ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ತೀರ್ಪು ರದ್ದತಿಗೆ ಆಗ್ರಹ

Last Updated 2 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ: ಕೃಷ್ಣಾ ನದಿ ನೀರು ಹಂಚಿಕೆ ಮಾಡುವಾಗ ನ್ಯಾ. ಬ್ರಿಜೇಶ್‌ ಕುಮಾರ್‌ ನೇತೃತ್ದದ ನ್ಯಾಯಮಂಡಳಿ ಭಾರಿ ಪ್ರಮಾದವೆಸಗಿರುವ ಹಿನ್ನೆಲೆ­ಯಲ್ಲಿ ಐತೀರ್ಪು ಅಧಿಸೂಚನೆ ಹೊರ­ಡಿಸ­­ಬಾರದೆಂದು ತೆಲಗು ದೇಶಂ ಪಕ್ಷವು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನು ಸೋಮವಾರ ಆಗ್ರಹಿಸಿದೆ.

ಕೃಷ್ಣಾ ನದಿ ನೀರು ವಿವಾದ ಇತ್ಯರ್ಥಪಡಿಸುವಾಗ ನ್ಯಾಯಮಂಡಳಿ ’ಸಹಜ ನ್ಯಾಯ ತತ್ವ’ ಪಾಲಿಸಿಲ್ಲ. ಅಲ್ಲದೆ, ಅಂತರರಾಜ್ಯ ನದಿ ನೀರು ಕಾಯ್ದೆ ಉಲ್ಲಂಘಿಸಿದೆ. ಈ ಕಾರಣ­ದಿಂದ ಮತ್ತೊಂದು ಹೊಸ ನ್ಯಾಯ­ಮಂಡಳಿ ರಚಿಸಬೇಕೆಂದು ತೆಲುಗು ದೇಶಂ ಮುಖಂಡ ಎನ್‌. ಚಂದ್ರಬಾಬು ನಾಯ್ಡು ನೇತೃತ್ವದ ನಿಯೋಗ ಒತ್ತಾಯಿಸಿದೆ.

ಅಂತರರಾಜ್ಯ ನದಿ ನೀರು ಕಾಯ್ದೆ­ಯಡಿ ಈಗಾಗಲೇ ಇತ್ಯರ್ಥವಾದ ಪ್ರಶ್ನೆಗಳನ್ನು ಪುನಃ ಕೆದಕಲು ಅವಕಾಶ­ವಿಲ್ಲ. ಆದರೆ, ಬ್ರಿಜೇಶ್‌ ಕುಮಾರ್‌ ನ್ಯಾಯಮಂಡಳಿಯು ಬಚಾವತ್‌ ಆಯೋಗದ ವ್ಯಾಪ್ತಿಯನ್ನು ಅತಿಕ್ರಮಿ­ಸಿದೆ. ಕೃಷ್ಣಾ ನದಿ ನೀರಿನ ಒಟ್ಟಾರೆ ಪ್ರಮಾಣ ಅಂದಾಜಿಸುವಾಗ ಕೆಲವು ಅವೈಜ್ಞಾನಿಕ ವಿಧಾನ ಅನುಸರಿಸಿದೆ ಎಂದು ರಾಷ್ಟ್ರಪತಿಗೆ ಸಲ್ಲಿಸಿರುವ ಮನವಿಯಲ್ಲಿ ಆರೋಪಿಸಲಾಗಿದೆ.

ಆಂಧ್ರ ಕೃಷ್ಣಾ ನದಿ ಕೆಳಗಿನ ಕೊನೆಯ ರಾಜ್ಯ. ಅತಿವೃಷ್ಟಿ, ಅನಾವೃಷ್ಟಿ ಸಮಯದಲ್ಲಿ ಅತೀ ಹೆಚ್ಚು ತೊಂದರೆಗೆ ಒಳಗಾಗುತ್ತಿದೆ. ಈ ಕಾರಣಕ್ಕೆ ಬಚಾವತ್‌ ಆಯೋಗವು ಹೆಚ್ಚುವರಿ ನೀರು ಬಳಕೆಗೆ ಅನುಮತಿ ನೀಡಿದೆ. ಇದು ಸಮಾನ ಹಂಚಿಕೆ ನ್ಯಾಯಕ್ಕೆ ಅನು­ಗುಣವಾಗಿದೆ. ಆದರೆ, ಕೃಷ್ಣಾ ನ್ಯಾಯ­ಮಂಡಳಿ– 2 ಹೆಚ್ಚುವರಿ ನೀರು ಹಂಚಿಕೆ ಪ್ರಶ್ನೆಯನ್ನು ಸೂಕ್ತ ವೇದಿಕೆಯಲ್ಲಿ ಪರಿಹರಿಸಿಕೊಳ್ಳಲು ಹೇಳಿದೆ. ಇದು ಅವೈಜ್ಞಾನಿಕ ಎಂದು ಟಿಡಿಪಿ ಪ್ರತಿಪಾದಿಸಿದೆ.

ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 519.6 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಲು ಅವಕಾಶ ನೀಡಿರುವ ನ್ಯಾಯಮಂಡಳಿ ಕ್ರಮ ಒಪ್ಪತಕ್ಕದಲ್ಲ. 519.6 ಮೀಟರ್‌ನಲ್ಲೇ 225 ಟಿಎಂಸಿ ಅಡಿ ನೀರು ಸಂಗ್ರಹಿಸಲು ಅವಕಾಶವಿದೆ. 2006– 07ರಲ್ಲಿ ಕರ್ನಾಟಕ 210 ಟಿಎಂಸಿ ಅಡಿ ನೀರು ಬಳಕೆ ಮಾಡಿದೆ ಎಂದು ಟಿಡಿಪಿ ಹೇಳಿದೆ.

ತುಂಗಾಭದ್ರ ಅಣೆಕಟ್ಟೆಗೆ 43 ಟಿಎಂಸಿ ಅಡಿ ನೀರು ನಿಗದಿ ಮಾಡ-ಲಾಗಿದೆ. ನೆರೆಯ ರಾಜ್ಯದ ಕೆಲವು ಜಿಲ್ಲೆಗಳ ಬರ­ಗಾಲ ಪರಿಸ್ಥಿತಿ ಗಮನ­ದಲ್ಲಿ ಇಟ್ಟು­ಕೊಂಡು ಇಷ್ಟು ಪ್ರಮಾಣ­ದ ನೀರು ನಿಗದಿ ಮಾಡಿರುವುದಾಗಿ ನ್ಯಾಯ­ಮಂಡಳಿ ಹೇಳಿದೆ. ಅತ್ಯಂತ  ಬರಪೀಡಿತ ಆಂಧ್ರದ ರಾಯಲಸೀಮಾ ಮತ್ತು ಅನಂತಪುರ ಜಿಲ್ಲೆಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಈ ಹಿನ್ನೆಲೆಯಲ್ಲಿ ನ್ಯಾಯಮಂಡಳಿ ಐತೀರ್ಪು ಅಧಿಸೂಚನೆ ಹೊರಡಿಸ­ಬಾರದು. ಆಂಧ್ರ, ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ನೀರು ಹಂಚಿಕೆ ವಿವಾದ ಇತ್ಯರ್ಥಪಡಿಸಲು ಹೊಸ ನ್ಯಾಯಮಂಡಳಿ ರಚಿಸಬೇಕೆಂದು ತೆಲುಗು ದೇಶಂ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT