ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನೀರಲ್ಲೂ ಸರ್ಕಾರದ ರಾಜಕೀಯ - ಎಚ್.ಕೆ.ಪಾಟೀಲ್ ಆರೋಪ

Last Updated 18 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ನದಿ ನೀರಿನ ವಿವಾದವನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಎಡವಿದೆ. ನೀರಿನ ವಿಚಾರದಲ್ಲೂ ರಾಜಕೀಯ ಲಾಭ ಪಡೆಯುವ ಹುನ್ನಾರಕ್ಕೆ ಸರ್ಕಾರ ಕೈಹಾಕಿರುವುದು ವಿಪರ್ಯಾಸ ಎಂದು ಜಲಸಂಪನ್ಮೂಲ ಖಾತೆಯ ಮಾಜಿ ಸಚಿವ ಎಚ್.ಕೆ.ಪಾಟೀಲ ಬುಧವಾರ ಇಲ್ಲಿ ಟೀಕಿಸಿದರು.

 ತಾವು ಹೊರ ತಂದಿರುವ `ಕಾವೇರಿ ಲೋಪ: ವಸ್ತುಸ್ಥಿತಿ- 2012~ ಕಿರು ಹೊತ್ತಿಗೆಯ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಜನರ ಭಾವನೆಗಳಿಗೆ ಸ್ಪಂದಿಸುವ ಬದಲು ರಾಜಕೀಯ ಪ್ರಹಸನಕ್ಕೆ ಮುಂದಾಯಿತು ಎಂದು ತರಾಟೆಗೆ ತೆಗೆದುಕೊಂಡರು.

ರಾಜ್ಯದ ನೆಲ, ಜಲ ವಿಷಯಗಳಲ್ಲಿ ಹಿಂದಿನಿಂದಲೂ ಸರ್ವಸಮ್ಮತವಾದ ಮತ್ತು ವಿವೇಕಯುತವಾದ ನಿಲುವುಗಳನ್ನು ಕರ್ನಾಟಕ ತಳೆಯುತ್ತಲೇ ಬಂದಿತ್ತು. ಆದರೆ ಬಿಜೆಪಿ ಸರ್ಕಾರ ಈ ಬಾರಿ ಆ ಸಂಪ್ರದಾಯಕ್ಕೆ ಇತಿಶ್ರೀ ಹಾಡಿತು. ಸರಿಯಾದ ಪೂರ್ವತಯಾರಿ ಮಾಡಿಕೊಳ್ಳದ ಕಾರಣ ಆರಂಭದಿಂದಲೇ ಕಾವೇರಿ ವಿಚಾರದಲ್ಲಿ ಎಡವಿತು ಎಂದು ಆರೋಪಿಸಿದರು.

ಕಾವೇರಿ ನದಿ ಪ್ರಾಧಿಕಾರವು (ಸಿಆರ್‌ಎ) ಅರೆನ್ಯಾಯಿಕ ಸಂಸ್ಥೆ ಎಂಬುದನ್ನು ಅರ್ಥ ಮಾಡಿಕೊಳ್ಳದೆ, ಮಹಾನಗರಪಾಲಿಕೆ ಸಭೆಯಲ್ಲಿ ಸಭಾತ್ಯಾಗ ಮಾಡುವ ಹಾಗೆ ಪ್ರಾಧಿಕಾರದ ಸಭೆಯಿಂದ ಹೊರ ನಡೆಯುವ ಮೂಲಕ ಕರ್ನಾಟಕದ ಸತ್ಪರಂಪರೆಗೆ ಧಕ್ಕೆ ತಂದರು. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಭೆ ಬಹಿಷ್ಕರಿಸುವ ಮೂಲಕ ತಪ್ಪು ಮಾಡಿದರು ಎಂದು ಅಭಿಪ್ರಾಯಪಟ್ಟರು.

ಕಾವೇರಿ ಕಣಿವೆಯಲ್ಲಿ ದಿನೇ ದಿನೇ ಪರಿಸ್ಥಿತಿ ಬಿಗಡಾಯಿಸುತ್ತಿದ್ದರೂ ಆ ಬಗ್ಗೆ ಗಮನಹರಿಸದ ಮುಖ್ಯಮಂತ್ರಿ ಹಾಗೂ ಅವರ ಸಚಿವ ಸಹೋದ್ಯೋಗಿಗಳು ಸೂರಜ್‌ಕುಂಡ್‌ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ್ದರು. ಆಡಳಿತಾರೂಢ ಪಕ್ಷದ ಅಂತಃಕಲಹದಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಯಿತು ಎಂದು ಟೀಕಿಸಿದರು.

ನ್ಯಾಯಾಲಯಕ್ಕೆ ಸರ್ಕಾರ ತಿಳಿಸಿದ ಹಾಗೆ ಹತ್ತು ಸಾವಿರ ಕ್ಯೂಸೆಕ್ ನೀರಿನ ಬದಲು, 9 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಪ್ರಧಾನಿ ಆದೇಶಿಸಿದರು. ಇದನ್ನು ಅರ್ಥ ಮಾಡಿಕೊಳ್ಳದೆ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಪ್ರಧಾನಿ ಅವರನ್ನು ತಮಿಳುನಾಡಿನ `ಏಜೆಂಟ್~ ಎಂಬುದಾಗಿ ಟೀಕಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಕಿರು ಹೊತ್ತಿಗೆ ಬಿಡುಗಡೆ ಮಾಡಿದ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಮಾತನಾಡಿ, ಶೆಟ್ಟರ್ ಹಾಗೂ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ಕಾವೇರಿ ವಿವಾದವನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಅವರ ವೈಫಲ್ಯಗಳನ್ನು ಮುಚ್ಚಿಕೊಳ್ಳುವುದಕ್ಕಾಗಿ ಪ್ರಧಾನಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT