ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಎಸ್ ಅಧಿಕಾರಿ ವಿರುದ್ಧ ಆರೋಪಪಟ್ಟಿ

Last Updated 23 ಫೆಬ್ರುವರಿ 2011, 19:50 IST
ಅಕ್ಷರ ಗಾತ್ರ

ಬೆಂಗಳೂರು:ಭೂ ಪರಿವರ್ತನೆಗೆ 50 ಸಾವಿರ ರೂಪಾಯಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲೆಯ ಹಿಂದಿನ ವಿಶೇಷ ಜಿಲ್ಲಾಧಿಕಾರಿ (ಕೆಎಎಸ್) ಎಚ್.ರಾಮಾಂಜನೇಯ ವಿರುದ್ಧ ಲೋಕಾಯುಕ್ತ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದು, ವಿಶೇಷ ನ್ಯಾಯಾಲಯ ಅದನ್ನು ಸ್ವೀಕರಿಸಿದೆ.

ಬೊಮ್ಮಸಂದ್ರದ ನಾರಾಯಣಸ್ವಾಮಿ ಎಂಬುವರ 5.14 ಎಕರೆ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲು ಲಂಚ ಪಡೆಯುತ್ತಿದ್ದಾಗ 2010ರ ನವೆಂಬರ್ 29ರಂದು ರಾಮಾಂಜನೇಯ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದ್ದು, ಫೆಬ್ರುವರಿ 14ರಂದು ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ’ ಪ್ರಕರಣಗಳ ಬೆಂಗಳೂರು ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದಾರೆ.

ರಾಮಾಂಜನೇಯ, ಲಂಚ ಪಡೆಯಲು ಸಹಕರಿಸುತ್ತಿದ್ದ ಮಧ್ಯವರ್ತಿಗಳಾದ ವೆಂಕಟೇಶ್‌ಬಾಬು, ನವೀನ್ ಮತ್ತು ಗಂಗಪ್ಪ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಕೆ.ಮಧುಕರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಎರಡು ತಿಂಗಳ ಕಾಲ ವಿಸ್ತೃತ ತನಿಖೆ ನಡೆಸಿದ್ದ ಡಿವೈಎಸ್‌ಪಿ ಎಸ್.ಗಿರೀಶ್ ಮತ್ತು ಕೆ.ರವಿಶಂಕರ್ 720 ಪುಟಗಳ ಆರೋಪಪಟ್ಟಿ ಸಿದ್ಧಪಡಿಸಿದ್ದರು.

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿರುವ ವಿಶೇಷ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದಾಗ ನವೆಂಬರ್ 29ರಂದು ರಾಮಾಂಜನೇಯ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು.

ಆರೋಪಿ ಅಧಿಕಾರಿ ಮೂಲತಃ ಪಾವಗಡ ತಾಲ್ಲೂಕಿನ ದೊಡ್ಡಹಳ್ಳಿ ಗ್ರಾಮದವರು. ಲಂಚ ಪಡೆಯಲು ಅದೇ ಗ್ರಾಮದ ವೆಂಕಟೇಶ್‌ಬಾಬು, ನವೀನ್ ಮತ್ತು ಗಂಗಪ್ಪ ಎಂಬ ಮಧ್ಯವರ್ತಿಗಳ ನೆರವು ಪಡೆಯುತ್ತಿದ್ದರು ಎಂಬ ಅಂಶ ತನಿಖೆಯಲ್ಲಿ ಪತ್ತೆಯಾಗಿತ್ತು.ತ್ವರಿತವಾಗಿ ತನಿಖೆ ಪೂರ್ಣಗೊಳಿಸಿದ್ದ ತನಿಖಾ ತಂಡ, ರಾಮಾಂಜನೇಯ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿತ್ತು.

ಫೆಬ್ರುವರಿ 7ರಂದು ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT