ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣ ಮೇಲೆ ಮೊಕದ್ದಮೆ ಹೂಡಲು ಅನುಮತಿ ಕೋರಿ ಅರ್ಜಿ

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಘೋಷಿತ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಮಂಜೂರಾತಿ ನೀಡಿ ಅಕ್ರಮ ಎಸಗಿದ್ದಾರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಅನುಮತಿ ಕೇಳಿ ಅಟಾರ್ನಿ ಜನರಲ್ ಜಿ.ಇ ವಹನ್ವತಿ ಅವರಿಗೆ ಬೆಂಗಳೂರಿನ ನಾಗರಿಕರೊಬ್ಬರು ಅರ್ಜಿ ಸಲ್ಲಿಸಿದ್ದಾರೆ.

ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಅರಣ್ಯ ಪ್ರದೇಶವನ್ನು ಗಣಿಗಾರಿಕೆಗೆ ಮಂಜೂರು ಮಾಡುವ ಮೂಲಕ ಅಕ್ರಮ ಎಸಗಿದ್ದಾರೆ ಎಂದು ಟಿ.ಜೆ. ಅಬ್ರಹಾಂ ಎಂಬುವವರು ಆರೋಪಿಸಿದ್ದಾರೆ. ಈ ಸಂಬಂಧ ಹಿಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ವರದಿಯನ್ನು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಅರಣ್ಯ ಪ್ರದೇಶ, ಪ್ರಾಣಿ- ಪಕ್ಷಿ ಧಾಮಗಳು ಹಾಗೂ ರಾಷ್ಟ್ರೀಯ ಉದ್ಯಾನಗಳನ್ನು ಘೋಷಿತ ಪ್ರದೇಶದ ವ್ಯಾಪ್ತಿಯಿಂದ ಹೊರಗಿಡಬಾರದೆಂದು ಸುಪ್ರೀಂ ಕೋರ್ಟ್ 2000ನೇ ಇಸವಿ ನವೆಂಬರ್ 13ರಂದು ನೀಡಿರುವ ತೀರ್ಪನ್ನು ಕೃಷ್ಣ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವರ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸಲು ಅಟಾರ್ನಿ ಜನರಲ್ ಅನುಮತಿ  ಅಗತ್ಯ ಎಂದು ಅರ್ಜಿದಾರರು ಹೇಳಿದ್ದಾರೆ.

ಲೋಕಾಯುಕ್ತ ವರದಿ ಆಧಾರದ ಮೇಲೆ ಕೃಷ್ಣ ಅವರ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸುವುದಕ್ಕೆ ಸುಪ್ರೀಂ ಕೋರ್ಟ್ ಜನವರಿ 27ರಂದು ತಡೆಯಾಜ್ಞೆ ನೀಡಿದೆ. ಕೃಷ್ಣ 1999ರಿಂದ  2004ರ ನಡುವೆ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಘೋಷಿತ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ ಆರೋಪಕ್ಕೆ ಒಳಗಾಗಿದ್ದಾರೆ. ಈ ಸಂಬಂಧದ ಲೋಕಾಯುಕ್ತ ವರದಿ ಹಿನ್ನೆಲೆಯಲ್ಲಿ ಕಾನೂನು ಕ್ರಮ ಜರುಗಿಸಲು ಹೈಕೋರ್ಟ್ ನೀಡಿದ ಅನುಮತಿಯನ್ನು ವಿದೇಶಾಂಗ ಸಚಿವರು ಸುಪ್ರೀಂ ಕೋರ್ಟ್‌ನಲ್ಲಿ ಜನವರಿ 24ರಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರದ ಖನಿಜ ಸಂಪತ್ತಿನ ನೀತಿಗೆ ಅನುಗುಣವಾಗಿ ತಾವು ಗಣಿಗಾರಿಕೆಗೆ ಅನುಮತಿ ನೀಡಿದ್ದಾಗಿ ಕೃಷ್ಣ ವಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT