ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಪೊರೇಟ್ ಆಸ್ಪತ್ರೆಗಳಿಂದ ರೋಗಿಗಳ ನಿರ್ಲಕ್ಷ್ಯ

Last Updated 14 ಮೇ 2012, 9:55 IST
ಅಕ್ಷರ ಗಾತ್ರ

ಬಾಗಲಕೋಟೆ: ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಪೊ ರೇಟ್ ಆಸ್ಪತ್ರೆಗಳು ಪ್ರವೇಶವಾಗುತ್ತಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ ಎಂದು ಬೆಂಗಳೂರಿನ ಸ್ಪರ್ಶ ಫೌಂಡೇಶನ್ ನಿರ್ದೇಶಕ ಡಾ. ಶರಣ್ ಪಾಟೀಲ ಅಭಿಪ್ರಾಯಪಟ್ಟರು.

ನಗರದ ಬೆಂಡಿಗೇರಿ ಬಡಾವಣೆಯಲ್ಲಿ ನೂತನವಾಗಿ ಆರಂಭವಾದ ಡಾ.ಕಟ್ಟಿ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೈಟೆಕ್ ತಂತ್ರಜ್ಞಾನವುಳ್ಳ ಕಾರ್ಪೊರೇಟ್ ಆಸ್ಪತ್ರೆಗಳಿಂದ ವಿಜ್ಞಾನ ಮುಂದುವರಿಯಲು ಸಾಧ್ಯವೇ ಹೊರತು ರೋಗಿಗಳಿಗೆ ಆದ್ಯತೆ ಸಿಗುವುದಿಲ್ಲ ಎಂದರು.
ವೈದ್ಯಕೀಯ ಕ್ಷೇತ್ರ ಹಣ ಗಳಿಸುವ ಉದ್ಯಮ ವಾಗದೇ ನೊಂದವರಿಗೆ ಸೇವೆ ಸಲ್ಲಿಸುವ ಕ್ಷೇತ್ರವಾಗಬೇಕು ಎಂದರು.

ವೈದ್ಯರು ತಮ್ಮ ಬಳಿ ಚಿಕಿತ್ಸೆಗೆ ಬರುವ ರೋಗಿಗಳನ್ನು ಆತ್ಮೀಯವಾಗಿ ಕಾಣಬೇಕು, ಒಳ್ಳೆ ಭಾವನೆಯಿಂದ ಚಿಕಿತ್ಸೆ ನೀಡಿದರೆ ರೋಗಿಯ ರೋಗ ಅರ್ಧದಷ್ಟು ವಾಸಿಯಾಗುತ್ತದೆ, ಅದಕ್ಕೆ ಕೈಗುಣ ಎನ್ನಲಾಗುತ್ತದೆ, ಉತ್ತಮ ಕೈಗುಣ ಇರುವ ವೈದ್ಯರು ಮಾತ್ರ ವೃತ್ತಿಯಲ್ಲಿ ಯಶಸ್ಸು ಸಾಧಿಸಬಹುದಾಗಿದೆ ಎಂದು ತಿಳಿಸಿದರು.

ಇತರೆ ವೃತ್ತಿಗಳಿಗಿಂತ ವೈದ್ಯಕೀಯ ವೃತ್ತಿ ಶ್ರೇಷ್ಠವಾದುದು, ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು, ಜನರ ಆರೋಗ್ಯ ಸುಧಾರಣೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳಿಂದ ಎಷ್ಟು ಹಣ ಬರುತ್ತದೆ ಎಂದು ನಿರೀಕ್ಷಿಸದೇ ಮಾನವೀಯತೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.

ವೈದ್ಯರು ತಮ್ಮ ವೃತ್ತಿಯಲ್ಲಿ ಹೊಸ ಹೊಸ ಅವಿಷ್ಕಾರಗಳ ಬಗ್ಗೆ ತಿಳಿವಳಿಕೆ ಹೊಂದಬೇಕು, ಐದು ವರ್ಷಕ್ಕೊಮ್ಮೆ  ಪುನರ್ ಅಧ್ಯಯನ ನಡೆಸ ಬೇಕು ಎಂದು ಸಲಹೆ ಮಾಡಿದರು.ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ಉಳಿದ ಭಾಗದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಲಭ್ಯವಾಗುತ್ತಿಲ್ಲ, ವೈದ್ಯಕೀಯ ಸೇವೆಯಲ್ಲಿ ಭಾರಿ ಅಸಮತೋಲನ ಇದೆ, ಇದು ಸರಿಯಾಗ ಬೇಕಾಗಿದೆ ಎಂದರು.

ಹುಬ್ಬಳ್ಳಿಯ ಖ್ಯಾತ ವೈದ್ಯ ಪದ್ಮಶ್ರೀ ಡಾ.ಆರ್. ಬಿ. ಪಾಟೀಲ್ ಮಾತನಾಡಿ, ವೈದ್ಯಕೀಯ ಶಿಕ್ಷಣ ದುಬಾರಿಯಾಗಿರುವ ಕಾರಣ ಇಂದಿನ ದಿನಗಳಲ್ಲಿ ಚಿಕಿತ್ಸೆಯೂ ದುಬಾರಿಯಾಗುತ್ತಿದೆ ಎಂದು ಹೇಳಿದರು.
ವೈದ್ಯರು ರೋಗಿಗಳನ್ನು ಆತ್ಮೀಯವಾಗಿ ಕಾಣುವ ಮೂಲಕ ಚಿಕಿತ್ಸೆ ನೀಡಬೇಕು ಎಂದು ಸಲಹೆ ಮಾಡಿದರು.

ಸಾನ್ನಿಧ್ಯ ವಹಿಸಿದ್ದ ಚರಂತಿಮಠದ ಪ್ರಭುಸ್ವಾಮಿ ಆಶೀರ್ವಚನ ನೀಡಿ, ವ್ಯಾಪಾರಕ್ಕೆ ಪ್ರಸಿದ್ಧವಾದ ಬಾಗಲಕೋಟೆ ಇತ್ತೀಚೆಗೆ ಶಿಕ್ಷಣ ಕೇಂದ್ರವಾಗಿತ್ತು, ಇದೀಗ ಉತ್ತಮ ಆರೋಗ್ಯ ಸೇವೆಗೆ ಪ್ರಸಿದ್ಧಿ ಗಳಿಸಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ, ನಾರಾಯಣಸಾ ಭಾಂಡಗೆ, ಮಾಜಿ ಶಾಸಕರಾದ ಪಿ.ಎಚ್.ಪೂಜಾರ, ಜೆ.ಟಿ.ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಆರ್.ಸೊರಗಾವಿ, ಬಸವೇಶ್ವರ ಸಹಕಾರಿ  ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ವೈದ್ಯರಾದ ಡಾ. ಬಿ.ಎಚ್.ಕೆರೂಡಿ, ಡಾ. ಸುಭಾಷ ಪಾಟೀಲ, ಡಾ. ಎಚ್.ಆರ್.ಕಟ್ಟಿ, ಡಾ. ಕವಿತಾ ಕಟ್ಟಿ, ಡಾ. ಎ.ಆರ್.ಕಟ್ಟಿ, ಡಾ. ಹೇಮಾ ಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT