ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಚಿಪುಡಿಯ ಸಂಭ್ರಮ

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನಾಟ್ಯಸರಸ್ವತಿ ಕೂಚಿಪುಡಿ ಡಾನ್ಸ್ ಅಕಾಡೆಮಿ 3ನೇ ಅಖಿಲ ಕರ್ನಾಟಕ ಕೂಚಿಪುಡಿ ನೃತ್ಯೋತ್ಸವ ಏರ್ಪಡಿಸಿ ಭಗವಾನ್ ಶ್ರೀಕೃಷ್ಣನಿಗೆ ನಮನ ಸಲ್ಲಿಸಿತು.

ಕೂಚಿಪುಡಿ ಕುರಿತು ಹಿರಿಯ ಗುರುಗಳಿಂದ ಉಪನ್ಯಾಸ, ಪ್ರಾತ್ಯಕ್ಷಿಕೆ, ಪರಿಣತ ಗುರುಗಳು ಮತ್ತು ಉದಯೋನ್ಮುಖ ಕಲಾವಿದರ ನಡುವೆ ಸಂವಾದ, ವರ್ಣಮಯ ಸಾಂಸ್ಕೃತಿಕ ಸಂಜೆ ನೃತ್ಯೋತ್ಸವದ ಸೊಬಗು ಹೆಚ್ಚಿಸಿತು. ದಂತ ವೈದ್ಯೆಯಾಗಿರುವ ಕೂಚಿಪುಡಿ ಕಲಾವಿದೆ ಡಾ. ಸರಸ್ವತಿ ರಜತೇಶ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಮೆರಿಕದ ನಾಟ್ಯಸರಸ್ವತಿ ಸಂಸ್ಥೆ ಸಹಯೋಗದಲ್ಲಿ ಈ ಉತ್ಸವ ಹಮ್ಮಿಕೊಂಡಿದ್ದರು.

ಚೆನ್ನೈನ ಗುರು ವೇದಾಂತಂ ರಾಮು ಮತ್ತು ಆಂಧ್ರದ ಗುರು ಪಸುಮರ್ತಿ ಶ್ರೀನಿವಾಸ ಶರ್ಮಾ ವಿಚಾರ ಸಂಕಿರಣ ಉದ್ಘಾಟಿಸಿದರು. ವೇದಾಂತಂ ರಾಮು, ಕೂಚಿಪುಡಿಯಲ್ಲಿನ ಸೂಕ್ಷ್ಮ ಅಂಶಗಳನ್ನೆಲ್ಲ ವಿವರಿಸಿದರು. `ಭಾಮಾಕಲಾಪಂ~ ನೃತ್ಯದ ವಿಶಿಷ್ಟ ಭಾಗವಾದ ಲೇಖಾವನ್ನು (ಸತ್ಯಭಾಮೆಯ ಅಭಿನಯ) ಅಭಿನಯಿಸಿ ತೋರಿಸಿದರು. ತಾಂತ್ರಿಕವಾಗಿ ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯ ಪ್ರಕಾರಗಳಲ್ಲಿ ಇರುವ ವ್ಯತ್ಯಾಸವನ್ನೂ ವಿವರಿಸಿ ಹೇಳಿದರು.

`ಕೂಚಿಪುಡಿ ನಾಟ್ಯ ಕುಮುದಿನಿ~, `ಅಭಿನಯ ಚಂದ್ರಿಕಾ~ ಇತ್ಯಾದಿ ಗ್ರಂಥಗಳನ್ನು ರಚಿಸಿರುವ ಸಂಶೋಧಕ, ಬರಹಗಾರ ಪಸುಮರ್ತಿ ಶ್ರೀನಿವಾಸ ಶರ್ಮಾ `ಉಷಾ ಪರಿಣಯಂ~ ನೃತ್ಯರೂಪಕದ ಕುರಿತು ವಿವರಿಸಿದರು. `ದಶಾವತಾರ ಶಬ್ದಂ~ವನ್ನು ಉತ್ಕೃಷ್ಟ ಅಭಿನಯದೊಂದಿಗೆ ಪ್ರದರ್ಶಿಸಿದರು.

ಬೆಂಗಳೂರಿನ ಹಿರಿಯ ಗುರು ವೀಣಾ ಮೂರ್ತಿ ವಿಜಯ್ ತಮ್ಮ ಶಿಷ್ಯೆ ಸುಹಾಸಿನಿ ಅವರ ಜತೆ ಭರತನಾಟ್ಯ ಮತ್ತು ಕೂಚಿಪುಡಿಯಲ್ಲಿ ಇರುವ ಸಮಾನ ಅಂಶಗಳು ಕುರಿತು ಪ್ರಾತ್ಯಕ್ಷಿಕೆ ಸಹಿತ ವಿವರಿಸಿದರು. ಅನಂತಪುರದ ಗುರು ಶಿವಪ್ರಸಾದ್ `ಪದಂ~ ಪ್ರದರ್ಶಿಸಿ ಕೂಚಿಪುಡಿಯಲ್ಲಿ ಅಭಿನಯಕ್ಕೆ ಇರುವ ಮಹತ್ವ ತಿಳಿಸಿಕೊಟ್ಟರು.

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಕೂಚಿಪುಡಿ ಜ್ಯೂನಿಯರ್ ಪರೀಕ್ಷೆಗಾಗಿ ಅಖಿಲ ಕರ್ನಾಟಕ ಕೂಚಿಪುಡಿ ಫೆಡರೇಷನ್ ಜತೆ ಡಾ. ಸರಸ್ವತಿ ರಜತೇಶ್ ರಚಿಸಿರುವ ಪುಸ್ತಕದ ಇಂಗ್ಲಿಷ್ ಅನುವಾದವನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಹಿರಿಯ ನೃತ್ಯ ಗುರುಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಸಂಜೆಯ ಕಾರ್ಯಕ್ರಮ ನಾಟ್ಯಸರಸ್ವತಿ ತಂಡದ ಪೂರ್ವರಂಗ ವಿಧಿಯಿಂದ ಆರಂಭವಾಯಿತು. ನರ್ತನ ಸಂಸ್ಥೆಯ ಅನುಪಮಾ (ಗುರು: ಸುಧಾ ಶ್ರೀಧರ್), ಶ್ರೀವಿದ್ಯಾ (ಗುರು: ರಮಾದೇವಿ ಹೈದರಾಬಾದ್), ಕಾವ್ಯ (ಗುರು: ಶಿವ ಪ್ರಸಾದ್), ರಾಜರಾಜೇಶ್ವರಿ ಕಲಾ ನಿಕೇತನ (ಗುರು: ವೀಣಾ ಮೂರ್ತಿ), ನಾಟ್ಯನಿನಾದ (ಗುರು: ಧರಣಿ) ಮತ್ತು ಮಂಜುಳಾ (ನಾಟ್ಯ ಸರಸ್ವತಿ) ಪ್ರದರ್ಶನ ನೀಡಿದರು.

ನಾಟ್ಯ ಸರಸ್ವತಿ ತಂಡದ ಭಾಮಾ ಕಲಾಪಂ ನೃತ್ಯ ರೂಪಕ ಸಂಜೆಯ ಕಾರ್ಯಕ್ರಮದ ಹೈಲೈಟ್ ಆಗಿತ್ತು. ಡಾ. ಸರಸ್ವತಿ ಸತ್ಯಭಾಮೆಯಾಗಿ, ಅನುಪಮಾ ಕೃಷ್ಣನಾಗಿ ಮನೋಜ್ಞ ನೃತ್ಯ ಪ್ರದರ್ಶಿಸಿದರು. ಗುರು ಲಕ್ಷ್ಮಿಮೂರ್ತಿ ಮತ್ತು ಪ್ರಸನ್ನ ಅತಿಥಿಯಾಗಿದ್ದರು. ಜ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT