ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ಸಾಯಿ ಉದ್ಯಾನ ಕೊಳಚೆ ತಾಣ

Last Updated 12 ಜುಲೈ 2012, 9:25 IST
ಅಕ್ಷರ ಗಾತ್ರ

ಕುಷ್ಟಗಿ:  ನಾಗರಿಕರ, ಮಕ್ಕಳ ವಿಹಾರ ತಾಣವಾಗಬೇಕಿದ್ದ ಪಟ್ಟಣದ ಎರಡನೇ ವಾರ್ಡಿನಲ್ಲಿಯ ಬುತ್ತಿಬಸವೇಶ್ವರ ನಗರದ ಸಾಯಿ ಉದ್ಯಾನ ಜಾಗ ಪುರಸಭೆ ನಿರ್ಲಕ್ಷ್ಯದಿಂದ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿರುವುದು ಕಂಡುಬಂದಿದೆ.

ಬುತ್ತಿಬಸವೇಶ್ವರ ಪಾದಗಟ್ಟೆ ಬಳಿ ಇರುವ ಲೇಔಟ್‌ನಲ್ಲಿಯ ಉದ್ಯಾನಜಾಗೆಯನ್ನೇ ಹಿಂದೆ ಕೆಲವರು ಕೈಚಳಕ ತೋರಿ ಅಕ್ರಮ ನಿವೇಶನಗಳನ್ನಾಗಿ ಪರಿವರ್ತಿಸಿದ್ದರು. ಅಲ್ಲದೇ ಸದರಿ ಜಾಗೆಯನ್ನು ಲಪಟಾಯಿಸಿದ್ದ ಕೆಲ ವ್ಯಕ್ತಿಗಳು ನಂತರ ಅವುಗಳನ್ನು ಉಪಾಯದಿಂದ ಬೇರೆಯವರಿಗೆ ಮಾರಾಟ ಮಾಡಿ ತಾವು ಮಾತ್ರ ಬಚಾವ್ ಆಗಿದ್ದರು.

ಈ ವಿಷಯ ಪತ್ರಿಕೆ ಮೂಲಕ ಬಯಲಿಗೆ ಬಂದ ನಂತರ ಎಚ್ಚೆತ್ತುಕೊಂಡ ಸಾರ್ವಜನಿಕರು ಅಲ್ಲಿ ಸಾಯಿ ಉದ್ಯಾನ ಎಂದು ಫಲಕಹಾಕುವ ಮೂಲಕ ಸರ್ಕಾರಿ ಜಾಗ ಅಪಹರಿಸುವವರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದರು.

ಆದರೆ ಅನೇಕ ವರ್ಷಗಳು ಗತಿಸಿದರೂ ಸದರಿ ಪ್ರದೇಶವನ್ನು ಅಭಿವೃದ್ಧಿಪಡಿಸದೇ ಪುರಸಭೆ ನಿರ್ಲಕ್ಷ್ಯ ವಹಿಸಿರುವುದು ಅಲ್ಲಿನ ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಉದ್ಯಾನಕ್ಕೆ ರಕ್ಷಣೆಯಂತೂ ಇಲ್ಲವೇ ಇಲ್ಲ, ಚರಂಡಿ, ಮೂಲಸೌಲಭ್ಯಗಳಿಲ್ಲದ ಕಾರಣ ಸುತ್ತಲಿನ ಕೊಳಚೆನೀರು ಹರಿದು ಬಂದು ಉದ್ಯಾನ ಜಾಗದಲ್ಲಿ ಮಡುಗಟ್ಟಿ ನಿಲ್ಲುತ್ತದೆ. ಹಾಗಾಗಿ ಅಲ್ಲಿಯ ವಾತಾವರಣ ಮಲೀನವಾಗಿದೆ. ಬಯಲು ಇರುವುದರಿಂದ ಎಲ್ಲ ರೀತಿಯ ತ್ಯಾಜ್ಯಕ್ಕೆ ಪ್ರಶಸ್ತಸ್ಥಳವಾಗಿದ್ದು ಇಡೀ ಪ್ರದೇಶ ರೋಗಗ್ರಸ್ತವಾಗಿದೆ ಎಂಬ ಅಳಲು ಸಾರ್ವಜನಿಕರದ್ದು.

ಈ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದ ಶಾಸಕ ಅಮರೇಗೌಡ ಬಯ್ಯಾಪುರ, ಪುರಸಭೆ ಸದಸ್ಯರು ಮತ್ತು ಅಧಿಕಾರಿಗಳು ಉದ್ಯಾನ ಜಾಗದ ಪಕ್ಕದಲ್ಲಿ ಚರಂಡಿ ನಿರ್ಮಿಸುವುದಾಗಿ ಹೇಳಿದ್ದರು. ಆದರೆ ಆ ಕೆಲಸ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಕೊಳಚೆ ಮಡುಗಟ್ಟಿರುವುದರಿಂದ ಜನರಿಗೆ ವಿವಿಧ ರೋಗಗಳು ಅಂಟಿಕೊಳ್ಳುವಂತಾಗಿದೆ ಎಂಬ ಆರೋಪಗಳು ಕೇಳಿಬಂದವು.

ಯಾರ ಅಭಿವೃದ್ಧಿ: ಎರಡನೇ ವಾರ್ಡ್‌ನಲ್ಲಿ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ, ದ್ವಿಚಕ್ರ ವಾಹನಗಳು ಸಂಚಾರಕ್ಕೂ ಯೋಗ್ಯವಿಲ್ಲದ ರಸ್ತೆಗಳಿವೆ., ಅಗತ್ಯ ಸ್ಥಳಗಳಲ್ಲಿಲ್ಲ ಚರಂಡಿಗಳೇ ಇಲ್ಲ. ಅಭಿವೃದ್ಧಿ ಎಂದರೆ ಈ ವಾರ್ಡ್‌ನ್ನು ಪ್ರತಿನಿಧಿಸುವ ಪುರಸಭೆ ಸದಸ್ಯೆ ಅಡಿವೆಮ್ಮ ನಂದಿಕೋಲಮಠ ಅವರ ಮನೆ ಸುತ್ತಲಿನ ಪ್ರದೇಶ ಮಾತ್ರ. ಸದಸ್ಯೆಯ ಮನೆ ಸುತ್ತಲೂ ಸುಸಜ್ಜಿತ ಕಾಂಕ್ರೀಟ್ ಚರಂಡಿಗಳು, ಮನೆ ಗೇಟ್‌ವರೆಗೂ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದೆ.

 ಬಹುಶಃ ಅಭಿವೃದ್ಧಿಯಂದರೆ ಇದೇ ಇರಬೇಕು ಎಂದು ವ್ಯಂಗ್ಯವಾಡುವ ಜನ ಹಾಳಾಗಿ ಹೋಗಲಿ ತಾವು ಮಾತ್ರ ಅಭಿವೃದ್ಧಿ ಹೊಂದಿದರೆ ಸಾಕು ಎಂಬ ಮನೋಭಾವದ ಜನಪ್ರತಿನಿಧಿಗಳಿಂದ ಯಾವ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ ಎಂದು ಆಕ್ರೋಶ         ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT