ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಟ್ಟ ಹವ್ಯಾಸ ಬಿಡಿಸುವ ನೆಪದಲ್ಲಿ ವಂಚನೆ

Last Updated 17 ಜನವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮಕ್ಕಳ ಕೆಟ್ಟ ಹವ್ಯಾಸಗಳನ್ನು ದೂರ ಮಾಡುತ್ತೇವೆ ಎಂದು ಹೇಳಿಕೊಂಡು ಹಲವು ನಕಲಿ ಸಂಸ್ಥೆಗಳು ಹಣ ದೋಚುತ್ತಿವೆ. ಇಂತಹ ಸಂಸ್ಥೆಗಳಿಂದ ಪಾಲಕರು ದೂರವಿರಬೇಕು’ ಎಂದು ಮನೋರೋಗ ತಜ್ಞ ಡಾ.ಸಿ.ಆರ್. ಚಂದ್ರಶೇಖರ್ ಎಚ್ಚರಿಕೆ ನೀಡಿದರು. ನಗರದಲ್ಲಿ ಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್‌ನ ಡಿಸ್ಟ್ರಿಕ್ಟ್ 324 ಡಿ6 ಭಾನುವಾರ ನಿಮ್ಹಾನ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ 8ನೇ ವಿಭಾಗೀಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಯಾವುದೇ ವೈಜ್ಞಾನಿಕ ಕ್ರಮಗಳನ್ನು ಅನುಸರಿಸದೇ, ಮಕ್ಕಳಿಗೆ ದೈಹಿಕವಾಗಿ ಹಿಂಸಿಸಿ ಕೆಟ್ಟ ಹವ್ಯಾಸಗಳನ್ನು ಬಿಡಿಸಲು ಅವರು ಮುಂದಾಗುತ್ತಾರೆ. ಇಂತಹ ಸಂಸ್ಥೆಗಳಿಂದ ದೂರವಿರುವುದು ಒಳಿತು’ ಎಂದು ಸಲಹೆ ನೀಡಿದರು.

‘ಪಾಲಕರು ಮಕ್ಕಳನ್ನು ಸರಿಯಾಗಿ ಅರ್ಥೈಸಿಕೊಂಡರೆ ಅರ್ಧದಷ್ಟು ಸಮಸ್ಯೆಗಳು ಬಗೆಹರಿಯುತ್ತವೆ. ಆದರೆ, ಇಂದು ‘ಹಣ ತಗೋ, ಖುಷಿ ಪಡು’ ಎನ್ನುವ ಪಾಲಕರ ಧೋರಣೆಯ ಪರಿಣಾಮ ಮಕ್ಕಳ ಮಾನಸಿಕ ಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ’ ಎಂದು ಅವರು ಹೇಳಿದರು.

‘ಮಕ್ಕಳು ತಪ್ಪು ಮಾಡಿದರೆ ತಿದ್ದಿ ಬುದ್ಧಿಹೇಳಿ, ಒಳ್ಳೆಯ ಕೆಲಸಗಳನ್ನು ಮಾಡಿದರೆ ಬೆನ್ನು ತಟ್ಟಿ. ಇದು ಮಕ್ಕಳ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ನೈತಿಕ ಬೆಂಬಲ ತುಂಬುವ ಕೆಲಸ ಮಾಡಬೇಕು’ ಎಂದು ಅವರು ನುಡಿದರು.

ಮನೋರೋಗ ತಜ್ಞೆ ಜ್ಯೋತಿ ಶರ್ಮಾ ಮಾತನಾಡಿ,  ‘ಕೌಟುಂಬಿಕ ಹಾಗೂ ಸುತ್ತಲಿನ ಸಾಮಾಜಿಕ ವ್ಯವಸ್ಥೆಯು ಮಕ್ಕಳ ಮೇಲೆ ಅತಿಯಾಗಿ ಪ್ರಭಾವ ಬೀರುತ್ತದೆ. ಮಕ್ಕಳು ತಮ್ಮಲ್ಲಿರುವ ಅಸಮಾಧಾನವನ್ನು ಹೊರಹಾಕಲು ಧೂಮಪಾನ, ಮದ್ಯ, ಮಾದಕ ಪದಾರ್ಥಗಳಿಗೆ ದಾಸರಾಗುತ್ತಾರೆ’ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು 8ನೇ ವಿಭಾಗೀಯ ಅಧ್ಯಕ್ಷ ಲಯನ್ ಎಚ್.ಟಿ. ಸೀತಾರಾಮ ವಹಿಸಿದ್ದರು. ಆಯೋಜಕ ಸಮಿತಿಯ ಅಧ್ಯಕ್ಷ ಕೆ.ರಮೇಶ್ ರಾವ್, ಆಯೋಜಕ ಸಮಿತಿಯ ವಲಯ 1ರ ಕಾರ್ಯದರ್ಶಿ ಎಂ.ದೇವರಾಜ್, ವಲಯ 2ರ ಖಜಾಂಚಿ ಬಿ.ಮೋಹನ್ ಹಾಗೂ ವಲಯ 3ರ ಜೆ.ಭವಾನಿ ಪ್ರಸಾದ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT