ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಉಳಿಸಲು ಕರೆ

Last Updated 18 ಮೇ 2012, 19:30 IST
ಅಕ್ಷರ ಗಾತ್ರ

ನಗರದಲ್ಲಿ ನೀರಿಗಾಗಿ ಹಾಹಾಕಾರ ಹೆಚ್ಚುತ್ತಲೇ ಇದೆ. ಭವಿಷ್ಯದ ಯೋಚನೆಯಿಲ್ಲದೆ ನೀರು ವ್ಯಯವಾಗುತ್ತಿದೆ. ಇಲ್ಲಿನ ನೀರಿನ ಸ್ಥಿತಿಗತಿ ಕುರಿತ ಸರಣಿಯ ನಾಲ್ಕನೇ ಕಂತು.

ಸುಮಾರು 900 ಕೆರೆಗಳ ಪೈಕಿ ಒಂದಷ್ಟು ಕೆರೆಗಳನ್ನು ಪುನಶ್ಚೇತನಗೊಳಿಸಿದರೂ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾದೀತು ಎನ್ನುತ್ತಾರೆ ಬೆಂಗಳೂರು ಪರಿಸರ ಸಂಸ್ಥೆಯ ಪ್ರಬಲಾ.

ಕೆಂಪೇಗೌಡರ ಅವಧಿಯಲ್ಲಿ ಜಾರಿಗೆ ಬಂದ `ಕೆರೆಗಳ ಅಂತರ್‌ಸಂಪರ್ಕ ವ್ಯವಸ್ಥೆ~ 1830ರಲ್ಲಿ ಮೇಜರ್ ಆರ್. ಎಚ್. ಸ್ಯಾಂಕಿಯವರಿಂದ ಇನ್ನಷ್ಟು ಪ್ರಬಲಗೊಂಡಿತು. ಆದರೆ ಇಂದು ಈ ವ್ಯವಸ್ಥೆಯಲ್ಲಾ ಹೆಚ್ಚಿದ ಕೆರೆ ಒತ್ತುವರಿಯಿಂದಾಗಿ ನಿರ್ನಾಮವಾಗಿದೆ.

1790ರಲ್ಲಿ ಕಾರ್ನ್‌ವಾಲೀಸ್‌ರಿಂದ `ಸಾವಿರ ಕೆರೆಗಳ ಬೀಡು~ ಎನ್ನಿಸಿಕೊಂಡಿದ್ದ ಬೆಂಗಳೂರು ಇಂದು `ಸಾವಿರಾರು ಕೊಳಚೆ ಗುಂಡಿಗಳ ಬೀಡು~ ಎನ್ನುವಷ್ಟರ ಮಟ್ಟಿಗೆ ಹೀನಾಯ ಸ್ಥಿತಿ ತಲುಪಿದೆ. ಸಮೀಕ್ಷೆ ಮತ್ತು ಗ್ರಾಮಗಳ ನಕಾಶೆ ಪ್ರಕಾರ ಬೆಂಗಳೂರು ನಗರ ಪ್ರದೇಶದ 937 ಕೆರೆ ದಂಡೆಗಳಲ್ಲಿನ 26,368 ಎಕರೆ ಪ್ರದೇಶದಲ್ಲಿ 1848 ಎಕರೆಯಷ್ಟು ಪ್ರದೇಶ ಒತ್ತುವರಿಯಾಗಿದೆ.

ಇನ್ನು ಮಲಿನಗೊಂಡು ಬಳಕೆಗೆ ಯೋಗ್ಯವಲ್ಲದಂತಾದ ಕೆರೆಗಳು, ಶುದ್ಧೀಕರಣಗೊಳಿಸದೆ ಬಿಟ್ಟ ಕೊಳಚೆ ನೀರಿನಲ್ಲಿ ಕಳೆ ಬೆಳೆದು ಕೆರೆಯ ಭೂಭಾಗ ಒಣಗಿ ಒತ್ತುವರಿಯಾದ್ದ್ದದೂ ಇದೆ.

`ಬಿಬಿಎಂಪಿ ಅಥವಾ ಬಿಡಿಎ ಕೇವಲ 135 ಕೆರೆಗಳ ಸಮರ್ಪಕ ನಿರ್ವಹಣೆ ಮಾಡುವಲ್ಲಿಯೂ ವಿಫಲವಾಗಿವೆಯೇ? ಹೀಗಿದ್ದ ಮೇಲೆ ಕರ್ನಾಟಕದಲ್ಲಿ ಕೆರೆ ಅಭಿವೃದ್ಧಿಗೆಂದೇ ರೂಪುಗೊಂಡಿರುವ `ಕೆರೆ ಅಭಿವೃದ್ಧಿ ಪ್ರಾಧಿಕಾರ~ಕ್ಕೆ (ಲೇಕ್ ಡೆವಲೆಪ್‌ಮೆಂಟ್ ಅಥಾರಿಟಿ-ಎಲ್‌ಡಿಎ) ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳಲು ಸೂಕ್ತ ಅಧಿಕಾರವನ್ನು ಕೊಡಬಾರದೇಕೆ? ಸಂಸ್ಥೆಗಳ ಕಾಯ್ದೆ (ಸೊಸೈಟಿ ಆ್ಯಕ್ಟ್) ಅಡಿಯಲ್ಲಿ ನೋಂದಣಿಯಾಗಿರುವುದು ಎಲ್‌ಡಿಎ.
 
ಹಾಗಾಗಿ ಆರೋಪಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ಅದಕ್ಕೆ ಇಲ್ಲ. ಇದರಿಂದಾಗಿ ಒತ್ತುವರಿ ಮಾಡುವವರಿಗೆ ಕಡಿವಾಣವಿಲ್ಲದಂತಾಗಿದೆ. ಎರಡು ವರ್ಷದ ಹಿಂದೆಯೇ ಕೆರೆ ಅಭಿವೃದ್ಧಿ ಪ್ರಾಧಿಕಾರಿವನ್ನು ಕಾನೂನು ಕ್ರಮ ತೆಗೆದುಕೊಳ್ಳುವ ಸಂಸ್ಥೆಯಾಗಿ ಮಾರ್ಪಡಿಸಲು ಕರಡು ಮಸೂದೆ ರೂಪಿಸಲಾಗಿತ್ತು.

ಆದರೆ ಇದುವರೆಗೆ ಮಸೂದೆಗೆ ವಿಧಾನಮಂಡಲದಲ್ಲಿ ಅಂಕಿತ ಮುದ್ರೆ ಸಿಕ್ಕಿಲ್ಲ. ಎಲ್‌ಡಿಎಗೆ ಕಾನೂನು ಕ್ರಮ ತೆಗೆದುಕೊಳ್ಳುವ ಅಧಿಕಾರ ನೀಡದ ಹೊರತು ಕೆರೆಗಳ ನಾಶ ತಡೆಯುವುದು ಸಾಧ್ಯವೇ ಇಲ್ಲ~ ಎನ್ನುತ್ತಾರೆ ಪಕ್ಷಿ ವಿಜ್ಞಾನಿ ಮತ್ತು ಬಿಇಟಿ (ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್) ಸದಸ್ಯ ಜಫರ್ ಫ್ಯೂಟ್‌ಹ್ಯಾಲಿ.

`ಈ ವರ್ಷ ಎಲ್‌ಡಿಎ ಕಾನೂನು ಕ್ರಮ ಜಾರಿಗೊಳಿಸುವ ಸಂಸ್ಥೆಯಾಗಿ ಬಲಗೊಳ್ಳುವ ಭರವಸೆಯಿದೆ. ಹೀಗಾದರೆ ಒತ್ತುವರಿ ಮತ್ತು ಕೆರೆಗಳ ಮಾಲಿನ್ಯಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಅಧಿಕಾರ ದೊರಕಿದಂತಾಗುತ್ತದೆ~ ಎಂಬುದು ವಿಜ್ಞಾನ ಮತ್ತು ಪರಿಸರ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಕನ್ವರ್ ಪಾಲ್ ಅವರ ವಿಶ್ವಾಸ.

ಕನ್ವರ್ ಮಾತು ನಿಜವಾದಲ್ಲಿ ನೀರನ್ನು ಉಳಿಸುವ ಮೊದಲ ಹೆಜ್ಜೆಯಾಗಿ ಸುಮಾರು 40 ಕೆರೆಗಳ ಪುನಶ್ಚೇತನ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಬಹುದು. ಬೆಂಗಳೂರಿನ 135 ಕೆರೆಗಳನ್ನು ಪುನಶ್ಚೇತನಗೊಳಿಸುವಂತೆ 2010ರಲ್ಲಿಯೇ ಬಿಬಿಎಂಪಿಗೆ ಸರ್ಕಾರಿ ಆದೇಶ ಜಾರಿಯಾಗಿತ್ತು. ಈ ವಿಷಯವಾಗಿ ಬಿಬಿಎಂಪಿ ಇತ್ತೀಚೆಗೆ ಬಾಯಿಬಿಟ್ಟು, ತನ್ನಲ್ಲಿ ಕೇವಲ 17 ಕೆರೆಗಳನ್ನು ನಿರ್ವಹಿಸುವಷ್ಟು ಮಾತ್ರ ಹಣವಿದ್ದು, ಇನ್ನುಳಿದ ಕೆರೆಗಳ ಅಭಿವೃದ್ಧಿ ಹೊಣೆಯನ್ನು ಬಿಡಿಎಗೆ ವರ್ಗಾಯಿಸಬೇಕೆಂಬ ಬೇಡಿಕೆ ಮುಂದಿಟ್ಟಿದೆ.

ಬಿಬಿಎಂಪಿ ಅಭಿವೃದ್ಧಿ ಕಾಮಗಾರಿ ವಹಿಸಿಕೊಂಡ 17 ಕೆರೆಗಳಲ್ಲೂ ಅಷ್ಟೇನೂ ಬೆಳವಣಿಗೆಯಾಗಿಲ್ಲ. ಬೇಲಿ ಹಾಕಿದ್ದು, ಒತ್ತುವರಿಯಾದ ಒಂದಿಷ್ಟು ಭಾಗಗಳನ್ನು ಮತ್ತೆ ವಶಪಡಿಸಿಕೊಂಡಿದ್ದು ಹಾಗೂ ಹೂಳೆತ್ತುವ ಕೆಲಸ ಸ್ವಲ್ಪ ಮಟ್ಟಿಗೆ ಆಗಿದೆಯಷ್ಟೆ. ಈ ವಿಧಾನಗಳ ಹೊರತಾಗಿ ಕೆರೆಗಳನ್ನು ಒಳ್ಳೆ ಗುಣಮಟ್ಟದಲ್ಲಿ ಉಳಿಸಿಕೊಳ್ಳುವ ಮಾರ್ಗವೆಂದರೆ ಕೆರೆಗಳಿಗೆ ರಾಜಕಾಲುವೆ ನಿರ್ಮಾಣದ ಮೂಲಕ ಅಂತರ್‌ಸಂಪರ್ಕ ಕಲ್ಪಿಸುವುದು.

ಮಳೆ ನೀರನ್ನು ಕೆರೆಯ ಕಡೆಗೆ ಹಾಯಿಸುವ ಈ ಮಾರ್ಗದಿಂದ ಕೆರೆಯ ನೀರನ್ನು ಕಾಪಾಡಿ ಕೊಳ್ಳಬಹುದು. ಅಷ್ಟೇ ಅಲ್ಲ, ನೀರು ಶುದ್ಧೀಕರಣ ಮತ್ತು ಮಳೆ ನೀರು ಸಂಗ್ರಹದಿಂದ ಸುಮಾರು 50 ಲಕ್ಷ ಜನರ ಅವಶ್ಯಕತೆಗಳನ್ನು ಪೂರೈಸಬಹುದು ಎಂಬುದು ಹಲವು ತಜ್ಞರ ಅಭಿಪ್ರಾಯ.

ಈಗಾಗಲೇ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಒಟ್ಟಾರೆಯಾಗಿ 500 ಎಂಎಲ್‌ಡಿ ಸಾಮರ್ಥ್ಯದ ಒಳಚರಂಡಿ ನೀರು ಶುದ್ಧೀಕರಣ ಘಟಕಗಳನ್ನು ನಿರ್ಮಿಸಿದೆ. ಆದರೆ, ಸಮರ್ಪಕ ನಿರ್ವಹಣೆಯಿಲ್ಲದೆ ಅದೂ ವ್ಯರ್ಥವಾಗಿದೆ. ಎಂಟು ಎಂಎಲ್‌ಡಿ ಶುದ್ಧೀಕರಣ ಘಟಕದ ಅವಶ್ಯಕತೆ ಇರುವೆಡೆ ಕೇವಲ ಎರಡು ಎಂಎಲ್‌ಡಿ ಸಾಮರ್ಥ್ಯದ ಅಳವಡಿಸಿರುವ ಉದಾಹರಣೆಗಳಿವೆ.
 
`ಈ ರೀತಿ ಅಸಮರ್ಪಕ ವ್ಯವಸ್ಥೆಯಿಂದ ನೀರು ಹಲವು ರೀತಿಯಲ್ಲಿ ಪೋಲಾಗುತ್ತಿದೆ~ ಎನ್ನುತ್ತಾರೆ `ಸೆಂಟರ್ ಫಾರ್ ಪಾಲಿಸೀಸ್ ಅಂಡ್ ಪ್ರ್ಯಾಕ್ಟೀಸಸ್~ನ ಅಧ್ಯಕ್ಷ ವಿ. ಬಾಲಸುಬ್ರಮಣಿಯನ್.

`ಇಂತಹ ಪುನಶ್ಚೇತನ ಕಾರ್ಯವನ್ನು ಬಿಡಬ್ಲುಎಸ್‌ಎಸ್‌ಬಿ ಯಲಹಂಕ ಮತ್ತು ಲಾಲ್‌ಬಾಗ್‌ನಲ್ಲಿ ಸಣ್ಣ ಮಟ್ಟದಲ್ಲಿ ಕೈಗೊಂಡಿದೆ. 2014ರ ವೇಳೆಗೆ ಮಳೆ ನೀರು ಮತ್ತು ಕೊಳಚೆ ನೀರಿನ ಹರಿವಿನಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚು ಬದಲಾವಣೆಯಾಗುತ್ತದೆ~ ಎಂದು ಭರವಸೆ ನೀಡುತ್ತಾರೆ ಜಲ ಮಂಡಳಿಯ ಕಾರ್ಯನಿರ್ವಾಹಕ ಇಂಜಿನಿಯರ್ ವಿ. ಸಿ. ಕುಮಾರ್.

ಬೆಂಗಳೂರಿನ ಅರ್ಧದಷ್ಟು ಜನಸಂಖ್ಯೆಯಿರುವ ಸಿಂಗಪೂರ್‌ನಲ್ಲಿ ನೀರಿಗೆ ಸಂಬಂಧಪಟ್ಟ ಇಂತಹ ಹಲವು ಯೋಜನೆಗಳು ಯಶಸ್ಸು ಕಂಡಿವೆ. ಅಲ್ಲಿ ಶೇ. 30ರಷ್ಟು ಶುದ್ಧೀಕರಣಗೊಂಡ ನೀರನ್ನೇ ಉಪಯೋಗಿಸಲಾಗುತ್ತದೆ. ನೀರಿನ ಸಮಸ್ಯೆ ವಿಷಯದಲ್ಲಿ ಕಾನೂನು ಜಾರಿಗೆ ತರುವಲ್ಲಿ ಅಧಿಕಾರಿಗಳು ಕೂಡ ವಿಫಲರಾಗಿದ್ದಾರೆ.

1974ರ ಜಲ ಕಾಯ್ದೆಯ ಪ್ರಕಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಜಲ ಮಾಲಿನ್ಯ ಅಥವಾ ಸಂಬಂಧಿಸಿದ ಯಾವುದೇ ಅವ್ಯವಹಾರದಲ್ಲಿ ಭಾಗಿಯಾದವರನ್ನು ಶಿಕ್ಷೆಗೆ ಒಳಪಡಿಸುವ ಅಧಿಕಾರವಿದೆ. ಆದರೆ ಕೆಎಸ್‌ಪಿಸಿಬಿ ಇದುವರೆಗೆ ಒಬ್ಬರ ವಿರುದ್ಧವೂ ಇಂಥ ಶಿಸ್ತುಕ್ರಮ ತೆಗೆದುಕೊಂಡಿಲ್ಲ.

-ಲೇಖಕಿ ಹವ್ಯಾಸಿ ಪತ್ರಕರ್ತೆ (ಮುಂದಿನ ಭಾಗ: ಸೋಮವಾರದ `ಮೆಟ್ರೊದಲ್ಲಿ~)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT