಗೊತ್ತು?
ವಿಕಾರವಾಗಿ ಉಬ್ಬಿಹೋದ ಹೆಣ.

ನಡುಮನೆಯಲ್ಲಿ ಕುಳಿತು, ಟೀವಿಯಲ್ಲಿ ಆ ಹೊತ್ತಿನಲ್ಲಿ ಪ್ರಸಾರವಾಗುವ ಯಾಯಾ ಮಠಾಧೀಶರು ಅದು ಏನೇನು ಹರಕತ್ತು ನಡೆಸುತ್ತಿರುವರೆಂದು ಘಂಟಾಘೋಷವಾಗಿ ಸಾರುವುದರೊಂದಿಗೇ ಅವರೊಂದಿಗಿರುವ ಕೆಲ ಚಿಲ್ಲರೆ ನಟಿಯರು ಹೇಗೆ ಸೊಂಟ, ಅಂಡು, ಮೊಲೆಗಳನ್ನು ಒಂದೇ ರೀತಿಯಲ್ಲಿ ಕುಣಿಸುತ್ತಾ ನರ್ತಿಸುವರೆಂದು ವಿಮರ್ಶಾತ್ಮಕ ಕಾರ್ಯಕ್ರಮ ನೋಡುವುದರಲ್ಲಿ ತಲ್ಲೆನರಾದ ಕೆಲವರಾದರೂ, ಯಾವುದಕ್ಕೋ ಕತ್ತು ಹೊರಳಿಸಿದಾಗ, ಅಕಸ್ಮಾತಾಗಿ ಕಣ್ಣಿಗೆ ಕಂಡ ರಸ್ತೆಯಂಚಿನ ಆ ಹೆಣವನ್ನ ಯಾಂತ್ರಿಕವಾಗಿಯಾದರೂ ನೋಡಿರಲಿಕ್ಕೆ ಸಾಕು.

ನಂತರ ಕಾರ್ಪೊರೇಷನ್‌ನ ಕೆಲ ಆಳುಗಳು ಅದನ್ನು ಕ್ರಿಮೆಟೋರಿಯಮ್‌ಗೆ ಸಾಗಿಸಿದಾಗ ಕಾರಿಡಾರಿನಲ್ಲಿ ಕುಳಿತಿದ್ದ ತೆಳ್ಳಗೆ ಬಳಕುವ, ಮಾರುದ್ದ ಗಡ್ಡದ ಹುಚ್ಚನೊಬ್ಬ ಶತಪ್ರಯತ್ನಿಸಿದರೂ ಕಣ್ಣಲ್ಲಿ, ಮೂಗಲ್ಲಿ, ಬಾಯಲ್ಲಿ ಎಂದು ಎಲ್ಲೂ ಉಕ್ಕಿ ಹರಿಯದ ಕಣ್ಣೀರಿನಿಂದ ದಂಗಾಗಿ, ಕತ್ತೆಯಂತೆ ಅರಚೀ, ಅರಚೀ ಕಿರುಚಿ, ವಿಕಾರವಾಗಿ ಸದ್ದು ಹೊರಡಿಸಿ, ಕ್ರಿಮೆಟೋರಿಯಮ್‌ನ ಉದ್ದಗಲ ಯಾರೋ ಅಟ್ಟಿಸಿಕೊಂಡು ಬಂದವರಂತೆ ಓಡಿಯಾಡಿದ್ದು ಯಾವ ಗಿನ್ನೀಸ್ ಬುಕ್‌ನಲ್ಲೂ ದಾಖಲಾಗದ್ದಿದ್ದರೂ, ಬದುಕಿಗೆ ಉಳಿದುಹೋಗುವ ಕೆಲವರ ಶಾಶ್ವತ ಸ್ವರಗಳಂತೆ, ಸೇರಿಕೊಂಡು ಹಲವಾರು ನೆನಪುಗಳಲ್ಲಿ ಜೀವಂತವಾಗಿ ಉಳಿದಿದ್ದಂತೂ ನಿಜ.

ಸದ್ದುಗಳ ಜೊತೆಗೆ ಹೊಂದಲಾರದ ಒಂದು ವಾಸನೆ.... ಸದ್ದಿನಂತೆಯೇ ಕೆಲವೊಮ್ಮೆ ಕೆಲ ವಾಸನೆಗಳಾದರೂ ಅಳಿಸಲಾರದಂತೆ ಉಳಿದುಹೋಗುತ್ತವೆ. ಅದು ಮೂಗಿನಲ್ಲಿ ಉಳಿಯುತ್ತದೋ, ಮನಸ್ಸಿನಲ್ಲೋ...

ವಾಸನೆ ಉಳಿಯುವುದಾದರೂ ಎಲ್ಲಿ? ಹೃದಯವಿದ್ದವರ ಹೃದಯ, ಮನಸ್ಸಿದ್ದವರ ಮನಸ್ಸು, ವಾಸನೆ ಇದ್ದವರ ವಾಸನೆ...ರಸ್ತೆಯಲ್ಲಿನ ದೂಳು ಮೋಡದಂತೆ ಮೇಲೇರಿದ ನಂತರ, ಎಷ್ಟೋ ವರುಷಗಳಿಂದ ರಸ್ತೆಯ ಎರಡೂ ಬದಿಗಳಲ್ಲಿದ್ದ ಅವವೇ ಗಾಳಿಮರಗಳು, ಊರ ಕೆಲವು ಕೆಲಸದವರ ಮನೆಗಳು, ತಗ್ಗಿನಲ್ಲಿದ್ದ ಭತ್ತದ ಗದ್ದೆ, ಒಂದು ನೈಸರ್ಗಿಕ ಚಿತ್ರದ ಹಿಂಬದಿಯಲ್ಲಿ ಇರುವಂತಹ ದೊಡ್ಡ ದೊಡ್ಡ ಮರಗಳಂತೆ ತುದಿಯಲ್ಲಿ ಕಪ್ಪಾಗಿ, ದಟ್ಟವಾಗಿ ಹರಡಿಕೊಂಡಿರುವ ಅಡಿಕೆಮರಗಳು ಗೋಚರಿಸತೊಡಗಿದವು.

`ಊರು..! ಓ ಅಲ್ಲಿ ಇರುವುದು ನನ್ನೂರು..!~ ಯಾರು ಹೇಳಿದ್ದು? ಕವಿಯೇ?
ಊರು. ಬಾಗಿಲಲ್ಲಿ ತಲೆ ಬಾಚಿಕೊಳ್ಳುತ್ತಿರುವ ಅದೇ ಹೆಂಗಸು.ಕೆಂಪು ಕಣ್ಣಿನ ಭರ್ಜರಿ ಮನುಷ್ಯ ರಾತ್ರಿಯಾಯಿತೆಂದು ಮಲಗಲು ಹೊರಟ. ನಿದ್ರೆ ಕಣ್ಣಂಚಿನಲ್ಲಿ ತೇಲುತ್ತಿದೆ. ಆಕಾಶದಲ್ಲಿ ಹರಿದಾಡುತ್ತಿರುವ ಹೊಗೆಯ ಮೋಡ.
ಕನಸುಗಳು ಹೊಗೆಯ ಮೋಡದ ನಡುವೆ ತೇಲಿ ಬರುತ್ತಿವೆ.

ದೂರದಲ್ಲಿ ಒಂದು ಧೂಪದ ಮರ. ಕೆಂಪು ಸೀರೆಯಲ್ಲಿ ತಲೆಕೆಳಗಾಗಿ ನೇತಾಡುತ್ತಿರುವ ದೇವಿ ಅಳುತ್ತಿದ್ದಾಳೆ. ಆ ಮೂಕರೋದನೆಯ ಕಣ್ಣೀರು ನೆಲಕ್ಕೆ ಅಪ್ಪಳಿಸುತ್ತಿದೆ...
ಟಪ್... ಟಪ್... ಟಪ್...

ಆಕಾಶದಲ್ಲಿ ಗುಡುಗುಗಳು, ಮಿಂಚುಗಳು ಗುಡುಗಿ, ಮಿನುಗಿ, ಆರ್ಭಟಿಸಿದ ನಂತರ ಮತ್ತೆ ಸದ್ದಾಗಿ ಕೇಳುವ ಸುರಿವ ಮಳೆಯ ಏಕತಾನದ ಸಪ್ಪಳದಂತೆ...ಇಂತಹ ಕೆಲವಾದರೂ ಸದ್ದುಗಳನ್ನು ಒಂದುಗೂಡಿಸಿದಾಗ, ಅಂತಹ ಸದ್ದುಗಳ ಭಾರದಲ್ಲಿ ಹೊರಬಾರದ ಒಂದೆರಡು ನಿಟ್ಟುಸಿರುಗಳ ಕ್ಷೀಣ ಧ್ವನಿಯಾದರೂ ಕೇಳಿಸಿರಬಹುದಲ್ಲವೇ?
ಅಂತಹ ಒಂದು ಧ್ವನಿಯ ಜಾಡಿನಲ್ಲಿ ಅವಳು ಸಾಗುತ್ತಿದ್ದಳು.

ರಸ್ತೆಯಂಚಿನಲ್ಲಿ ಎದ್ದಿದ್ದ ದೂಳು- ನಿಜಕ್ಕೂ ದೂಳೇ? ಮಸುಕು ಮಸುಕಾದ ಬೆಳಕು ನಿಜಕ್ಕೂ ಬೆಳಕಿನದೇ? ಕೆಮ್ಮಿದ್ದು ನಿಜಕ್ಕೂ ಬದುಕಿದವರ ಕೆಮ್ಮೇ? ಹೇಳುವುದು ಹೇಗೆ?
ಬಿಚ್ಚಿದ ಬದುಕು, ಸರಿದ ಹಾಗೆ - ಧ್ವನಿಗಳಾಗುತ್ತಾ ಸೇರಿಕೊಳ್ಳುವ ಸದ್ದುಗಳು. ಆ ಸದ್ದಿನಲ್ಲಿ ನಿಜಕ್ಕೂ ಸಪ್ಪಳಗಳಾಗಿ ಉಳಿದದ್ದೆಷ್ಟು, ಅಳಿಸಿಹೋದದ್ದೆಷ್ಟು ಎಂದು ಲೆಕ್ಕವಿಟ್ಟವರಾದರೂ ಯಾರು?

ಆಕಾಶದಲ್ಲಿ ಹಾರಿದ್ದು ಬೆಳ್ಳಕ್ಕಿಯೇ ಎಂದು ಯಾರಾದರೂ ಕೇಳಬಹುದು, ಬಾಲ್ಯದಲ್ಲಿ ಬೆಳ್ಳಕ್ಕಿ ಕಂಡದ್ದರ ನೆನಪು ಇನ್ನೂ ಮಾಸಿರಲಿಲ್ಲವಾದ್ದರಿಂದ ಬೆಳ್ಳಗೆ ಹಿಂಡಾಗಿ ಹಾರಿಹೋದ ಹಕ್ಕಿಗಳನ್ನು ಬೆಳ್ಳಕ್ಕಿ ಎಂದಳು. ಆ ನೆನಪು ಬಿಚ್ಚಿದ ಅಂಗಳ ಚೌಕಿಯದು; ಚಚ್ಚೌಕಾರದ ಚೌಕಿ.

ಕಾಗೆಗಳು ಕೂಗುತ್ತಿದ್ದವು. ಹನಿಯಾಗಿ ಇಳಿದ ಮಳೆ. ಅಚ್ಚ ಬೆಳ್ಳಗಿನ ಶುಭ್ರ ಕೂದಲನ್ನ ಸಾವಕಾಶವಾಗಿ ಬಾಚಿಕೊಳ್ಳುತ್ತಿರುವ ಮುದಿ ಹೆಂಗಸಾದ ಆಕೆ. ಎಲ್ಲರ ಮನೆಯಂಗಳದಲ್ಲಿ, ಯಾರ ಮನೆ ಆಲ್ಬಂನಲ್ಲಿ ಸಿಗಬಹುದಾದಂತಹ ಎಲ್ಲರೂ ಕಂಡಿರಬಹುದಾದಂತಹ ಸರ್ವೇಸಾಮಾನ್ಯವಾದ ಹೆಣ್ಣು. ಆದರೆ ಈಗ ಸಾಕಷ್ಟೇ ವಯಸ್ಸಾಗಿದೆ.

ಆ ಅವಳು ಯಾರು ಎಂದು ಯಾರಾದರೂ ಕೇಳಿದರೆ, ಹೇಳುವುದಾದರೂ ಏನು?
ಒಲೆಗೆ ಬೆಂಕಿಯೂಡುತ್ತಾ, ಚಳಿಗೆ ಬೆಂಕಿ ಕಾಯಿಸಿಕೊಳ್ಳುತ್ತಾ, ಮಳೆಗೆ ದಿನದೂಡುತ್ತಾ, ರುಚಿರುಚಿಯಾಗಿ ಅಡುಗೆ ಮಾಡುತ್ತಾ, ಸದಾ ಪಾತ್ರೆಯೊಳಗೆ ಸೌಟು ಆಡಿಸುತ್ತಾ ಕಳೆದ ಕಾಲವನ್ನು ಎಣಿಸುತ್ತಿರುವ ಅವಳು...`ಟಪ್... ಟಪ್... ಟಪ್...~

 `ಮಗುವೇ ಏಳು, ಸರ್ವನಾಶವಾಯಿತು. ಪ್ರಪಂಚ ಬಾಯಿ ಕಳೆಯುತ್ತಿದೆ. ಜಗತ್ತಿನ ತುತ್ತತುದಿಯಲ್ಲಿರುವ ನಿನ್ನನ್ನೀಗ ಕಬಳಿಸುತ್ತದೆ. ಆ ಕಡೆ ಹಾರಲು ಪ್ರಯತ್ನಿಸಿದೆಯೋ ಅಂಧಕಾರ; ಮೇಲೇರಲು ಪ್ರಯತ್ನಿಸಿದೆಯೋ ನಿರಾಕಾರ. ಆ ಕಡೆ ಈ ಕಡೆ ಎಂದು ಎಣಿಸಿದೆಯೋ, ಕೊಚ್ಚಿ ಬರುವ ಕಡಲ ನೀರು ನುಂಗಿಬಿಡುತ್ತೆ... ಅದಕ್ಕೇ ಓಡು...~
ಅಂದದ್ದು ಯಾರು? ಯಾರಾದರೇನು? ಎದ್ದು ಈಗ ಓಡಬೇಕು... ಏಕೆಂದರೆ ಓಡಲೇಬೇಕಾದ ಯುಗವಿದು.
 
ಮಾವಿನ ಮರದಡಿ ಕುಳಿತು, ಇಂಪಾದ ಕೋಗಿಲೆ ಧ್ವನಿ ಕೇಳುವ ಕಾಲವಿದಲ್ಲ; ತಿಂದ ಹಲಸಿನ ಹಣ್ಣು ಅರಗದೇ ಅಜೀರ್ಣವಾಯಿತೆಂದು ಪಾಯಿಖಾನೆಯಲ್ಲಿ ಕೂತು, ಕೂತು ಪರೀಕ್ಷಿಸುವುದಕ್ಕೂ ಸಮಯವಿಲ್ಲ. ಹೇಲದೇ ಹತ್ತು ದಿನವಾದರೂ ಮುಲಾಜಿಲ್ಲದೇ ಬದುಕುವ ಕಾಲವಿದು. ಸುಮ್ಮನೆ ಓಡುತ್ತಿರಬೇಕು - ಓಡುತ್ತಿರುವ ಗಡಿಯಾರದ ಮುಳ್ಳುಗಳಿಗಿಂತ ರಭಸವಾಗಿ...`ಬರ್ರ‌್‌... ಬರ್ರ‌್‌... ಬರ್ರ‌್‌...~
ವಾಹನಗಳ ಎಡೆಬಿಡದ ಸಂಚಾರ.
 
ನಗರ ಜೀವನವೆಂದರೆ ಸುಮ್ಮನೆಯೇ? ಮನೆಯಲ್ಲಿ ಕುಳಿತು ಮೇಲೆ ಹಾರಿದ ಕಾಜಾಣವನ್ನೋ, ಕೆಳಗೆ ಪಚ್ಚಕ್ಕನೆ ಪಿಚ್ಚೆ ಹಾಕಿದ ಗುಬ್ಬಚ್ಚಿಯನ್ನೋ ಆನಂದದಿಂದ ನೋಡುತ್ತಾ ಮೈಮರೆಯುವ ಕಾಲವೇನು? ಕಾಜಾಣ ಗುಬ್ಬಚ್ಚಿ ಕಾಣದೇ ಎಷ್ಟೊಂದು ವರುಷಗಳು ಸಂದುಹೋದವು? ಕಾ..ಕಾ.. ಎಂದು ಕನಸಿನಲೆಂಬಂತೆ ಎಲ್ಲೋ ದೂರದಲ್ಲಿ ಕೂಗಿದ್ದು, ಕೂಗುತ್ತಿರುವುದು ಕಾಗೆಯೇ?

`ಮಮ್ಮೀ, ಕಾಗೆ ಯಾವ ಬಣ್ಣ?~ ಎಳೇ ಧ್ವನಿ ಕೇಳಿತಲ್ಲವೇ?
ಇನ್ನೂ ಅಚ್ಚುಕಟ್ಟಾಗಿ ಹೇಳಬೇಕೆಂದರೆ `‘Mummy, what colour is a crow? Is it not white? Are you sure, it is black?’

ಆಹಾ! ಎಂತಹ ಶಬ್ದಗಳು! ಮಾತು ನೀರೊಳಗೆ ಇಳಿದು ಗುಳು ಗುಳು ಅಂದ ಹಾಗೆ. ಉತ್ತರಿಸಲೇಬೇಕಾದಂತಹ ಬೆಪ್ಪುತಕ್ಕಡಿತನ. ಅದಾಗ ಕರ್ಕಶವಾಗಿ ಹಾರಿಹೋಗುತ್ತೆ ಒಂದು ವಿಮಾನ. ಒಂದೇ!? ಆ ಬದಿಯಲ್ಲೊಂದು ಈ ಬದಿಯಲ್ಲೊಂದು... How many aeroplanes?

`ಆಂ ಅನ್ನು. ಹೂಂ, ಬೇಗ ಊಟ ಮಾಡು ಪುಟ್ಟಾ...! ನೋಡು, ಅಲ್ಲಿ ಇನ್ನೊಂದು ಏರೋಪ್ಲೇನ್..!~ಎಂಟನೇ ಮಹಡಿಯ, ಎಂಟನೂರು ಸ್ವೇರ್‌ಫೀಟ್‌ನ ಬೆಂಕಿಪೊಟ್ಟಣದಂತಹ ಮನೆ ಒಮ್ಮೆ ಗಡಗಡ ನಡುಗುತ್ತೆ. ಕೈಗೆಟಕುವ ಅಂತರದಲ್ಲಿ ಹಾರುವ ವಿಮಾನದ ರೆಕ್ಕೆ... ಮೋಡಗಳ ಮಧ್ಯದಿಂದ ತಿವಿಯುವಂತೆ ಮುನ್ನುಗುವ ಅದರ ಕೊಕ್ಕು... ಕಣ್ಣಿಗೆ ಕಾಣುವ ಕಪ್ಪು ಕಪ್ಪು ಪುಟಾಣಿ ಕಿಟಕಿಗಳು...

`ನೋಡು ಮಗೂ, ಕಾಗೆ ಹೀಗೇ ಇರುತ್ತೆ. ಆದರೆ ಬಣ್ಣ ಮಾತ್ರ ಕಪ್ಪು. ರೆಕ್ಕೆ ಹೀಗೇ ಬಿಚ್ಚಿ ಹಾರುತ್ತೆ. ಆದರೆ ಪಟಪಟಾಂತ ಅಲ್ಲಾಡುತ್ತಿರುತ್ತೆ... ಕೊಕ್ಕು ಹೀಗೇ ಮುಂದೆ ಇರುತ್ತೆ, ಆದರೆ ಚೂಪಾಗಿ ಕರ‌್ರಗಿರುತ್ತೆ... ಹಾರುವಾಗೆಲ್ಲಾ ಹೀಗೇ ಅರಚುತ್ತೆ... ಆದರೆ ಶಬ್ದ ಮಾತ್ರ ಕಾ...ಕಾ.. ಅಂತ ಬರುತ್ತಾ ಇರುತ್ತೆ... ಅದೂ ಹಾರುವಾಗ ಹೀಗೇ ಹಾರಾಡುತ್ತಾ ಇರುತ್ತೆ, ಆದರೆ ಇಷ್ಟು ದೊಡ್ಡದಾಗಿರಲ್ಲ... ಪುಟ್ಟದಾಗಿ, ಪುಟಾಣಿಯಾಗಿ ಹಾರುತ್ತಾ ಇರುತ್ತೆ... ಒಂದು ಚಿಕ್ಕ ಕಪ್ಪು ಏರೋಪ್ಲೇನ್ ನೆನೆಸ್ಕೋ, ನಿಂಗೆ ಕಾಗೆ ಸಿಗುತ್ತೆ~.

ಯಾರು ವಿವರಿಸುತ್ತಿದ್ದದ್ದು? ಯಾರಾದರೇನು? ಇನ್ನು ಮುಂದೆ ಎಲ್ಲವೂ ವಿವರಣೆ ತಾನೇ! ಕಂಪ್ಯೂಟರ್ ಮುಂದೆ ಕುಳಿತ ನಾಲ್ಕು ವರುಷದ ಮಗು, ಹತ್ತು ಬಟನ್ ಒತ್ತುತ್ತೆ, ಮೌಸ್ ಹಿಡಿದು ಆ ಕಡೆ ಈ ಕಡೆ ಅಂತ ಜಗ್ಗಾಡುತ್ತೆ. ಕಡೆಗೂ ಅಮ್ಮ ಹೇಳಿದ ಕಾಗೆ ಫೂತ್ಕರಿಸುತ್ತಾ ಬರುತ್ತೆ....~ ಎಂಥಾ ಅದ್ಭುತ ಡಿಸ್ಕವರಿ! ನಮ್ಮ ಪುಟ್ಟ ಎಷ್ಟು ಬುದ್ಧಿವಂತ.  He is highly imaginative....~  

ಪ್ರಶಂಸೆಯ ಮೇಲೆ ಪ್ರಶಂಸೆ. ಬರೀ ವಟವಟವಟ ಅಂತ ವದರೋದು ಅಷ್ಟೇ. ಒಂದು ಕಾಲದ ಮೌನ ನಾಪತ್ತೆ. ಒಂದು ಕ್ಷಣದ ಮೌನ ಅರ್ಥಹೀನ. ಮೌನವೇ ಮಾತಾಯಿತು, ಹಾಗಂದರೇನು ಕವಿವರ್ಮ...?

ಮೌನದ ಆಳದಲ್ಲಿ ಹುದುಗಿಹೋದ ಅವನು, ಸದ್ದೇ ಮೂಡದ ಮೌನದಲ್ಲಿ ಬಿಚ್ಚಿದ ಅಂತರಂಗದ ಆಪ್ತ ನೆನಪನ್ನ ಮೌನವಾಗಿ ನೆನೆಯುತ್ತಾ, ಮೆಲುಕು ಹಾಕಿದ್ದು ಮತ್ತೊಬ್ಬರಿಗೆ ತಿಳಿಯದಷ್ಟು ಮೌನವಾಗಿ ಒಂದು ನೀರವ ರಾತ್ರಿಯಲ್ಲಿ ನಿಶ್ಶಬ್ದವಾಗಿ ಸರಿದುಹೋಗುತ್ತಿದ್ದ...‘What is this nonsense! How can one sit in the depth of silence! And what kind of silence are you talking about?’

ಮೌನ! ಕಣ್ಣು ಮುಚ್ಚಿ ಕುಳಿತ ತಟಸ್ಥ ಭಾವದಡಿ ಶಬ್ದವೇ ಇಲ್ಲದ ಆ ಸ್ತಬ್ದ ಕ್ಷಣ..!
ಎತ್ತಿನ ಗಾಡಿಯ ಕಿಣಿಕಿಣಿ ನಾದ ಹೇಗೆ ಮೌನದಲ್ಲಿ ಸದ್ದಾಗುತ್ತಾ ಸೇರುತ್ತಿತ್ತು....
ಮತ್ತೆ ಕರ್ಕಶವಾಗಿ ಹೊಡೆದುಕೊಳ್ಳುವ ವಾಹನಗಳ ಶಬ್ದ. ನೆನಪು - ಮೆಲುಕು - ವಾಸ್ತವಗಳಾಚೆ ಸರಿರಾತ್ರಿಯವರೆಗೂ ಹಾರಿಹೋಗುವ ವಿಮಾನಗಳ ಸದ್ದು... ಬಾಲ್ಕನಿಯಲ್ಲಿ ನಿಂತು ಕೇಕೇ ಹಾಕುವ ಮಕ್ಕಳು.

‘Mummy, can’t we make it orange?’
No! It is black! ಗುಡುಗಿದ್ದು ಯಾರು? ‘Black like hair!’
‘Who said black!’ ಸದ್ಯ ಯಾವ ನಟನಾಮಣಿಯೂ ವೈಯಾರದಿಂದ ಅಲ್ಲಿ ಬಂದು ಕೇಳಲಿಲ್ಲ. ದೇವರ ದಯೆ, ಕೆಲವರಿಗಾದರೂ ಕೂದಲಿನ್ನೂ ಕಪ್ಪಾಗಿಯೇ ಉಳಿದಿದೆ. ದಿನಕ್ಕೊಂದು ಬಣ್ಣ ಬಳಿದುಕೊಳ್ಳುವ ಈ ಭರಾಟೆ ಯುಗದಲ್ಲೂ ಕೂದಲಿನ್ನೂ ಯಾಕೆ ಕಪ್ಪಾಗಿಯೇ ಉಳಿಸಿಕೊಂಡಿದಾರೆಯೋ?

‘Can you see that black object? ಅದು ನಮ್ಮ ಪುಟ್ಟ ಕಂಡ ಕಾಗೆ!?
Clap! Clap! Clap! Clap your hands! All clap your hands! ಕ್ಷಣದ ಮೌನ ಅಲ್ಲೋಲ ಕಲ್ಲೋಲ ಎಲ್ಲೋ ಉಕ್ಕುಕ್ಕಿ ಅಲೆಅಲೆಯಾಗಿ ಬರುವ ಸಮುದ್ರದ ನೀರು. ಕಾಲನ್ನು ಹಿತವಾಗಿ ಸ್ವರ್ಶಿಸಿ, ಚುಂಬಿಸಿ, ಚುಂಬಿಸಿ ಮರುಳುತ್ತಿರುವ ನೊರೆ ನೀರು. ಕ್ಷಿತಿಜದ ಕೆಂಪು ಅಂಚು ಹೊದ್ದು ನಿಂತ ಇಳಿಸಂಜೆಯ ಮುಸ್ಸಂಜೆ.

ಆಗಸದಲ್ಲಿ ತುಂಬಿದ ಹಕ್ಕಿಗಳ ಕಲರವ. ಹದ್ದು, ಕಾಗೆ, ಗುಬ್ಬಚ್ಚಿ, ಮರುಕಳಿಸಿತೇ ಬಾಲ್ಯ!?`ಅರೇ!~ ನಲ್ಲಿಯಲ್ಲಿ ನೀರೇ ಇಲ್ಲ! ಭರಭರಭರ ಎಂದು ಟಾಯ್‌ಲೆಟ್‌ನಲ್ಲಿ ಟಿಶ್ಯೂ ಪೇಪರ್ ಯಾರೋ ಎಳೆದ ಸದ್ದು, ಮತ್ತೆಲ್ಲೋ ಹಾರಿದ ವಿಮಾನ! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT