ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಕೈಗೊಳ್ಳಲು ಆಗ್ರಹ

Last Updated 1 ಅಕ್ಟೋಬರ್ 2011, 10:35 IST
ಅಕ್ಷರ ಗಾತ್ರ

ಸಿಂದಗಿ: ಕಳೆದ ನಾಲ್ಕು ವರ್ಷಗಳಿಂದ ತಮ್ಮ ವಾರ್ಡಿನಲ್ಲಿ ಯಾವೊಂದೂ ಅಭಿವೃದ್ಧಿ ಪರ ಕೆಲಸಗಳು ನಡೆದಿಲ್ಲ. ಈಗ ಕ್ರಿಯಾ ಯೋಜನೆಯಲ್ಲಿ ವಾರ್ಡಿನಲ್ಲಿ ಮಾಡಬೇಕಾದ ಕಾಮಗಾರಿಯನ್ನು ಕೈ ಬಿಡುವಂತೆ ಕೆಲವು ಸದಸ್ಯರು ಒತ್ತಾಯ ಪಡಿಸುತ್ತಿದ್ದಾರೆ ಎಂದು ಪಟ್ಟಣದ 13ನೇ ವಾರ್ಡಿನ ಸದಸ್ಯೆ ಲಲಿತಾಬಾಯಿ ಪಾಟೀಲ ಅಳಲು ತೋಡಿಕೊಂಡರು.

ಪಟ್ಟಣದ ಪುರಸಭೆ ಸಭಾಭವನದಲ್ಲಿ ಶುಕ್ರವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ತಮ್ಮ ವಾರ್ಡಿಗೆ ಅಗತ್ಯವಾಗಿರುವ ಗಟಾರು ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಕೇಳಿಕೊಂಡರು.

ಇನ್ನೊಬ್ಬ ಸದಸ್ಯೆ ಮಲ್ಲಮ್ಮ ಅಂಬಲಗಿ ಸಭೆ ಪ್ರಾರಂಭಗೊಳ್ಳುವ ಮುನ್ನವೇ ಹಿಂದಿನ ಸಭೆಯ ಠರಾವು ನಕಲುಪ್ರತಿ ಕೊಟ್ಟಮೇಲೆಯೇ ಸಭೆ ನಡೆಸಿ ಒಂದು ಪಟ್ಟು ಹಿಡಿದರು. ಇವರ ನಿಲುವನ್ನು ಪುಷ್ಟೀಕರಿಸಿ ಸದಸ್ಯ ಶಾಂತವೀರ ಬಿರಾದಾರ ತಕ್ಷಣವೇ ಠರಾವು ಟಿಪ್ಪಣಿ ಬೇಕು ಎಂದರು. 17ನೇ ವಾರ್ಡಿನ ಸದಸ್ಯೆ ಬಾನು ನಾಟೀಕಾರ ತಮ್ಮ ವಾರ್ಡಿನಲ್ಲೂ ಯಾವುದೇ ಕಾಮಗಾರಿಗಳು ನಡೆದಿಲ್ಲ ತಮ್ಮ ವಾರ್ಡು ಒಂದು ದೃಷ್ಟಿಯಲ್ಲಿ ಪರದೇಶಿ ವಾರ್ಡ್ ಆಗಿದೆ ಎಂದು ಕೂಗಾಡಿದರು.

13ನೇ ಹಣಕಾಸು ಯೋಜನೆಯ ಅಡಿ ಈಗ ರೂ 59.50 ಲಕ್ಷದ ಕಾಮಗಾರಿಯ ಕ್ರಿಯಾಯೋಜನೆ ಸಿದ್ಧಪಡಿಸುವ ಬಗ್ಗೆ ಮುಖ್ಯಾಧಿಕಾರಿ ಎನ್.ಆರ್.ಮಠ ಹೇಳುತ್ತಿದ್ದಂತೆಯೇ,  ಸದಸ್ಯರು `ನನ್ನ ವಾರ್ಡಿಗೆ ಹಾಕಿ ನಿನ್ನ ವಾರ್ಡಿಗೆ ಹಾಕಿ~ ಎಂದು ಒಂದು ರೀತಿಯಲ್ಲಿ ಅನುದಾನ ಹಂಚಿಕೊಳ್ಳಲು ಕಚ್ಚಾಟ ಮಾಡಿದಂತೆ ವರ್ತಿಸಿದರು.

ಅಭಿವೃದ್ಧಿ ಕೆಲಸದಲ್ಲಿ ಸದಸ್ಯರು ಜಿದ್ದು ಮಾಡುವುದು ಸರಿಯಲ್ಲ ಎಂದು ಪುರಸಭೆ ಅಧ್ಯಕ್ಷ ಸುಶಾಂತ ಪೂಜಾರಿ ಮನವಿ ಮಾಡಿಕೊಂಡು, ಅಗತ್ಯವಿದ್ದಲ್ಲಿ ಕಾಮಗಾರಿ ಹಾಕುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಪಟ್ಟಣದಲ್ಲಿ  ಡೆಂಗೆ ಜ್ವರದಿಂದ ಸಾವುಗಳು ಸಂಭವಿಸುತ್ತಿವೆ. ಇಷ್ಟಾದರೂ ಪುರಸಭೆಯಲ್ಲಿ ಫಾಗಿಂಗ್ ಯಂತ್ರ ಇಲ್ಲದಿರುವುದು ಅತ್ಯಂತ ನಾಚಿಕೆಗೇಡು ವಿಷಯ ಎಂದು ವಿಷಾದಿಸಿದರು.

ವಾರ್ಡ್ 5,6,7 ಹೀಗೆ ಪಟ್ಟಣದ ಸುಮಾರು 15 ವಾರ್ಡುಗಳ ಶೌಚಾಲಯದ ನೀರು ಹರಿದು ಬರುವ ತಮ್ಮ ವಾರ್ಡ್‌ಗಳಲ್ಲಿ ಒಳಚರಂಡಿ ನಿರ್ಮಾಣ ಕಾರ್ಯಕ್ಕಾಗಿ ರೂ 10 ಲಕ್ಷದ ಕ್ರಿಯಾ ಯೋಜನೆ ಮಾಡುವಂತೆ ಸದಸ್ಯ ಹಣಮಂತ ಸುಣಗಾರ ಕೇಳಿಕೊಂಡರು.

ಸಭೆಯ ಆರಂಭದಲ್ಲಿ ಸದಸ್ಯ ರಾಜಶೇಖರ ಕೂಚಬಾಳ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮರಾಠಿ ಸದಸ್ಯನೊಬ್ಬ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ.ಚಂದ್ರಶೇಖರ ಕಂಬಾರ ಅವರ ಅಭಿನಂದನೆ ಸಮಾರಂಭಕ್ಕೆ ವಿರೋಧಿಸಿ ಅವಮಾನಿಸಿರುವುದು ಅತ್ಯಂತ ಖಂಡನೀಯ ಎಂದರು. ಆಗ ಸದಸ್ಯರು ಖಂಡನಾ ನಿರ್ಣಯ ಕೈಗೊಂಡರು.

ಪುರಸಭೆ ವಾಣಿಜ್ಯ ಮಳಿಗೆಗಳಲ್ಲಿ ಬಾಡಿಗೆ ಇದ್ದವರನ್ನು ಖಾಲಿಗೊಳಿಸಿ ಪುನಃ ಲಿಲಾವು ಮಾಡುವಂತೆ ಸದಸ್ಯರಾದ ಶರಣಪ್ಪ ಪೂಜಾರಿ, ಗೊಲ್ಲಾಳಪ್ಪ ಬಂಕಲಗಿ, ಶಿವಾನಂದ ಹರನಾಳ ಒತ್ತಾಯಿಸಿದರು. ಇದಕ್ಕೆ ಸದಸ್ಯ ರಾಜಣ್ಣ ನಾರಾಯಣಕರ ಪ್ರತಿಕ್ರಿಯಿಸಿ ಈ ಮೊದಲಿನ ಆಡಳಿತ 20 ವರ್ಷಗಳ ಒಪ್ಪಂದ ಪತ್ರದ ಠರಾವು ಮಾಡಿದ್ದಾರೆ ಎಂದರು.

ನೂತನ ಮುಖ್ಯಾಧಿಕಾರಿ ಎನ್.ಆರ್.ಮಠ ಅಭಿವೃದ್ಧಿ ಕೆಲಸಕ್ಕೆ ಸಹಕರಿಸುವಂತೆ ಸದಸ್ಯರಲ್ಲಿ ಮನವಿ ಮಾಡಿಕೊಂಡರು. ಅಧ್ಯಕ್ಷ  ಸುಶಾಂತ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT