ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಚೌಕಟ್ಟಿನಡಿ ಕೆಲಸ ಮಾಡಿ

ಪೊಲೀಸರಿಗೆ ನಿವೃತ್ತ ಎಸ್ಪಿ ನೆರವಂಡ ಇಂದಿರಾ ಸಲಹೆ
Last Updated 3 ಏಪ್ರಿಲ್ 2013, 9:41 IST
ಅಕ್ಷರ ಗಾತ್ರ

ಮಡಿಕೇರಿ: ಪೊಲೀಸರು ತಮ್ಮ ಕಾರ್ಯ ಚಟುವಟಿಕೆಗಳನ್ನು ನಿಭಾಯಿಸುವಾಗ ಕಾನೂನು ಚೌಕಟ್ಟು ಅರಿತು ಮುನ್ನಡೆಯುವಂತೆ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ನೆರವಂಡ ಇಂದಿರಾ ನಾಣಯ್ಯ ಅವರು ಸಲಹೆ ನೀಡಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೊಲೀಸರು ವೈಯಕ್ತಿಕ ಬದುಕನ್ನು ಲೆಕ್ಕಿಸದೆ ದಿನವಿಡೀ ಸಾರ್ವಜನಿಕ ಹಿತಕ್ಕಾಗಿ ಮತ್ತು ಶಾಂತಿ ಕಾಪಾಡಲು ತಮ್ಮ ಪ್ರಾಣವನ್ನೇ ಪಣವಿಟ್ಟು ದುಡಿಯುತ್ತಾರೆ. ಇವರಿಗೆ ಸೈನಿಕರಂತೆ ಆರೋಗ್ಯ ಮತ್ತು ಪಿಂಚಣಿ ಸೇವಾ ಸೌಲಭ್ಯಗಳು ದೊರೆಯಬೇಕು. ಈ ಬಗ್ಗೆ ಪೊಲೀಸ್ ವರಿಷ್ಠರು ಸರ್ಕಾರದ ಮಟ್ಟದಲ್ಲಿ ಚರ್ಚಿಸಬೇಕು ಎಂದು ಅವರು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಅನುಚೇತ್ ಮಾತನಾಡಿ, ಪ್ರತಿ ವರ್ಷ ಏಪ್ರಿಲ್ 2 ರಂದು ಪೊಲೀಸ್ ಧ್ವಜ ದಿನವಾಗಿ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಲ್ಲಿಸಿರುವ ಸೇವೆಯ ನೆನಪಿಗಾಗಿ ಈ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದರು.

ನಿವೃತ್ತ ಪೊಲೀಸ್ ಕಲ್ಯಾಣ ಕಾರ್ಯಕ್ರಮಕ್ಕಾಗಿ ಅಪಾರ ಧನದ ಅಗತ್ಯವಿದ್ದು, ಸಮಾಜದ ಎಲ್ಲಾ ವರ್ಗದ ಜನರಿಂದ ಉತ್ತಮ ಕಾರಣಕ್ಕಾಗಿ ಉದಾರ ದೇಣಿಗೆಯನ್ನು ಅಪೇಕ್ಷಿಸಲಾಗಿದೆ ಎಂದರು.

ಏರ್ ಮಾರ್ಷಲ್ (ನಿವೃತ್ತ) ಕೆ.ಸಿ.ಕಾರ್ಯಪ್ಪ ಅವರು ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಬಿ.ಅಂಜನಪ್ಪ, ಮತ್ತಿತರರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಡಿಎಆರ್ ತಂಡವು ಪಥ ಸಂಚಲ ನಡೆಸಿ ಅತಿಥಿ ಗಣ್ಯರಿಗೆ ಗೌರವ ಸಮರ್ಪಿಸಿತು. ಉಪ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಮಾಂಗ್ ಸ್ವಾಗತಿಸಿದರು. ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ಅಂತೋಣಿ ಡಿಸೋಜ ಮತ್ತು ಉಮರ್ ಉಲ್ ಫಾರೂಕ್ ನಿರೂಪಿಸಿದರು. ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಚೋಟು ಅಪ್ಪಯ್ಯ ವಂದಿಸಿದರು.

ಸಾಧಕರಿಗೆ ಸನ್ಮಾನ, ಟ್ರೋಫಿ ವಿತರಣೆ
ಮಡಿಕೇರಿ ಗ್ರಾಮಾಂತರ ಠಾಣೆಯ ಕೆ.ಎಚ್. ಭಾರತಿ ಅವರಿಗೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ರೋಲಿಂಗ್ ಟ್ರೋಫಿ, ಮಡಿಕೇರಿಯ ಎ.ಎಚ್.ಸಿ.ಡಿ.ಎ.ಆರ್.ನ ಬಿ.ಸಿ.ಸೋಮಪ್ಪ ಅವರಿಗೆ ಬೆಸ್ಟ್ ಪೊಲೀಸ್ ಟ್ರೋಫಿ ನೀಡಲಾಯಿತು. ಸೋಮವಾರಪೇಟೆಯ ಬಸ್ ನಿಲ್ದಾಣದಲ್ಲಿ ಪೆಟ್ರೋಲ್ ಬಾಂಬ್ ಪತ್ತೆ ಹಚ್ಚಿದ ಸೋಮವಾರಪೇಟೆಯ ಐಗೂರು ಗ್ರಾಮದ ಎಲ್. ಸಂತೋಷ್ ಅವರನ್ನು ಸನ್ಮಾನಿಸಲಾಯಿತು. ಮಡಿಕೇರಿಯ ಅಪರಾಧ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಗೇಶ್ ಅವರಿಗೆ ಮುಖ್ಯಮಂತ್ರಿ ಅವರ ಪದಕ ಲಭಿಸಿದ್ದು, ಕೊಡಗಿಗೆ ಹಲವು ವರ್ಷಗಳ ಬಳಿಕ ಈ ಪದಕ ಲಭಿಸಿದೆ.

ಸನ್ಮಾನಿತರು: ಪಿ.ಬಸವರಾಜು, ಎ.ಎ ಗಣಪತಿ, ಬಿ.ಯು ಮುದ್ದಯ್ಯ, ಕೆ.ಡಿ ರಾಮಣ್ಣ, ಕೆ.ಎ ಹರಿಶ್ಚಂದ್ರ, ಕೆ.ಎ ಬೋಪಯ್ಯ, ಜಿ.ಎನ್ ದೇವಯ್ಯ, ಎ.ಎಂ ಅಪ್ಪಯ್ಯ, ಡಬ್ಲ್ಯೂ.ಬಿ ಜೋಯಪ್ಪ, ಎಂ.ಡಿ. ಸೋಮಣ್ಣ, ಪಿ.ಟಿ ಮಂಜುನಾಥ, ಎಂ.ಎಸ್ ಉಮ್ಮರ್, ದಿವಂಗತ ನರಸಿಂಹ (ಪತ್ನಿ ಟಿ.ಎಂ ಶಿವಮ್ಮ ಅವರಿಂದ ಸನ್ಮಾನ ಸ್ವೀಕಾರ), ಎಚ್.ಎನ್ ನರಸಿಂಹ ಮೂರ್ತಿ, ಬಿ.ಬಿ ಜಗನ, ಎಚ್. ಬಸವ, ಜಿ.ಕೆ ಸುಬ್ರಾಯ, ಪಿ.ಕೆ ಬಿದ್ದಪ್ಪ, ಟಿ.ಕೆ ಮರಿಯಪ್ಪ, ಪಿ.ಶ್ರೀನಿವಾಸ್, ಎಚ್.ಎ ನಾಣಯ್ಯ, ದೇರಣ್ಣ ಗೌಡ, ಪಿ.ಆರ್ ಗೋಪಾಲಕಷ್ಣ, ದಿವಂಗತ ಎ.ಪಿ. ರಮೇಶ (ಪತ್ನಿ ಎ.ಆರ್ ಪಾರ್ವತಿ), ಎ.ಬಿ ಕಾಳಪ್ಪ, ವಿ ಬಿ ಬೈರಪ್ಪ, ಕೆ.ಪಿ ಮುತ್ತಪ್ಪ, ಪಿ.ಎಸ್. ರಘು, ಎಸ್.ಇ ಲಾಯಕ್ ಆಹಮದ್ ಅವರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT