ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡರ ಮಿಂಚಿನ ಓಟ!

Last Updated 24 ಮಾರ್ಚ್ 2011, 19:30 IST
ಅಕ್ಷರ ಗಾತ್ರ

‘ರೀಮೇಕ್ ಆದರೇನು. ಸ್ವಮೇಕ್ ಆದರೇನು. ಪ್ರೇಕ್ಷಕರು ಬಯಸುವುದು ಒಳ್ಳೆಯ ಸಿನಿಮಾವನ್ನು!’ ಎನ್ನುವ ಇಂಗಿತ ಸುದೀಪ್ ಮಾತುಗಳಲ್ಲಿ ಸ್ಪಷ್ಟವಾಗಿತ್ತು. ‘ಕೆಂಪೇಗೌಡ’ ಚಿತ್ರದ ಸಂತೋಷಕೂಟದಲ್ಲಿ ಮಾತನಾಡುತ್ತಿದ್ದ ಅವರ ಕಣ್ಣುಗಳಲ್ಲಿ ಅಪರೂಪದ ಹೊಳಪು. ಅದು ಭರ್ಜರಿ ಗೆಲುವು ತಂದುಕೊಟ್ಟ ಮೆರುಗು.

ವಿಶ್ವಕಪ್ ಕ್ರಿಕೆಟ್ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಮಾಡುವ ನನ್ನ ನಿರ್ಧಾರಕ್ಕೆ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದರು. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಚಿತ್ರಮಂದಿರದತ್ತ ತಲೆಹಾಕುವುದಿಲ್ಲ ಎಂದು ಹೇಳಿದವರೂ ಇದ್ದರು. ಆದರೆ, ಧೈರ್ಯ ಮಾಡಿ ‘ಕೆಂಪೇಗೌಡ’ ತೆರೆಕಾಣಿಸಿದೆ.

ಇಂಥದ್ದೊಂದು ಸಿನಿಮಾಕ್ಕೆ ಕಾಯುತ್ತಿದ್ದರೇನೊ ಎನ್ನುವಂತೆ ಪ್ರೇಕ್ಷಕರು ಕೂಡ ಚಿತ್ರಕ್ಕೆ ಮುಗಿಬಿದ್ದರು. ಸಂಭ್ರಮದಿಂದ ನಮ್ಮ ಸಿನಿಮಾ ಸ್ವಾಗತಿಸಿದರು. ಕಳೆದ ಎರಡು ವಾರಗಳ ಕಲೆಕ್ಷನ್ ಆಶ್ಚರ್ಯ ಹುಟ್ಟಿಸುವಂತಿದೆ. ನನ್ನ ಹತ್ತು ವರ್ಷಗಳ ವೃತ್ತಿಜೀವನದಲ್ಲಿ ಇದು ಅತ್ಯಂತ ದೊಡ್ಡ ಗೆಲುವು. ಈ ಸಂಭ್ರಮಕ್ಕೆಲ್ಲ ಪ್ರೇಕ್ಷಕರೇ ಕಾರಣ. ಅವರಿಗೆ ನಾನು ಋಣಿ.ಚಿತ್ರದ ಬಿಡುಗಡೆಯನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸಿದರು. ಅವರು ಏನನ್ನು ನಿರೀಕ್ಷಿಸುತ್ತಿದ್ದರೋ ಅದನ್ನು ಸಿನಿಮಾದಲ್ಲಿ ಕೊಟ್ಟಿದ್ದೇನೆ ಎಂದು ಸುದೀಪ್ ಹೇಳಿದರು.

ಚಿತ್ರತಂಡವನ್ನು ನೆನಪಿಸಿಕೊಳ್ಳಲು ಸುದೀಪ್ ಮರೆಯಲಿಲ್ಲ. ನಿರ್ಮಾಪಕ ಶಂಕರೇಗೌಡರ ನೇತೃತ್ವದಲ್ಲಿ ‘ಕೆಂಪೇಗೌಡ’ ಬಳಗ ಅದ್ಭುತ ಕೆಲಸ ಮಾಡಿದೆ. ಚಿತ್ರದ ಗೆಲುವಿನಲ್ಲಿ ಎಲ್ಲರ ಪಾತ್ರವೂ ಇದೆ ಎಂದರು.ಸುದೀಪ್ ಕೈಯಲ್ಲಿದ್ದ ಗಡಿಯಾರ ಕೆಲವು ಪತ್ರಕರ್ತರ ಗಮನಸೆಳೆಯಿತು. ಅದರ ಬಗ್ಗೆ ಪ್ರತಿಕ್ರಿಯಿಸಿದ ಸುದೀಪ್- ‘ನಾನು ಅತ್ಯಂತ ದುಬಾರಿ ಗಡಿಯಾರಗಳನ್ನು ಧರಿಸಿದ್ದೆ. ಆದರೆ ಸರಿಯಾದ ಸಮಯ ತೋರಿಸಿದ್ದು ಈ ಸಾಧಾರಣ ವಾಚ್’ ಎಂದು ಮಾರ್ಮಿಕವಾಗಿ ನುಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿತರಕ ಬಾಷಾ ‘ಕೆಂಪೇಗೌಡ’ ಈ ವರ್ಷದ ಈವರೆಗಿನ ಅತ್ಯಂತ ಯಶಸ್ವಿ ಚಿತ್ರ ಎಂದು ಹೇಳಿದರು. ಎರಡು ವಾರಗಳಲ್ಲಿ ಒಟ್ಟು ಎಂಟೂವರೆ ಕೋಟಿ ರೂಪಾಯಿ ಗಳಿಸಲಿರುವ ಈ ಚಿತ್ರ ದೊಡ್ಡ ಮೊತ್ತದ ಲಾಭವನ್ನು ನಿರ್ಮಾಪಕರಿಗೆ ತಂದುಕೊಡಲಿದೆ ಎನ್ನುವುದು ಬಾಷಾ ಅವರ ಅಂದಾಜು.

‘ಕೆಂಪೇಗೌಡ’ ಚಿತ್ರದ ನಿರ್ಮಾಪಕ ಶಂಕರೇಗೌಡ ‘ಕೆಂಪೇಗೌಡ’ ಚಿತ್ರ ಗೆಲ್ಲುತ್ತದೆಂದು ನಿರೀಕ್ಷಿಸಿದ್ದರಾದರೂ, ಇಷ್ಟೊಂದು ದೊಡ್ಡ ಗೆಲುವು ಅವರಿಗೆ ಕೂಡ ಅನಿರೀಕ್ಷಿತವೇ. ನಿರ್ಮಾಪಕನಾಗಿ ಬಹುದೊಡ್ಡ ಗೆಲುವನ್ನು ಎಟುಕಿಸಿಕೊಂಡಿರುವ ಪುಳಕ ಅವರದ್ದು.ಚಿತ್ರದ ನಾಯಕಿ ರಾಗಿಣಿ, ಸಂಗೀತ ನಿರ್ದೇಶಕ ಅರ್ಜುನ್, ಛಾಯಾಗ್ರಾಹಕ ಕೃಷ್ಣ, ಕಲಾ ನಿರ್ದೇಶಕ ಅರುಣ್ ಸಾಗರ್, ‘ನೈಸ್’ ಸಂಸ್ಥೆಯ ಅಶೋಕ್ ಖೇಣಿ ಸೇರಿದಂತೆ ಅನೇಕ ಅತಿಥಿಗಳು ಸಂತೋಷಕೂಟದಲ್ಲಿ ಭಾಗವಹಿಸಿದ್ದುದು ವಿಶೇಷ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT