ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯದ ವಿಧೇಯ ಉಲ್ಲಂಘನೆ!

Last Updated 19 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಇತಿ ನಿನ್ನ ವಿಧೇಯನು
ಲೇ: ಲಕ್ಕೂರು ಆನಂದ, ಪು: 99; ಬೆ: ರೂ.60; ಪ್ರ: ಕಣ್ವ ಪ್ರಕಾಶನ, ಮಹಾಲಕ್ಷ್ಮೀಪುರಂ, ಬೆಂಗಳೂರು.


ಈ ಗಾಗಲೆ ‘ಊರಿಂದ ಊರಿಗೆ’, ‘ಇಪ್ಪತ್ತರ ಕಲ್ಲಿನ ಮೇಲೆ..’ ಹಾಗೂ ‘ಬಟವಾಡೆಯಾಗದ ರಸೀದಿ’ ಕವನ ಸಂಕಲನಗಳನ್ನು ಪ್ರಕಟಿಸಿರುವ ಕವಿ ಲಕ್ಕೂರು ಆನಂದರು ಇದೀಗ ‘ಇತಿ ನಿನ್ನ ವಿಧೇಯನು’ ಹೆಸರಿನಲ್ಲಿ ಆಯ್ದ ಐವತ್ತು ಕವಿತೆಗಳನ್ನು ಸಂಕಲನ ರೂಪದಲ್ಲಿ ಪ್ರಕಟಿಸಿದ್ದಾರೆ.

ಈ ಕೃತಿಯ ಓದಿನ ಸಂದರ್ಭದಲ್ಲಿ ಎರಡು ಸಂಗತಿಗಳನ್ನು ಗಮನಿಸಬೇಕಿದೆ. ಒಂದು, 2004ರಲ್ಲಿ ಮೊದಲ ಕವನ ಸಂಕಲನ ಪ್ರಕಟಿಸಿರುವ ಹೊಸ ತಲೆಮಾರಿನ ಕವಿ 2010ರ ಕೊನೆಯ ಹೊತ್ತಿಗೆ ಆಯ್ದ ಕವಿತೆಗಳನ್ನು ಹೊರತಂದಿರುವ ವಿರೋಧಾಭಾಸ ಈ ಸಂಕಲನದ್ದಾಗಿದೆ. ಎರಡು, ಕವಿಯ ದಮನಿತ ಹಿನ್ನೆಲೆ, ಆಶಯದ ನೆಲೆ, ಕವಿತಾ ಆಸಕ್ತಿಯನ್ನೇ ಮುಖ್ಯವಾಗಿಟ್ಟುಕೊಂಡು ಶುಭಕೋರಿರುವ ಹಿಂದಿನ ಸಂಕಲನಗಳ ಮುನ್ನುಡಿ-ಬೆನ್ನುಡಿಗಳನ್ನು ಪರಿಶೀಲಿಸಬೇಕಾದ ತುರ್ತನ್ನು ‘ಇತಿ ನಿನ್ನ ವಿಧೇಯನು’ ಆಹ್ವಾನಿಸಿಕೊಂಡಿದೆ.

ತೋಡಿಕೊಳ್ಳುವ ಹಾಳೆಯೊಂದಿಗಾಗಲಿ, ನಡೆಯುವ ಹಾದಿಯಲ್ಲಾಗಲಿ ಇನ್ನು ಸಾಕು ಎಂದುಕೊಂಡಾಗಲೆಲ್ಲ ನೆರವಿಗೆ ಧಾವಿಸಿ ಬರುವ ‘ವಿದಾಯದ ಪದ’ವನ್ನು ಸಮುದಾಯದ ಪ್ರಾರ್ಥನೆಯಾಗಿಯೂ ನೋಡುವ ಹಂಬಲವನ್ನೇ ‘ಇತಿ ನಿನ್ನ ವಿಧೇಯನು’ ತೋರುವುದು.
ಕವಿತೆಯೊಂದರ ಆದಿಗೆ ಪ್ಯಾಬ್ಲೋ ನೆರೂದನ ರಕ್ತಸಿಕ್ತ ಕವಿತೆಯ ತುಂಡನ್ನು ಉಲ್ಲೇಖಿಸುವಾಗ, ಕಮ್ಯೂನಿಸ್ಟ್ ಗೆಳೆಯರಿಗೆ ಕವಿತೆಯನ್ನು ಅರ್ಪಿಸುವಾಗ, ಕವಿತೆಯೊಂದರ ಅಡಿಟಿಪ್ಪಣಿಯಲಿ ಕಂಬಾಲಪಲ್ಲಿಯಲ್ಲಿ ದಲಿತರ ಮೇಲೆ ಕೋರ್ಟ್ ಎಸಗಿದ ಅನ್ಯಾಯ ಕುರಿತು ಬರೆದದ್ದು ಎಂದು ನೆನಪಿಸುವಾಗ ಈ ಕವಿಯ ಸಾಮಾಜಿಕ ಪ್ರಜ್ಞೆ, ಸತತವಾದ ಕಳಕಳಿಯನ್ನು ಕಾಣಬಹುದಾಗಿದೆ.

ಸದ್ಯದ ಕೇಡುಗಾಲದ ನಿವಾರಣೆಗಾಗಿ ‘ಬಯಲು’, ‘ಭವ’, ‘ನಿಶ್ಯಬ್ದ’, ‘ಜೋಳಿಗೆ’, ‘ನಾಗಬೆತ್ತ’, ‘ಬೂದಿ’, ‘ಏಕತಾರಿ’, ‘ದೀಪ’, ‘ಗುಲಾಬಿ’, ‘ತಥಾಗತ’, ‘ಕಲ್ಯಾಣ’... ಇಂಥ ಅಪಾರವಾದ ಸಂಕೇತಗಳನ್ನು ಪರಿಕರವಾಗಿ ಬಳಸಿಕೊಂಡಿರುವ ಇಲ್ಲಿನ ರಚನೆಗಳು ಕವಿಯ ಪ್ರಜ್ಞಾಪೂರ್ವಕವಾದ ಅಭಿವ್ಯಕ್ತಿಯಾಗಿದೆ. ಇದಕ್ಕೆ ಉದಾಹರಣೆಯಾಗಿ ‘ಪ್ರತಿಮೆಗಳು’ ರಚನೆಯನ್ನು ಗಮನಿಸಬಹುದು. ಪ್ರತಿಮೆಗಳಿಗಾಗಿ ಟೊಂಕಕಟ್ಟಿ ನಿಂತಿರುವ ಜನಸಾಗರ ಮಹಾತ್ಮರು ಬಿತ್ತಿದ ನೀತಿಯನ್ನೇ ಮೂಲೆಗುಂಪಾಗಿಸುತ್ತಿದೆ:

ಬಸವ ಮಾತ್ರ ಗೊಡೆಯೊರಗಿ ಕಣ್ಣುಮುಚ್ಚಿದ್ದಾನೆ
ಕರಾಳ ಹಸ್ತಗಳಿಗೆ ಬೋಧಿವೃಕ್ಷ ಬಲಿಯಾಗಿದೆ
ಅಗ್ರಹಾರ ಮಾತ್ರ ಎದ್ದು ಕುಳಿತಿದೆ
ರಾತ್ರಿ ಬಿಕ್ಕಳಿಸುತ್ತಿರುವಂತೆ
ಬುದ್ಧ, ಬಸವ, ಗಾಂಧಿ, ಅಂಬೇಡ್ಕರರು
ನಾಲ್ಕು ರಸ್ತೆಯ ನಡುವೆ ಪ್ರತಿಮೆಗಳಾಗಿ
ಹಾಗೆ ನಿಂತಿದ್ದಾರೆ.

ಹೀಗೆ ಹೇಳುತ್ತಲೇ ಕಾಲಕಟ್ಟಳೆ, ಆಚರಣೆ, ಕುರುಹು, ನಂಬಿಕೆಗೆ ಆಸ್ಪದವಿರದ ಅಸಂಗತ ಭಾವಲೋಕವೊಂದನ್ನು ಸೃಷ್ಟಿಸಿಕೊಳ್ಳುವಲಿ ‘ಮಣ್ಣು’, ‘ಉರಿವ ದೀಪ’, ‘ಆಪ್ತವಾಗದೆ ಹೋದ ದೇವ ಬಿಜ್ಜಳನ ವಿಷಾದ ಗೀತೆ’, ‘ತೆನೆಯೊಡೆದ ಮೌನ’, ‘ನಿರ್ಮಾಯನೆಂಬ ಅಲ್ಲಮನು ಕಾಮಲತೆಯೆಂಬ ಮಾಯೆಯೂ’, ‘ಜಂಗಮನೊಬ್ಬ ಉಳಿಸಿಹೋದ ಹೆಜ್ಜೆ’, ‘ತಥಾಗತನ ಡೈರಿಯಿಂದ’, ‘ಅಲ್ಲಮನ ಬಯಲಿಗೆ ಬಿದ್ದವನು’- ಈ ರಚನೆಗಳನ್ನು ಗಮನಿಸಬಹುದಾದರೂ ಇವು ಕವಿತೆಯ ನೆಪದಲ್ಲಿ ಓದುಗನನ್ನು ಎಲ್ಲೆಲ್ಲೊ ಸುತ್ತಿಸಿ ಬರಿಗೈಯಲ್ಲಿ ವಾಪಾಸು ಕಳಿಸುವುವು.

ಕವಿತೆಯೊಂದರ ಆಂತರ್ಯಕ್ಕೆ ಕೂಡಿಕೊಳ್ಳದೆ ಆಚೆಗೆ ಉಳಿದುಬಿಡುವ ಆದರೆ ಆರ್ದ್ರಗೊಳಿಸುವ ಕೆಲ ಸಾಲುಗಳಿರುವುದನ್ನು ಗಮನಿಸಬಹುದು. ಉದಾಹರಣೆಗೆ:

ಪಟಪಟನೆ ಮುಚ್ಚುತ್ತ ತೆರದುಕೊಳ್ಳುತ್ತಿರುವ
ಕಣ್ಣುಗಳಿಗೆ ಗೊತ್ತೆಯಿಲ್ಲ
ಕಣ್ಣಕೊನೆಯಲ್ಲೊಂದಿಷ್ಟು ತೇವವಿದೆಯೆಂದು
(ಎಂದು)

ನೋವ ನೂಲಿನಿಂದ ಮಾಲೆಯೊಂದನ್ನು ಕಟ್ಟುತ್ತೇನೆ
ಕರುಣೆಯ ರಾತ್ರಿಗೆ ಮುಡಿಸುತ್ತೇನೆ
(ಅಗುಳ ಮೇಲಿನ ಋಣದ ಗುರುತು)

ಜನಸಮುದಾಯಗಳು ಅನುಭವಿಸುತ್ತಿರುವ ತಲ್ಲಣವನ್ನು ಕಥನದ ರೂಪದಲ್ಲಿ ದಾಟಿಸಲೆತ್ನಿಸುವ ಲಕ್ಕೂರು ಆನಂದರ ರಚನೆಗಳು ಕಡೆಗೂ ಕವಿತೆಯ ಮುಖವನ್ನೇ ಕಾಣಿಸುವುದಿಲ್ಲ. ಅಷ್ಟರಮಟ್ಟಿಗೆ ಇಲ್ಲಿನ ಕಾವ್ಯನೆಲೆ ಕುಸಿದಿದೆ. ಇಲ್ಲಿ ಮತ್ತೊಬ್ಬ ಕವಿ ಎನ್.ಕೆ.ಹನುಮಂತಯ್ಯ ನೆನಪಾಗುತ್ತಾರೆ. ಅವರ ‘ಅವ್ವ ನಿಂತೇಯಿದ್ದಾಳೆ’ ಎನ್ನುವ ಕವಿತೆಯನ್ನೇ ಗಮನಿಸುವುದಾದರೆ ಕಥಾನಕದ ಹೊಟ್ಟೆಯಲಿ ಹುಟ್ಟಿಯೇ ಕವಿತೆಯಾಗಿ ಮೈಮನಸ್ಸು ಪಡೆದುಕೊಂಡಿದೆ. ಆಗಾಗ ಹೀಗಾಗುವ ಎನ್.ಕೆ.ಹನುಮಂತಯ್ಯನವರ ಕವಿತೆಗಳಲ್ಲಿ ಭಾಷಿಕ ನೆಲೆಯಲ್ಲಿ ಕಥೆ-ಕವಿತೆ ಸಂಕರಗೊಂಡು ಸಮಹೆಜ್ಜೆ ಇಟ್ಟು ನಡೆದುಬಿಡುತ್ತವೆ. ಇಂಥ ಪ್ರಕ್ರಿಯೆಯ ಸಣ್ಣ ಎಳೆಯೂ ‘ಇತಿ ನಿನ್ನ ವಿಧೇಯನು’ ಸಂಕಲನದಲ್ಲಿ ಕಂಡುಬರುವುದಿಲ್ಲ. ಇಲ್ಲಿನ ಮೊದಲ ರಚನೆ ‘ಜಾಜಿ ಹೂ’ಗೆ ಕವಿ ಸಿದ್ಧಲಿಂಗಯ್ಯನವರ ‘ನನ್ನ ಕವನ’ದ ಪ್ರಭಾವವಿರುವಂತೆ ಉಳಿದ ಕವಿತೆಗಳ ಭಿತ್ತಿಯಲ್ಲಿ ‘ಹೊಲೆಮಾದಿಗರ ಹಾಡು’ (1975) ಸಂಕಲನವಿದೆಯಾದರೂ, ದಲಿತ-ಬಂಡಾಯ ಕಾಲಘಟ್ಟವೂ ಕವಿತೆಯೆಂದು ಭಾವಿಸಿದ ಮಾದರಿಯೊಂದನ್ನು ‘ಇತಿ ನಿನ್ನ ವಿಧೇಯನು’ ತಣ್ಣಗೆ ಉಲ್ಲಂಘಿಸುತ್ತಿದೆ. ಈ ಉಲ್ಲಂಘನೆಯಲ್ಲಿ ಹೊಸತಲೆಮಾರಿನ ಕವಿಯ ಬದಲಾಗಿರುವ ಆಯ್ಕೆಯೊಂದನ್ನು ಸ್ಪಷ್ಟವಾಗಿ ಕಾಣಬಹುದು.

ಅನೇಕ ಓದುಗಳನ್ನು, ಆಶೋತ್ತರಗಳನ್ನು, ಕವಿತೆಗೆ ಒದಗಿಬರಬೇಕಾದ ನಾಟಕೀಯತೆಯನ್ನೇ ದೀರ್ಘವಾಗಿ ಮಂಡಿಸುತ್ತಿರುವ ಇಲ್ಲಿನ ರಚನೆಗಳನ್ನು ಕವಿತೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ದಿಗಿಲಾಗುವ ವಿಷಯವೆಂದರೆ, ನಿಂತ ನೆಲದಲ್ಲೇ ಬೇರಿಳಿಸದ ‘ಇತಿ ನಿನ್ನ ವಿಧೇಯನು’ ರಚನೆಗಳು ತೆಲುಗು, ತಮಿಳು, ಮರಾಠಿ, ಮಲೆಯಾಳಂ, ಹಿಂದಿ, ಇಂಗ್ಲೀಷ್‌ಗೆ ಅನುವಾದವಾಗಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT