ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ-ಕಟ್ಟೆ ಅಂಗಳದ ಮಣ್ಣಿಗೆ ರೈತರ ಲಗ್ಗೆ

Last Updated 22 ಜುಲೈ 2012, 6:10 IST
ಅಕ್ಷರ ಗಾತ್ರ

ಅರಸೀಕೆರೆ: ತಾಲ್ಲೂಕಿನಲ್ಲಿ ಈ ಬಾರಿ ವರುಣನ ಅವಕೃಪೆಯಿಂದ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬಹುತೇಕ ಕೆರೆ-ಕಟ್ಟೆಗಳು ನೀರಿಲ್ಲದೆ ಭಣಗುಡುತ್ತಿವೆ. ಮಳೆಯನ್ನೇ ನಂಬಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದರೆ ಇನ್ನೂ ಕೆಲವು ರೈತರು ಈ ಸಮಯವನ್ನೇ ವರವಾಗಿ ಮಾಡಿಕೊಂಡಿದ್ದಾರೆ. ಕೆರೆಯ ಒಡಲಲ್ಲಿರುವ ಗೋಡನ್ನು ಹೊಲ ತೋಟಗಳಿಗೆ ಸಾಗಿಸುತ್ತಿದ್ದಾರೆ.

ಹತ್ತಾರು ವರ್ಷಗಳಿಂದ ಸತತ ಬೆಳೆ ಬೆಳೆದ ಪರಿಣಾಮ ಜಮೀನಿನಲ್ಲಿ ಮಣ್ಣಿನ ಫಲವತ್ತತೆ ಮತ್ತು ಇಳುವರಿ ಕಡಿಮೆಯಾಗುತ್ತಾ ಬಂದಿದೆ. ಹೀಗಾಗಿ ರೈತರು ಆಧುನಿಕ ಕೃಷಿ ಪದ್ಧತಿಗೆ ಮಾರು ಹೋಗಿ ಬೀಜ ಬಿತ್ತನೆ ವೇಳೆ ರಸಗೊಬ್ಬರವನ್ನು ಭೂಮಿಗೆ ಹಾಕಿ ಇಳುವರಿ ಪಡೆಯುತ್ತಿದ್ದರು. ಅಲ್ಲದೆ ಇತ್ತೀಚೆಗೆ ಕಾಲ ಕಾಲಕ್ಕೆ ಮಳೆ ಬಾರದೇ ಬೆಳೆ ಬಾರದೆ ನಷ್ಟ ಅನುಭವಿಸುತ್ತಿದ್ದರು.

ಆದರೆ ಈ ವರ್ಷ ಮುಂಗಾರು ಹಂಗಾಮಿನಿಂದಲೂ ಸರಿಯಾಗಿ ಮಳೆ ಬರದೇ ಇರುವುದರಿಂದ ಕೆರೆಯಲ್ಲಿ ನೀರಿಲ್ಲದೆ ಇದನ್ನೇ ಒಳ್ಳೆ ಸಮಯ ಎಂದು ಭಾವಿಸಿರುವ ರೈತರು ಕೆರೆಯ ಅಂಗಳದಲ್ಲಿನ ಗೊಬ್ಬರದಂತಹ ಫಲವತ್ತಾದ ಮಣ್ಣನ್ನು ತಮ್ಮ ತೆಂಗಿನ ತೋಟ ಮತ್ತು ಹೊಲಗಳಿಗೆ ಟ್ರಾಕ್ಟರ್‌ಗಳಲ್ಲಿ ಸಾಗಿಸುತ್ತಿರುವ ದೃಶ್ಯ ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿದೆ.

ಕೆರೆಯ ಗೋಡನ್ನು ತೋಟ, ಹೊಲ ಹಾಗೂ ಗದ್ದೆಗಳಿಗೆ ಹಾಕುವುದರಿಂದ ರಸ ಗೊಬ್ಬರದ ಅವಶ್ಯಕತೆ ಕಡಿಮೆಯಾಗುವುದರ ಜತೆಗೆ ಹಣದ ಖರ್ಚು ಉಳಿ ಯುತ್ತದೆ. ಇಳುವರಿ ಪ್ರಮಾಣ ಕೂಡಾ ಹೆಚ್ಚಾಗುತ್ತದೆ. ಅಲ್ಲದೆ ಕೆರೆಯ ಆಳ ಹೆಚ್ಚಿ ನೀರು ಸಂಗ್ರ ಹಣಾ ಸಾಮರ್ಥ್ಯವೂ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯ ರೈತ ಸಮುದಾಯದ್ದು.

ತಾಲ್ಲೂಕಿನ ಮಾಡಾಳು ಗ್ರಾಮದ ಕೆರೆ ಜನ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುತ್ತಿತ್ತು. ಮಳೆ ಇಲ್ಲದೆ ಕಳೆದ ಒಂದು ದಶಕದಿಂದ ಭಣಗುಡುತ್ತಿದೆ. ಪ್ರತಿನಿತ್ಯ ಎರಡು-ಮೂರು ಜೆಸಿಬಿ ಯಂತ್ರಗಳು ಬಿಡುವಿಲ್ಲದೆ ಹತ್ತಾರು ಟ್ರಾಕ್ಟರ್‌ಗಳಿಗೆ ಮಣ್ಣು ತುಂಬಿಕೊಡುತ್ತಿವೆ. ಕಳೆದ ಬಾರಿ ರಸಗೊಬ್ಬರ ಹಾಕಿದ್ದರೂ ಬೆಳೆಯೇ ಬರಲಿಲ್ಲ.

ರಸಗೊಬ್ಬರ ಹಾಕಿ  ಭೂಮಿ ಬಂಜರಾಗುತ್ತಿದೆ. ಆದ್ದರಿಂದ ಈ ಬಾರಿ ಭೂಮಿಯಲ್ಲಿ ಫಲವತ್ತತೆ ಹೆಚ್ಚು ಮಾಡಲು ಕೆರೆಯ ಅಂಗಳದಲ್ಲಿರುವ ಮಣ್ಣು ಹೆಚ್ಚು ಫಲವತ್ತಾಗಿರುವುದರಿಂದ ಮತ್ತು ಉಚಿತವಾಗಿ ಸಿಗುವುದರಿಂದ ಮಣ್ಣನ್ನು ಜಮೀನಿಗೆ ಸಾಗಿಸುತ್ತಿದ್ದೇವೆ ಎಂದು ಡಿ.ಎಂಕುರ್ಕೆ ರೈತ ರಾಮಲಿಂಗಪ್ಪ, ಮರುಳಪ್ಪ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT