ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿದು ಮತದಾನ ಮಾಡದಿರಿ: ಸಲಹೆ

Last Updated 10 ಏಪ್ರಿಲ್ 2013, 8:45 IST
ಅಕ್ಷರ ಗಾತ್ರ

ಶಿರಸಿ: `ಮದ್ಯ ಕುಡಿದು ವಾಹನ ಚಾಲನೆ ಮಾಡಿದರೆ ಅಪಘಾತವಾಗುತ್ತದೆ. ಆದ್ದರಿಂದ ಕುಡಿದು ವಾಹನ ಚಾಲನೆ ಮಾಡುವುದು ಕಾನೂನು ದೃಷ್ಟಿಯಿಂದ ನಿಷಿದ್ಧ. ಹಾಗೆಯೇ ಕುಡಿದು ಮತದಾನ ಮಾಡಿದರೆ ಪ್ರಜಾಪ್ರಭುತ್ವ ಪದ್ಧತಿಯೇ ಅಪಘಾತಕ್ಕೀಡಾಗಬಹುದು. ಹೀಗಾಗಿ `ಕುಡಿದು ಮತದಾನ ಮಾಡದಿರಿ'.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ  ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯು ಪ್ರಕಟಿಸಿರುವ `ನಾವಿಡಬೇಕಾದ ತ್ರಿವಿಕ್ರಮ ಹೆಜ್ಜೆಗಳು' ಕರಪತ್ರದ ಸಾಲುಗಳು ಇವು.

ಹೆಂಡದ ಹೊಳೆಯನ್ನೇ ಹರಿಸಿ ಚುನಾವಣೆಗಳು ನಡೆಯುವ ಇಂದಿನ ದಿನಗಳಲ್ಲಿ ಮದ್ಯರಹಿತ ಚುನಾವಣೆಯ ಪರ್ವಕ್ಕೆ ನಾಂದಿ ಹಾಡುವ ಮೂಲಕ ಸಜ್ಜನ ಜನಪ್ರತಿನಿಧಿಗಳು ಆಯ್ಕೆಯಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಮಂಡಳಿ ವಿನೂತನ ಜನಾಂದೋಲನಕ್ಕೆ ಹೆಜ್ಜೆ ಇಟ್ಟಿದೆ.

ರಾಜ್ಯದ 300ಕ್ಕೂ ಹೆಚ್ಚು ಮಠಗಳ ಯತಿಗಳಿಗೆ, ಧರ್ಮಾಧಿಕಾರಿಗಳಿಗೆ ಮುದ್ರಿತ ಕರಪತ್ರವನ್ನು ರವಾನಿಸಿ ತಮ್ಮ ಮಠದ ವ್ಯಾಪ್ತಿಯ ಮತದಾರರು, ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಲ್ಲಿ ಈ ಕುರಿತು ಜಾಗೃತಿ ಮೂಡಿಸುವಂತೆ ವಿನಂತಿಸಿದೆ.

`ಇಂದು ಪ್ರಜಾಪ್ರಭುತ್ವ ನಾವೆಣಿಸಿದಷ್ಟು ಯಶಸ್ವಿಯಾಗದಿರಲು, ಯೋಗ್ಯ ಪ್ರತಿನಿಧಿಗಳನ್ನು ಆಯ್ಕೆ ಮಾಡುವಲ್ಲಿ ಸೋಲಲು, ರಾಮರಾಜ್ಯವಾಗುವ ಬದಲು ಹರಾಮರಾಜ್ಯವಾಗುವತ್ತ ಸಾಗಲು ಮುಖ್ಯ ಕಾರಣ ಚುನಾವಣೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ಮದ್ಯವೆಂಬ ರಾಕ್ಷಸನ ಅಟ್ಟಹಾಸ. ಮದ್ಯ ಸೇವಿಸಿದ ವ್ಯಕ್ತಿ ವಿವೇಚನಾಯುಕ್ತವಾಗಿ ಮತದಾನ ಮಾಡಲು ಸಾಧ್ಯವೇ? ಹಣ ಹಾಗೂ ಹೆಂಡದ ಆಮಿಷ ತೋರಿಸಿ ಮತ ಬಾಚಿಕೊಳ್ಳುವುದೆಂದರೆ ಪ್ರಜಾಪ್ರಭುತ್ವದ ಮೂಲ ತತ್ವಕ್ಕೆ ವಿರುದ್ಧ.

ಹಣ-ಹೆಂಡದ ಆಧಾರದ ಮೇಲೆ ಚುನಾವಣೆ ನಡೆಯುತ್ತದೆ ಎನ್ನುವುದಾದರೆ ಅದು ಪ್ರಜಾಪ್ರಭುತ್ವದ ಅಣಕವಾಗುತ್ತದೆ. ಹೀಗಾಗಲು ಬಿಡದೆ ಚುನಾವಣೆಯಲ್ಲಿ ಮದ್ಯದ ಪಾತ್ರ ತೊಡೆದು ಹಾಕುವುದು, ನಮ್ಮ ಜೀವನದಿಂದ ಹಾಗೂ ರಾಷ್ಟ್ರಜೀವನದಿಂದ ಮದ್ಯವನ್ನು ದೂರವಿಡುವುದು ಈ ಮೂರು ಹೆಜ್ಜೆ ಇಟ್ಟಲ್ಲಿ ನಮ್ಮ ಪ್ರಜಾಪ್ರಭುತ್ವ ಜಗತ್ತಿಗೇ ಅದ್ಭುತ ಶಕ್ತಿಯಾಗಬಲ್ಲದು' ಇದು ಕರಪತ್ರದ ಉಲ್ಲೇಖಿತ ಸಾಲು.

ಮದ್ಯರಹಿತ ಚುನಾವಣೆ ನಡೆಸುವಂತೆ ಸಿರಿಗೆರೆ ಸ್ವಾಮಿಗಳು ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಂದ ಪ್ರಮಾಣ ಸ್ವೀಕರಿಸುವ ಕಾರ್ಯ ಮಾಡುತ್ತಿದ್ದಾರೆ.

ಅವರಂತೆ ಅನೇಕ ಸ್ವಾಮಿಗಳು ಈ ಕಾರ್ಯದಲ್ಲಿ ತೊಡಗಿದ್ದಾರೆ. ಸಾಧ್ಯವಾದಷ್ಟು ಸ್ವಾಮಿಗಳನ್ನು ವೈಯಕ್ತಿಕ ಭೇಟಿ ಮಾಡಿ ವಿನಂತಿಸಲಾಗುವುದು. ಮಂಡಳಿಯಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲು ನೀತಿ ಸಂಹಿತೆ ಅಡ್ಡ ಬರುತ್ತಿದ್ದು, ವಿನಾಯಿತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಆಯೋಗ ಅನುಮತಿ ನೀಡಿದಲ್ಲಿ ಮಂಡಳಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ ಎಂದು ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT