ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ಪ್ರವಾಹದಲ್ಲಿ ಕೊಚ್ಚಿಹೋದ ಯುವತಿ

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ಆಲಮಟ್ಟಿ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ ನೀರುಬಿಟ್ಟಿದ್ದರಿಂದ ಏಕಾಏಕಿ ಪ್ರವಾಹ ಉಂಟಾಗಿ ತಾಲ್ಲೂಕಿನ ನಾಗಸಂಪಿಗೆ ಗ್ರಾಮದ ಬಳಿ ಯುವತಿಯೊಬ್ಬಳು ಕೊಚ್ಚಿಹೋಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

ಗ್ರಾಮದ ಚಂದ್ರವ್ವ(22) ಎಂಬುವವರು ಬಟ್ಟೆ ತೊಳೆಯುತ್ತಿದ್ದ ಸಂದರ್ಭದಲ್ಲಿ ಕಾಲುಜಾರಿ ಬಿದ್ದು ಪ್ರವಾಹದಲ್ಲಿ  ಕೊಚ್ಚಿಕೊಂಡು ಹೋಗಿದ್ದಾರೆ. ಸ್ಥಳಕ್ಕೆ ಧಾವಿಸಿರುವ ಪೊಲೀಸ್, ಆಗ್ನಿಶಾಮಕ ದಳದ ಸಿಬ್ಬಂದಿ ಮತ್ತು ತಹಸೀಲ್ದಾರ್ ದೇಹಕ್ಕಾಗಿ ಶೋಧ ಕೈಗೊಂಡಿದ್ದಾರೆ. 

ಸ್ಥಳಾಂತರ: ಮುಧೋಳ ತಾಲ್ಲೂಕಿನ ಘಟಪ್ರಭಾ ನದಿ ವ್ಯಾಪ್ತಿಯಲ್ಲಿ ಪ್ರವಾಹ ಉಂಟಾಗಿದ್ದು, ಢವಳೇಶ್ವರದ 8 ಕುಟುಂಬಗಳನ್ನು ಮತ್ತು ಮಿರ್ಜಿ ಗ್ರಾಮದ 42 ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ.

ಮುಧೋಳ-ಯಾದವಾಡ ಸೇತುವೆ ನೀರಿನಲ್ಲಿ ಮುಳುಗಿರುವುದರಿಂದ ಬೆಳಗಾವಿ ಜಿಲ್ಲೆಗೆ ಸಂಪರ್ಕ ಕಡಿತಗೊಂಡಿದೆ.

ಬೆಳಗಾವಿ ವರದಿ: ಕೃಷ್ಣಾ ನದಿ ನೀರಿನ ಹರಿವು ಸತತ ನಾಲ್ಕನೆಯ ದಿನವೂ ಹೆಚ್ಚಳವಾಗಿದ್ದು, ಜಿಲ್ಲೆಯ ಅಥಣಿ ತಾಲ್ಲೂಕಿನ ತೀರ್ಥ ಹಾಗೂ ಸಪ್ತಸಾಗರ ಗ್ರಾಮಗಳು ಸಂಪೂರ್ಣ ಜಲಾವೃತವಾಗಿವೆ.

ಅಥಣಿ ತಾಲ್ಲೂಕಿನ ನಾಲ್ಕು ಗ್ರಾಮಗಳಾದ ತೀರ್ಥ, ಸಪ್ತಸಾಗರ, ಕುಸನಾಳ ಹಾಗೂ ಮುಳವಾಡ ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ಬೋಟುಗಳ ಮೂಲಕ ಸಂಚರಿಸಬೇಕಾದ ಸ್ಥಿತಿ ಎದುರಾಗಿದೆ.
ನೀರಿನ ಪ್ರಮಾಣ ಹೆಚ್ಚಾದ ಕಾರಣ ಹೊಸದಾಗಿ ಜಿಲ್ಲೆಯ ಅಥಣಿ ತಾಲ್ಲೂಕಿನ ಐದು ಗ್ರಾಮ ಸಂಪರ್ಕಿಸುವ ರಸ್ತೆಗಳು ನೀರಿನಲ್ಲಿ ಮುಳುಗಿವೆ. ಇದರಿಂದಾಗಿ ಮುಳುಗಡೆಯಾದ ಸೇತುವೆಗಳ ಸಂಖ್ಯೆ 21ಕ್ಕೆ ಏರಿದೆ.

ಚಿಕ್ಕೋಡಿ ತಾಲ್ಲೂಕಿನ ಒಂಬತ್ತು, ಅಥಣಿ ತಾಲ್ಲೂಕಿನ ಐದು, ಹುಕ್ಕೇರಿ ತಾಲ್ಲೂಕಿನ ಮೂರು, ಖಾನಾಪುರ ತಾಲ್ಲೂಕಿನ ಎರಡು, ರಾಯಬಾಗ ಹಾಗೂ ಗೋಕಾಕ ತಾಲ್ಲೂಕಿನ ಒಂದು ಸೇತುವೆಗಳು ನೀರಿನಲ್ಲಿ ಮುಳುಗಿವೆ.

ನೆರೆಯ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜಿನಿಂದ ಕೃಷ್ಣಾ ನದಿಗೆ 2.35 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಘಟಪ್ರಭಾದಿಂದ 29, ದೂಧಗಂಗಾದ 4 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಯನ್ನು ಸೇರುತ್ತಿದೆ.
ವಿಜಾಪುರ ವರದಿ: ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಉಜನಿ, ವೀರಭಟ್ಕರ್ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ಭೀಮಾ ನದಿಯಲ್ಲಿಯೂ ಪ್ರವಾಹ ಭೀತಿ ಎದುರಾಗಿದೆ.

ಕಡಿಮೆಯಾಗಿದ್ದ ಆಲಮಟ್ಟಿ ಜಲಾಶಯದ ಒಳ ಹರಿವು ಮಂಗಳವಾರ ಸಂಜೆಯ ವೇಳೆಗೆ ಏಕಾಏಕಿ ಹೆಚ್ಚಳವಾಗಿದ್ದು, ಜಲಾಶಯಕ್ಕೆ 2.97 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಈ ಅವಧಿಯಲ್ಲಿ ಇದೇ ಪ್ರಥಮ ಬಾರಿಗೆ ಎಲ್ಲ 26 ಗೇಟ್‌ಗಳ ಮೂಲಕ ದಾಖಲೆಯ 3 ಲಕ್ಷ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಹೀಗಾಗಿ ಆಲಮಟ್ಟಿ ಜಲಾಶಯದ ಮುಂಭಾಗದ ಬೆಳೆಗೆ ಮತ್ತೆ ನೀರು ನುಗ್ಗಿದೆ.

ಭೀಮಾ ನದಿಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಸಮಾನಾಂತರ ಗಡಿಯಲ್ಲಿರುವ ಬ್ಯಾರೇಜ್‌ಗಳು ನೀರಿನಲ್ಲಿ ಮುಳುಗಿದ್ದು, ಇಂಡಿ ತಾಲ್ಲೂಕಿನ ಚಣೇಗಾಂವ, ಗುಬ್ಬೇವಾಡ, ಸಿಂದಗಿ ತಾಲ್ಲೂಕಿನ ಕುಮಸಗಿ ಗ್ರಾಮಗಳ ರಸ್ತೆಗಳಲ್ಲಿ ನೀರು ನುಗ್ಗಿದ್ದರಿಂದ ಅಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ನದಿ ತೀರದ ಗ್ರಾಮಗಳಾದ ಸಂಖ, ಟಾಕಳಿ, ಚಣೇಗಾಂವ, ಧೂಳಖೇಡ, ಉಮರಜ, ದಸೂರ, ಗೋವಿಂದಪೂರ ಸೇರಿದಂತೆ ಹಲವು ಗ್ರಾಮಗಳ 500ಕ್ಕೂ ಹೆಚ್ಚು ಎಕರೆಯಲ್ಲಿಯ ಬೆಳೆಗಳಿಗೆ ನೀರು ನುಗ್ಗಿದೆ. ಗೋವಿನ ಜೋಳ, ಕಬ್ಬು, ಬಾಳೆ ಮತ್ತಿತರ ಬೆಳೆಗಳು ಜಲಾವೃತಗೊಂಡಿವೆ.

ಮಂಗಳವಾರ ಬೆಳಿಗ್ಗೆಯ ಸಮಯದಲ್ಲಿ ಧೂಳಖೇಡ ಹತ್ತಿರ ಭೀಮಾ ನದಿಯ ಮಟ್ಟ 11 ಮೀಟರ್ ಇತ್ತು. ಅದು ಸಂಜೆಯ ವೇಳೆಗೆ 11.34 ಮೀಟರ್ ತಲುಪಿತು. ಇಲ್ಲಿ ನೀರಿನ ಮಟ್ಟ 13 ಮೀಟರ್‌ಗೆ ಹೆಚ್ಚಿದರೆ ನದಿ ತೀರದಲ್ಲಿ ಪ್ರವಾಹ ಉಲ್ಬಣಿಸಿ ಹೆಚ್ಚಿನ ಹಾನಿಯನ್ನುಂಟು ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT