ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ಸದ್ಬಳಕೆಗೆ ಸಮ್ಮೇಳನಾಧ್ಯಕ್ಷರ ಕರೆ

Last Updated 16 ಫೆಬ್ರುವರಿ 2011, 9:45 IST
ಅಕ್ಷರ ಗಾತ್ರ

ಸಿಂದಗಿ (ಕಲಾ ಸಾರ್ವಭೌಮ ಹಂದಿಗನೂರ ಸಿದ್ರಾಮಪ್ಪ ವೇದಿಕೆ): ‘ಕೃಷ್ಣಾ ಐತೀರ್ಪು ಕರ್ನಾಟಕದ ಪರವಾಗಿ ಬಂದ ಸಂತಸದ ಗಳಿಗೆಯಲ್ಲಿ ಜನಪ್ರತಿನಿಧಿಗಳು ರಾಜಕೀಯ ಇಚ್ಛಾಶಕ್ತಿಯೊಂದಿಗೆ ಆಲಮಟ್ಟಿ ಆಣೆಕಟ್ಟಿನ ಹೆಚ್ಚುವರಿ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆ ಮೂಲಕ ವಿಜಾಪುರ ಜಿಲ್ಲೆಯನ್ನು ಪಂಜಾಬನ್ನಾಗಿ ಪರಿವರ್ತಿಸಬೇಕು’ ಎಂದು ವಿಜಾಪುರ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಮಹಾಂತ ಗುಲಗಂಜಿ ಸಲಹೆ ನೀಡಿದರು.

ಮಂಗಳವಾರ ಪಟ್ಟಣದ ಸಾರಂಗಮಠದ ಮೈದಾನದಲ್ಲಿ ಸ್ವಾಮಿ ರಮಾನಂದ ತೀರ್ಥ ಮಹಾಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ವಿಜಾಪುರ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಅಧ್ಯಕ್ಷರ ಆಶಯ ಭಾಷಣ ಮಾಡಿದರು.

ವಿಜಾಪುರ ಜಿಲ್ಲೆಯ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಹಲವಾರು ಉದ್ದಿಮೆಗಳು ಸ್ಥಾಪನೆಗೊಳ್ಳಬೇಕು. ಪ್ರವಾಸಿ ತಾಣವಾದ ವಿಜಾಪುರಕ್ಕೆ ಆಗಮಿಸುವ ಪ್ರವಾಸಿಗರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುವಂತಾಗಬೇಕು ಎಂದರು.

ರಾಜ್ಯದಲ್ಲಿ ಪ್ರಾಥಮಿಕ ಶಾಲೆಯ ಮೊದಲನೇ ತರಗತಿಯಿಂದಲೇ ಇಂಗ್ಲಿಷ್ ಭಾಷೆ ಕಲಿಸುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಕನ್ನಡ ಕಂಗ್ಲಿಷ್ ಆಗುತ್ತಿರುವದನ್ನು ತಪ್ಪಿಸಿ ಕನ್ನಡ ಭಾಷೆ ಉಳಿವಿಗಾಗಿ ಶ್ರಮಿಸಬೇಕಾದ ದುಃಸ್ಥಿತಿ ಬಂದಿದೆ ಎಂದು ವಿಷಾದಿಸಿದರು.

ಇಲ್ಲಿಯವರೆಗೂ ನೆನೆಗುದಿಗೆ ಬಿದ್ದಿರುವ ಮಹಿಷಿ ವರದಿ ಜಾರಿಗೆ ಬರುವ ಮೂಲಕ ಕನ್ನಡಿಗರಿಗೆ ಉದ್ಯೋಗ ಅವಕಾಶ ಒದಗಿಸಿಕೊಡಬೇಕಿದೆ. ಕರ್ನಾಟಕದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಮತ್ತು ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಲಭಿಸುವಂತಾಗಲಿ. ಅಲ್ಲದೇ ಕರ್ನಾಟಕ ನೆಲದಲ್ಲಿಯೇ ನೈಋತ್ಯ ರೇಲ್ವೆ ವಲಯದಲ್ಲಿ ಸಿ ಮತ್ತು ಡಿ ದರ್ಜೆಯ ವಿವಿಧ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಕ ಮಾಡಲು ರಾಜ್ಯ ಸರ್ಕಾರ ರೇಲ್ವೆ ಇಲಾಖೆಯನ್ನು ಒತ್ತಾಯಿಸಬೇಕು.

ಜಿಲ್ಲೆಯ ಇಂಡಿ-ಸಿಂದಗಿ ರೈತರ ಜೀವನಾಡಿಯಾದ ಗುತ್ತಿ ಬಸವಣ್ಣ ಏತ ನೀರಾವರಿಯ ಕಾಲುವೆ ಕಾಮಗಾರಿ ಇನ್ನೂ 37 ಕಿ.ಮಿ ವರೆಗೆ ಆಗಬೇಕಿದ್ದು, ಮಂದಗತಿಯಲ್ಲಿ ನಡೆದ ಈ ಕಾಮಗಾರಿ ಕೂಡಲೇ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ಕೇಳಿಕೊಂಡರು.

ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಜಾನಪದ ವಿಶ್ವವಿದ್ಯಾಲಯವನ್ನು ಜಾನಪದ ಜಿಲ್ಲೆಯೆಂದೇ ಹೆಸರಾಗಿರುವ ವಿಜಾಪುರ ಜಿಲ್ಲೆಯಲ್ಲಿಯೇ ಸ್ಥಾಪನೆ ಮಾಡಬೇಕು ಎಂದು ಗುಲಗಂಜಿ ಆಗ್ರಹಪಡಿಸಿದರು.

ಭಾಷಣದುದ್ದಕ್ಕೂ ಹಿರಿಯ ಸಾಹಿತಿ ಮಹಾಂತ ಗುಲಗಂಜಿ ಅವರು ಇಡೀ ವಿಜಾಪುರ ಜಿಲ್ಲೆಯ ಬಣ್ಣನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸ್ಮರಿಸಿದರು.
ಸಮ್ಮೇಳನದ ನಿಕಟಪೂರ್ವಪೂರ್ವ ಸಮ್ಮೇಳನಾಧ್ಯಕ್ಷ ಡಾ.ಎಂ.ಎನ್. ವಾಲಿ ಪರಿಷತ್ ಧ್ವಜವನ್ನು ಮಹಾಂತ ಗುಲಗಂಜಿ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.

ಸಾಲ ಮಾಡಾದರೂ ಏತ ನೀರಾವರಿ’
ಸಿಂದಗಿ: ‘ಆಲಮಟ್ಟಿ ಆಣೆಕಟ್ಟು 524 ಮೀಟರ್‌ಗೆ ಎತ್ತರಿಸುವುದರಿಂದ ಇಡೀ ಜಿಲ್ಲೆ ನೀರಾವರಿಗೆ ಒಳಪಡುತ್ತದೆ. ಹೀಗಾಗಿ ಜಿಲ್ಲೆಯ ಎಲ್ಲ ಏತ ನೀರಾವರಿ ಯೋಜನೆಗಳನ್ನು ಸಾಲ ಮಾಡಿಯಾದರೂ ಸರ್ಕಾರ ಪೂರ್ಣಗೊಳಿಸುತ್ತದೆ’ ಎಂದು ವಿಜಾಪುರ ಜಿಲ್ಲಾ ಉಸ್ತುವಾರಿ ಸಚಿವ ಮುರಗೇಶ ನಿರಾಣಿ  ಭರವಸೆ ನೀಡಿದರು.

ಸ್ಥಳೀಯ ಸಾರಂಗಮಠದ ಮೈದಾನದಲ್ಲಿನ ಕಲಾ ಸಾಮ್ರಾಟ ಹಂದಿಗನೂರ ಸಿದ್ರಾಮಪ್ಪ ಮಹಾವೇದಿಕೆಯಲ್ಲಿ ಮಂಗಳವಾರ ಏರ್ಪಡಿಸಿದ್ದ 12ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಬೆಳಗಾವಿಯಲ್ಲಿ ಮಾ.11ರಿಂದ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ ಎಂದ ಅವರು ಸಿದ್ಧತೆಗಳನ್ನು ವಿವರಿಸಿದರು.ಸರ್ಕಾರ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ವಿವಿಧ ಯೋಜನೆಗಳ ಮಾಹಿತಿ ನೀಡಿದ ಸಚಿವರು, ವಿಜಾಪುರ ಜಿಲ್ಲೆ ಈಗ ಅಭಿವೃದ್ಧಿಯಲ್ಲಿ 22ನೇ ಸ್ಥಾನದಲ್ಲಿದ್ದು, ಮುಂದಿನ 10 ವರ್ಷಗಳಲ್ಲಿ 5ನೇ ಸ್ಥಾನಕ್ಕೆ ತರುವುದಾಗಿ ಭರವಸೆ ನೀಡಿದರು.

ಇನ್ನೊಬ್ಬ ಮುಖ್ಯ ಅತಿಥಿ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ ಮಾತನಾಡಿ, ಬಹುತೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಮಹಿಳಾ ಗೋಷ್ಠಿಗಳನ್ನು ಪ್ರತ್ಯೇಕವಾಗಿ ಏರ್ಪಡಿಸುವುದು ಕಂಡು ಬರುತ್ತದೆ. ಆದರೆ ಈ ಸಮ್ಮೇಳನದಲ್ಲಿ ಮಹಿಳೆಯರನ್ನು ಪ್ರತ್ಯೇಕಗೊಳಿಸದೇ ಇರುವುದು ಸಂತಸದ ಸಂಗತಿ ಎಂದರು.

‘ಸಿಂದಗಿ ಪನ್ನೆರಡು’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಡಾ.ನಲ್ಲೂರಪ್ರಸಾದ, ಶೀಘ್ರದಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶ್ರವಣಬೆಳಗೋಳದಲ್ಲಿ ಪ್ರಾಚೀನ ಸಾಹಿತ್ಯ ಸಮ್ಮೇಳನ ಮತ್ತು ಕೂಡಲಸಂಗಮದಲ್ಲಿ ವಚನ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದರು.

‘ಕನ್ನಡ ಸಾಹಿತ್ಯ ಪರಿಷತ್ ಚಟುವಟಿಕೆಗೆ ಶೈಕ್ಷಣಿಕ ಸ್ವರೂಪ ನೀಡಲಾಗುತ್ತಿದೆ. ಪಿಎಚ್.ಡಿ, ಎಂಫಿಲ್ ಹಾಗೂ ಪತ್ರಿಕೋದ್ಯಮ ಅಧ್ಯಯನಕ್ಕಾಗಿ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು’ ಎಂದು ತಿಳಿಸಿದರು.

ಸಾರಂಗಮಠದ ಪ್ರಭು ಸಾರಂಗದೇವ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಯರನಾಳ ವಿರಕ್ತಮಠದ ಸಂಗನಬಸವ ಸ್ವಾಮಿಗಳು, ವಿಧಾನಪರಿಷತ್ ಸದಸ್ಯ ಅರುಣ ಶಹಾಪೂರ, ಮಾಜಿ ಸಚಿವರಾದ ಎಂ.ಸಿ. ಮನಗೂಳಿ, ಮಾಜಿ ಶಾಸಕರಾದ ಎಸ್.ಕೆ. ಬೆಳ್ಳುಬ್ಬಿ, ಮಲ್ಲನಗೌಡ ಬಿರಾದಾರ, ಶರಣಪ್ಪ ಸುಣಗಾರ, ಜಿಪಂ ಮಾಜಿ ಉಪಾಧ್ಯಕ್ಷ ಸಿದ್ದು ಪಾಟೀಲ, ಪುರಸಭೆ ಅಧ್ಯಕ್ಷ ಸುಶಾಂತ ಪೂಜಾರಿ, ತಹಸೀಲ್ದಾರ ಶಿವಾನಂದ ಭಜಂತ್ರಿ ಉಪಸ್ಥಿತರಿದ್ದರು.

ಶಾಸಕ ರಮೇಶ ಭೂಸನೂರ ಸ್ವಾಗತಿಸಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರೊ.ರವಿ ಗೋಲಾ ನಿರೂಪಿಸಿದರು.ಕಸಾಪ ತಾಲ್ಲೂಕು ಅಧ್ಯಕ್ಷ ಬಸವಲಿಂಗ ಬೂದಿಹಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT