ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲ ಹುಟ್ಟಿಸುವ ಕಥೆ (ಚಿತ್ರ: ನಾಟ್ ಎ ಲವ್ ಸ್ಟೋರಿ (ಹಿಂದಿ))

Last Updated 20 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಸಮಕಾಲೀನ ಘಟನೆಗಳನ್ನಾಧರಿಸಿದ ಹಲವಾರು ಸಿನಿಮಾಗಳು ಬಾಲಿವುಡ್‌ನಲ್ಲಿ ಬಂದಿವೆ. ರೂಪದರ್ಶಿ ಜೆಸ್ಸಿಕಾ ಲಾಲ್ ಕೊಲೆ ಪ್ರಕರಣದ ತೀರ್ಪಿನ ನಂತರ `ನೋ ಒನ್ ಕಿಲ್ಡ್ ಜೆಸ್ಸಿಕಾ~ ಚಿತ್ರ ತೆರೆ ಕಂಡಿತ್ತು. ಅದೇ ರೀತಿ 2008ರಲ್ಲಿ ನಿರ್ಮಾಪಕ ನೀರಜ್ ಗ್ರೋವರ್ ಅವರ ಭೀಕರ ಹತ್ಯೆಯ ಹಿಂದಿದ್ದ ಇಬ್ಬರು ಪ್ರೇಮಿಗಳನ್ನೇ ಆಧರಿಸಿ `ನಾಟ್ ಎ ಲವ್ ಸ್ಟೋರಿ~ ಎಂಬ ಚಿತ್ರವನ್ನು ರಾಮ್‌ಗೋಪಾಲ್ ವರ್ಮ ಈ ವಾರ ತೆರೆಗೆ ತಂದಿದ್ದಾರೆ.

ನಟಿಯಾಗುವ ಅವಕಾಶ ಹುಡುಕಿಕೊಂಡು ಮುಂಬೈಗೆ ಬರುವ ನಾಯಕಿ (ಮಾಹಿ ಗಿಲ್)ಯೊಬ್ಬಳು ಅದೃಷ್ಟದ ಬೆನ್ನುಹತ್ತುತ್ತಾಳೆ. ಇದೇ ಸಂದರ್ಭದಲ್ಲಿ ಈಕೆಗೆ ಸಹಕರಿಸಲು ವ್ಯಕ್ತಿಯೊಬ್ಬ (ಅಜಯ್ ಗೇಹಿ) ಮುಂದೆ ಬರುತ್ತಾನೆ. ಒಂದು ಮುಂಜಾನೆ ನಾಯಕಿಯ ಮನೆಯಲ್ಲಿ ಅಜಯ್ ಇರುತ್ತಾನೆ. ಇದನ್ನು ಆಕೆಯ ಪ್ರಿಯಕರ ನೋಡಿ ಕೋಪಗೊಳ್ಳುತ್ತಾನೆ. ಇಲ್ಲಿಂದ `ನಾಟ್ ಎ ಲವ್ ಸ್ಟೋರಿ~ ತೆರೆದುಕೊಳ್ಳುತ್ತದೆ.

ಚಿತ್ರದ ಕಥೆ 2008ರಲ್ಲಿ ನಡೆದ ನೀರಜ್ ಗ್ರೋವರ್ ಎಂಬ ನಿರ್ಮಾಪಕನ ಕೊಲೆಯ ಪ್ರಕರಣವನ್ನೇ ಹೋಲುತ್ತದಾದರೂ, ನಿರೂಪಣೆ ವಿಭಿನ್ನವಾಗಿದೆ. ಎಲ್ಲಿಯೂ ಸಹ ಚಿತ್ರ ಕೊಲೆ ಪ್ರಕರಣದ ಜಾಡನ್ನು ಹಿಡಿಯದಿರುವುದಕ್ಕೆ  ಚಿತ್ರಕಥೆ ಸಿದ್ಧಪಡಿಸಿರುವ ರೋಹಿತ್ ಬನವಾಲಿಕರ್ ಹಾಗೂ ರಾಮ್‌ಗೋಪಾಲ್ ವರ್ಮರ ಚಾಕಚಕ್ಯತೆ ಕಾರಣವಿರಬಹುದು.

ನಾಯಕಿ ದಕ್ಷಿಣ ಭಾರತದ ನಟಿಯಲ್ಲ. ಹಾಗೆಯೇ ಆಕೆಯ ಪ್ರಿಯಕರನೂ ನೌಕಾಪಡೆಯ ಮಾಜಿ ಅಧಿಕಾರಿ ಅಲ್ಲ. ಇಬ್ಬರೂ ಸೇರಿ ಮಾಡುವ ಕೊಲೆ ಹಾಗೂ ನಂತರ ಅದನ್ನು ಮುಚ್ಚಿಡಲು ದೇಹವನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸುವ ಮನಃಸ್ಥಿತಿಯ ಹಿಂದಿನ ಮನಸ್ಸನ್ನು ಅರಿಯುವ ಪ್ರಯತ್ನಕ್ಕೆ ನಿರ್ದೇಶಕರು ಕೈಹಾಕಿದ್ದಾರೆನಿಸುತ್ತದೆ. ಯಾರೂ ಕೆಟ್ಟವರಲ್ಲ. ಪರಿಸ್ಥಿತಿ ಮನಷ್ಯನನ್ನು ಇಂಥ ಕೃತ್ಯಕ್ಕೀಡು ಮಾಡುತ್ತದೆ ಎನ್ನುವ ಸಂದೇಶ ನಿರ್ದೇಶಕರದ್ದು.

 ಇಡೀ ಚಿತ್ರ ಸಂಪೂರ್ಣವಾಗಿ ಒಂದೇ ಕಟ್ಟಡದಲ್ಲಿ ನಡೆಯುತ್ತದೆ. ಚಿತ್ರದ ಪ್ರತಿಯೊಂದು ದೃಶ್ಯ ನೋಡಿದಾಗಲೂ ಮುಂದೇನಾಗುತ್ತದೆ ಎಂಬ ಕುತೂಹಲ ಕೊನೆಯವರೆಗೂ ನಿರ್ದೇಶಕರು ಕಾಪಾಡಿಕೊಂಡಿದ್ದಾರೆ. ಕೊಲೆ ಮಾಡಿ ನಂತರ ದೇಹವನ್ನು ತುಂಡು ತುಂಡಾಗಿ ಕತ್ತರಿಸುವ ದೃಶ್ಯಗಳು ಮೈನವಿರೇಳಿಸುತ್ತವೆ. ಮೊದಲರ್ಧ ಕೊಲೆಗೂ ದ್ವಿತಿಯಾರ್ಧ ಅದರ ತನಿಖೆಗೂ ನಿರ್ದೇಶಕರು ಮೀಸಲಿಟ್ಟಿದ್ದಾರೆ. ತನಿಖೆ ಮುಗಿದು ಚಿತ್ರದ ಕೊನೆಯ ಹಂತದಲ್ಲಿ ನಾಯಕಿ ತನ್ನ ಪ್ರಿಯಕರನೊಂದಿಗೆ ನಡೆಸುವ ಸಂಭಾಷಣೆ ಮನ ಕಲಕುತ್ತದೆ.

ಚಿತ್ರಕ್ಕೆ ನೋಡಿಸಿಕೊಳ್ಳುವ  ಗುಣ ದಕ್ಕಿದೆ. ಚಿತ್ರಕ್ಕೆ ಹೆಚ್ಚಿನ ಕಳೆ ಕಟ್ಟಿರುವುದು ಸಂದೀಪ್ ಚೌಟ ಅವರ ಹಿನ್ನೆಲೆ ಸಂಗೀತ. ಚಿತ್ರದಲ್ಲಿ ಎರಡು ಹಾಡುಗಳಿವೆ. ಅದರಲ್ಲಿ ಒಂದು ರಂಗೀಲಾ ಚಿತ್ರದ ರಂಗೀಲಾ ರೇ... ಗೀತೆಯ ಹೊಸ ಅವತರಣಿಗೆ ಹಾಗೂ ಅದಕ್ಕಾಗಿ ಕಟ್ಟಿರುವ ದೃಶ್ಯಗಳು ಸೊಗಸಾಗಿವೆ. ಲಭ್ಯವಿರುವ ಬೆಳಕನ್ನೇ ಬಳಸಿ ಚಿತ್ರೀಕರಿಸಿರುವ ಛಾಯಾಗ್ರಹಣ ಕೂಡಾ ಚಿತ್ರಕ್ಕೆ ನೈಜತೆ ತಂದುಕೊಟ್ಟಿದೆ.

ದೀಪಕ್ ದೊಬ್ರಿಯಾಲ್ ಹಾಗೂ ಮಾಹಿ ಗಿಲ್ ಅವರ ನಟನೆ ಮನಕಲಕುವಂತಿದೆ. ಪ್ರೀತಿ ಹಾಗೂ ಭಯ ಸನ್ನಿವೇಶಗಳಲ್ಲಿ ಅಭಿನಯ ಸಹಜವಾಗಿದೆ. ದ್ವಿತಿಯಾರ್ಧದಲ್ಲಿ ಮಾಹಿ ಅವರ ನಟನೆ ಬೆರಗುಗೊಳಿಸುವಂತಿದೆ. ನಟನೆಯಲ್ಲಿನ ಮತ್ತೊಂದು ಪ್ರಮುಖ ಅಂಶವೆಂದರೆ ಭಾವನೆಗಳನ್ನು ಕಣ್ಣುಗಳ ಮೂಲಕವೇ ವ್ಯಕ್ತಪಡಿಸುತ್ತಾರೆ. ಹೆಜ್ಜೆ ಹೆಜ್ಜೆಗೂ ಕುತೂಹಲ, ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದ ಪ್ರೇಮಿಗಳ ಪರದಾಟ ಇತ್ಯಾದಿಗಳಿಂದ `ನಾಟ್ ಎ ಲವ್ ಸ್ಟೋರಿ~ ವರ್ಮಾ ಅವರ ಮೂಸೆಯಲ್ಲಿ ಹುಟ್ಟಿದ ಮತ್ತೊಂದು ಉತ್ತಮ ಚಿತ್ರ ಎಂದರೆ ತಪ್ಪಾಗಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT