ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸದ ಆಮಿಷ: ವಂಚನೆ ಆರೋಪ

Last Updated 12 ಜನವರಿ 2012, 10:45 IST
ಅಕ್ಷರ ಗಾತ್ರ

ತುಮಕೂರು: ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ರೈತರನ್ನು ಸಂಘಟಿಸುವ ಸಂಯೋಜಕ, ಫೀಲ್ಡ್ ಆಫೀಸರ್ ಕೆಲಸ ಕೊಡುವುದಾಗಿ ಭರವಸೆ ನೀಡಿ ನೂರಾರು ಯುವಕರಿಂದ ಠೇವಣಿ ಪಡೆದು ಸಂಸ್ಥೆಯೊಂದು ವಂಚಿಸಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.

ಕೆಲಸಕ್ಕಾಗಿ ಕಚೇರಿಗೆ ಅಲೆದು ಸುಸ್ತಾದ ಯುವಕರು ಬುಧವಾರ ನಗರದ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಜಮಾವಣೆಗೊಂಡು ಸಂಸ್ಥೆ ವಿರುದ್ಧ ದೂರಿದರು.

ಅಶೋಕ ನಗರದಲ್ಲಿ ಮಲ್ನಾಡ್ ಗ್ರೂಫ್ ಹೆಸರಿನಲ್ಲಿ ಶಾಖೆ ಹೊಂದಲಾಗಿದೆ. ತಿಪಟೂರು ಲಕ್ಕಿಹಳ್ಳಿಯಲ್ಲಿ ಸಂಸ್ಥೆ ಕೇಂದ್ರ ಕಚೇರಿ ಇರುವುದಾಗಿ ರಸೀದಿಯಲ್ಲಿ ವಿಳಾಸ ನೀಡಲಾಗಿದೆ. ಈ ಸಂಸ್ಥೆ ಎಂಡಿ ಎಂದು ಹೇಳಿಕೊಂಡ ಗುರು ಪ್ರಸಾದ್, ಕಾರ್ಯದರ್ಶಿ ಬಿ.ಎಲ್. ನಂದೀಶ್ ಜನರನ್ನು ನಂಬಿಸಿ ಮೋಸ ಮಾಡಿದ ವರು. ಪತ್ರಿಕೆಗಳಲ್ಲಿ ಕರಪತ್ರದ ಮೂಲಕ ಸಂಸ್ಥೆ ಜಾಹೀರಾತು ನೀಡಿತ್ತು ಎಂದು ವಂಚನೆಗೊಳಗಾದ ವಿನಾಯಕ ದೂರಿದರು.

ಉದ್ಯೋಗಕ್ಕಾಗಿ ಹಣ ಪಡೆಯುವ ಮುನ್ನ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರಿ ಕಾಲೇಜು, ಶಾಲೆಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಇದಕ್ಕಾಗಿ ಅರ್ಜಿಗಾಗಿ ರೂ. 250 ಕಟ್ಟಿಸಿಕೊಂಡಿದ್ದರು. ತುಮಕೂರು ಎಂಪ್ರೆಸ್ ಕಾಲೇಜಿನಲ್ಲೂ ಪರೀಕ್ಷೆ ನಡೆದಿತ್ತು. ಪರೀಕ್ಷೆ ನಂತರ ಸಂದರ್ಶನಕ್ಕೆ ಕರೆದು ಕೆಲಸ ಕೊಡುವು ದಾಗಿ ಹೇಳಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಪಡೆದವರು ಪರೀಕ್ಷೆ ಬರೆದಿದ್ದಾರೆ. ಸಂಯೋಜಕ ಹುದ್ದೆಗೆ ರೂ. 10 ಸಾವಿರ, ಫೀಲ್ಡ್ ಆಫೀಸರ್ ಹುದ್ದೆಗೆ ರೂ. 5 ಸಾವಿರ ಠೇವಣೆ ಪಡೆಯಲಾಗಿತ್ತು ಎಂದು ವಿವರಿಸಿದರು.

ಹಣ ಕಟ್ಟಿದ ನಂತರ ತರಬೇತಿ ನೀಡುವುದಾಗಿ ತುಮಕೂರು ಕಚೇರಿಗೆ ಬರುವಂತೆ ತಿಳಿಸಿದ್ದರು. ಆದರೆ ತರಬೇತಿ ಪಡೆಯಲು ಬಂದರೆ ಕಚೇರಿ ಬಾಗಿಲು ಹಾಕಿತ್ತು. ದೂರವಾಣಿ ಕರೆ ಮಾಡಿದರೆ ಮೊದಲಿಗೆ ನಾಳೆ, ನಾಡಿದ್ದು ತರಬೇತಿ ಕೊಡುವುದಾಗಿ ಉತ್ತರಿಸುತ್ತಿದ್ದ ನಂದೀ ಶ್, ಮಂಗಳವಾರದಿಂದ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ ಎಂದು ತುಮಕೂರಿನ ರಮೇಶ್ ಮಾಧ್ಯಮದವರ ಬಳಿ ಅಳಲು ತೋಡಿಕೊಂಡರು.

ಹಣ ಕಟ್ಟಿಸಿಕೊಳ್ಳುವಾಗ ಅಭ್ಯರ್ಥಿ ಗಳಿಗೆ ನಂಬಿಕೆ ಹುಟ್ಟಲೆಂದು ನಂದೀಶ್, ಪತ್ರಿಕೆಯೊಂದರ ಪತ್ರಕರ್ತನ ಗುರುತು ಚೀಟಿ ಕೂಡ ನೀಡಿದ್ದಾರೆ. ಅಭ್ಯರ್ಥಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ ಬಳಿಕ ಕಂಪೆನಿ ಪರವಾಗಿ ಬಂದ ಇಬ್ಬರು ಮಧ್ಯವರ್ತಿಗಳು ಗುರುವಾರ ಅಭ್ಯರ್ಥಿ ಗಳಿಗೆ ಹಣ ವಾಪಸ್ ಮಾಡುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT