ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗಾಗಿ ದಿಢೀರ್ ರಸ್ತೆತಡೆ

Last Updated 5 ಏಪ್ರಿಲ್ 2013, 6:45 IST
ಅಕ್ಷರ ಗಾತ್ರ

ಸಿಂಧನೂರು: ಕುಡಿಯುವ ನೀರು ಒದಗಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಕೆ.ಹೊಸಳ್ಳಿಕ್ಯಾಂಪ್ ಬಳಿ ಗ್ರಾಮಸ್ಥರು ಬುಧವಾರ ಸಿಂಧನೂರು-ಗಂಗಾವತಿ ರಸ್ತೆ ಸಂಚಾರ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.

ಹೊಸಳ್ಳಿಕ್ಯಾಂಪ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ತುಂಗಭದ್ರಾ ಎಡದಂಡೆ ನಾಲೆ ನೀರನ್ನೇ ಅವಲಂಬಿಸಿದ್ದಾರೆ. ಆದರೆ ನಾಲೆಯ ಮೇಲೆ ನಿಷೇಧಾಜ್ಞೆ ಜಾರಿ ಮಾಡಿರುವುದರಿಂದ ಇದಕ್ಕೆ ಸಂಪರ್ಕ ಪಡೆದಿರುವ ಉಪನಾಲೆಯ ಮೂಲಕ ನೀರು ಪಡೆಯುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ನೀರಿಗಾಗಿ ಪರದಾಡುವಂತಾಗಿದೆ. ಇನ್ನು ಗ್ರಾಮದಲ್ಲಿರುವ ಕೆರೆಯಲ್ಲಿಯೂ ನೀರು ಸಂಗ್ರಹವಾಗಿಲ್ಲ.

ಬೇಸಿಗೆಯಲ್ಲಿ ನೀರಿನ ಬವಣೆ ಉಂಟಾಗುವ ಹಿನ್ನೆಲೆಯಲ್ಲಿ ಮುಂದಾಲೋಚನೆಯಿಂದ ಗ್ರಾಮ ಪಂಚಾಯಿತಿಯವರು ಕೆರೆಗೆ ನೀರು ತುಂಬಿಸಬೇಕಾಗಿತ್ತು. ಆದರೆ ಈ ಬಗ್ಗೆ ಅವರು ನಿರ್ಲಕ್ಷ್ಯ ತೋರಿದ್ದಾರೆ. ಅವರ ಬೇಜವಾಬ್ದಾರಿತನಕ್ಕೆ ತಾವು ತೊಂದರೆ ಅನುಭವಿಸುವಂತಾಗಿದೆ. ನೀರಿನ ಸಮಸ್ಯೆ ಬಗ್ಗೆ ತಹಶೀಲ್ದಾರರ ಗಮನಕ್ಕೆ ತಂದಾಗ್ಯೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಕೆ.ಚನ್ನಬಸವ, ಬಿ.ಹರ್ಷ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಠಾಣೆ ಪಿಎಸ್‌ಐ ಎಸ್.ಎಂ.ಪಾಟೀಲ್ ಯಾರ ಅನುಮತಿ ಪಡೆದು ರಸ್ತೆ ತಡೆ ನಡೆಸುತ್ತಿದ್ದೀರಿ. ಪೊಲೀಸರ ಗಮನಕ್ಕೆ ಯಾಕೆ ತಂದಿಲ್ಲ ಎಂದು ಪ್ರಶ್ನಿಸಿದಾಗ ಆಕ್ರೋಶಗೊಂಡ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡರು. ಕುಡಿಯಲು ನೀರಿಲ್ಲ ಎಂದು ಪಿಡಿಒ ಹಾಗೂ ತಹಶೀಲ್ದಾರ ಬಳಿ ಬಾಯಿ ಬಡೆದುಕೊಂಡರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅನಿವಾರ್ಯವಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಆಕ್ರೋಶಿತರಾದರು. ನಂತರ ತಹಶೀಲ್ದಾರ ಲಿಂಗನಗೌಡರು ಪ್ರತಿಭಟನಾಕಾರರನ್ನು ಸಮಾಧಾನಿಸಿ ಶೀಘ್ರ ಕ್ರಮದ ಭರವಸೆ ನೀಡಿದರು. ನಂತರವೇ ಗ್ರಾಮಸ್ಥರು ತಮ್ಮ ಚಳವಳಿ ವಾಪಸ್ ಪಡೆದರು.

ಸಂಚಾರ ಅಸ್ತವ್ಯಸ್ತ: ಗ್ರಾಮಸ್ಥರು ಪೊಲೀಸರಿಗೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಪ್ರತಿಭಟನೆ ಕೈಗೊಂಡಿದ್ದರಿಂದ ಸಿಂಧನೂರು- ಗಂಗಾವತಿ ರಸ್ತೆಯಲ್ಲಿ ಸುಮಾರು ಒಂದುಗಂಟೆಗೂ ಹೆಚ್ಚುಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ರಸ್ತೆ ತುಂಬಾ ವಾಹನಗಳು ನಿಂತು ಟ್ರಾಫಿಕ್ ಕಿರಿಕಿರಿ ಉಂಟಾಯಿತು.

ಗೋವಿಂದಪ್ಪ, ಬಸವರಾಜ, ಸುಬ್ಬಾರಾವ್, ಚನ್ನಪ್ಪಗೌಡ, ವೆಂಕಟರಾವ್, ಸತ್ಯನಾರಾಯಣ, ವೆಂಕಟರತ್ನಂ, ರಾಂಬಾಬು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT