ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾದುಕುಳಿತಿರುವ ಜವರಾಯ

Last Updated 26 ಡಿಸೆಂಬರ್ 2010, 10:10 IST
ಅಕ್ಷರ ಗಾತ್ರ

ಕೆ.ಎಚ್. ಓಬಳೇಶ್ 
ಚಾಮರಾಜನಗರ:
ಜಿಲ್ಲೆಯಲ್ಲಿ ಎಂಟು ಕೆರೆಗಳು ರಸ್ತೆಬದಿಯಲ್ಲಿದ್ದು, ಜೀವಗಳ ಆಹುತಿಗೆ ಜವರಾಯ ಕಾದು ಕುಳಿತಿದ್ದಾನೆ. ತಾಲ್ಲೂಕಿನ ಬೆಂಡರವಾಡಿ, ನಾಗವಳ್ಳಿ, ಕೋಡಿಮೋಳೆ, ತಮ್ಮಡಹಳ್ಳಿ ಕೆರೆಗಳ ಏರಿ ಮೇಲಿನ ರಸ್ತೆಯಲ್ಲೇ ವಾಹನಗಳು ಸಂಚರಿಸಬೇಕಿದೆ. ಕೊಳ್ಳೇಗಾಲ ಪಟ್ಟಣದ ಚಿಕ್ಕರಂಗನಾಥ ಕೆರೆ- ದೊಡ್ಡರಂಗನಾಥ ಕೆರೆ, ಧನಗೆರೆ ಕೆರೆ ಹಾಗೂ ಪಾಪನಕೆರೆಯದ್ದೂ ಇದೇ ಚಿತ್ರಣ. ಆದರೆ, ಯಾವುದೇ ಕೆರೆಗೂ ತಡೆಗೋಡೆ ನಿರ್ಮಿಸಿಲ್ಲ. ಚಾಲಕರು ಎಚ್ಚರತಪ್ಪಿದರೆ ಪ್ರಾಣಕ್ಕೆ ಸಂಚಕಾರ ತಪ್ಪಿದ್ದಲ್ಲ.

ಚಾಮರಾಜನಗರ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಬೆಂಡರವಾಡಿ ಕೆರೆಯಿದೆ. ರಸ್ತೆ ಅತ್ಯಂತ ಕಿರಿದಾಗಿದ್ದು, 6ಮೀ. ಅಗಲವಿದೆ. ಇದರಿಂದ ವಾಹನಗಳ ಸುಗಮ ಸಂಚಾರ ಕಷ್ಟಕರ. ಜತೆಗೆ, ರಸ್ತೆ ವಕ್ರಾಕಾರವಾಗಿದೆ. ಕೆರೆ ಏರಿಯ ಹಿಂಭಾಗದಲ್ಲಿ ಸುಮಾರು 25ಅಡಿಯಷ್ಟು ಆಳವಾದ ತಗ್ಗುಪ್ರದೇಶವಿದೆ. ತಮಿಳುನಾಡಿನ ಈರೋಡ್, ಸತ್ಯಮಂಗಲಕ್ಕೆ ಈ ಮಾರ್ಗದಲ್ಲಿಯೇ ತೆರಳಬೇಕಿದೆ. ಹೀಗಾಗಿ, ನಿತ್ಯವೂ ವಾಹನಗಳ ಸಂಚಾರ ದಟ್ಟಣೆ ಹೆಚ್ಚು. ರಕ್ಷಣೆಗೆ ರಸ್ತೆಬದಿಯಲ್ಲಿ ಕಲ್ಲುಗಳನ್ನು ನಿಲ್ಲಿಸಲಾಗಿದೆ.
 
ಅವುಗಳು ಭದ್ರವಾಗಿಲ್ಲ. ರಸ್ತೆ ವಿಸ್ತರಣೆ ಕಾರ್ಯವೂ ನಡೆದಿಲ್ಲ. ನಾಗವಳ್ಳಿ ಕೆರೆಗೆ ಕೂಲಿಯಾಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಉರುಳಿ ಐವರು ಮೃತಪಟ್ಟಿದ್ದ ಘಟನೆ ಜನರ ಮನದಲ್ಲಿ ಹಸಿರಾಗಿದೆ. ಏರಿ ಮೇಲಿನ ರಸ್ತೆ ಬಿಳಿಗಿರಿರಂಗನಬೆಟ್ಟಕ್ಕೆ ಸಂಪರ್ಕ ಕಲ್ಪಿಸುತ್ತದೆ. ಆದರೆ, ತಡೆಗೋಡೆಯೇ ಇಲ್ಲ. ಚಾ.ನಗರ ಮೀಪದಲ್ಲಿರುವ ಕೋಡಿಮೋಳೆ ಕೆರೆಯ ಮೇಲಿನ ರಸ್ತೆ ತಿರುವುಗಳಿಂದ ಕೂಡಿದ್ದು, ತಡೆಗೋಡೆ ನಿರ್ಮಿಸಿಲ್ಲ. ಏರಿಯ ಅಂಚಿನಲ್ಲಿ ಸೀಮೆಜಾಲಿ ಗಿಡ ಬೆಳೆದುನಿಂತಿವೆ. ತಮ್ಮಡಹಳ್ಳಿ ಕೆರೆ ರಸ್ತೆಯು ಚಾ.ನಗರ-ಉಡಿಗಾಲ-ಸಾಗಡೆ ಗ್ರಾಮಕ್ಕೆ ಸಂಪರ್ಕ ಬೆಸೆದಿದೆ. ಇಲ್ಲಿನ ರಸ್ತೆಬದಿಯಲ್ಲಿ ರಕ್ಷಣಾ ಕಲ್ಲುಗಳನ್ನೂ ನಿಲ್ಲಿಸಿಲ್ಲ.

ಕೊಳ್ಳೇಗಾಲ ಪಟ್ಟಣದಲ್ಲಿರುವ ಚಿಕ್ಕರಂಗನಾಥ ಕೆರೆ ಮತ್ತು ದೊಡ್ಡರಂಗನಾಥ ಕೆರೆ ಒಂದಕ್ಕೊಂದು ಅಂಟಿಕೊಂಡಿವೆ. ಕೆರೆಯ ಏರಿ ಮೇಲಿನ ರಸ್ತೆ ಮಾರ್ಗವಾಗಿಯೇ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಬೇಕಿದೆ. ನಿತ್ಯವೂ ನೂರಾರು ಯಾತ್ರಿಕರು ಪಯಣಿಸುತ್ತಾರೆ.ಈ ಅವಳಿ ಕೆರೆಗಳು ಮೃತ್ಯುಕೂಪವಾಗಿವೆ. ದಶಕದ ಹಿಂದೆ ಬಸ್ ಮತ್ತು ಟೆಂಪೊ ಬಿದ್ದು ಭಾರಿ ಅವಘಡ ಸಂಭವಿಸಿದ್ದ ನಿದರ್ಶನವಿದೆ. ಬೈಕ್ ಸವಾರರು ಎಚ್ಚರತಪ್ಪಿ ಕೆರೆಗಳಿಗೆ ಬಿದ್ದಿದ್ದಾರೆ. ಇಂದಿಗೂ ರಕ್ಷಣಾಗೋಡೆ ನಿರ್ಮಿಸಿಲ್ಲ. ಕಾವೇರಿ ನೀರಾವರಿ ನಿಗಮದಿಂದ ನೀರಾವರಿ ಸೌಲಭ್ಯಕ್ಕಾಗಿ ಎರಡು ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಮಳೆಗಾಲದಲ್ಲಿ ಕೆರೆಗಳು ಭರ್ತಿಯಾಗಿರುತ್ತವೆ. ತಡೆಗೋಡೆ ನಿರ್ಮಿಸಬೇಕೆಂಬ ಸಂಘ-ಸಂಸ್ಥೆಗಳ ಒತ್ತಾಯ ಈಡೇರಿಲ್ಲ.

ಪಾಪನಕೆರೆ ಕೊಳ್ಳೇಗಾಲ ತಾಲ್ಲೂಕಿನ ಹೊಸಅಣಗಳ್ಳಿ ಬಳಿಯಿದೆ. ಬೆಂಗಳೂರು-ದಿಂಡಿಗಲ್‌ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ- 209 ಈ ಕೆರೆಯ ಏರಿ ಮೇಲೆಯೇ ಹಾದುಹೋಗಿದೆ. ಹೆದ್ದಾರಿಯ ಎರಡು ಬದಿಗಳಲ್ಲಿ ತಡೆಗೋಡೆ ಮಾತ್ರ ನಿರ್ಮಾಣಗೊಂಡಿಲ್ಲ. ಧನಗೆರೆ ಕೆರೆಯ ರಸ್ತೆ ಮೇಲಿನ ಪಯಣವೂ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಇಲ್ಲಿ ಕನಿಷ್ಠ ಕಲ್ಲು ಕೂಡ ನಿಲ್ಲಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT