ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಂತರಿಗೂ ನೊಬೆಲ್ ಪಡೆವ ಅರ್ಹತೆ ಇತ್ತು

Last Updated 11 ಅಕ್ಟೋಬರ್ 2011, 9:05 IST
ಅಕ್ಷರ ಗಾತ್ರ

ಮಂಗಳೂರು: ನೊಬೆಲ್ ಪ್ರಶಸ್ತಿ ಪಡೆಯುವ ಲೇಖಕರ ದೊಡ್ಡ ದಂಡೇ ಕನ್ನಡದಲ್ಲಿ ಇದೆ. ಇದಕ್ಕೆ ಕಾರಣ ನಾವೇ. ಈ ಬಗ್ಗೆ ಆತ್ಮಶೋಧ ನಡೆಸಿ ಕೊಳ್ಳಬೇಕು ಎಂದು ಹಿರಿಯ ಭಾಷಾ ಸಂಶೋಧಕ ಯು.ಪಿ.ಉಪಾಧ್ಯಾಯ ಪ್ರತಿಪಾದಿಸಿದರು. 

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಕಲ್ಕೂರ ಪ್ರತಿಷ್ಠಾನ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಶನಿವಾರ ನಡೆದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತ ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿವರಾಮ ಕಾರಂತರಿಗೆ ನೊಬೆಲ್ ಪ್ರಶಸ್ತಿ ಪಡೆಯುವ ಎಲ್ಲ ಯೋಗ್ಯತೆಯೂ ಇದ್ದಿತು. ಆದರೆ ಏಕೆ ದೊರಕಲಿಲ್ಲ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ರವೀಂದ್ರನಾಥ ಟ್ಯಾಗೋರ್ ಅವರ ಬಳಿಕ ಭಾರತದ ಯಾವುದೇ ಲೇಖಕರಿಗೆ ನೊಬೆಲ್ ಸಿಕ್ಕಿಲ್ಲ.

ಕನ್ನಡದಲ್ಲಿ ಕಾರಂತ, ಕುವೆಂಪು, ಗೋಕಾಕ, ಮಾಸ್ತಿ ಅವರಂತಹ ಅರ್ಹ ಲೇಖಕರ ದಂಡೇ ಇದೆ. ಬೇರೆ ಭಾಷೆಯಲ್ಲೂ ಸಾಕಷ್ಟು ಮಂದಿ ಇದೆ. ಈ ಲೇಖಕರ ಯೋಗ್ಯತೆ ಸ್ವೀಡನ್ ವರೆಗೆ ಮುಟ್ಟಬೇಕು. ಈ ನಿಟ್ಟಿನಲ್ಲಿ ಅವರ 3-4 ಗ್ರಂಥಗಳು ಇಂಗ್ಲಿಷ್‌ಗೆ ಭಾಷಾಂತರ ಆಗಬೇಕು. ಅವರ ಸಾಹಿತ್ಯದ ಬಗ್ಗೆ ಇಂಗ್ಲಿಷ್‌ನಲ್ಲಿ ವಿಮರ್ಶೆ ಪ್ರಕಟ ಆಗಬೇಕು ಎಂದು ಪ್ರತಿಪಾ ದಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಹಾಗೂ ರಾಜ್ಯ ಸರ್ಕಾರ ರಾಜ್ಯದಲ್ಲಿ ಕನ್ನಡದ ತೇರು ಎಳೆಯುವಂತಹ ಕೆಲಸ ಮಾಡುತ್ತಿವೆ. ಆದರೆ ರಾಜ್ಯದ ಹೊರಗೆ ಈ ತೇರು ಹೋಗುತ್ತಿಲ್ಲ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕು. ರಾಜ್ಯ ಸರ್ಕಾರ ಅನುವಾದ ಅಕಾಡೆಮಿ ಸ್ಥಾಪನೆ ಮಾಡಿದೆ. ಕನ್ನಡ ಕೃತಿಗಳ ಭಾಷಾಂತರ ಮಾಡಿದರೆ ಸಾಲದು. ವಿಮರ್ಶೆಯೂ ಆಗಬೇಕು. ಈ ಅಕಾಡೆಮಿಯನ್ನು ಅನುವಾದ ಹಾಗೂ ವಿಮರ್ಶಾ ಅಕಾಡೆಮಿಯನ್ನಾಗಿ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಕಾರಂತರ ಹಾಕಿ ಕೊಟ್ಟ ಹೆಜ್ಜೆ ಹಾದಿಯಲ್ಲಿ ಯಕ್ಷಗಾನ ಕಲಾವಿದರು ಮುನ್ನಡೆಯಬೇಕು. ಯಕ್ಷಗಾನ ಅಭಿಜಾತ ಕಲೆ ಎಂದು ವಿಶ್ವಕ್ಕೆ ತೋರಿಸಿಕೊಟ್ಟವರು ಕಾರಂತರು ಎಂದರು.

ಹಿರಿಯ ನೃತ್ಯಗುರು ಮಾ. ವಿಠಲ್ ಅವರಿಗೆ `ಕಾರಂತ ಪುರಸ್ಕಾರ~ ಪ್ರದಾನ ಮಾಡಿ ಸಚಿವ ಕೃಷ್ಣ ಪಾಲೆಮಾರ್ ಮಾತನಾಡಿ, ಕಾರಂತರ ಆದರ್ಶ ಪಾಲನೆ ಆಗಬೇಕು. ಗ್ರಾಮ ಗ್ರಾಮಗಳಲ್ಲಿ ಕಾರಂ ತರ ಜನ್ಮದಿನಾಚರಣೆ ನಡೆಯಬೇಕು ಎಂದರು.

ರಾಜ್ಯ ಸರ್ಕಾರ ಪುತ್ತೂರಿನ ಬಾಲಭವನ ಅಭಿವೃದ್ಧಿಗೆ ರೂ. 6 ಲಕ್ಷ, ಕೋಟ ಕಾರಂತ ಕೇಂದ್ರಕ್ಕೆ ರೂ. 6 ಲಕ್ಷ ನೀಡಿದೆ. ಶಿವರಾಮ ಕಾರಂತರ ಕೊಡುಗೆ ವೃದ್ಧಿಸುವ ಕಾರ್ಯಕ್ಕೆ ಸರ್ಕಾರ ಸದಾ ನೆರವು ನೀಡುತ್ತದೆ ಎಂದು ಅವರು ಭರವಸೆ ನೀಡಿದರು.

ಹಿರಿಯ ಶಿಕ್ಷಣ ತಜ್ಞ ಪ್ರೊ. ಕೆ.ಆರ್.ಹಂದೆ, ಭಾಷಾ ಸಂಶೋಧಕಿ ಸುಶೀಲಾ ಉಪಾಧ್ಯಾಯ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಹರೀಶ್ ಕುಮಾರ್, ಐಒಬಿ ಪ್ರಾದೇಶಿಕ ಮುಖ್ಯಸ್ಥ ಅನಿಲ್, ಕಾರ್ಪೊರೇಶನ್ ಬ್ಯಾಂಕ್ ಸಿರಿಗಂಧ ಬಳಗದ ಅಧ್ಯಕ್ಷ ಜಾನ್ ಡಿಸೋಜ, ಕೆ.ಜಿ.ರಮೇಶ್ ರಾವ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಇದ್ದರು. ಯಕ್ಷಗಾನ ವೈಭವ, ಮೋಹನ ಧಾರೇಶ್ವರ ಅವರಿಂದ ಸಿಂಹನೃತ್ಯ, ಯಾಜಿ ಮಿತ್ರ ಮಂಡಳಿ ಯವರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT