ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಉತ್ಪನ್ನಗಳಿಗೂ ಆನ್‌ಲೈನ್ ವಹಿವಾಟು

Last Updated 3 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (ಎಪಿಎಂಸಿ) ಬೆಲ್ಲದ ಧಾರಣೆ ಕುಸಿಯುತ್ತಿದ್ದಾಗ ದೂರದ ಬೀದರ್‌ನ ವ್ಯಾಪಾರಿ ಮಧ್ಯಪ್ರವೇಶ! ಒಳ್ಳೆಯ ದರಕ್ಕೆ 100 ಟನ್ ಬೆಲ್ಲ ಖರೀದಿಸಿ, ಬೆಲೆ ಕುಸಿತಕ್ಕೆ ಬ್ರೇಕ್ ಹಾಕುತ್ತಾರೆ. ಬೆಲ್ಲ ತಂದ ರೈತನ ಮುಖದಲ್ಲಿ ಮಂದಹಾಸ. ಅಬ್ಬಾ! ಬದುಕಿದೆ ಎನ್ನುವ ಭಾವ. ಆದರೆ, ಮಂಡ್ಯ ವರ್ತಕರಿಗೆ ಮಾತ್ರ `ನಿರೀಕ್ಷಿತ ಲಾಭ ಸಿಗಲಿಲ್ಲವಲ್ಲ' ಎನ್ನುವ ಬೇಸರ.

ಇದೇನು ಕಥೆ ಎಂದು ಗಾಬರಿ ಆಗಬೇಡಿ. ಇಂತಹ ಪ್ರಯತ್ನ ರಾಜ್ಯದಲ್ಲಿ ಸಾಕಾರಗೊಳ್ಳುವ ಕಾಲ ಸನಿಹದಲ್ಲಿದೆ. ಈ ಸಲುವಾಗಿ ಸಹಕಾರ ಇಲಾಖೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.

ಹಾಸನದ ಆಲೂಗೆಡ್ಡೆಯನ್ನು ಗುಲ್ಬರ್ಗದ ವರ್ತಕ ತಮ್ಮ ಮನೆಯಿಂದಲೇ ಖರೀದಿ ಮಾಡಬಹುದು. ಅಲ್ಲಿಂದಲೇ ಅದನ್ನು ಮಾರಾಟ ಕೂಡ ಮಾಡಬಹುದು. ಇಂತಹ ಆನ್‌ಲೈನ್ ವ್ಯಾಪಾರ, ರಾಜ್ಯದ ಪ್ರಾಥಮಿಕ ಹಂತದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ.

ವರ್ತಕನಿಂದ ವರ್ತಕನಿಗೆ, ವರ್ತಕನಿಂದ ಸಂಸ್ಕರಣೆಗೆ (ಕೈಗಾರಿಕೆಗಳಿಗೆ) ಮಾರಾಟ ಮಾಡುವ 2ನೇ ಹಂತದ ಮಾರುಕಟ್ಟೆ ವ್ಯವಹಾರವನ್ನು ರಾಷ್ಟ್ರೀಯ ಕೃಷಿ ಉತ್ಪನ್ನ ವಿನಿಮಯ ಕೇಂದ್ರ ರಾಜ್ಯದ ಕೆಲವು ಕಡೆ ಆನ್‌ಲೈನ್ ಮೂಲಕ ಮಾಡುತ್ತಿದೆ. ಆದರೆ, ರೈತನಿಂದ ನೇರವಾಗಿ ವರ್ತಕನಿಗೆ ತಲುಪಿಸುವ ಪ್ರಾಥಮಿಕ ಹಂತದ ವ್ಯಾಪಾರ ಆನ್‌ಲೈನ್ ರೂಪ ಪಡೆಯುತ್ತಿರುವುದು ಮೊದಲು.

ವೈಜ್ಞಾನಿಕ ಬೆಲೆ ಸಿಗದೆ ಕಂಗಾಲಾಗಿರುವ ರೈತರಿಗೆ ಕೃಷಿ ಮಾರಾಟ ಸುಧಾರಣಾ ವ್ಯವಸ್ಥೆ ಒಂದು ವರದಾನವಾಗಲಿದೆ ಎನ್ನುತ್ತಾರೆ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ.ವಿ.ಕೃಷ್ಣರಾವ್.

`ವರ್ತಕರು ಅಕ್ರಮ ವ್ಯೆಹ ರಚಿಸಿಕೊಂಡು ಬೆಲೆ ನಿಗದಿ ಮಾಡುವ ಕಾಲ ಇನ್ನು ನೇಪಥ್ಯಕ್ಕೆ ಸರಿಯಲಿದೆ. ಯಾರು? ಎಲ್ಲಿಂದ ಟೆಂಡರ್‌ನಲ್ಲಿ ಭಾಗವಹಿಸಿದ್ದಾರೆ. ಎಷ್ಟು ದರ ನಮೂದಿಸುತ್ತಿದ್ದಾರೆ ಎಂಬುದು ಮೊದಲೇ ತಿಳಿಯುವ ಕಾಲ ಕೂಡ ದೂರ ಆಗಲಿದೆ. ಮಾರಾಟದ ನಂತರ ಹಣಕ್ಕಾಗಿ ವರ್ತಕರ ಮುಂದೆ ಕೈಕಟ್ಟಿ ನಿಲ್ಲುವ ರೈತನ ದಯನೀಯ ಸ್ಥಿತಿ ಕೂಡ ಬದಲಾಗಲಿದೆ. ಅವನ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ವ್ಯವಸ್ಥೆ ಜಾರಿಯಾಗಲಿದೆ' ಎನ್ನುತ್ತಾರೆ ಕೃಷಿ ಮಾರಾಟ ಸುಧಾರಣಾ ಸಮಿತಿಯ ಅಧ್ಯಕ್ಷರೂ ಆದ ಸಹಕಾರ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಆರ್.ಮನೋಜ್.

ಮಾರುಕಟ್ಟೆ ವ್ಯವಹಾರಗಳಲ್ಲಿ ಪಾರದರ್ಶಕತೆ ಹೆಚ್ಚಿಸುವ `ರೈತ- ವರ್ತಕ' ಸ್ನೇಹಿ ವ್ಯವಸ್ಥೆ ಸಲುವಾಗಿ ಅಧ್ಯಯನ ಮಾಡಲು ಕೃಷಿ ಮಾರಾಟ ಸುಧಾರಣಾ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿ ರಾಜ್ಯ ಮತ್ತು ದೇಶದ ಹಲವು ಕಡೆ ಸುತ್ತಾಡಿ, ವರದಿಯನ್ನು ಸಿದ್ಧಪಡಿಸಿದೆ. ಅದನ್ನು ಸರ್ಕಾರ ಅಂಗೀಕರಿಸಿದ್ದು, ಅನುಷ್ಠಾನಕ್ಕೆ ಮುಂದಾಗಿದೆ.

ಇಡೀ ರಾಜ್ಯ ಒಂದು ಮಾರುಕಟ್ಟೆ: ಮಾರುಕಟ್ಟೆಗಳಿಗೆ ಈಗಿರುವ ಸೀಮಿತ ವ್ಯಾಪ್ತಿಯನ್ನು ವಿಸ್ತರಿಸಬೇಕು ಎನ್ನುವ ಸಲಹೆಯನ್ನು ಈ ಸಮಿತಿ ನೀಡಿದೆ. ರಾಜ್ಯದಲ್ಲಿನ ಮಾರುಕಟ್ಟೆಗಳನ್ನು ಒಟ್ಟುಗೂಡಿಸಿ, ಏಕ ಮಾರುಕಟ್ಟೆಯ ರೂಪ ನೀಡಬೇಕು. ರಾಜ್ಯದ ಯಾವುದೇ ಮೂಲೆಯಲ್ಲಿನ ಮಾರುಕಟ್ಟೆ ಅಥವಾ ಮಾರುಕಟ್ಟೆಯೆಂದು ಘೋಷಿಸುವ ಸ್ಥಳದಿಂದ ಆನ್‌ಲೈನ್ ವಹಿವಾಟಿಗೆ ಅನುಕೂಲ ಮಾಡಬೇಕು. ಇಡೀ ರಾಜ್ಯಕ್ಕೆ ಅನ್ವಯ ಆಗುವ ಹಾಗೆ ವರ್ತಕರಿಗೆ ಏಕೀಕೃತ ಪರವಾನಗಿ ನೀಡಬೇಕು (ಈಗಿರುವ ಪದ್ಧತಿ ಪ್ರಕಾರ ಪ್ರತಿ ಜಿಲ್ಲೆಗೂ ಪ್ರತ್ಯೇಕ ಪರವಾನಗಿ ಪಡೆಯಬೇಕು) ಎನ್ನುವ ಸಲಹೆಗಳನ್ನು ಸಮಿತಿ ನೀಡಿದೆ.

ಉಗ್ರಾಣ ಆಧಾರಿತ ಮಾರಾಟ: ಎಪಿಎಂಸಿ ಮಾತ್ರ ಮಾರುಕಟ್ಟೆಯಾಗದೆ, ಉಗ್ರಾಣಗಳನ್ನೂ ಉಪ ಮಾರುಕಟ್ಟೆ ಮಾಡಲು ಸಮಿತಿ ಸಲಹೆ ನೀಡಿದೆ. ರೈತರು ತಮ್ಮ ಹಳ್ಳಿ ಸಮೀಪದ ಉಗ್ರಾಣಕ್ಕೆ ಉತ್ಪನ್ನಗಳನ್ನು ಸಾಗಿಸುತ್ತಾರೆ. ಅಲ್ಲಿಂದಲೇ ಅವುಗಳನ್ನು ಮಾರಾಟ ಮಾಡಲು ಆನ್‌ಲೈನ್ ಸಹಾಯ ಕೋರಬಹುದು. ದೂರದ ಯಾವುದೇ ಜಾಗದಲ್ಲಿನ ವರ್ತಕನಿಗೆ ಉತ್ಪನ್ನ ಇಷ್ಟವಾದರೆ ಆನ್‌ಲೈನ್‌ನಲ್ಲೇ ಖರೀದಿ ಮಾಡಲು ಅವಕಾಶ ಇರುತ್ತದೆ. ಇದರಿಂದ ಸ್ಪರ್ಧಾತ್ಮಕ ದರ ಕೂಡ ಸಿಗುತ್ತದೆ ಎಂದು ಸಮಿತಿಯು ತನ್ನ ಶಿಫಾರಸ್ಸಿನಲ್ಲಿ ತಿಳಿಸಿದೆ. ಉಗ್ರಾಣಗಳಲ್ಲಿ ರೈತರ ಉತ್ಪನ್ನಗಳನ್ನು ವೈಜ್ಞಾನಿಕವಾಗಿ ದಾಸ್ತಾನು ಮಾಡುವ ತಂತ್ರಜ್ಞಾನದ ಬಗ್ಗೆಯೂ ಸಮಿತಿ ಪ್ರಸ್ತಾಪಿಸಿದೆ.

ಉತ್ಪನ್ನ ನೋಡದೆ ಖರೀದಿ ಹೇಗೆ?
ಈ ವಿಷಯದಲ್ಲಿ ಖರೀದಿದಾರನಿಗೆ ಅನುಮಾನ ಸಹಜ. ಆದರೆ, ಉತ್ಪನ್ನಗಳ ಗುಣಮಟ್ಟ ಪರಿಶೀಲಿಸಿ, ಪ್ರಮಾಣ ಪತ್ರ ನೀಡಲು ಪರಿಣಿತ ಸಂಸ್ಥೆಯನ್ನು ಗುರುತಿಸಲಾಗುತ್ತದೆ. ಅಂತಹ ಸಂಸ್ಥೆಗಳಿಗೆ ಅಂತರರಾಷ್ಟ್ರೀಯ ಮಾನ್ಯತೆ ಕೂಡ ಇರುತ್ತದೆ. ಅವು ಕೊಡುವ ವರದಿಗಳು ಆನ್‌ಲೈನ್‌ನಲ್ಲಿ ಸಿಗುವ ಹಾಗೆ ಮಾಡಲಾಗುತ್ತದೆ. ವರದಿಗಳ ಆಧಾರದ ಮೇಲೆ ವರ್ತಕರು ತಮ್ಮ ಮನೆಯಿಂದಲೇ ಉತ್ಪನ್ನಗಳನ್ನು ಖರೀದಿ ಮಾಡುತ್ತಾರೆ. ಹಾಗೆ ಅಲ್ಲಿಂದಲೇ ರೈತರ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡುತ್ತಾರೆ. ಗುಣಮಟ್ಟ ಪ್ರಮಾಣಪತ್ರ ನೀಡುವ ವಿಷಯದಲ್ಲಿ ಮೋಸ ಆದರೆ ಕಠಿಣ ಕ್ರಮ ತೆಗೆದುಕೊಳ್ಳುವ ವ್ಯವಸ್ಥೆ ಜಾರಿಯಲ್ಲಿರಬೇಕು ಎಂದು ಸಮಿತಿ ಶಿಫಾರಸಿನಲ್ಲಿ ತಿಳಿಸಿದೆ.

ಖಾಸಗಿ ಮಾರುಕಟ್ಟೆ: ಸರ್ಕಾರದ ಹಿಡಿತದಲ್ಲಿರುವ ಎಪಿಎಂಸಿಗಳ ಜತೆಗೆ ಖಾಸಗಿ ಮಾರುಕಟ್ಟೆಗಳ ಅಗತ್ಯವನ್ನೂ ಸಮಿತಿ ಒತ್ತಿ ಹೇಳಿದೆ. 2007ರಲ್ಲೇ ಕಾಯ್ದೆಗೆ ತಿದ್ದುಪಡಿ ಮಾಡಿ ಖಾಸಗಿ ಮಾರುಕಟ್ಟೆಗಳಿಗೆ ಅವಕಾಶ ಕಲ್ಪಿಸಿದರೂ ಹೆಚ್ಚು ಸಂಸ್ಥೆಗಳು ಆಸಕ್ತಿ ತೋರಲಿಲ್ಲ. ಅಗತ್ಯ ಇರುವ ಕಡೆ ಖಾಸಗಿ ಮಾರುಕಟ್ಟೆಗಳ ಸ್ಥಾಪನೆಗೆ ಉತ್ತೇಜನ ನೀಡಬೇಕು. ಖಾಸಗಿಯವರಿಗೆ ಮಾರುಕಟ್ಟೆ ಶುಲ್ಕದಿಂದ ವಿನಾಯಿತಿ ನೀಡಬೇಕು. ಖಾಸಗಿಯವರ ಸಹಕಾರದಲ್ಲಿ ಉಗ್ರಾಣಗಳ ಸ್ಥಾಪನೆ ಕೂಡ ಆಗಬೇಕು ಎನ್ನುವ ಸಲಹೆಯನ್ನು ಸಮಿತಿ ನೀಡಿದೆ.

ಇ-ಟೆಂಡರಿಂಗ್: `ರಾಜ್ಯದ 45 ಎಪಿಎಂಸಿಗಳಲ್ಲಿ ಇ-ಟೆಂಡರಿಂಗ್ ವ್ಯವಸ್ಥೆ ಇದ್ದರೂ, ಪಾರದರ್ಶಕವಾಗಿ ನಡೆಯುತ್ತಿಲ್ಲ ಎನ್ನುವ ದೂರುಗಳು ಇವೆ. ನಿರ್ದಿಷ್ಟ ವ್ಯಾಪ್ತಿಯ ವರ್ತಕರು ಮಾತ್ರ ಸಂಬಂಧಪಟ್ಟ ಕಿಯೋಸ್ಕ್‌ಗಳ ಮೂಲಕ ಇ-ಟೆಂಡರಿಂಗ್‌ನಲ್ಲಿ ಭಾಗವಹಿಸುವ ವ್ಯವಸ್ಥೆ ಇದೆ. ಇದರಲ್ಲಿ ವರ್ತಕರು ಪದಾರ್ಥಗಳ ಬೆಲೆಗಳನ್ನು ಮೊದಲೇ ನಿರ್ಧರಿಸಿ, ಟೆಂಡರ್‌ನಲ್ಲಿ ಭಾಗವಹಿಸುವ ಸಾಧ್ಯತೆಯೇ ಹೆಚ್ಚು. ಈ ಕಾರಣಕ್ಕೆ ಇದು ಕೂಡ ರೈತರಿಗೆ ಸ್ಪರ್ಧಾತ್ಮಕ ದರ ಕೊಡಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಪಾರದರ್ಶಕ ವ್ಯವಸ್ಥೆಯತ್ತ ನಾವು ಮುಖ ಮಾಡಬೇಕಾಗಿದೆ' ಎಂದು ಎಪಿಎಂಸಿ ಅಧಿಕಾರಿಗಳು ಹೇಳುತ್ತಾರೆ.

ಮಾರುಕಟ್ಟೆ ಸುಧಾರಣಾ ಸಮಿತಿಯ ಶಿಫಾರಸುಗಳ ಅನುಷ್ಠಾನಕ್ಕೆ ಸರ್ಕಾರ ಆಸಕ್ತಿ ತೋರಿದೆ. ಸಮಿತಿಯ ವರದಿ ಅನುಷ್ಠಾನಕ್ಕೆ ಈ ಸಲದ ಬಜೆಟ್‌ನಲ್ಲಿ ರಾಜ್ಯ ಸರ್ಕಾರ 10 ಕೋಟಿ ರೂಪಾಯಿ ಮೀಸಲಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT