ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಪಂಪ್‌ಸೆಟ್‌ಗೆ ಸೋಲಾರ್: ಶೆಟ್ಟರ್

ಸಿದ್ದರಾಮಯ್ಯ ಸಿಎಂ: ಹಣೆಬರಹದಲ್ಲಿ ಬರೆದಿಲ್ಲ
Last Updated 23 ಏಪ್ರಿಲ್ 2013, 9:38 IST
ಅಕ್ಷರ ಗಾತ್ರ

ಗದಗ: ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ಅಳವಡಿಸಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ನರೇಗಲ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ರೋಣ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಕೃಷಿ ಪಂಪ್‌ಸೆಟ್‌ಗಳನ್ನು ಅಳವಡಿಸುವ ಕಾರ್ಯ ಕೈಗೊಳ್ಳಲಾಗಿದೆ. ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುವುದು.

ಐದು ವರ್ಷದಲ್ಲಿ  ಹತ್ತು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 23  ನೀರಾವರಿ ಯೋಜನೆ ಪೂರ್ಣಗೊಳಿಸಲಾಗಿದೆ. ಆದರೆ ಕಾಂಗ್ರೆಸ್‌ನವರು ಯೋಜನೆಗೆ ಬರಿ ರೊಕ್ಕ ಹಾಕುತ್ತಿದ್ದರು, ಯೋಜನೆ ಮಾತ್ರ ಪೂರ್ಣಗೊಳ್ಳುತ್ತಿರಲಿಲ್ಲ. ಈವರೆಗೆ 16.50 ಲಕ್ಷ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಿಸಲಾಗಿದೆ. 15 ಸಾವಿರ ಕಿ.ಮೀ. ರಸ್ತೆ ನಿರ್ಮಾಣ ಮಾಡಲಾಗಿದೆ. ಆರ್ಥಿಕ ವ್ಯವಸ್ಥೆ ಸರಿದೂಗಿಸಿಕೊಂಡು ಹೋಗುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

  ಹಣೆಬರಹದಲ್ಲಿ ಬರೆದಿಲ್ಲ:  ಕಾಂಗ್ರೆಸ್ ಇದುವರೆಗೂ ಸಿಎಂ ಅಭ್ಯರ್ಥಿ ಪ್ರಕಟಿಸಿಲ್ಲ. ವೀರಪ್ಪ ಮೊಯ್ಲಿ, ಖರ್ಗೆ, ಧರಂಸಿಂಗ್, ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ, ಆಸ್ಕರ್ ಫರ್ನಾಂಡಿಸ್ ಹಾಗೂ ಗದುಗಿನ ಎಚ್.ಕೆ.ಪಾಟೀಲ ಸೇರಿದಂತೆ ಎಲ್ಲರೂ ಮುಖ್ಯಮಂತ್ರಿ ಆಕಾಂಕ್ಷಿಗಳು. ಅದರಲ್ಲಿ ಎಚ್.ಕೆ.ಪಾಟೀಲ ಗದಗ ಬಿಟ್ಟು ಎಲ್ಲೂ ಹೋಗಿಲ್ಲ. ಇನ್ನು ಸಿದ್ದರಾಮಯ್ಯ ಜನತಾಪರಿವಾರದಲ್ಲಿ ಇದ್ದಾಗ ಮುಖ್ಯಮಂತ್ರಿ ಆಗಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಸೇರಿದರು. ಆದರೆ ಕಾಂಗ್ರೆಸ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ. ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂಬುದು ಅವರ ಹಣೆಬರಹದಲ್ಲಿ ಬರೆದಿಲ್ಲ ಎಂದು ಲೇವಡಿ ಮಾಡಿದರು.

ಕೆಜೆಪಿಗೆ ಬಿಜೆಪಿ ನಾಶ ಮಾಡುವುದೇ ಗುರಿ. ಆದ್ದರಿಂದ ಕೆಜೆಪಿಗೆ ಮತ ಹಾಕಿದರೆ ವ್ಯರ್ಥ. ಬಿಜೆಪಿ ಟೀಕಿಸುವ ನೈತಿಕ ಹಕ್ಕು ಕಾಂಗ್ರೆಸ್‌ಗೆ ಇಲ್ಲ. ಕಾಂಗ್ರೆಸ್‌ನವರು ಕಾರಣ ಇಲ್ಲದೆ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರನ್ನು ಕೆಳಗಿಳಿಸಿದರು. ಬಂಗಾರಪ್ಪ ನಂತರ ವೀರಪ್ಪ ಮೊಯ್ಲಿ ಹೀಗೆ ಮೂರು ಮುಖ್ಯಮಂತ್ರಿ ಬದಲಾದರು. ಭ್ರಷ್ಟಾಚಾರ ಮತ್ತು ಡಿನೋಟಿಫಿಕೇಶನ್ ಹಗರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಬೇಕಾಯಿತು ಎಂದು ಸಮರ್ಥಿಸಿಕೊಂಡರು.

ಇದಕ್ಕೂ ಮುನ್ನ ಮಾತನಾಡಿದ ಸಚಿವ ಕಳಕಪ್ಪ ಬಂಡಿ, ಜನತೆ ಆರ್ಶೀವದಿಸಿದರೆ ರೋಣ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಎಚ್.ಎಸ್.ಸೋಂಪುರ, ಜಿ.ಪಂ. ಉಪಾಧ್ಯಕ್ಷ ರಮೇಶ ಮುಂದಿನಮನಿ, ಎ.ಆರ್.ಇನಾಂದರ್, ಅಶೋಕ ನವಲಗುಂದ, ಬಿ.ಎಂ.ಸಜ್ಜನವರ, ಪೊಲೀಸ್ ಪಾಟೀಲ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT