ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: 4ನೇ ಹಂತ ಆಗಸ್ಟ್‌ಗೆ ಪೂರ್ಣ

Last Updated 21 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಪ್ರತಿನಿತ್ಯ 500 ದಶಲಕ್ಷ ಲೀಟರ್ ನೀರು ತರುವ ಕಾವೇರಿ ಎರಡನೇ ಘಟ್ಟದ ನಾಲ್ಕನೆಯ ಹಂತದ ಕಾಮಗಾರಿ ಆಗಸ್ಟ್ ಮೂರನೆಯ ವಾರದಲ್ಲಿ ಪೂರ್ಣಗೊಳ್ಳಲಿದೆ ಎಂದು ನಗರಾಭಿವೃದ್ಧಿ ಸಚಿವ ಎಸ್. ಸುರೇಶ್‌ಕುಮಾರ್ ತಿಳಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಪ್ರದೇಶಗಳಿಗೆ ಆಗಸ್ಟ್ ಮೂರನೆಯ ವಾರದಿಂದ ನೀರು ಪೂರೈಸಲು ಅಗತ್ಯವಿರುವ ಪೈಪ್‌ಗಳ ಜೋಡಣೆ ಕಾರ್ಯ ಪೂರ್ಣಗೊಂಡಿದೆ. ಮೀಟರ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ವಿಧಾನಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯೋಜನೆಯನ್ನು ಈ ವರ್ಷದ ಬೇಸಿಗೆಯಲ್ಲೇ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ ಕಾರ್ಮಿಕರ ಸಮಸ್ಯೆ, ಮರಳಿನ ಅಲಭ್ಯತೆ, ಅರಣ್ಯ ಇಲಾಖೆಯ ಅನುಮತಿ ಸೇರಿದಂತೆ ವಿವಿಧ ಅಡಚಣೆಗಳ ಕಾರಣ, ನಿಗದಿತ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿನ ಜನಸಂಖ್ಯೆಗೆ 2021ನೆಯ ಇಸವಿ ವೇಳೆಗೆ ಅಗತ್ಯವಿರುವಷ್ಟು ನೀರು ಪೂರೈಸಲು ಕೂಡ ನಾಲ್ಕನೆಯ ಹಂತಕ್ಕೆ ಸಾಮರ್ಥ್ಯವಿದೆ ಎಂದು ಹೇಳಿದರು.

ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆಗೆ ತೊಂದರೆ ಆಗದಂತೆ ನಿಗಾ ವಹಿಸಲಾಗಿದೆ. ಕುಡಿಯುವ ನೀರಿಗೆ ಕೊಳವೆ ಬಾವಿಗಳನ್ನು ಮಾತ್ರ ನೆಚ್ಚಿಕೊಂಡಿರುವ ಪ್ರದೇಶಗಳಲ್ಲಿ ಸಮಸ್ಯೆ ಎದುರಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯನ್ನು ವಿಸ್ತರಿಸಿ ಬಿಬಿಎಂಪಿ ರಚಿಸುವ ಸಂದರ್ಭದಲ್ಲಿ ಸೇರ್ಪಡೆಗೊಂಡ 110 ಹಳ್ಳಿಗಳಿಗೆ ಅಗತ್ಯವಿರುವ ನೀರಿನ ಪ್ರಮಾಣ ಎಷ್ಟು ಎಂಬ ಬಗ್ಗೆ ಅಧ್ಯಯನ ನಡೆಸಲು ತಜ್ಞರ ಸಮಿತಿಯೊಂದನ್ನು ರಚಿಸಲಾಗಿದೆ. ಈ ಕುರಿತು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಜೊತೆಗೂ ಮಾತುಕತೆ ನಡೆಸಲಾಗಿದೆ. ಸಮಿತಿಯ ವರದಿ ಬಂದ ನಂತರ 110 ಹಳ್ಳಿಗಳಿಗೆ ನೀರು ಪೂರೈಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT