ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರುತೆರೆಯ ಮಹಾಶ್ವೇತೆ

Last Updated 24 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಈಕೆ ಕೊಡಗಿನ ಬೆಡಗಿ. ಚಿಕ್ಕವಯಸ್ಸಿನಲ್ಲೇ ಸವಾಲಿನ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವಳು. ಬೆಳ್ಳಿಪರದೆಯಲ್ಲೂ ಮಿಂಚಿದರೂ ಕಿರುತೆರೆಯ ಲೋಕವೇ ಚೆಂದ ಎಂದು ತಳವೂರಿದ ಈಕೆಗೆ ಬಿಡುವೆಂಬುದೇ ಇಲ್ಲ. ನಟನೆ, ನಿರೂಪಣೆ, ನೃತ್ಯ ಹೀಗೆ ವಾರದ ಏಳು ದಿನವೂ ಒಂದಿಲ್ಲೊಂದು ರೀತಿಯಲ್ಲಿ ಕಿರುತೆರೆ ಮೇಲೆ ಕಾಣಿಸಿಕೊಳ್ಳುವ ಈಕೆಗೆ ಅಭಿಮಾನಿ ಬಳಗವೂ ಅಪಾರ. ಒಂದರ್ಥದಲ್ಲಿ ಕಿರುತೆರೆಯ ಮುಂಚೂಣಿ ನಾಯಕಿಯೂ ಹೌದು. `ಸುಮತಿ~ಯಾಗಿ ಕಾಲಿಟ್ಟು ಈಗ `ಅರುಂಧತಿ~ಯಾಗಿ ಚಿರಪರಿಚಿತರಾಗಿರುವವರು ಶ್ವೇತಾ ಚೆಂಗಪ್ಪ.

`ಬಣ್ಣದ ಲೋಕಕ್ಕೆ ಕಾಲಿಟ್ಟು ಏಳು ವರ್ಷವಾಯಿತು, ಏಳು ದಿನ ಬಿಡುವಾಗಿದ್ದೆ ಎನಿಸುತ್ತದೆ~ ಎನ್ನುವ ಶ್ವೇತಾ ಅನುಭವದ ಹಿತ್ತಲಲ್ಲಿ ಬೆಳೆದ ಕನಸುಗಳನ್ನು ತಮ್ಮ ಮಾತಿನ ಮೂಲಕ ರಾಶಿ ರಾಶಿಯಾಗಿ ಚೆಲ್ಲುತ್ತಾರೆ.

ಶ್ವೇತಾ ಬಣ್ಣದ ಲೋಕಕ್ಕೆ ಬಂದದ್ದು ಆಕಸ್ಮಿಕವಾಗಿ. ಎಸ್. ನಾರಾಯಣ್ ತಮ್ಮ ಸುಮತಿ ಧಾರಾವಾಹಿಯ ಮುಖ್ಯಪಾತ್ರಧಾರಿಯ ಅನ್ವೇಷಣೆಯಲ್ಲಿದ್ದರು. ಆಗಿನ್ನೂ ಪಿಯುಸಿ ಓದುತ್ತಿದ್ದ ಶ್ವೇತಾರನ್ನು ನಟಿಸುವಂತೆ ಪ್ರೇರೇಪಿಸಿದ್ದು ಅವರ ಸ್ನೇಹಿತೆ. ಸ್ಕ್ರೀನ್ ಟೆಸ್ಟ್‌ನಲ್ಲಿ ಪಾಸಾದ ಶ್ವೇತಾ ಸುಮತಿಯಾಗಿ ಜನಮಾನಸದಲ್ಲಿ ಅಚ್ಚಾದರು. ಮತ್ತೆ ಹಿಂತಿರುಗಿ ನೋಡಲಿಲ್ಲ.

ತಯಾರಿಯೇ ಇಲ್ಲದೆ ಕ್ಯಾಮೆರಾ ಮುಂದೆ ನಿಂತಾಗ ಅಭಿನಯ ಕಷ್ಟವೆಂದು ಎನಿಸಲಿಲ್ಲ ಎನ್ನುವ ಶ್ವೇತಾಗೆ ಬಣ್ಣದ ಬದುಕನ್ನು ಪರಿಚಯಿಸಿದ ಎಸ್.ನಾರಾಯಣ್ ಮೇಲೆ ತುಂಬು ಅಭಿಮಾನ. ಅವರನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದೂ ಎಸ್.ನಾರಾಯಣ್ ಅವರೇ. `ವರ್ಷಾ~ ಚಿತ್ರದಲ್ಲಿ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡ ಶ್ವೇತಾ ನಾಯಕಿಯಾಗಿ ಅಭಿನಯಿಸಿದ್ದು ದರ್ಶನ್ ಜೊತೆಗಿನ `ತಂಗಿಗಾಗಿ~ ಚಿತ್ರದಲ್ಲಿ.

ಚಿತ್ರರಂಗದಲ್ಲಿ ಸಾಲು ಸಾಲು ಆಫರ್‌ಗಳು ಬಂದರೂ ಆಯ್ದುಕೊಂಡಿದ್ದು ಕಿರುತೆರೆಯನ್ನೇ. ಇದಕ್ಕೆ ಕಾರಣ ವೃತ್ತಿಬದ್ಧತೆ. ಧಾರಾವಾಹಿಯ ಮುಖ್ಯಪಾತ್ರವನ್ನು ಒಪ್ಪಿಕೊಂಡ ಬಳಿಕ ಕೊನೆವರೆಗೂ ನಟಿಸಬೇಕು. ಹೀಗಿರುವಾಗ ಸಿನಿಮಾದಲ್ಲಿ ನಟಿಸುವುದು ಕಷ್ಟ. ಕೆಲವು ನಟಿಯರು ಅರ್ಧದಲ್ಲೇ ಬಿಟ್ಟು ಹೋಗುತ್ತಾರೆ. ಆದರೆ ನಾನು ವೃತ್ತಿಗೆ ಬದ್ಧಳಾಗಿದ್ದೇನೆ ಎಂದು ಉತ್ತರಿಸುತ್ತಾರೆ. ಕಾದಂಬರಿ, ಸುಕನ್ಯಾ, ಅರುಂಧತಿ, ಸೌಂದರ್ಯ ಹೀಗೆ ಅವರು ನಟಿಸಿದ ಎಲ್ಲಾ ಪಾತ್ರಗಳೂ ಧಾರಾವಾಹಿ ಶೀರ್ಷಿಕೆ ಹೆಸರಿನವೇ ಆಗಿವೆ. ಈ ಅವಕಾಶ ಎಲ್ಲಾ ನಟಿಯರಿಗೂ ಸಿಗುವುದಿಲ್ಲ ಎಂಬುದು ಶ್ವೇತಾ ಹೆಮ್ಮೆ. ಪ್ರತಿ ಧಾರಾವಾಹಿಯಲ್ಲಿ ನಟಿಸಿದ ಬಳಿಕವೂ ಜನರು ತಮ್ಮನ್ನು ಅದೇ ಹೆಸರಿನಲ್ಲಿ ಗುರುತಿಸುತ್ತಾರೆ ಎಂಬ ಖುಷಿ ಅವರದು. ಅವರ ಅಭಿನಯದ ಬಹುತೇಕ ಧಾರಾವಾಹಿಗಳು ಸಾವಿರ ಕಂತು ಪೂರೈಸಿರುವುದು ಮತ್ತೊಂದು ವಿಶೇಷ.

ಸುಮತಿ ಧಾರಾವಾಹಿಯ ಪಾತ್ರ ನಿಜಕ್ಕೂ ಸವಾಲಿನದ್ದು ಎಂದು ಆರಂಭದ ದಿನಗಳನ್ನು ಮೆಲುಕು ಹಾಕುತ್ತಾರೆ. ಪಿಯುಸಿಯಲ್ಲಿ ಇದ್ದಾಗಲೇ ತನಗಿಂತ ದೊಡ್ಡವರಿಗೆ ಅಮ್ಮನಾಗಿ ನಟಿಸಿದ್ದು ಅವರಿಗೆ ಮರೆಯಲಾಗದ ಅನುಭವ. ಮೂರು ಪಾತ್ರಗಳ `ಅರುಂಧತಿ~ ಧಾರಾವಾಹಿಯೂ ಅವರಿಗೆ ಅಚ್ಚುಮೆಚ್ಚು.

ಅಳುವ ಮತ್ತು ಅಳಿಸುವ ಪಾತ್ರಗಳೆಂದರೆ ಶ್ವೇತಾಗೆ ಇಷ್ಟ. ಜನ ಇಂತಹ ಪಾತ್ರಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಇಂತಹ ಪಾತ್ರಗಳು ಅವರ ಮನಸ್ಸನ್ನು ಕಾಡುತ್ತವೆ. ನಟನೆಗೂ ಹೆಚ್ಚಿನ ಅವಕಾಶ ಇರುತ್ತದೆ ಎನ್ನುವುದು ಅನುಭವದ ಮಾತು. ನಟನೆಯ ಜೊತೆಗೆ ನಿರೂಪಣೆಯ ನಂಟನ್ನೂ ಬೆಸೆದುಕೊಂಡಿರುವ ಶ್ವೇತಾ ಝೀ ವಾಹಿನಿಯ `ಯಾರಿಗುಂಟು ಯಾರಿಗಿಲ್ಲ~ ಕಾರ್ಯಕ್ರಮ ನಡೆಸಿಕೊಡುವಾಗ ಹೆಚ್ಚಾಗಿ ನಗಿಸುವತ್ತಲೇ ಗಮನ ಹರಿಸುತ್ತಾರಂತೆ. ಜೊತೆಗೆ `ಕುಣಿಯೋಣು ಬಾರಾ~ದಲ್ಲೂ ಹೆಜ್ಜೆ ಹಾಕುತ್ತಿದ್ದಾರೆ. ಗೇಮ್ ಷೋ ನಡೆಸಿಕೊಡಲು ಆರಂಭದಲ್ಲಿ ಒಲ್ಲೆ ಎಂದಿದ್ದ ಶ್ವೇತಾ ಈಗ ಅಭಿಮಾನಿಗಳ ಪ್ರತಿಕ್ರಿಯೆ ನೋಡಿ ಪುಳಕಿತರಾಗಿ ಎರಡನೇ ಕಂತಿಗೆ ತಯಾರಿ ನಡೆಸಿದ್ದಾರೆ.

ಆಗಾಗ ಸಿಗುವ ಅಲ್ಪಸ್ವಲ್ಪ ವೇಳೆಯನ್ನು ಹೊರಗೆ ಸುತ್ತಾಡಿ ವ್ಯರ್ಥಮಾಡಲು ಇಷ್ಟವಿಲ್ಲ. ಕೆಲಸದ ನಡುವೆ ಒಮ್ಮಮ್ಮೆ ಮನೆಯನ್ನೇ ಮರೆತಂತಾಗಿರುತ್ತದೆ. ಹೀಗಾಗಿ ಕುಟುಂಬದೊಂದಿಗೆ ಕಳೆಯಲು ಸಮಯವನ್ನು ಮೀಸಲಿಡುತ್ತೇನೆ ಎನ್ನುತ್ತಾರೆ.

ಕೊಡವನಾಡಿನ ಪ್ರತಿಭಾವಂತರು ಹೆಚ್ಚಾಗಿ ಸಿನಿರಂಗಕ್ಕೆ ಬರುತ್ತಿರುವುದರ ಬಗ್ಗೆ ಅವರಿಗೆ ಖುಷಿ ಇದೆ. ನಟನೆ ಮೂಲಕವೇ ಕೊಡವ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವ ಹಂಬಲವಿದೆ. ಅದಕ್ಕಾಗಿಯೇ ಬಿಡುವಿಲ್ಲದ ಒತ್ತಡದ ಮಧ್ಯೆಯೂ ಶಿವಧ್ವಜ್ ನಿರ್ದೇಶನದ ಕೊಡವ ಭಾಷೆಯ `ನಾ ಪುಟ್ ನ ಮಣ್~ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ.

ಧಾರಾವಾಹಿಗಳಲ್ಲಿ ಬಿಡುವಿದ್ದಾಗ ಒಳ್ಳೆಯ ಚಿತ್ರದಲ್ಲಿ ಅವಕಾಶ ಬಂದರೆ ಸಿನಿಮಾಗಳಲ್ಲಿ ನಟಿಸುತ್ತೇನೆ ಎನ್ನುವ ಶ್ವೇತಾಗೆ ಮದುವೆ ಬಗ್ಗೆ ಚಿಂತೆ ಇಲ್ಲವಂತೆ. ಪ್ರಪೋಸಲ್‌ಗಳೇನೋ ಬರುತ್ತಿವೆ. ಆದರೆ ಧಾರಾವಾಹಿಗಳು ಕೈಯಲ್ಲಿರುವುದರಿಂದ ಸದ್ಯಕ್ಕೆ ತಮಗೆ ಆ ಯೋಚನೆ ಇಲ್ಲ. ಎಲ್ಲವನ್ನೂ ಅಪ್ಪಅಮ್ಮನಿಗೆ ಬಿಟ್ಟಿದ್ದೇನೆ. `ಮದುವೆಯಾದ ಮೇಲೂ ನಟಿಸುತ್ತಾ ಕೂತರೆ ಗಂಡನ ಮನೆಯವರು ಓಡಿಸುತ್ತಾರಷ್ಟೇ~ ಎಂದು ತಮ್ಮ ಶ್ವೇತ ದಂತಪಂಕ್ತಿಗಳ ನಡುವಿನಿಂದ ತಣ್ಣನೆ ನಗುವನ್ನು ಹರಿಬಿಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT