ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ದಂಡೆಯಲ್ಲಿ ದಣಿವು ಆರಿಸಿಕೊಂಡ ರೈತರು

Last Updated 5 ಜುಲೈ 2011, 6:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆವರು ಹರಿಸಿ ಹದ ಮಾಡಿ ಉತ್ತು, ಬಿತ್ತಿ ಹೊನ್ನು ಬೆಳೆದ ಮಣ್ಣು ಬಹುರಾಷ್ಟ್ರೀಯ ಕಂಪನಿಗಳ ಪಾಲಾಗುವುದನ್ನು ಕಂಡು ಮರುಗಿದ ಆ ಜೀವಗಳು ಹತ್ತಾರು ಕಿಲೋಮೀಟರ್ ದಾಟಿ ಹೋರಾಟಕ್ಕಾಗಿ ಬಂದಿದ್ದರು.

ವಿದೇಶಿ ಕಂಪೆನಿಯ ಧನದಾಹಿಗಳಿಗೆ ತಮ್ಮ ಜಮೀನನ್ನು ಧಾರೆ ಎರೆಯುವ ಸರ್ಕಾರದ ನಿರ್ಧಾರದ ವಿರುದ್ಧ ಸೆಟೆದು ನಿಂತ ಅವರು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ ವಾಪಸಾಗುವಾಗ ದಣಿವು ಆರಿಸಿಕೊಳ್ಳಲು ಆಯ್ದುಕೊಂಡದ್ದು ಉಣಕಲ್ ಕೆರೆಯ ಸುಂದರ ಪರಿಸರವನ್ನು.

ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಪೋಸ್ಕೊ ಹಾಗೂ ಎಸ್.ಆರ್. ಗ್ರೂಪ್ ನಿರ್ಮಿಸಲು ಉದ್ದೇಶಿಸಿರುವ ಉಕ್ಕು ಕಾರ್ಖಾನೆ ಹಾಗೂ ಅನಿಲ ವಿದ್ಯುತ್ ಸ್ಥಾವರಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬೀದಿಗಳಿದ ರೈತರು ಧಾರವಾಡದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿದ್ದರು.

ಹಳ್ಳಿಗುಡಿ, ಮೇವುಂಡಿ, ಪೇಟೆ ಆಲೂರು, ಜಂತ್ಲಿ ಶಿರೂರ ಮುಂತಾದ ಹಳ್ಳಿಗಳ 150ಕ್ಕೂ ಹೆಚ್ಚು ರೈತರು ಲಾರಿಯಲ್ಲಿ ಆಗಮಿಸಿ ಹುಬ್ಬಳ್ಳಿ-ಧಾರವಾಡ ರಸ್ತೆಯ ನಡುವೆ ಇರುವ ಕರ್ನಾಟಕ ಕೆಐಎಡಿಬಿ ಕಚೇರಿ ಬಳಿ ಮೂರು ತಾಸುಗಳಿಗೂ ಹೆಚ್ಚು ಕಾಲ ಧರಣಿ ನಡೆಸಿದ್ದರು.

ಮಳೆ ಹಾಗೂ ಬಿಸಿಲಿನ ನಡುವೆ ಕೆಚ್ಚೆದೆಯಿಂದ ಕುಳಿತ, ಅಧಿಕಾರಿಗಳ ಮುಂದೆ ಕಣ್ಣೀರು ಹಾಕಿ ನೋವು ನಿವೇದಿಸಿಕೊಂಡ ಅವರು ಊರಿಗೆ ಮರಳುವಾಗ ಉಣಕಲ್ ಕೆರೆಯ ದಂಡೆಯಲ್ಲಿ ಕುಳಿತು ಚುರುಮುರಿ ತಿಂದು, ಕೆರೆಯ ತಂಗಾಳಿಯನ್ನು     ಉಂಡು `ಹೊಟ್ಟೆ ತುಂಬಿಸಿ~     ಕೊಂಡರು.

ಈ ಸಂದರ್ಭದಲ್ಲಿ ಪ್ರಜಾವಾಣಿಯೊಂದಿಗೆ ಮಾತನಾಡಿದ ರೈತರು ಯಾವುದೇ ಕಾರಣಕ್ಕೂ ಜಮೀನು ನೀಡಲಾರೆವು, ಈಗಾಗಲೇ ವಿವಿಧ ಸ್ವಾಮೀಜಿಗಳು ಹಾಗೂ ಜನಪ್ರತಿನಿಧಿಗಳು ನಮಗೆ ಬೆಂಬಲ ನೀಡಿದ್ದಾರೆ. ಭೂಮಿ ನೀಡಲು ಯಾರೂ ಮುಂದೆ ಬಂದಿಲ್ಲ, ರಾಜಕೀಯ ಒತ್ತಡ ಹಾಕಿ ಜಮೀನು ನೀಡುವಂತೆ ಮಾಡಿದರೆ ಅದನ್ನು ಕೂಡ ವಿರೋಧಿಸಲಾಗುವುದು ಎಂದು ಹೇಳಿದರು.

ವಿಷವಾಗಲಿರುವ ನೀರು: ಈ ಕಂಪೆನಿಗಳು ಇಲ್ಲಿಗೆ ಕಾಲಿಟ್ಟರೆ ಕುಡಿಯಲು ಬಳಸುವ ನೀರು ವಿಷವಾಗಲಿದೆ ಎಂದು ರೈತರೊಂದಿಗೆ ಆಗಮಿಸಿದ ಮುಂಡರಗಿ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ವೈ.ಎನ್. ಗೌಡರ ತಿಳಿಸಿದರು.

`ಇಲ್ಲಿರುವ ಐದು ಕೆರೆಗಳ ನೀರನ್ನು ಕುಡಿಯಲು ಹಾಗೂ ಎರಡು ಕೆರೆಗಳ ನೀರನ್ನು ನೀರಾವರಿಗೆ ಬಳಸಲಾಗುತ್ತದೆ. ಕಂಪೆನಿಗಳು ಬಂದರೆ ಈ ಎಲ್ಲ ಕೆರೆಗಳ ನೀರು ಕೂಡ ಮಲಿನವಾಗಲಿದೆ. ಉಕ್ಕು ಫ್ಯಾಕ್ಟರಿಯಿಂದ ಹೊರಸೂಸುವ ರಾಸಾಯನಿಕಗಳು ವಿಷಾನಿಲಗಳು ನೀರಿನಲ್ಲಿ ಸೇರಿದರೆ ನೀರು ಕೂಡ ವಿಷವಾಗುತ್ತದೆ. ಬಳ್ಳಾರಿಯಲ್ಲಿ ಜಿಂದಾಲ್ ಕಾರ್ಖಾನೆಯಿಂದ ಹೊರಸೂಸಿದ ರಾಸಾಯನಿಕದಿಂದಾಗಿ ಕಳೆದ ವರ್ಷ ಡೆಂಗೆ ಜ್ವರ ಕಾಡಿದ್ದು ಇದಕ್ಕೆ ಉದಾಹರಣೆ~ ಎಂದು ಅವರು ಹೇಳಿದರು.

ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಲಕ್ಷ್ಮಣ ದೇಸಾಯಿ, ಎನ್‌ಸಿಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕ ಜವಳಿ, ರೈತ ಮುಖಂಡರಾದ ಯಲ್ಲಪ್ಪ ಹಾಗಲದ, ಬಿ.ಆರ್. ಬೂದಿಹಾಳ, ಆರ್.ವಿ. ಜೋಶಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗಪ್ಪ ಹುಯಿಲಗೋಳ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT