ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಳವರ್ಗದ ಸಂತರು ಜೀವಸಂಸ್ಕೃತಿ ಕಟ್ಟಿಕೊಟ್ಟರು

Last Updated 12 ಅಕ್ಟೋಬರ್ 2011, 6:25 IST
ಅಕ್ಷರ ಗಾತ್ರ

ಶಿವಮೊಗ್ಗ: ದೇಶದ ಬಹುದೊಡ್ಡ ಕೆಳ ಜಾತಿಯ ಸಂತರು, ಮಹರ್ಷಿಗಳು ಹಾಗೂ ದಾರ್ಶನಿಕರನ್ನು ಆಯಾ ಜಾತಿಗೆ ಸೀಮಿತಗೊಳಿಸುವ ಕೃತ್ಯವನ್ನು ಸಾಂಸ್ಕೃತಿಕ ರಾಜಕಾರಣ ಮಾಡಿಕೊಂಡು ಬಂದಿದೆ ಎಂದು ವಿಮರ್ಶಕ ಡಾ.ಕುಂಸಿ ಉಮೇಶ್ ವಿಶ್ಲೇಷಿಸಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ  ಆಶ್ರಯದಲ್ಲಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು. 

ಎಲ್ಲ ಸಂತರು, ಮಹರ್ಷಿಗಳು ಹಾಗೂ ದಾರ್ಶನಿಕರ ಬಗ್ಗೆ ಏಕರೂಪಿ ದಂತಕಥೆಗಳನ್ನು ಸೃಷ್ಟಿಸಲಾಗಿದೆ. ಉನ್ನತವಾದದ್ದನ್ನು ಮೇಲ್ಜಾತಿ ಜನ ಮಾತ್ರ ಮಾಡಲು ಸಾಧ್ಯ; ಹಾಗೆಯೇ ಯಾರಿಗೆ ಬೇಡವಾದದ್ದನ್ನು ಕೆಳಜಾತಿಯ ಜನ ಮಾಡಿದ್ದಾರೆಂಬ ಅಪಕಲ್ಪನೆಗಳನ್ನು ಬಿತ್ತಲಾಗಿದೆ. ಇಂತಹ ಜಯಂತಿ ಅಥವಾ ಉತ್ಸವಗಳು ಜನರನ್ನು ಈ ಸಾಂಸ್ಕೃತಿಕ ರಾಜಕಾರಣದ ಆಚೆಗೆ ನೋಡುವಂತೆ ಪ್ರೇರೇಪಿಸಬೇಕು ಎಂದರು.
ವಾಲ್ಮೀಕಿ ರಾಮಾಯಣದಿಂದ ವಾಲ್ಮೀಕಿಯನ್ನು ಕೈಬಿಟ್ಟು ಕೇವಲ ರಾಮನನ್ನು, ವ್ಯಾಸಭಾರತದಿಂದ ವ್ಯಾಸನನ್ನು ಕೈಬಿಟ್ಟು ಕೇವಲ ಕೃಷ್ಣನನ್ನು ಮುನ್ನೆಲೆಗೆ ತರುವ ರಾಜಕಾರಣ ಇಂದಿಗೂ ನಡೆದಿದೆ ಎಂದು ಆರೋಪಿಸಿದರು.

ಭಾರತದ ಜೀವಸಂಸ್ಕೃತಿಯನ್ನು ಕಟ್ಟಿಕೊಟ್ಟವರು ಕೆಳವರ್ಗದ ಸಂತರು, ಮಹರ್ಷಿಗಳು ಎಂದ ಅವರು, ಆದರೆ, ಈಗ ಇಂತಹ ಶೂದ್ರಶಕ್ತಿಗಳನ್ನು ಪ್ರಜ್ಞಾಪೂರಕವಾಗಿ ನಿರ್ಲಕ್ಷ್ಯಿಸಲಾಗಿದೆ ಎಂದು ದೂರಿದರು.

 ಮಹರ್ಷಿ ರಚಿಸಿದ ರಾಮಾಯಣ ಸಮಾಜಶಾಸ್ತ್ರೀಯ, ಸಾಂಸ್ಕೃತಿಕ ಸಂಕಥನವಾಗಿ ಕಾಲಕಾಲಕ್ಕೆ ಬಂದಿದೆ. ಕಲ್ಯಾಣ ರಾಜ್ಯದ ಕಲ್ಪನೆಯನ್ನು ಮೊದಲು ಪರಿಚಯಿಸಿದ್ದು ಇದೇ ವಾಲ್ಮೀಕಿ. ಇಷ್ಟಲ್ಲದೇ, ಶಿಕ್ಷಣತಜ್ಞ, ಪರಿವರ್ತಕನಾಗಿ ಅವರು ಜಗತ್ತಿಗೆ  ಪರಿಚಿತರಾಗಿದ್ದಾರೆ. ಏಕಪತ್ನಿತ್ವ, ಸಹೋದರತ್ವದ ಪರಿಕಲ್ಪನೆಗಳನ್ನೂ ರಾಮಾಯಣದಲ್ಲಿ ಪರಿಚಯಿಸುವ ಮೂಲಕ ಮನುಷ್ಯನ ಆದರ್ಶದ ಬದುಕಿಗೆ ಹೊಸರೂಪವನ್ನು ತಂದುಕೊಟ್ಟಿದ್ದಾರೆ. ಇವತ್ತಿನ ಸ್ಥಿತಿಯಲ್ಲಿ ಅವರ ಈ ತತ್ವಗಳನ್ನು ಮುನ್ನೆಲೆಗೆ ತರುವ ಕೆಲಸ ಆಗಬೇಕಿದೆ ಎಂದರು.

ಉತ್ಸವ ಉದ್ಘಾಟಿಸಿದ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ ಮಾತನಾಡಿ, ಪರಂಪರೆಯ ಪ್ರೇರಣೆ ಇಲ್ಲದಿದ್ದರೆ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ವಾಲ್ಮೀಕಿ ಸಮುದಾಯ ತನ್ನ ಪರಂಪರೆಯಿಂದ ಪ್ರೇರಣೆ ಪಡೆಯಬೇಕು ಎಂದರು.

ಇಡೀ ಸಮಾಜದ ಒಳಿತಿಗಾಗಿ ವಾಲ್ಮೀಕಿ ತಪಸ್ಸು ಮಾಡಿದರು. ಆದರೆ, ಈಗ ಸಮಾಜದಲ್ಲಿರುವ ಮೌಢ್ಯವನ್ನು ತೊಡೆದು ಹಾಕಲು ವಾಲ್ಮೀಕಿ ತರಹದ ಏಕಾಗ್ರತೆಯ ತಪಸ್ಸು ಸಮಾಜದ ಮುಖಂಡರಿಗೆ ಸಾಧ್ಯವಾಗಬೇಕು ಎಂದು ಹೇಳಿದರು.

ಶಾಸಕ ಕೆ.ಜಿ. ಕುಮಾರಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ  ಜಿ.ಆರ್. ಮಂಜುಳಾ ಲಿಂಗರಾಜ್, ಉಪಾಧ್ಯಕ್ಷೆ ಕಮಲಮ್ಮ, ತಾ.ಪಂ. ಸದಸ್ಯರಾದ ಶಾರದಾ ರಂಗನಾಥ, ಗೀತಾ, ಜಿಲ್ಲಾಧಿಕಾರಿ ವಿ. ಪೊನ್ನುರಾಜ್, ಅಪರ ಜಿಲ್ಲಾಧಿಕಾರಿ ಶ್ರೀರಂಗಯ್ಯ,ಜಿ.ಪಂ. ಉಪ ಕಾರ್ಯದರ್ಶಿ ಹನುಮನರಸಯ್ಯ, ನಗರಸಭೆ ಆಯುಕ್ತ ರಮೇಶ್, ಸೂಡಾ ಆಯುಕ್ತ ಸದಾಶಿವಪ್ಪ, ಉಪ ವಿಭಾಗಾಧಿಕಾರಿ ವೈಶಾಲಿ, ವಾಲ್ಮೀಕಿ ಸಮಾಜದ ಮುಖಂಡರಾದ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಬಿ.ಟಿ. ಮಂಜುನಾಥ್ ಸ್ವಾಗತಿಸಿದರು. ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಟಿ. ಶಿವಪ್ಪ ವಂದಿಸಿದರು. ಕಾಶಿನಾಥ್ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಭೆ ಯಾರ ಸ್ವತ್ತೂ ಅಲ್ಲ
ಸಾಗರ: ಪ್ರತಿಭೆ ಎಂಬುದು ಯಾವುದೇ ಒಂದು ವರ್ಗದವರ ಸ್ವತ್ತೂ ಅಲ್ಲ ಎನ್ನುವುದಕ್ಕೆ ರಾಮಾಯಣ ಗ್ರಂಥ ರಚಿಸಿದ ವಾಲ್ಮೀಕಿಯೇ ಸಾಕ್ಷಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯ್ತಿ, ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರಾಮಾಯಣ ಗ್ರಂಥದ ಮೂಲಕ ವಾಲ್ಮೀಕಿ ಬಿತ್ತರಿಸಿರುವ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಸರ್ವಕಾಲಿಕ ಸತ್ಯವನ್ನು ಹೇಳುವ ರೀತಿಯಲ್ಲಿ ವಾಲ್ಮೀಕಿ ರಾಮಾಯಣದ ಪಾತ್ರಗಳು ಚಿತ್ರಣಗೊಂಡಿವೆ. ಇಂತಹ ಪಾತ್ರಗಳನ್ನು ಚಿತ್ರಿಸಿದ ವಾಲ್ಮೀಕಿ ನಿಜಕ್ಕೂ ಅಪೂರ್ವ ಕೆಲಸ ಮಾಡಿದ್ದಾರೆ ಎಂದರು.

ನಮ್ಮ ಸಂಸ್ಕೃತಿಗೆ ವಾಲ್ಮೀಕಿ ನೀಡಿರುವ ಕೊಡುಗೆ ಅನನ್ಯವಾದದ್ದು. ಅವರ ಜನ್ಮದಿನಾಚರಣೆ ಕೇವಲ ಸಾಂಕೇತಿಕವಾಗದೆ ವಾಲ್ಮೀಕಿ ಗ್ರಂಥಗಳ ಅಧ್ಯಯನ ಹಾಗೂ ವ್ಯಕ್ತಿತ್ವದ ವಿಶ್ಲೇಷಣೆಗೆ ದಾರಿ ಮಾಡಿಕೊಡಬೇಕು ಎಂದು ಹೇಳಿದರು.

ಉಪ ವಿಭಾಗಾಧಿಕಾರಿಡಾ.ಜಿ.ಎಲ್. ಪ್ರವೀಣ್‌ಕುಮಾರ್ ಮಾತನಾಡಿ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ವರ್ಗದಲ್ಲಿ ಜನಿಸಿದರೂ ಉನ್ನತ ಸಾಧನೆ ಮಾಡಲು ಸಾಧ್ಯ ಎನ್ನುವುದಕ್ಕೆ ವಾಲ್ಮೀಕಿ ಅತ್ಯುತ್ತಮ ಉದಾಹರಣೆ. ಅವರ ಸಾಧನೆ ನಮ್ಮ ಎಲ್ಲಾ ತಳಸಮುದಾಯದ ಪ್ರತಿಭಾವಂತರಿಗೆ ಸ್ಫೂರ್ತಿಯಾಗಬೇಕು ಎಂದರು.

ನಗರಸಭೆ ಅಧ್ಯಕ್ಷ ರಾಧಾಕೃಷ್ಣ ಬೇಂಗ್ರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಡಿ. ರವಿ, ಪೌರಾಯುಕ್ತ ರಾಮ ಪ್ರಸಾದ ಮನೋಹರ್, ತಹಶೀಲ್ದಾರ್ ಯೋಗೇಶ್ವರ್, ವಾಲ್ಮೀಕಿ ಸಮಾಜದ ಅಧ್ಯಕ್ಷ  ನಾಗೇಂದ್ರಪ್ಪ, ಈಶ್ವರಪ್ಪ ಹಾಜರಿದ್ದರು. ಅಭಿಲಾಷ ಪ್ರಾರ್ಥಿಸಿದರು. ಆರ್.ಶ್ರೀಧರ್ ಸ್ವಾಗತಿಸಿದರು. ಶಿವಕುಮಾರ್ ವಂದಿಸಿದರು. ನಾಗಭೂಷಣ್ ಕಾರ್ಯಕ್ರಮ ನಿರೂಪಿಸಿದರು.

 ಮಹಾನ್ ವ್ಯಕ್ತಿ ವಾಲ್ಮೀಕಿ
ಭದ್ರಾವತಿ: `ವಿವಿಧ ಸಮುದಾಯದ ಮಿಶ್ರಣವನ್ನು ರಾಮಾಯಣ ಗ್ರಂಥ ಮೂಲಕ ಸಾದರಪಡಿಸಿದ ವಾಲ್ಮೀಕಿ ರಾಷ್ಟ್ರ ಸಂಸ್ಕೃತಿ ಕಟ್ಟಿಕೊಟ್ಟ ಮಹಾನ್ ವ್ಯಕ್ತಿ~ ಎಂದು ಕುವೆಂಪು ವಿವಿ ಕನ್ನಡ ವಿಭಾಗ ಪ್ರಾಧ್ಯಾಪಕ ಡಾ.ಜಿ. ಪ್ರಶಾಂತನಾಯ್ಕ ಹೇಳಿದರು.

ಇಲ್ಲಿನ ವೀರಶೈವ ಸಭಾ ಭವನದಲ್ಲಿ  ತಾಲ್ಲೂಕು ಆಡಳಿತದಿಂದ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಹುಟ್ಟಿದ ಬೇಟೆಗಾರ, ಪಶುಪಾಲನಾ ಹಾಗೂ ಕೃಷಿ ಸಂಸ್ಕೃತಿ ಹುಟ್ಟುಹಾಕಿದ್ದು, ಶ್ರಮಿಕ ವರ್ಗ ಇವೆಲ್ಲವನ್ನು ವಿಸ್ತಾರವಾಗಿ ಕಾವ್ಯದ ಮೂಲಕ ವಿವರಿಸಿರುವ ವಾಲ್ಮೀಕಿ ಮಹರ್ಷಿ ಮಾನವ, ವಾನರ ಹಾಗೂ ದಾನವ ಸಂಸ್ಕೃತಿ ಬಿಂಬಿಸುವ ರಾಮಾಯಣ ಮಹಾಗ್ರಂಥ ರಚಿಸಿ, ಈ ರಾಷ್ಟ್ರಕ್ಕೆ ನೀಡಿರುವುದು ನಮ್ಮ ಸಾಂಸ್ಕೃತಿಕ ಪರಂಪರೆಯ ಉನ್ನತಿಗೆ ಹಿಡಿದ ಕೈಗನ್ನಡಿ ಎಂದು ವಿವರಿಸಿದರು.

ವಾಲ್ಮೀಕಿ, ವ್ಯಾಸ, ಕಾಳಿದಾಸ ಎಲ್ಲರೂ ಕೆಳಸ್ತರದಲ್ಲಿ ಹುಟ್ಟಿ ಬಂದ ಮಹಾನ್ ವ್ಯಕ್ತಿಗಳು. ಇವರು ರಚಿಸಿದ ಕಾವ್ಯಗಳು ಈ ಭೂಮಿ ಇರುವ ತನಕ ನಶಿಸುವುದಿಲ್ಲ. ಆದರೆ, ಇವರ ಸ್ಮರಣೆಗೆ ಬದಲಾಗಿ ನಾವು ಆ ಕಾವ್ಯದಲ್ಲಿ ಬರುವ ಪಾತ್ರಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿರುವುದು ವಿಪರ್ಯಾಸ ಎಂದರು.

ಶಾಸಕ ಬಿ.ಕೆ. ಸಂಗಮೇಶ್ವರ ಅಧ್ಯಕ್ಷತೆ ವಹಿಸಿದ್ದರು. ನಗರಸಭಾಧ್ಯಕ್ಷ ಬಿ.ಕೆ. ಮೋಹನ್  ಉದ್ಘಾಟನೆ  ನೆರವೇರಿಸಿದರು, ತಾ.ಪಂ. ಅಧ್ಯಕ್ಷ ಆರ್. ಹಾಲಪ್ಪ, ಉಪಾಧ್ಯಕ್ಷ ಶಾಂತಕುಮಾರ್, ಜಿ.ಪಂ. ಸದಸ್ಯಎಚ್.ಎಲ್. ಷಡಾಕ್ಷರಿ, ಎಪಿಎಂಸಿ ಅಧ್ಯಕ್ಷ ಎ.ಜಿ. ಶಿವಕುಮಾರ್, ಉಪಾಧ್ಯಕ್ಷ ದೇವರಾಜ್, ತಹಶೀಲ್ದಾರ್ ಬಿ. ಅಭಿಜಿನ್, ಆಯುಕ್ತ ರೇಣುಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಿದ್ದಾರ್ಥ ಅಂಧರ ಕೇಂದ್ರದ ವಿದ್ಯಾರ್ಥಿಗಳು ನಾಡಗೀತೆ, ರೈತಗೀತೆ ಹಾಡಿದರು. ತಾ.ಪಂ. ಪ್ರಭಾರ ಅಧಿಕಾರಿ ಟಿ.ಎಸ್. ರಾಮಚಂದ್ರ ಸ್ವಾಗತಿಸಿದರು. ಕೆ. ಮಂದರಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಮುಖ್ಯ ಬಸ್‌ನಿಲ್ದಾಣದಿಂದ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು. ವಿವಿಧ ಜಾನಪದ ಕಲಾ ಸಾಂಸ್ಕೃತಿಕ ತಂಡಗಳು, ವೇಷಭೂಷಣ ತೊಟ್ಟ ಯುವಕರ ಪಡೆ ನೋಡುಗರ ಮನಃ ಸೆಳೆಯಿತು.

ವಿಶ್ವವೇ ಸಾಕ್ಷಿ
ಹೊಸನಗರ: ವಿದ್ವತ್, ಬುದ್ಧಿವಂತಿಕೆ ಕೇವಲ ಒಂದು ವರ್ಗ, ಸಮುದಾಯ, ಸಮಾಜದ ಸ್ವತ್ತಲ್ಲ. ಉತ್ತಮ ಮಾರ್ಗದರ್ಶನದ ಫಲವಾಗಿ ಬೇಡನಾದ ವಾಲ್ಮೀಕಿ ಅಂತವರು ರಾಮಾಯಣದಂತಹ ಸಹ ಮಹಾಗ್ರಂಥ ರಚಿಸಿರುವುದಕ್ಕೆ ವಿಶ್ವವೇ ಸಾಕ್ಷಿಯಾಗಿದೆ ಎಂದು ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ಹೇಳಿದರು.

ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ  ನಡೆದ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾ.ಪಂ. ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, ವಾಲ್ಮೀಕಿ ಜಯಂತಿ ಇನ್ನೊಂದು ಸರ್ಕಾರಿ ಸಮಾರಂಭ ಆಗಬಾರದು. ಸಾರ್ವಜನಿಕರು ಸಹ ಇದರಲ್ಲಿ ಭಾಗವಹಿಸಲು ಮನವಿ ಮಾಡಿದರು.

ಪ.ಪಂ. ಅಧ್ಯಕ್ಷ ಅರುಣ್ ಕುಮಾರ್, ಉಪಾಧ್ಯಕ್ಷೆ ಗುಲಾಬಿ ಮರಿಯಪ್ಪ, ತಾ.ಪಂ. ಉಪಾಧ್ಯಕ್ಷೆ ಶಾಂತಾ ಶೇಖರಪ್ಪ, ತಹಶೀಲ್ದಾರ್ ಸಾಜಿದ್ ಅಹ್ಮದ್ ಮುಲ್ಲಾ, ವಾಲ್ಮೀಕಿ ನಾಯಕ ಸಮಾಜದ ಎಸ್.ಎಚ್. ಲಿಂಗಮೂರ್ತಿ ವೇದಿಕೆಯಲ್ಲಿ ಮುಖ್ಯ  ಹಾಜರಿದ್ದರು.

ಉಪನ್ಯಾಸ: ಡಿವಿಎಸ್ ಸಂಜೆ ಕಾಲೇಜಿನ ಪ್ರಿನ್ಸಿಪಾಲ್ ರಾಚಪ್ಪ, ಡಿವಿಎಸ್ ಪ್ರಥಮದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಕೆ.ಜಿ. ವೆಂಕಟೇಶ್ ವಾಲ್ಮೀಕಿ ಜೀವನ ಮತ್ತು ಕೊಡುಗೆ ಕುರಿತಂತೆ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಅಂತರ್‌ಜಾತಿ ವಿವಾಹಿತ ದಂಪತಿಗಳಿಗೆ ಪ್ರೋತ್ಸಾಹ ಧನದ ಚೆಕ್ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು.

ಮಹರ್ಷಿ ವಾಲ್ಮೀಕಿ ಭಾವಚಿತ್ರದೊಂದಿಗೆ ಪಟ್ಟಣ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ  ವಿವಿಧ ಕಲಾತಂಡಗಳು ಭಾಗವಹಿಸಿದ್ದವು ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯನಿರ್ವಾಕ ಅಧಿಕಾರಿ ಕೆ.ಎಸ್. ಮಣಿ ಸ್ವಾಗತಿಸಿದರು. ಸಮಾಜ ಕಲ್ಯಾಣ ತಾಲ್ಲೂಕು ಅಧಿಕಾರಿ ಲಲಿತಾ ಬಾಯಿ ಕಾರ್ಯಕ್ರಮ ನಿರೂಪಿಸಿದರು.

 ತತ್ವಾದರ್ಶ ಪ್ರಸ್ತುತ
ತೀರ್ಥಹಳ್ಳಿ: ತನ್ನ ತಪ್ಪಿಗೆ ತನ್ನ ಕುಟುಂಬದಲ್ಲಿಯೇ ಮನ್ನಣೆ ಸಿಗದಾಗ ಪರಿವರ್ತನೆಗೊಂಡ ವಾಲ್ಮೀಕಿ ಜಗತ್ತು ಸ್ಮರಿಸುವ ಮಹಾಕಾವ್ಯವನ್ನು ಕಟ್ಟಿಕೊಡುವ ಮೂಲಕ ನಮ್ಮ ನಡುವೆ ಉಳಿದುಕೊಂಡಿದ್ದಾರೆ. ಅವರ ತತ್ವಾದರ್ಶ ಅಳವಡಿಸಿಕೊಳ್ಳುವುದು ಹೆಚ್ಚು ಪ್ರಸ್ತುತ ಎಂದು ಇತಿಹಾಸ ಪ್ರಾಧ್ಯಾಪಕ ಡಾ.ಎ.ಸಿ. ನಾಗೇಶ್ ಅಭಿಪ್ರಾಯಪಟ್ಟರು.

ತಾಲ್ಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ವಾಲ್ಮೀಕಿಯವರಲ್ಲಿ ಮೂಡಿಬಂದ ಕಲ್ಪನೆಯಿಂದ ರಾಮಾಯಣದಂಥ ಮಹಾಕಾವ್ಯ ಸೃಷ್ಟಿಯಾಯಿತು. ಶ್ರೀರಾಮನ ಆದರ್ಶಗಳು ಸಮಾಜದಲ್ಲಿ ನೆಲೆ ನಿಲ್ಲುವಂತಾಗಿದೆ. ಕಾಲ್ಪನಿಕ ವ್ಯಕ್ತಿಯ ಮೂಲಕ ಸಮಾಜಕಟ್ಟುವ ಕೆಲಸವನ್ನು ವಾಲ್ಮೀಕಿ ಮಾಡಿದ್ದಾರೆ ಎಂದು ಅವರು ಹೇಳಿದರು.

ಶಾಸಕ ಕಿಮ್ಮನೆ ರತ್ನಾಕರ್, ಇತಿಹಾಸಕ್ಕೂ ಪೌರಾಣಿಕ ಕಥೆಗಳಿಗೂ ತೀರಾ ಭಿನ್ನತೆಯಿದ್ದು, ಕೆಲವೊಮ್ಮೆ ಪೌರಾಣಿಕ ಕಥೆಗಳನ್ನು ಇತಿಹಾಸ ಎಂದು ನಂಬುವ ಅಪಾಯವಿದೆ. ಇತಿಹಾಸ ಸಾಕ್ಷಾಧಾರಗಳನ್ನು ಹೊಂದಿದ ನೈಜ ಘಟನೆಗಳನ್ನು ಅವಲಂಬಿಸಿರುತ್ತದೆ ಎಂದು ಹೇಳಿದರು.

ವಾಲ್ಮೀಕಿಯಂಥ ಪ್ರತಿಭಾವಂತ ಮಹರ್ಷಿಯ ವಿಚಾರಗಳನ್ನು ತಿಳಿಯುವ ಪ್ರಯತ್ನ ಆಗಬೇಕು. ಅವರು ಬರೆದ ಪೌರಾಣಿಕ ಕಥೆ ವಿಶ್ವದ ಮೇಲೆ ಗಂಭೀರ ಪರಿಣಾಮ ಬೀರಿದೆ. ಶ್ರೀರಾಮ ಹಾಗೂ ಸೀತೆಯ ಗುಣಗಳನ್ನು ಹೋಲಿಸಿ ನೋಡಿದಲ್ಲಿ ಸೀತೆಗಿರುವ ಗುಣಸಂಪನ್ನತೆ ಪ್ರಶ್ನಾತೀತ ಎಂದು ನುಡಿದರು.
ತಹಶೀಲ್ದಾರ್ ಡಿ.ಬಿ. ನಟೇಶ್ ಪ್ರಾಸ್ತಾವಿಕ ಮಾತನಾಡಿದರು.

ಸಮಾರಂಭದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮೀ ವೆಂಕಟಪ್ಪ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಜೀನಾ ವಿಕ್ಟರ್ ಡಿಸೋಜ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬಾಳೇಹಳ್ಳಿ ಪ್ರಭಾಕರ್, ಜಿಲ್ಲಾ ಪಂಚಾಯ್ತಿಸದಸ್ಯೆ ಶ್ರುತಿ ವೆಂಕಟೇಶ್, ತಾಲ್ಲೂಕು ವಾಲ್ಮೀಕಿ ಸಮಾಜದಅಧ್ಯಕ್ಷ ಮಹೇಂದ್ರ ಮಾತನಾಡಿದರು.

 ಸಮಾಜ ಕಲ್ಯಾಣ ಇಲಾಖೆ ರೇಷ್ಮಾ ಕೌಸರ್ಜಿ ಸ್ವಾಗತಿಸಿದರು. ರವೀಂದ್ರ ವಂದಿಸಿದರು. ಗಿರೀಶ್ ಕಾರ್ಯಕ್ರಮ ನಿರೂಪಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT