ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾರ್ಯಕ್ಕೆ ಶ್ರೀಕಾರ ಮಣ್ಣೆತ್ತಿನ ಅಮಾವಾಸ್ಯೆ

Last Updated 8 ಜುಲೈ 2013, 5:18 IST
ಅಕ್ಷರ ಗಾತ್ರ

ಶಿಗ್ಗಾವಿ: ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಬಿತ್ತನೆ ಕಾರ್ಯಕ್ಕೆ ಸಜ್ಜಾಗುವ ರೈತಾಪಿ ವರ್ಗ ಕೃಷಿ ಚಟುವಟಿಕೆಗಳ ಅವಿಭಾಜ್ಯ ಅಂಗವೆನಿಸಿ ಎತ್ತುಗಳನ್ನು ಕೃತಜ್ಞತೆ ಸಲ್ಲಿಸುವುದು ಸಂಪ್ರದಾಯವಾಗಿದೆ. ಹೀಗಾಗಿ ಜ್ಯೇಷ್ಠ ಮಾಸದ ಅಮಾವಾಸ್ಯೆಯನ್ನು `ಮಣ್ಣೆತ್ತಿನ ಅಮಾವಾಸ್ಯೆ' ಎಂದು ಕರೆಯಲಾಗುತ್ತಿದ್ದು, ಈ ದಿನ ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ಪೂಜಿಸಲಾಗುತ್ತದೆ.

ಕಾರ ಹುಣ್ಣಿಮೆ ಹಾಗೂ ಮಣ್ಣೆತ್ತಿನ ಅಮಾವಾಸ್ಯೆ ರೈತಾಪಿ ವರ್ಗಕ್ಕೆ ಮಹತ್ವದ ಆಚರಣೆಗಳು. ಆಚರಣೆಗಳು  ಕೃಷಿ ಕಾರ್ಯದಲ್ಲಿ ರೈತರು ಉತ್ಸಾಹದಿಂದ ಪಾಲ್ಗೊಳ್ಳಲು ಉತ್ತೇಜನ ನೀಡುತ್ತವೆ. ಅಲ್ಲದೇ, ಹೆಚ್ಚಿನ ಇಳುವರಿಗಾಗಿ ಪ್ರಾರ್ಥಿಸಿ ಎತ್ತುಗಳನ್ನು (ಬಸವಣ್ಣ) ಆರಾಧಿಸುವುದು ವಾಡಿಕೆಯಾಗಿದೆ.

ಈ ದಿನದಂದು ಗದ್ದುಗೆ, ಮಂಟಪಗಳಿಗೆ ಮಾವಿನ ತೋರಣ, ವಿವಿಧ ಹೂಗಳಿಂದ ಅಲಂಕರಿಸಿ, ಅದರಲ್ಲಿ ಮಣ್ಣಿನಿಂದ ತಯಾರಿಸಿದ ಎತ್ತಿನ ಮೂರ್ತಿಗಳನ್ನು ಇಡಲಾಗುತ್ತದೆ. ನಂತರ ಹಣ್ಣು, ಕಾಯಿ, ಕಡಬು, ಹೋಳಿಗೆ, ಬೇಳೆ ಹುಗ್ಗಿ, ಗೋದಿ ಹುಗ್ಗಿ, ಕರ್ಚಿಕಾಯಿ, ಕರೆಗಡಬು, ರೊಟ್ಟಿ, ಬಗೆಬಗೆಯ ಚಟ್ನಿಗಳು ಸೇರಿದಂತೆ ವಿವಿಧ ಪದಾರ್ಥಗಳನ್ನು ತಯಾರಿಸಿ ನೈವೇದ್ಯ ಅರ್ಪಿಸಲಾಗುತ್ತದೆ. ಮಹಿಳೆಯರು ಆರತಿ ಬೆಳಗಿ ಪೂಜೆ ಸಲ್ಲಿಸುತ್ತಾರೆ. ನಂತರ ನೆರೆಹೊರೆ ಜನತೆಗೆ ಪ್ರಸಾದ ವಿತರಿಸುವ ಪದ್ಧತಿಯನ್ನೂ ಕಾಣಬಹುದು.

ಮಣ್ಣೆತ್ತಿನ ಅಮಾವಾಸ್ಯೆ ದಿನದಂದು ಮಹಿಳೆಯರು ಮನೆಯಲ್ಲಿ ಪೂಜಾ ಕಾರ್ಯದಲ್ಲಿ ತೊಡಗಿದರೆ, ರೈತರು ತಲೆ ಮೇಲೆ ಕಂಬಳಿ ಹಾಕಿಕೊಂಡು ತಮ್ಮ ಹೊಲ-ಗದ್ದೆಗಳನ್ನು ಪೂಜಿಸುತ್ತಾರೆ. ಪೂಜೆ ಮಾಡಿದ ಆಹಾರ ಪದಾರ್ಥಗಳನ್ನು ಹೊಲದ ತುಂಬೆಲ್ಲ `ಚರಗ' ಚಲ್ಲುತ್ತಾರೆ. ನಂತರ ತನ್ನ ಕೃಷಿಗೆ ಸಹಕಾರಿಯಾಗುವ ಬಿತ್ತನೆಯ ಕೂರಿಗೆ, ಎಡೆಕುಂಟೆ, ನೇಗಿಲು, ಗಳೆ ಸಾಮಾನುಗಳು ಸೇರಿದಂತೆ ಎಲ್ಲ ಕೃಷಿ ಉಪಕರಣಗಳಿಗೆ ಪೂಜೆ ಮಾಡುವುದು ಜಿಲ್ಲೆಯ ವಿಶೇಷ ಎಂದು ರೈತ ಕಲ್ಲಪ್ಪ ವಿವರಿಸುತ್ತಾರೆ.

ನಮ್ಮ ಕುಟುಂಬ ನಾಗರ ಮೂರ್ತಿ ಹಾಗೂ ಎತ್ತುಗಳ ಮಣ್ಣಿನ ಮೂರ್ತಿಗಳನ್ನು ತಯಾರಿಸಿ ಮಾರುವ ಕಾಯಕದಲ್ಲಿ ನಿರತವಾಗಿದೆ. ಪಾರಂಪರಿಕವಾದ ಈ ಕಾಯಕವನ್ನು ನಮ್ಮ ಮಕ್ಕಳಿಗೂ ಕಲಿಸಲಾಗುತ್ತಿದೆ ಎಂದು ಕಲಾವಿದ ಮಾರುತಿ ಮಣಿಕಟ್ಟಿ ಹಾಗೂ ನಿರ್ಮಲಾ ಮಣಕಟ್ಟಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT