ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಕೋಟೆ ಗೋಡೆಗೆ ಈಗ 11 ತಿಂಗಳು!

Last Updated 3 ಜೂನ್ 2013, 13:10 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಐತಿಹಾಸಿಕ ಕಿತ್ತೂರು ಕೋಟೆ ರಕ್ಷಣಾಗೋಡೆಯ ಸ್ವಲ್ಪಭಾಗ ಕುಸಿದು ಬಿದ್ದು 11ತಿಂಗಳು ಗತಿಸುತ್ತ ಬಂದಿದ್ದರೂ ಅದರ ಬಗ್ಗೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಲಿ, ಕಿತ್ತೂರು ಉತ್ಸವ ಆಚರಣೆ ಸಮಿತಿ ಕಾರ್ಯಾಧ್ಯಕ್ಷ ಜಿಲ್ಲಾಧಿಕಾರಿಯವರಾಗಲಿ ಅಥವಾ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಯವರಾಗಲಿ ಇಲ್ಲಿಯವರೆಗೆ ತಾಳಿರುವ ನಿರ್ಲಕ್ಷ್ಯವನ್ನು ಗಮನಿಸಿದರೆ `ಇದಕ್ಕೆ ಯಾರೂ ದಿಕ್ಕಲ್ಲವೇ' ಎಂಬ ಆತಂಕ ಭಾವನೆ ಇಲ್ಲಿಯ ಸಾರ್ವಜನಿಕರಲ್ಲಿ ಮನೆ ಮಾಡಿದೆ.

ಮುಖ್ಯ ಪ್ರವೇಶ ದ್ವಾರದ ಎಡಭಾಗಕ್ಕಿರುವ ಈ ಬಿದ್ದಿರುವ ಆವರಣ ಗೋಡೆ  ಪ್ರವಾಸಿಗರ ಕಣ್ಣಿಗೆ ರಾಚುತ್ತಿದೆ. 2012 ಅಕ್ಟೋಬರ್ 23ರಂದು ಜರುಗುವ ಕಿತ್ತೂರು ಉತ್ಸವ ಸಂದರ್ಭದಲ್ಲೂ ಇದರ ಮೇಲೆ ಅಧಿಕಾರಿಗಳ ಕೃಪಾದೃಷ್ಟಿ ಬೀಳಲಿಲ್ಲ. ಬೇರೆಡೆ ಉತ್ಸವದ ಪ್ರಯುಕ್ತ ಅನೇಕ ಕಾಮಗಾರಿಗಳು ನಡೆದವು. ಆದರೆ ಬಿದ್ದ ಗೋಡೆ ಮಾತ್ರ ಹಾಗೇ ಉಳಿದುಕೊಂಡಿತು. ಕಣ್ಮುಂದೆ ಕೋಟೆಯ ಇಂತಹ ಹೀನಾಯ ಸ್ಥಿತಿಯನ್ನಿಟ್ಟುಕೊಂಡೇ ಉತ್ಸವ ಆಚರಣೆ ಮಾಡಿದ ಆಯುಕ್ತರ ಕ್ರಮವನ್ನು ನಾಗರಿಕರು ಕಟು ಶಬ್ದಗಳಲ್ಲಿ ಖಂಡಿಸಿದರೂ ಇಲ್ಲಿಯವರೆಗೆ ಏನೂ ಪ್ರಯೋಜನವಾಗಿಲ್ಲ. ಆಗಿದ್ದ ಆಯುಕ್ತರೇ ಈಗಲೂ ಇದ್ದಾರೆ. ನಾಗರಿಕರ ಕೂಗು, ಸ್ವತಃ ಅವರ ಕಣ್ಣುಗಳೇ ನೋಡಿರುವ ಈ ಬಿದ್ದ ಗೋಡೆಯ ದುಃಸ್ಥಿತಿ ಅವರ ಮನಸ್ಸನ್ನು ತಟ್ಟುತ್ತಿಲ್ಲ. ಬಿದ್ದ ಅಲ್ಪ ಗೋಡೆಯನ್ನು  ನಿರ್ಮಿಸಲು ಅವರು ಮುಂದಾಗುತ್ತಿಲ್ಲವೇಕೆ? ಅದಕ್ಕಿರುವ ಅಡಚಣಿಯಾದರೂ ಏನು ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ.

ಇವರಿಗೇಕೆ ಸಾಧ್ಯವಿಲ್ಲ?
ಹಿಂದೆ ಸಹ ಪ್ರವೇಶ ದ್ವಾರದ ಬಲಭಾಗಕ್ಕಿರುವ ಗೋಡೆ ಕುಸಿದು ಬಿದ್ದಿತ್ತು. ಅಂದಿನ ಉಪವಿಭಾಗಾಧಿಕಾರಿ ಮತ್ತು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ವಿ.ಬಿ. ದಾಮಣ್ಣವರ ಹಾಗೂ ತಹಶೀಲ್ದಾರ ಲೋಕೇಶ್ ಪಿ.ಎನ್.  ಭೇಟಿಯಿತ್ತು ಸಂಬಂಧಿಸಿದವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇವರು ಕೆರಳಿದ ರೀತಿ ಕಂಡು ಒಂದೇ ವಾರದಲ್ಲೇ ಬಿದ್ದ ಗೋಡೆಯನ್ನು ಮರು ನಿರ್ಮಿಸಿ ಆಗಿರುವ ಪ್ರಮಾದವನ್ನು ಸರಿಪಡಿಸಲಾಗಿತ್ತು.

ಆದರೆ ಹಿಂದಿನ ಪಶ್ಚಾತ್ತಾಪ ಭಾವನೆ, ಇದನ್ನು ನಿರ್ಮಿಸಿದವರ ಹಾಗೂ ಕೋಟೆಯ ಉಸ್ತುವಾರಿ ನೋಡಿಕೊಳ್ಳುವವರ ಮುಖದಲ್ಲಿ ಇಂದು ಕಾಣುತ್ತಿಲ್ಲ. `ಆಯುಕ್ತರ ದಿವ್ಯಮೌನ, ನಿರ್ಲಕ್ಷ್ಯ ತಾಳಿರುವ ಅಧಿಕಾರಿಗಳಿಗೆ ಅಹಂಭಾವ ತುಂಬಿರಬಹುದು. ಹೀಗಾಗಿಯೇ `ಬಿದ್ದಿದ್ದರೆ ಬಿದ್ದರಬಹುದು ಬಿಡಿ' ಎಂಬ ತಾತ್ಸಾರ ಎದ್ದು ಕಾಣುವಂತೆ ಅವರ ವರ್ತನೆಯಿದೆ' ಎಂಬ ಆರೋಪವನ್ನು ಸ್ಥಳೀಯರು ಮಾಡುತ್ತಾರೆ.
ಕಿತ್ತೂರು ರಾಣಿ ಚನ್ನಮ್ಮ ಈ ರಾಷ್ಟ್ರದ ಹೆಮ್ಮೆಯ ಪ್ರತೀಕ. ವಿದೇಶದಲ್ಲಿ, ದೇಶದ ರಾಜಕೀಯ ಶಕ್ತಿ ಕೇಂದ್ರ ಪಾರ್ಲಿಮೆಂಟ್ ಭವನದ ಆವರಣ ಮತ್ತು ಬೆಂಗಳೂರು ನಗರದಲ್ಲಿ ರಾಣಿಯ ಪ್ರತಿಮೆಗಳನ್ನು  ಅನಾವರಣಗೊಳಿಸಲಾಗಿದೆ.

ರಾಣಿಯ ಶೌರ್ಯ, ಸಾಹಸ, ತ್ಯಾಗ ಮತ್ತು ಬಲಿದಾನ ಸ್ಮರಿಸುವ ಕಿತ್ತೂರು ಉತ್ಸವವನ್ನು ಸರ್ಕಾರದ ವತಿಯಿಂದ ಪ್ರತಿವರ್ಷ ಆಚರಣೆ ಮಾಡಲಾಗುತ್ತಿದೆ. ಎಲ್ಲ ನೋಡಿ, ಕೇಳಿ ಈ ರಕ್ತರಂಜಿತ ಮಣ್ಣು, ಕೋಟೆ, ಇಲ್ಲಿಯ ವಸ್ತಸಂಗ್ರಹಾಲಯ ವೀಕ್ಷಿಸಲು ಕುತೂಹಲದಿಂದ  ಪ್ರವಾಸಿಗರು ಆಗಮಿಸಿದರೆ ಕಿಲ್ಲೆಯ ಮುಖ್ಯದ್ವಾರದ ಈ ಬಿದ್ದ ಗೋಡೆ ಕೈಬೀಸಿ ಕರೆಯಬೇಕೇ?  ಕನ್ನಡತಿ ರಾಣಿ ಚನ್ನಮ್ಮನ ಕೋಟೆ ಗೋಡೆಗೆ ಇಂತಹ ದುಃಸ್ಥಿತಿ ಬರಬೇಕಿತ್ತೇ ಎಂಬುದು ಸ್ಥಳೀಯ ಪ್ರಜ್ಞಾವಂತರ ಆಕ್ರೋಶ ಭರಿತ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT