ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಉತ್ಪನ್ನ ವ್ಯಾಪಾರಕ್ಕೆ ಹೈಟೆಕ್ ಸ್ಪರ್ಶ

Last Updated 4 ಜನವರಿ 2011, 9:55 IST
ಅಕ್ಷರ ಗಾತ್ರ

ಚಾಮರಾಜನಗರ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಧ್ಯ ವರ್ತಿಗಳ ಶೋಷಣೆಯಿಂದ ಅನ್ನದಾತನ ಬದುಕು ಬರಡಾಗುತ್ತಿದ್ದು, ಸದ್ಯದಲ್ಲೇ ಇದಕ್ಕೆ ಕಡಿವಾಣ ಬೀಳಲಿದೆ.
ಕೃಷಿ ಹುಟ್ಟುವಳಿಯ ವ್ಯಾಪಾರಕ್ಕೆ ಹೈಟೆಕ್ ಸ್ಪರ್ಶ ನೀಡಲು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸಿದ್ಧತೆ ನಡೆದಿದೆ. ಮೂರ್ನಾಲ್ಕು ತಿಂಗಳೊಳಗೆ ಗಣಕೀಕೃತ ಟೆಂಡರ್ ಪದ್ಧತಿ ಜಾರಿಗೊಳ್ಳಲಿದೆ. ಸಂಪೂರ್ಣ ವಹಿವಾಟು ಪಾರದರ್ಶಕವಾಗಿ ನಡೆಯಲಿದೆ. ಹಳೆಯ ಟೆಂಡರ್ ಪದ್ಧತಿಯಿಂದ ರೈತರಿಗೆ ಆಗುತ್ತಿದ್ದ ಅನ್ಯಾಯ ತಪ್ಪಲಿದೆ.

ಎಪಿಎಂಸಿಯಲ್ಲಿ ಕಳೆದ ವರ್ಷ ವಾರ್ಷಿಕ ವಹಿವಾಟು 1.25 ಕೋಟಿ ರೂಪಾಯಿ ದಾಟಿತ್ತು. ಪ್ರಸ್ತುತ ಇಲ್ಲಿಯವರೆಗೂ 70 ಲಕ್ಷ ರೂನಷ್ಟು ವಹಿವಾಟು ನಡೆದಿದೆ. ಹಿಂದಿನ ದಾಖಲೆ ಕೂಡ ಮೀರಲಿದೆ ಎನ್ನುವುದು ಸಿಬ್ಬಂದಿಯ ಲೆಕ್ಕಾಚಾರ. ಮಾರುಕಟ್ಟೆಗೆ ಮುಖ್ಯವಾಗಿ ಬೆಲ್ಲ ಮತ್ತು ಅರಿಶಿಣ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದೆ. ಉಳಿದಂತೆ ತೆಂಗಿನ ಕಾಯಿ, ಈರುಳ್ಳಿ, ಅಡಿಕೆ ಮತ್ತು ತರಕಾರಿ ವಹಿವಾಟು ನಡೆಯುತ್ತಿದೆ. ಆದರೆ, ಹಳೆಯ ಟೆಂಡರ್ ಪದ್ಧತಿಯಲ್ಲಿದ್ದ ದೋಷದಿಂದ ರೈತರು ಮತ್ತು ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದರು.ಸಿಬ್ಬಂದಿಗೂ ಅನಗತ್ಯವಾಗಿ ಸಮಯ ವ್ಯಯವಾಗುತ್ತಿತ್ತು. ಇದೆ ಲ್ಲದ್ದಕ್ಕೂ ಈಗ ಇ-ಟೆಂಡರ್ ಪದ್ಧತಿಯಿಂದ ಮುಕ್ತಿ ಸಿಗಲಿದೆ.

ಲಾಟ್‌ಗಳ ಟೆಂಡರ್ ಸ್ಲಿಪ್ ಜೋಡಣೆಯಲ್ಲಿ ದೋಷ ಕಂಡುಬರುತ್ತಿದ್ದ ಪರಿಣಾಮ ರೈತರಿಗೆ ತೊಂದರೆ ಹೆಚ್ಚಿತ್ತು. ಜತೆಗೆ, ರಶೀದಿಗಳಲ್ಲಿ ತಪ್ಪುಬರಹ ಇಣುಕುತ್ತಿತ್ತು. ಗೌಪ್ಯತೆಯೇ ಇರುತ್ತಿರಲಿಲ್ಲ. ಲೆಕ್ಕಪತ್ರ ನಿರ್ವಹಣೆಯಲ್ಲೂ ತಪ್ಪು ಗೋಚರಿಸುತ್ತಿತ್ತು. ಇವೆಲ್ಲದಕ್ಕೂ ಈಗ ಪರಿಹಾರ ಸಿಗಲಿದೆ.

ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಇ-ಟೆಂಡರ್ ಪದ್ಧತಿ ಅಳವಡಿಸಿದ ಕೀರ್ತಿ ಮೈಸೂರು ಎಪಿಎಂಸಿಗೆ ಸಲ್ಲುತ್ತದೆ. ಕೋಟ್ಯಂತರ ರೂ ವಹಿವಾಟು ನಡೆಸುವ ಮಾರುಕಟ್ಟೆಗಳಲ್ಲಿ ಈಗಾಗಲೇ ಈ ಪದ್ಧತಿಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅಂತೆಯೇ, ಇಲ್ಲಿನ ಮಾರುಕಟ್ಟೆಯಲ್ಲಿಯೂ ಅನುಷ್ಠಾನಗೊಳ್ಳುತ್ತಿದ್ದು, ರೈತರಿಗೆ ವರದಾನ ವಾಗಲಿದೆ.

ಗಣಕೀಕೃತ ಟೆಂಡರ್ ಹೇಗೆ?: ಗ್ರಾಮೀಣ ಪ್ರದೇಶ ದಿಂದ ರೈತರು ಮಾರುಕಟ್ಟೆಗೆ ಕೃಷಿ ಉತ್ಪನ್ನ ತರುತ್ತಾರೆ. ಅವರಿಗೆ ಎಪಿಎಂಸಿಯ ಪ್ರವೇಶದ್ವಾರದ ಬಳಿಯೇ ಗಣಕಯಂತ್ರದ ಮೂಲಕ ಉತ್ಪನ್ನದ ಪ್ರಮಾಣ ದಾಖಲಿಸಿ ಪ್ರವೇಶ ಪತ್ರ ನೀಡಲಾಗುತ್ತದೆ.

ಈ ಪತ್ರದ ಮೇಲ್ಭಾಗದ ಪ್ರತಿಯನ್ನು ರೈತ ತನ್ನ ಬಳಿಯೇ ಇಟ್ಟುಕೊಳ್ಳುವುದು ಕಡ್ಡಾಯ. ಕೆಳಭಾಗದ ಪ್ರತಿಯಲ್ಲಿ ಉತ್ಪನ್ನದ ಲಾಟ್ ಸಂಖ್ಯೆ ನಮೂದಾಗಿರುತ್ತದೆ. ಅದನ್ನು ಸಂಬಂಧಪಟ್ಟ ದಲಾಲರ ಅಂಗಡಿ ಮುಂದೆ ಲಗತ್ತಿಸಬೇಕು. ಟೆಂಡರ್‌ಗೆ ಸೂಕ್ತ ಸಮಯ ನಿಗದಿ ಗೊಳಿಸಲಾಗುತ್ತದೆ. ಆ ಅವಧಿಯಲ್ಲೇ ಕೃಷಿ ಉತ್ಪನ್ನ ತರಬೇಕು. ಸಮಯ ಮೀರಿ ಬಂದರೆ ಆವಕವಾಗುವ ಹುಟ್ಟುವಳಿಯನ್ನು ಅಂದಿನ ಟೆಂಡರ್‌ಗೆ ಪರಿಗಣಿಸುವುದಿಲ್ಲ. ಜತೆಗೆ, ಒಂದು ನಿರ್ದಿಷ್ಟ ಅವಧಿಯೊಳಗೆ ಟೆಂಡರ್ ಧಾರಣೆ ಹೆಚ್ಚಿಸಲು ಖರೀದಿದಾ ರರಿಗೆ ಅವಕಾಶವಿದೆ. ಆದರೆ, ಕಡಿಮೆ ಮಾಡಲು ಮಾತ್ರ ಬರುವುದಿಲ್ಲ. ನಿಗದಿತ ವೇಳೆಯೊಳಗೆ ಟೆಂಡರ್ ದಾಖಲಿಸಬೇಕು. ತಪ್ಪಿದರೆ ಧಾರಣೆ ಪರಿಗಣಿಸುವುದಿಲ್ಲ.

ನಂತರ, ಎಪಿಎಂಸಿ ಸಿಬ್ಬಂದಿಯಿಂದ ನಿಗದಿತ ವೇಳೆಗೆ ಟೆಂಡರ್ ಘೋಷಣೆ ಯಾಗು ತ್ತದೆ. ಘೋಷಣಾ ಪ್ರತಿ(ಡಿಕ್ಲೆರೇಷನ್ ಪ್ರತಿ) ಯನ್ನು ಧ್ವನಿವರ್ಧಕದ ಮೂಲಕ ಬಿತ್ತರಿಸಲಾಗುತ್ತದೆ. ಇದರ ಪ್ರತಿಯನ್ನು ವರ್ತಕರು ಮತ್ತು ದಲಾಲರಿಗೆ ನೀಡಲಾಗುತ್ತದೆ.

ಮೊಬೈಲ್‌ನಲ್ಲೂ ಟೆಂಡರ್ ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆಯುವ ಅವಕಾಶವಿದೆ. ಆದರೆ, ಜಿಪಿಆರ್‌ಎಸ್ ವ್ಯವಸ್ಥೆ ಹೊಂದಿರಬೇಕು. ಟೆಂಡರ್ ಘೋಷಣೆ ಬಳಿಕ ರೈತರು, ಸಾರ್ವಜನಿಕರು, ದಲಾಲರು ಹಾಗೂ ಖರೀದಿದಾರರು ತಾವು ದಾಖಲೆ ಮಾಡಿದಂಥ ಧಾರಣೆ, ಹಿಂದಿನ ದಿನಗಳಲ್ಲಿ ಇದ್ದ ಉತ್ಪನ್ನಗಳ ಧಾರಣೆ ಸೇರಿದಂತೆ ವಿವಿಧ ಮಾಹಿತಿ ಪಡೆಯಲು ಅವಕಾಶವಿದೆ.
‘ಗಣಕೀಕೃತ ಟೆಂಡರ್ ಅನುಷ್ಠಾನ ಸಂಬಂಧ ಕಿಯೋನಿಕ್ಸ್‌ನೊಂದಿಗೆ ಚರ್ಚಿಸಲಾ ಗಿದೆ. ಸದ್ಯದಲ್ಲೇ ಇದಕ್ಕೆ ಚಾಲನೆ ದೊರೆಯ ಲಿದೆ. ಇದರಿಂದ ರೈತರಿಗೆ ಅನುಕೂಲ ವಾಗಲಿದೆ’ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಎಲ್. ಶ್ರೀಕಂಠಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT