ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರೀಟ ಮುಡಿಗೇರಿಸಿದ ರೋಜರ್ ಫೆಡರರ್

Last Updated 8 ಜುಲೈ 2012, 19:30 IST
ಅಕ್ಷರ ಗಾತ್ರ

ಲಂಡನ್ (ರಾಯಿಟರ್ಸ್‌): ಐತಿಹಾಸಿಕ ಸಾಧನೆ ಮಾಡಬೇಕೆಂಬ ಹಂಬಲ ಹೊಂದಿದ್ದ ಆ್ಯಂಡಿ ಮರ‌್ರೆ ಅವರ ಕನಸನ್ನು ನುಚ್ಚುನೂರು ಮಾಡಿದ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. 

ಆಲ್ ಇಂಗ್ಲೆಂಡ್ ಕ್ಲಬ್‌ನ ಸೆಂಟರ್      ಕೋರ್ಟ್‌ನಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಫೆಡರರ್ 4-6, 7-5, 6-3, 6-4 ರಲ್ಲಿ ಇಂಗ್ಲೆಂಡ್‌ನ ಮರ‌್ರೆ ಅವರನ್ನು ಮಣಿಸಿದರು. ಇದು ಸ್ವಿಸ್ ಆಟಗಾರನಿಗೆ ಒಲಿದ ಏಳನೇ ವಿಂಬಲ್ಡನ್ ಪ್ರಶಸ್ತಿ. ಈ ಮೂಲಕ ಅವರು ಅಮೆರಿಕದ ಪೀಟ್ ಸಾಂಪ್ರಾಸ್ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದರು.

ಚಾಂಪಿಯನ್‌ಪಟ್ಟ ಅಲಂಕರಿಸಿದ ಕಾರಣ ಫೆಡರರ್ ಎಟಿಪಿ ವಿಶ್ವ ರ‌್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಲಿದ್ದಾರೆ. ಸ್ವಿಸ್ ಆಟಗಾರನಿಗೆ ವೃತ್ತಿಜೀವನದಲ್ಲಿ ದೊರೆತ 17ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಇದಾಗಿದೆ.

ಆ್ಯಂಡಿ ಮರ‌್ರೆ ಇಲ್ಲಿ ಗೆಲುವು ಪಡೆದಿದ್ದಲ್ಲಿ ಐತಿಹಾಸಿಕ ಸಾಧನೆಗೆ ಭಾಜನರಾಗುತ್ತಿದ್ದರು. ಏಕೆಂದರೆ ಕಳೆದ 76 ವರ್ಷಗಳಲ್ಲಿ ಇಂಗ್ಲೆಂಡ್‌ನ ಯಾವುದೇ ಆಟಗಾರ ಇಲ್ಲಿ ಚಾಂಪಿಯನ್ ಆಗಿಲ್ಲ. ಆದರೆ ಅವರ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಆಸೆ ಕೈಗೂಡಲು ಫೆಡರರ್ ಅವಕಾಶ ನೀಡಲಿಲ್ಲ.

ಮರ‌್ರೆ ಆರಂಭಿಕ ಸೆಟ್‌ನ ಮೊದಲ ಗೇಮ್‌ನಲ್ಲೇ ಎದುರಾಳಿಯ ಸರ್ವ್ ಮುರಿದರು. ಸ್ವಿಸ್ ಆಟಗಾರ ಮರುಹೋರಾಟ ನಡೆಸಿ 2-2 ರಲ್ಲಿ ಸಮಬಲ ಸಾಧಿಸಿದರು. ಒಂಬತ್ತನೇ ಗೇಮ್‌ನಲ್ಲಿ ಮತ್ತೊಮ್ಮೆ ಫೆಡರರ್ ಅವರ ಸರ್ವ್ ಬ್ರೇಕ್ ಮಾಡಿದ ಇಂಗ್ಲೆಂಡ್‌ನ ಆಟಗಾರ ಸೆಟ್‌ನ್ನು 6-4 ರಲ್ಲಿ ತಮ್ಮದಾಗಿಸಿಕೊಂಡರು.

ಎರಡನೇ ಸೆಟ್‌ನಲ್ಲಿ ತುರುಸಿನ ಹೋರಾಟ ಕಂಡುಬಂತು. ಮೊದಲ 10 ಗೇಮ್‌ಗಳವರೆಗೆ ಇಬ್ಬರೂ ತಮ್ಮ ಸರ್ವ್‌ನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಫೆಡರರ್ 11ನೇ ಗೇಮ್‌ನಲ್ಲಿ ತಮ್ಮ ಸರ್ವ್ ಕಾಪಾಡಿಕೊಂಡರಲ್ಲದೆ, 12ನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್ ಮುರಿದು ಸೆಟ್ ಗೆದ್ದುಕೊಂಡರು.

ಮೂರನೇ ಸೆಟ್‌ನಲ್ಲಿ ಫೆಡರರ್ ಆಕರ್ಷಕ ಪ್ರದರ್ಶನ ನೀಡಿದರು. ಈ ಸೆಟ್‌ನ ಆರನೇ ಗೇಮ್‌ನಲ್ಲಿ ಮ್ಯಾರಥಾನ್ ಹೋರಾಟ ಕಂಡುಬಂತು. ತಮ್ಮ ಆರನೇ ಬ್ರೇಕ್ ಪಾಯಿಂಟ್ ಅವಕಾಶದಲ್ಲಿ ಪಾಯಿಂಟ್ ಗಿಟ್ಟಿಸಿದ ಫೆಡರರ್ 4-2ರ ನಿರ್ಣಾಯಕ ಮೇಲುಗೈ ಪಡೆದರು. ಮುಂದಿನ ಎರಡೂ ಸರ್ವ್‌ಗಳನ್ನು ಉಳಿಸಿಕೊಂಡು 6-3ರಲ್ಲಿ ಸೆಟ್ ಗೆದ್ದರು. ನಾಲ್ಕನೇ ಸೆಟ್‌ನಲ್ಲೂ ತಮ್ಮ ಪ್ರಭುತ್ವ     ಮೆರೆದ ಫೆಡರರ್ ಚಾಂಪಿಯನ್ ಆಗಿ ಮೆರೆದಾಡಿದರು.

ವಿಲಿಯಮ್ಸ ಸಹೋದರಿಯರಿಗೆ ಪ್ರಶಸ್ತಿ: ಅಮೆರಿಕದ ಸೆರೆನಾ ವಿಲಿಯಮ್ಸ ಮತ್ತು ವೀನಸ್ ವಿಲಿಯಮ್ಸ ಜೋಡಿ ಇದೇ ಚಾಂಪಿಯನ್‌ಷಿಪ್‌ನ ಮಹಿಳೆಯರ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿತು.

ಶನಿವಾರ ರಾತ್ರಿ ನಡೆದ ಫೈನಲ್‌ನಲ್ಲಿ ವಿಲಿಯಮ್ಸ ಸಹೋದರಿಯರು 7-5, 6-4 ರಲ್ಲಿ ಜೆಕ್ ಗಣರಾಜ್ಯದ ಆಂಡ್ರಿಯಾ ಹವಕೋವಾ ಮತ್ತು ಲೂಸಿ ಹಡೇಕಾ ಅವರನ್ನು ಮಣಿಸಿದರು. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿದ್ದ ಸೆರೆನಾ ಈ ಮೂಲಕ ಪ್ರಶಸ್ತಿ `ಡಬಲ್~ ಸಾಧನೆ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT