ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್ ಜಲಾಶಯಕ್ಕಿಲ್ಲ ಹೂಳಿನ ಗೋಳು

Last Updated 17 ಮೇ 2012, 19:30 IST
ಅಕ್ಷರ ಗಾತ್ರ

ಮೈಸೂರು: ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಸಾವಿರಾರು ರೈತರ ಜೀವನಾಡಿ   ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯವನ್ನು ಹೂಳು ಯಾವುದೇ ರೀತಿಯಲ್ಲೂ ಬಾಧಿಸುತ್ತಿಲ್ಲ. ಅಷ್ಟರ ಮಟ್ಟಿಗೆ ಈ ಜಲಾಶಯ ಸುರಕ್ಷಿತವಾಗಿದೆ.

ಜಲಾಶಯದಲ್ಲಿ ಹೂಳು ತುಂಬಿದೆ ಎಂದು ಅಚ್ಟುಕಟ್ಟು ಪ್ರದೇಶದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ, ಕೆಆರ್‌ಎಸ್‌ನಲ್ಲಿರುವ ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರ (ಕೆಇಆರ್‌ಸಿ)ವು ಅತ್ಯಾಧುನಿಕ ಉಪಕರಣಗಳನ್ನು ಬಳಸಿ ನಡೆಸಿರುವ ವೈಜ್ಞಾನಿಕ ಸರ್ವೆ ಜಲಾಶಯದಲ್ಲಿರುವ ಅತ್ಯಲ್ಪ ಪ್ರಮಾಣದ ಹೂಳು ಸಮಸ್ಯೆಯೇ ಅಲ್ಲ ಎನ್ನುತ್ತಿದೆ. ಹೀಗಾಗಿ ರೈತರು ನಿರಾಳವಾಗಬಹುದು.

ರಾಜ್ಯ ಸರ್ಕಾರವು ನೀರು ಭದ್ರತೆಯ ದೃಷ್ಟಿಯಿಂದ ಕೆಇಆರ್‌ಸಿ ಮೂಲಕ ಜಲಾಶಯದಲ್ಲಿರುವ ಹೂಳಿನ ಸರ್ವೆ ನಡೆಸುತ್ತದೆ. ಜಲಾಶಯ ಹೊಂದಿರುವ  ಸಾಮರ್ಥ್ಯದಷ್ಟು ನೀರನ್ನು ಅಲ್ಲಿ ಸಂಗ್ರಹಿಸಲು ಸಾಧ್ಯವಾಗುತ್ತಿದೆಯೇ? ಇಲ್ಲವೇ ಎನ್ನುವುದನ್ನು ಪತ್ತೆ ಮಾಡುವುದು ಇದರ ಉದ್ದೇಶವಾಗಿದೆ. ಕೆಇಆರ್‌ಸಿ ಈ ಜಲಾಶಯದಲ್ಲಿ ಸರ್ವೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಶೇಕಡಾ 5 ರಷ್ಟು ಹೂಳು: ಕೆಆರ್‌ಎಸ್ ಜಲಾಶಯ ನಿರ್ಮಾಣಗೊಂಡು 81 ವರ್ಷಗಳಾಗಿವೆ. ಇಷ್ಟು ಸುದೀರ್ಘ ಅವಧಿಯಲ್ಲಿ ಶೇಕಡಾ 5 ರಷ್ಟು ಮಾತ್ರ ಹೂಳಿದೆ! ಇದು ಬೃಹತ್ ಜಲಾಶಯಕ್ಕೆ ಅತ್ಯಲ್ಪವೇ ಸರಿ. ಇದಕ್ಕೆ ಹಲವು ಕಾರಣಗಳಿವೆ. ಕಾವೇರಿ ನದಿಗೆ ಅಡ್ಡಲಾಗಿ ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಈ ಜಲಾಶಯವನ್ನು ನಿರ್ಮಿಸಲಾಗಿದೆ. ಕಾವೇರಿ ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಹರಿಯುತ್ತದೆ. ಇದಕ್ಕೆ ಹೇಮಾವತಿ ಮತ್ತು ಲಕ್ಷ್ಮಣತೀರ್ಥದಂಥ ಉಪನದಿಗಳು ಸೇರುತ್ತವೆ. ಕಾವೇರಿ ಹರಿಯುವ ಪಾತ್ರದಲ್ಲಿ ಕಾಡು ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಸವಕಳಿ ಆಗುತ್ತಿಲ್ಲ. ಮಳೆ ಬಂದು, ನದಿಯಲ್ಲಿ ಪ್ರವಾಹ ಉಕ್ಕಿದರೂ ಕಲ್ಲು, ಮಣ್ಣು, ಕಸ, ಕಡ್ಡಿ ತೀರಾ ಸಣ್ಣ ಪ್ರಮಾಣದಲ್ಲಿ ಜಲಾಶಯವನ್ನು ಸೇರುತ್ತದೆ. ಅಲ್ಲದೇ ನದಿಪಾತ್ರದಲ್ಲಿ ಹತ್ತಾರು ಚೆಕ್‌ಡ್ಯಾಂ ಗಳನ್ನು ನಿರ್ಮಿಸಲಾಗಿದೆ. ಹೀಗಾಗಿ ಹೂಳು ಕೆಆರ್‌ಎಸ್ ಜಲಾಶಯ ಸೇರುವುದು ಗಣನೀಯವಾಗಿ ಕಡಿಮೆಯಾಗಿರುತ್ತದೆ.

ಕೃಷ್ಣರಾಜಸಾಗರ ಜಲಾಶಯದ ವಿನ್ಯಾಸವೇ ವಿಶಿಷ್ಟವಾಗಿದೆ. ಜಲಾಶಯದ ಎಲ್ಲ ಗೇಟುಗಳು ರಿವರ್ ಬೆಡ್ ಮಟ್ಟದಲ್ಲಿವೆ. ಸ್ವಲ್ಪ ಹೂಳು ಇದ್ದರೂ ಜಲಾಶಯದಿಂದ ಹೊರಕ್ಕೆ ನೀರು ಬಿಡುವ ಸಂದರ್ಭದಲ್ಲಿ ಹರಿದು ಹೋಗುತ್ತದೆ. ಬೇರೆ ಜಲಾಶಯಗಳಲ್ಲಿ ನೀರು ಕ್ರೆಸ್ಟ್ ಗೇಟ್‌ಗಳ ಮೂಲಕ ಹರಿಯುವುದರಿಂದ ಇಂಥ ಸಾಧ್ಯತೆ ಇಲ್ಲವಾಗಿದೆ.

`ಹತ್ತು ವರ್ಷಗಳಿಗೆ ಒಮ್ಮೆ ಜಲಾಶಯದಲ್ಲಿರುವ ಹೂಳಿನ ಸರ್ವೆ ಮಾಡಲಾಗುತ್ತದೆ. ಈ ಅವಧಿಯಲ್ಲಿ ಶೇಕಡಾ 5 ರಷ್ಟು ಹೂಳಿದ್ದರೆ ಎಚ್ಚರಿಕೆ ವಹಿಸಬೇಕು. ಈ ಪ್ರಮಾಣಕ್ಕಿಂತ ಕಡಿಮೆ ಇದ್ದರೆ ಯಾವುದೇ ಅಪಾಯವಿಲ್ಲ. ಇದನ್ನೇ ಅನ್ವಯಿಸಿ ಹೇಳುವುದಾದರೆ ಕೆಆರ್‌ಎಸ್ ಜಲಾಶಯದಲ್ಲಿ 81 ವರ್ಷಕ್ಕೆ  ಶೇಕಡಾ 5 ರಷ್ಟು ಮಾತ್ರ ಹೂಳಿದೆ~ ಎಂದು ಕೆಇಆರ್‌ಸಿಯ ಮುಖ್ಯ ಸಂಶೋಧನಾಧಿಕಾರಿ ಎಚ್.ವಿ.ಶಿವಕುಮಾರ್ ಹೇಳುತ್ತಾರೆ.

ಜಲಾಶಯ ಕುರಿತು ಒಂದಿಷ್ಟು: ಈ ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಿದ್ದು, 49.45 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್.ಪೇಟೆ, ಮೈಸೂರು, ಕೆ.ಆರ್.ನಗರ ತಾಲ್ಲೂಕುಗಳ ಗಡಿಯವರೆಗೂ ಜಲಾಶಯ ಹರಡಿಕೊಂಡಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಈ ಜಲಾಶಯವನ್ನು ನಿರ್ಮಿಸಲು ಉದ್ದೇಶಿಸಿ 1911 ರಲ್ಲಿ ಕಾಮಗಾರಿಗೆ ಚಾಲನೆ ನೀಡಿದರು. ಇದು 1931ರಲ್ಲಿ ಲೋಕಾರ್ಪಣೆಗೊಂಡಿತು. ಇದು ಮಂಡ್ಯ ಮತ್ತು ಮೈಸೂರು ಜಿಲ್ಲೆಯ ರೈತರ  ಕೃಷಿ ಮತ್ತು ಕುಡಿಯುವ ನೀರು ಪೂರೈಕೆ ಉದ್ದೇಶದಿಂದ ನಿರ್ಮಿಣಗೊಂಡಿದೆ.

ಕೃಷಿ ಭೂಮಿಗೆ ನೀರು: ಜಲಾಶಯದಿಂದ ನಾಲ್ಕು ನಾಲೆಗಳು ಕೃಷಿ ಭೂಮಿಗೆ ನೀರುಣಿಸುತ್ತವೆ. ವಿಶ್ವೇಶ್ವರಯ್ಯ ನಾಲೆಯಿಂದ 2998 ಕ್ಯೂಸೆಕ್, ವರುಣ (ಡಿ.ಡಿ.ಅರಸ್) ನಾಲೆಯಿಂದ 800, ಆರ್‌ಬಿಎಲ್‌ಎಲ್ 250 ಮತ್ತು ಎಲ್‌ಬಿಎಲ್‌ಎಲ್ ನಾಲೆಯಿಂದ 58 ಕ್ಯೂಸೆಕ್ ನೀರು ಹರಿಯುತ್ತದೆ. ಅಲ್ಲದೆ ಜಲಾಶಯದ ತಗ್ಗಿನಲ್ಲಿ ನಿರ್ಮಿಸಿರುವ ಕಿರು ಅಣೆಗಳ ಮೂಲಕ ದೇವರಾಯ (84 ಕ್ಯೂಸೆಕ್), ಸಿಡಿಎಸ್ (900 ಕ್ಯೂಸೆಕ್), ವಿರಿಜಾ (550 ಕ್ಯೂಸೆಕ್), ಬಂಗಾರದೊಡ್ಡಿ (42 ಕ್ಯೂಸೆಕ್) ಮಾಧವಮಂತ್ರಿ, ರಾಮಸ್ವಾಮಿ ಮತ್ತು ರಾಜಪರಮೇಶ್ವರಿ ನಾಲೆಗಳು ಕೂಡ ಕೃಷಿ ಭೂಮಿಗೆ ನೀರುಣಿಸುತ್ತವೆ. ವಿಶ್ವೇಶ್ವರಯ್ಯ ನಾಲೆಯಿಂದ 1,96,000 ಎಕರೆ, ವರುಣ ನಾಲೆಯಿಂದ 80,000 ಎಕರೆ, ವಿರಿಜಾ ನಾಲೆಯಿಂದ 11,565 ಎಕರೆ, ದೇವರಾಯ ನಾಲೆಯಿಂದ 2,375 ಎಕರೆ, ಆರ್‌ಬಿಎಲ್‌ಎಲ್‌ನಿಂದ 3,570 ಹಾಗೂ ಬಂಗಾರದೊಡ್ಡಿ ನಾಲೆಯಿಂದ 871 ಎಕರೆ ಕೃಷಿ ಭೂಮಿಗೆ ನೀರು ಹರಿಯುತ್ತದೆ.

ಹೂಳು ತೆಗೆದಿಲ್ಲ: `ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರವು ಸರ್ವೆ ಮಾಡಿದೆ. ಜಲಾಶಯದಲ್ಲಿ ಅಪಾಯಕಾರಿ ಪ್ರಮಾಣದಲ್ಲಿ ಹೂಳಿಲ್ಲ ಎಂದು ವರದಿ ನೀಡಿದೆ. ಹೀಗಾಗಿ ಹೂಳು ತೆಗೆಯುವ ಯಾವುದೇ ಪ್ರಯತ್ನ ನಡೆದಿಲ್ಲ~ ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹಾಲಿಂಗೇಗೌಡ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT