ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು, ವಿದ್ಯುತ್‌ಗೆ ಆದ್ಯತೆ

Last Updated 22 ಜನವರಿ 2011, 5:30 IST
ಅಕ್ಷರ ಗಾತ್ರ

ಚಳ್ಳಕೆರೆ: ಎರಡನೇ ಬಾರಿ ಪುನರಾಯ್ಕೆಯಾಗಿ ಜಿ.ಪಂ. ಪ್ರವೇಶಿಸುತ್ತಿರುವ ಟಿ. ರವಿಕುಮಾರ್ ಈ ಬಾರಿ ತವರು ತಾಲ್ಲೂಕಿನ ದೊಡ್ಡ ಉಳ್ಳಾರ್ತಿ ಕ್ಷೇತ್ರದ ಜೆಡಿಎಸ್ ಸದಸ್ಯರಾಗಿದ್ದಾರೆ.ಕಳೆದ ಬಾರಿ ಚಿತ್ರದುರ್ಗ ತಾಲ್ಲೂಕು ಲಕ್ಷ್ಮಿಸಾಗರ ಜಿ.ಪಂ. ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈ ಬಾರಿ ತಾವು ಹುಟ್ಟಿದ ಚಿತ್ರನಾಯಕನಹಳ್ಳಿ ವ್ಯಾಪ್ತಿಯ ದೊಡ್ಡ ಉಳ್ಳಾರ್ತಿಯಿಂದ ಆಯ್ಕೆಯಾಗಿದ್ದಾರೆ.

ರೈತರಿಗೆ ಮೂಲ ಸಮಸ್ಯೆಯಾಗಿರುವ ವಿದ್ಯುತ್ ಅಭಾವ ಈ ಕ್ಷೇತ್ರದಲ್ಲಿ ವ್ಯಾಪಕವಾಗಿದೆ. ಇದನ್ನು ಸರಿದೂಗಿಸಲು ಪಣ ತೊಟ್ಟಿರುವ ಅವರು ರೈತರ ಪರ ಕೆಲಸ ಮಾಡುತ್ತೇನೆ ಎನ್ನುತ್ತಾರೆ. ಅವರು ‘ಪ್ರಜಾವಾಣಿ’ ಜತೆ ತಮ್ಮ ಅನುಭವದ ನುಡಿಗಳನ್ನು ಅಭಿವ್ಯಕ್ತಗೊಳಿಸಿದ್ದಾರೆ.

* ಎರಡನೇ ಅವಧಿಗೆ ಜಿ.ಪಂ. ಪ್ರವೇಶ ಮಾಡುವ ಸಂದರ್ಭದಲ್ಲಿ ನಿಮ್ಮ ಯೋಜನೆಗಳೇನು?
ಮೊದಲ ಬಾರಿಗೆ ಆಯ್ಕೆಯಾಗಿದ್ದ ಲಕ್ಷ್ಮಿಸಾಗರ ಕ್ಷೇತ್ರಕ್ಕಿಂತ ಈ ಬಾರಿಯ ದೊಡ್ಡಉಳ್ಳಾರ್ತಿ ಅನೇಕ ಸಮಸ್ಯೆಗಳನ್ನು ಹೊತ್ತು ನಿಂತಿದೆ. ಈಗಾಗಲೇ ಕ್ಷೇತ್ರದ ಜನತೆ ಅನುಭವಿಸುತ್ತಿರುವ ಮೂಲ ಸಮಸ್ಯೆಗಳತ್ತ ಗಮನವನ್ನು ಕೇಂದ್ರೀಕರಿಸಲಾಗಿದೆ.ಕುಡಿಯುವ ನೀರಿನ ಸಮಸ್ಯೆ ಇದೆ. ಶಾಲಾ ಶಿಕ್ಷಕರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಎನ್ನುವ ದೂರುಗಳು ಬರುತ್ತಿವೆ. ತೋಟಗಾರಿಕೆ ಇಲಾಖೆಯಲ್ಲಿನ ಸಬ್ಸಿಡಿ ದರದ ಸೌಲಭ್ಯಗಳು ರೈತರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಇದನ್ನು ಸರಿಪಡಿಸುವ ಬಗ್ಗೆ ಗಮನಹರಿಸುತ್ತೇನೆ.

* ಕಳೆದ ಬಾರಿ ಚುನಾವಣೆಗೂ, ಈ ಬಾರಿಯ ಚುನಾವಣೆಗೂ ಇರುವ ವ್ಯತ್ಯಾಸ ಏನು?
ಬಹಳಷ್ಟು ವ್ಯತ್ಯಾಸಗಳು ಕಂಡುಬಂದಿವೆ. ಕಳೆದ ಬಾರಿ ಚುನಾವಣೆಯಲ್ಲಿ ಇಷ್ಟೊಂದು ಪ್ರಮಾಣದ ಪೈಪೋಟಿ ನಡೆದಿರಲಿಲ್ಲ. ಆದರೆ, ಈ ಬಾರಿ ಬಿರುಸಿನ ಪೈಪೋಟಿ ನಡೆಯಿತು. ಕಳೆದ ಚುನಾವಣೆಯಲ್ಲಿ ಪ್ರಚಾರದ ಭರಾಟೆ ಈ ಪರಿ ಇರಲಿಲ್ಲ. ನನ್ನ ಮಾತೃ ಕ್ಷೇತ್ರ ಇದಾಗಿರುವುದರಿಂದ ಸಹಜವಾಗಿಯೇ ಸ್ಥಳೀಯ ಜನತೆ ನನ್ನನ್ನು ಕೈಬಿಡಲಿಲ್ಲ.

* ವಿದ್ಯುತ್, ಕುಡಿಯುವ ನೀರಿಗಾಗಿ ಯಾವ ಕ್ರಮ ಕೈಗೊಳ್ಳುತ್ತೀರಿ?
ರೈತರಿಗೆ ವಿದ್ಯುತ್ ಅತ್ಯವಶ್ಯಕವಾಗಿ ಬೇಕಾಗಿದೆ. ಅದೇ ರೀತಿ ಕುಡಿಯುವ ನೀರು ಸಹ ಅಷ್ಟೇ ಮುಖ್ಯ. ಇವೆರಡೂ ಸಮಸ್ಯೆಗಳಿಗೆ ನನ್ನ ಮೊದಲ ಆದ್ಯತೆ ನೀಡುತ್ತೇನೆ. ಸರ್ಕಾರದಿಂದ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚು ವಿದ್ಯುತ್ ಕೊಡಿಸುವುದು ಹಾಗೂ ಸಮಯಕ್ಕೆ ಸರಿಯಾಗಿ ರೈತರಿಗೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಹೋರಾಟ ಮಾಡುತ್ತೇನೆ.

* ಎರಡನೇ ಅವಧಿಗೆ ಆಯ್ಕೆ ಆಗಲು ನಡೆಸಿದ ಕಸರತ್ತು ಏನು?
ಯಾವ ಕಸರತ್ತೂ ಇಲ್ಲ. ಮೂಲತಃ ನಾನು ಬೋರ್‌ವೆಲ್ ಕಾಂಟ್ರಾಕ್ಟರ್. ಜಿಲ್ಲೆಯಲ್ಲಿ ಯಾವ ಭಾಗಕ್ಕೆ ಹೋದರೂ ನನಗೆ ಜನರ ಪರಿಚಯ ಇದೆ. ಪ್ರತಿಯೊಬ್ಬರಲ್ಲೂ ನಾನು ಪ್ರೀತಿ, ವಿಶ್ವಾಸ ಗಳಿಸಿರುವುದರಿಂದಲೇ ನಾನು ಆಯ್ಕೆಯಾಗಲು ಸಾಧ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT