ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀರ್ತಿಯ ಕನಸು

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

`ಸಿನಿಮಾರಂಗಕ್ಕೆ ಬರುವ ಪ್ರತಿಯೊಬ್ಬರೂ ನಾಯಕನಾಗಬೇಕೆಂಬ ಕನಸು ಹೊತ್ತವರೇ. ಅಂಥವರಲ್ಲಿ ನಾನೂ ಒಬ್ಬ. ಖಳನ ಪಾತ್ರಗಳು ಸಿಗುತ್ತಾ ಹೋದಾಗ ಕೆಲವೊಮ್ಮೆ ಬೇಸರವಾಗುತ್ತಿತ್ತು.
 
ರಜನೀಕಾಂತ್, ಅಂಬರೀಷ್, ದೇವರಾಜ್ ಎಲ್ಲರೂ ಖಳರಾಗಿಯೇ ಬಂದು ಇಂದು ನಾಯಕರಾಗಿದ್ದಾರೆ ಎಂದು ಕೆಲವರು ಸಮಾಧಾನ ಹೇಳುತ್ತಿದ್ದರು. ಅದೇ ಭರವಸೆಯಿಂದ ಖಳನಾಗಿ ನಟಿಸಲು ಒಪ್ಪುತ್ತಿದ್ದೆ. ಆದರೆ ಆ `ಟರ್ನಿಂಗ್ ಪಾಯಿಂಟ್~ ನನ್ನ ಬದುಕಿನಲ್ಲಿ ಬರಲೇ ಇಲ್ಲ~ ಎಂದು ನಿಟ್ಟುಸಿರು ಬಿಟ್ಟರು ನಟ ಕೀರ್ತಿರಾಜ್.

ಪ್ರಸ್ತುತ `ಗಾಡ್‌ಫಾದರ್~, `ಮಾಸ್~, `ಇತಿಹಾಸ~, `ಕಥೆಸ್ಟೋರಿ~ ಮುಂತಾದ ಸಿನಿಮಾಗಳಲ್ಲಿ ನಟಿಸುತ್ತಿರುವ, `ಚಿಕ್ಕಮ್ಮ~, `ಪೌರ್ಣಮಿ~ ಧಾರಾವಾಹಿಗಳಿಗೆ ಬಣ್ಣ ಹಚ್ಚಿರುವ ಅವರಿಗೆ ತಮ್ಮ ಈಡೇರದ ಕನಸೊಂದನ್ನು ನನಸು ಮಾಡಿಕೊಳ್ಳುವಾಸೆ. ಅದು, ಮುಪ್ಪು ಅಡರಿದವರ ಬದುಕನ್ನು ಸಿನಿಮಾ ಮಾಡುವುದು.

ನಟನೆಯೊಂದಿಗೆ ಕತೆ, ಚಿತ್ರಕತೆ, ಸಂಭಾಷಣೆ ಬರೆಯುವುದರಲ್ಲೂ ನಿಪುಣರಾಗಿರುವ ಕೀರ್ತಿರಾಜ್ ಇಂದಿಗೂ ಕತೆ ಬರೆಯುವುದನ್ನು ಮುಂದುವರಿಸಿದ್ದಾರೆ. `ಕೋಟ್ಯಂತರ ರೂಪಾಯಿ ಹಾಕಿ ಸಿನಿಮಾ ಮಾಡುವ ಸ್ಥಿತಿಯಲ್ಲಿ ನಾನಿಲ್ಲ. ಅವಕಾಶಕ್ಕಾಗಿ ಕಾಯುತ್ತಿದ್ದೇನೆ~ ಎನ್ನುತ್ತಾರೆ.
 
`ಅಂದು ಇಂದು ಎಂದಿಗೂ ಸಿನಿಮಾಗೆ ಒಂದು ಕತೆ ಬೇಕೇ ಬೇಕು. ಇಂದು ಆ ಕತೆ ಸಣ್ಣದಾಗಿ ಇದ್ದರೂ ಪರವಾಗಿಲ್ಲ. ಹಾಡುಗಳು, ಛಾಯಾಗ್ರಹಣ ಹೆಚ್ಚು ಶ್ರೀಮಂತವಾಗಿರಬೇಕು. ಅಂಥ ಒಂದು ಕತೆಯನ್ನು ರೂಪಿಸುತ್ತಿದ್ದೇನೆ~ ಎಂದು ಕನಸನ್ನು ಹಂಚಿಕೊಳ್ಳುತ್ತಾರೆ.

ನಿರ್ಮಾಪಕ ವೀರಸ್ವಾಮಿ ಅವರು ಕೀರ್ತಿರಾಜ್ ಅವರನ್ನು ನಿರ್ದೇಶಕ ಸಿ.ಡಿ.ರಾಜೇಂದ್ರ ಅವರಿಗೆ ಪರಿಚಯಿಸಿದರು. ಅದರಿಂದ ಸಿ.ಡಿ.ರಾಜೇಂದ್ರ ಅವರ ನಿರ್ದೇಶನದ `ದೀಪಾ~ ಅವರ ಮೊದಲ ಚಿತ್ರವಾಯಿತು. ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದ ಕೀರ್ತಿರಾಜ್ ಬಿ.ಎ.ವರೆಗೂ ಓದಿದವರು.
 
ಸಿನಿಮಾ ನಾಯಕನಾಗಬೇಕೆಂಬ ಹಂಬಲ ಹೊತ್ತು ಬಂದ ಅವರಿಗೆ `ವಿಲನ್~ ಪಾತ್ರಗಳೇ ಸಿಗುತ್ತಾ ಹೋದವು. ಪಾತ್ರ ಒಪ್ಪಿಕೊಳ್ಳುವಾಗ ಬೇಸರವಾದರೂ ಪಾತ್ರ ನಿರ್ವಹಣೆಯಲ್ಲಿ ಅಚ್ಚುಕಟ್ಟುತನ ಕಾಪಾಡಿಕೊಳ್ಳುತ್ತಿದ್ದ ಕೀರ್ತಿರಾಜ್ ನಟನೆಯೊಂದಿಗೆ ಸಾಕಷ್ಟು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದರು. ಕತೆ, ಚಿತ್ರಕತೆ, ಸಂಭಾಷಣೆ ಬರೆದರು.

ಡಿ.ರಾಜೇಂದ್ರ ಬಾಬು ಅವರೊಂದಿಗೆ ಸಾಕಷ್ಟು ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇರುವ ಕೀರ್ತಿರಾಜ್ `ಒಲವಿನ ಉಡುಗೊರೆ~ ಚಿತ್ರದ ಕತೆ, ಚಿತ್ರಕತೆ ಚರ್ಚೆಯಲ್ಲಿ ಭಾಗವಹಿಸಿದ್ದು ಮಾತ್ರವಲ್ಲ, ಸಹ ನಿರ್ದೇಶಕರಾಗಿಯೂ ದುಡಿದರು. ಚಿತ್ರ ಯಶಸ್ವಿಯಾಯಿತು. ಅದರಿಂದ ಪ್ರೇರೇಪಿತರಾಗಿ ಅಂಬರೀಷ್-ಸುಮಲತಾ ನಾಯಕ-ನಾಯಕಿಯಾಗಿದ್ದ `ಒಲವಿನ ಕಾಣಿಕೆ~ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಬರೆದರು.

`ಅಶ್ವಮೇಧ~ ಚಿತ್ರಕ್ಕೆ ಸಿ.ಆರ್. ಸಿಂಹ ಅವರ ಜೊತೆಗೂಡಿ ಕತೆ, ಚಿತ್ರಕತೆ, ಸಂಭಾಷಣೆ ಬರೆದು ಸಹನಿರ್ದೇಶಕರಾಗಿ ಕೆಲಸ ಮಾಡಿದರು. `ಚಿತ್ರಲೇಖ~ ಸಿನಿಮಾದಲ್ಲಿ ನಾಯಕನಷ್ಟೇ ಪ್ರಭಾವಶಾಲಿಯಾಗಿದ್ದ ಪಾತ್ರದಲ್ಲಿ ನಟಿಸಿದರು.

`ಗೃಹಪ್ರವೇಶ~, `ಕಿತ್ತೂರಿನ ಹುಲಿ~, `ಕಳ್ಳಮಳ್ಳ~, `ಒಲವಿನ ಉಡುಗೊರೆ~, `ಕೃಷ್ಣ ನೀ ಕುಣಿದಾಗ~, `ರಾವಣ ರಾಜ್ಯ~ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಖಳರಾದರು. ಜೊತೆಗೆ `ಪ್ಯಾರ್ ಕರಕೇ ದೇಖೋ~ ಹೆಸರಿನ ಗೋವಿಂದ, ಮಂದಾಕಿನಿ ನಟಿಸಿದ್ದ ಹಿಂದಿ ಚಿತ್ರಕ್ಕೂ ಸಹನಿರ್ದೇಶಕರಾಗಿ ದುಡಿದರು. ತಮಿಳಿನಲ್ಲೂ ಕೆಲವು ಸಿನಿಮಾಗಳಲ್ಲಿ ನಟಿಸಿ ಬಂದರು.

ಆದರೆ ಅವರ ಬದುಕಿನಲ್ಲಿ ಪೂರ್ಣ ಪ್ರಮಾಣದ ನಾಯಕನಾಗುವ ಅವಕಾಶ ಬರಲೇ ಇಲ್ಲ. `ಅದರಲ್ಲಿ ಯಾರದೂ ತಪ್ಪಿಲ್ಲ~ ಎನ್ನುವ ಅವರು ಖಳನಾಗಿಯೇ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡರು. ನಡುನಡುವೆ ಪಾಸಿಟಿವ್ ಪಾತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡರು.

`ಡಾನ್ಸ್ ರಾಜಾ ಡಾನ್ಸ್~ ಚಿತ್ರದ ಕುಂಟನ ಪಾತ್ರ ಮತ್ತು `ಚಿತ್ರಲೇಖ~ ಚಿತ್ರದ ವಿಕ್ಷಿಪ್ತನ ಪಾತ್ರವನ್ನು ಬಹಳ ಇಷ್ಟಪಡುವ ಅವರಿಗೆ ತಮ್ಮ ಪುತ್ರ ಧರ್ಮ ಕೀರ್ತಿರಾಜ್ `ನವಗ್ರಹ~ ಮತ್ತು `ಒಲವೇ ವಿಸ್ಮಯ~ ಚಿತ್ರಗಳಲ್ಲಿ ನಟಿಸಿರುವುದು ಹೆಮ್ಮೆ ಎನಿಸಿದೆ.

`ಸದ್ಯ ಸಿನಿಮಾಗಳಲ್ಲಿ ಸಿಗುತ್ತಿರುವ ಅವಕಾಶಗಳು ಮತ್ತು ಧಾರಾವಾಹಿಗಳಲ್ಲಿ ಸಿಗುತ್ತಿರುವ ಪಾತ್ರಗಳಿಂದ ಬದುಕು ಸಾಗುತ್ತಿದೆ. ಆದರೆ ಹೇಳಿಕೊಳ್ಳುವಂಥ ಅವಕಾಶಗಳು ಮಾತ್ರ ಸಿಗುತ್ತಿಲ್ಲ. ಕೆಲವು ಧಾರಾವಾಹಿಗಳಲ್ಲಿ ಪಾಸಿಟಿವ್ ಪಾತ್ರಗಳೂ ಸಿಕ್ಕವು. ಎಂದಿನಂತೆ ವಿಲನ್ ಪಾತ್ರಗಳಂತೂ ಇದ್ದೇ ಇವೆ.

ಕತೆಗೆ ಪೂರಕವಾಗಿರುವ ಯಾವುದೇ ಪಾತ್ರವಾದರೂ ನಿರ್ವಹಿಸಲು ಸಿದ್ಧ. ಚಿತ್ರರಂಗದಲ್ಲಿ ಎಲ್ಲರೂ ಗೌರವ ಪ್ರೀತಿಯಿಂದ ಮಾತನಾಡಿಸುತ್ತಾರೆ. ಆದರೆ ಅವಕಾಶಗಳು ಮಾತ್ರ ದೊರಕುವುದಿಲ್ಲ. ಅದು ಯಾಕೆ ಎಂಬುದೇ ಯಕ್ಷಪ್ರಶ್ನೆ~ ಎನ್ನುವ ಅವರಿಗೆ 80-90ರ ದಶಕದ ದಿನಗಳ ನೆನಪೇ ಹೆಚ್ಚು ಖುಷಿ ನೀಡುತ್ತದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT