ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟಾಚಾರದ ತ್ರೈಮಾಸಿಕ ಕೆಡಿಪಿ ಸಭೆ!

ಜಿಲ್ಲೆಗೆ ಶಾಪವಾದ `ನಿರ್ಮಿತಿ ಕೇಂದ್ರ'
Last Updated 27 ಡಿಸೆಂಬರ್ 2012, 9:08 IST
ಅಕ್ಷರ ಗಾತ್ರ

ಲಿಂಗಸುಗೂರ: ತಾಲ್ಲೂಕು ಪಂಚಾಯಿತಿ ಮಟ್ಟದ ಕೆಡಿಪಿ (ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಪರಿಶೀಲನಾ) ಸಭೆ ಬುಧವಾರ ಕರೆಯಲಾಗಿತ್ತು. ಶಾಸಕ ಮಾನಪ್ಪ ವಜ್ಜಲ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಕೆಲವೆ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸುವ ಮೂಲಕ ಕಾಟಾಚಾರದ ಪ್ರಶ್ನಾವಳಿಗಳು, ಗೊತ್ತುವಳಿ ಸ್ವೀಕರಿಸುವ ವಿಚಾರಗಳು ಆಗೊಮ್ಮೆ, ಈಗೊಮ್ಮೆ ತೇಲಿಬಂದಿದ್ದು ಬಿಟ್ಟರೆ ಮಹತ್ವದ ನಿರ್ಣಯ ಅಥವಾ ಕಟ್ಟೆಚ್ಚರದ ಮಾತುಗಳು ಕೇಳಿ ಬರಲಿಲ್ಲ.

ಬುಧವಾರ ಬೆಳಿಗ್ಗೆ ನಿಗದಿತವಾಗಿ ಸಭೆ ಆರಂಭಗೊಂಡಿತು. ಭಾಗಶಃ ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಅಧಿಕಾರಿಗಳು ಪ್ರತಿನಿಧಿಗಳನ್ನು ಕಳುಹಿಸುವಂತಿಲ್ಲ ಎಂದು ಸ್ಪಷ್ಟ ನೋಟಿಸ್ ರವಾನೆ ಆಗಿದ್ದರು ಕೂಡ ಕೆಲ ಇಲಾಖೆ ಅಧಿಕಾರಿಗಳು ಪ್ರತಿನಿಧಿಗಳನ್ನು ಕಳುಹಿಸಿದ್ದರು. ಕೃಷಿ, ರೇಷ್ಮೆ, ಅರಣ್ಯ, ಕೈಗಾರಿಕೆ, ಮೀನುಗಾರಿಕೆ, ಅಕ್ಷರ ದಾಸೋಹ, ಜಲಸಂವರ್ಧನ ಇತರೆ ಇಲಾಖೆಗಳ ಪ್ರಗತಿ ಪರಿಶೀಲನೆ ಮುಂಚೆಯೆ ಸಭೆ ಮುಕ್ತಾಯಗೊಂಡಿತು.

ಲೊಕೋಪಯೋಗಿ ಇಲಾಖೆ ಕಾಮಗಾರಿಗಳು ನೆನೆಗುದಿಗೆ ಬಿದ್ದಿರುವ ಹಾಗೂ ಪಟ್ಟಣದ ರಸ್ತೆ ಅಭಿವೃದ್ಧಿ ವಿಷಯದಲ್ಲಿ ಶಾಸಕರು ಬೇಸರ ವ್ಯಕ್ತಪಡಿಸಿದರು. ಜನತೆ ಹಿಡಿಶಾಪ ಹಾಕುತ್ತಿದ್ದಾರೆ. ಅಧಿಕಾರಿಗಳ ತಪ್ಪಿನಿಂದ ಪ್ರತಿನಿಧಿಗಳು ಛೀಮಾರಿ ಹಾಕಿಸಿಕೊಳ್ಳುವಂತಾಗಿದೆ ಎಂದು ಶಾಸಕ ಮಾನಪ್ಪ ವಜ್ಜಲ ಆಕ್ಷೇಪ ವ್ಯಕ್ತಪಡಿಸಿದರು. ಬಾಕಿ ಉಳಿದ ಕಾಮಗಾರಿಗಳ ಪರಿಶೀಲನೆ ನಡೆಸಿ ವಿಳಂಬಕ್ಕೆ ಕಾರಣರಾದ ಗುತ್ತಿಗೆದಾರರಿಗೆ ನೋಟಿಸ್ ನೀಡಿ ಕಪ್ಪು ಪಟ್ಟಿಗೆ ಕಳುಹಿಸುವಂತೆ ತಾಕೀತು ಮಾಡಿದರು. ಇದಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಭೂಪನಗೌಡ ಧ್ವನಿಗೂಡಿಸಿದರು.

ದೊಡ್ಡಿ, ತಾಂಡಾಗಳು ವಿದ್ಯುತ್ ಸಂಪರ್ಕದಿಂದ ವಂಚಿತಗೊಂಡಿವೆ. ಅಂತಹ ದೊಡ್ಡಿ, ತಾಂಡಾಗಳ ಪಟ್ಟಿ ಸಿದ್ಧ ಮಾಡಿ ಪ್ರಸ್ತಾವನೆ ಸಲ್ಲಿಸಬೇಕು. ನಿರಂತರ ವಿದ್ಯುತ್ ಯೋಜನೆ ಹಾಗೂ ಇತರೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಜನತೆ ಪರದಾಡುತ್ತಿದ್ದಾರೆ. ಅಂತಹ ಸಮಸ್ಯೆ ಉದ್ಭವಗೊಳ್ಳದಂತೆ ಎಚ್ಚರಿಕೆ ವಹಿಸಲು ಜೆಸ್ಕಾಂ ಅಧಿಕಾರಿಗೆ ಶಾಸಕರು ಸೂಚಿಸಿದರು. ವಿದ್ಯುತ್ ಸಂಪರ್ಕ ತೊಂದರೆಯಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ ಎಂದು ಜಿಪಂ ಸದಸ್ಯರಾದ ಪುಷ್ಪಾ ಪಾಮಯ್ಯ ಮುರಾರಿ, ದುರುಗಮ್ಮ ಸಭೆ ಗಮನ ಸೆಳೆದರು.

ಗುಜರಿ ಅಂಗಡಿಯಲ್ಲಿ ಸೈಕಲ್ ಪತ್ತೆಯಾದ ಬಗ್ಗೆ ಶಾಸಕರು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಪ್ರಶ್ನಿಸಿದಾಗ ಅವು ತಮಗೆ ಸಂಬಂಧಿಸಿದವುಗಳಲ್ಲ. ಅಲ್ಲಿ ಒಂದೆರಡು ಸೈಕಲ್ ತುಣುಕುಗಳು ಇದ್ದಿದ್ದು ನಿಜ. ಅವು ಎಲ್ಲಿಂದ ಬಂದವು ಎಂಬುದು ಸ್ಪಷ್ಟವಾಗಿಲ್ಲ. ಈ ಕುರಿತು ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ ಎಂದರು. ಕೆಲ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಇದ್ದು ವಿಶೇಷ ಕಾಳಜಿ ವಹಿಸುವಂತೆ ಜಿಪಂ ಸದಸ್ಯರು ಮನವಿ ಮಾಡಿದರು. ತಟ್ಟಿ, ತಟ್ಟು ಕಟ್ಟಿಕೊಂಡು ಪಾಠ ಮಾಡುವತ್ತ ಕಣ್ಣು ಹಾಯಿಸುವಂತೆ ಸಲಹೆ ಮಾಡಿದರು.

ನಿರ್ಮಿತಿ ಕೇಂದ್ರ ಜಿಲ್ಲೆಗೆ ಶಾಪವಾಗಿ ಪರಿಣಮಿಸಿದೆ. ವಿವಿಧ ಯೋಜನೆಗಳಡಿ ಮಂಜೂರಾದ ಬಹುತೇಕ ಕಾಮಗಾರಿಗಳು ಕಳೆದ ಏಳೆಂಟು ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ. ಸರ್ಕಾರದ ಯೋಜನೆಗಳು ಗ್ರಾಮೀಣ ಜನತೆಗೆ ತಲುಪಿ ಸದ್ಭಳಕೆ ಮಾಡುವಲ್ಲಿ ವಿಫಲವಾಗಿದ್ದೇವೆ. ಆ ಎಲ್ಲಾ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರದವರೆ ನಿರ್ವಹಣೆ ಮಾಡುತ್ತಿದ್ದಾರೆ. ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ನಿರ್ಮಿತಿ ಏಜೆನ್ಸಿಗೆ ಕಾಮಗಾರಿ ಬೇಡ ಎಂದರು ನೀಡುತ್ತಿರುವುದು ವಿಷಾಧನೀಯ ಎಂದು ಭೂಪನಗೌಡ ಕರಡಕಲ್ಲ ಖೇದ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಲಿತಾಬಾಯಿ ಶಿವನಗೌಡ ಪಾಟೀಲ, ಉಪಾಧ್ಯಕ್ಷ ಮಾನಪ್ಪ ಚವ್ಹಾಣ. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೀರಭದ್ರಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT