ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಬಲ್ ಆಪರೇಟರುಗಳ ಏಕಸ್ವಾಮ್ಯ:ಚರ್ಚೆ

Last Updated 17 ಜುಲೈ 2013, 19:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕೇಬಲ್ ಆಪರೇಟರುಗಳಲ್ಲಿ ಏಕಸ್ವಾಮ್ಯ ಪ್ರವೃತ್ತಿ ಇರುವ ಬಗ್ಗೆ ಪರಿಶೀಲನೆ ನಡೆಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಧ್ಯಕ್ಷ ಡಾ. ರಾಹುಲ್ ಖುಲ್ಲರ್ ನೇತೃತ್ವದಲ್ಲಿ ಮಂಗಳವಾರ ಚರ್ಚಾಸಭೆ ನಡೆಯಿತು. ಕೇಬಲ್ ಆಪರೇಟರುಗಳು ಹಾಗೂ ಗ್ರಾಹಕರು ಈ ಸಭೆಯಲ್ಲಿ ಭಾಗವಹಿಸಿ ಹಲವು ಬೇಡಿಕೆಗಳನ್ನು ಮುಂದಿಟ್ಟರು.

ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದ ಸದಸ್ಯರ ತಂಡವು ಗ್ರಾಹಕರ, ಕೇಬಲ್ ಆಪರೇಟರುಗಳ ಅಹವಾಲುಗಳನ್ನು ಸ್ವೀಕರಿಸಿತು. `ಇಂತಹ ಸಭೆಗಳ ಮೂಲಕ ಸಂಗ್ರಹಿಸಿದ ಜನಾಭಿಪ್ರಾಯವನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಕಳುಹಿಸಲಾಗುವುದು. ಇದರಿಂದ ಸಂಬಂಧಿಸಿದ ಕಾನೂನಿನಲ್ಲಿ ತಿದ್ದುಪಡಿ ತರಲು ಅನುಕೂಲವಾಗುತ್ತದೆ' ಎಂದು ತಂಡವು ತಿಳಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೇಬಲ್ ಆಪರೇಟರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಶ್ರೀಕಂಠದತ್ತ, `ರಾಜ್ಯದಲ್ಲಿ  ಸೇವೆ ಒದಗಿಸುವ 11 ಕಂಪೆನಿಗಳು (ಎಂಎಸ್‌ಒ) ಅಸ್ತಿತ್ವದಲ್ಲಿದೆ. ಚಾನೆಲ್ ಸಿಗ್ನಲ್‌ಗಳನ್ನು ಕ್ರಯಕ್ಕೆ ಪಡೆದುಕೊಂಡು ಸ್ಥಳೀಯ ಕೇಬಲ್ ಆಪರೇಟರುಗಳಿಗೆ ನೀಡುತ್ತಿದ್ದಾರೆ. ಇವರೆಲ್ಲರ ನಡುವೆ ಆರೋಗ್ಯಕರ ಸ್ಪರ್ಧೆಯಿದೆ. ಹಾಗಾಗಿ  ಕೇಬಲ ಆಪರೇಟರುಗಳು ಏಕಸ್ವಾಮ್ಯ ಮಾರುಕಟ್ಟೆಹೊಂದಿಲ್ಲ' ಎಂದು ಸ್ಪಷ್ಟಪಡಿಸಿದರು.

`ಬ್ರಾಡ್‌ಕಾಸ್ಟರ್, ಸೇವೆ ಒದಗಿಸುವ ಕಂಪೆನಿಗಳು, ಸ್ಥಳೀಯ ಕೇಬಲ್ ಆಪರೇಟರುಗಳು ಹಾಗೂ ಗ್ರಾಹಕರು ಒಂದು ಕುಟುಂಬವಿದ್ದಂತೆ. ಈಗೀಗ ಕೆಲವು ಚಾನೆಲ್‌ಗಳ ಬಿತ್ತರಕ್ಕೆ ಬ್ರಾಡ್‌ಕಾಸ್ಟರ್ ಹೆಚ್ಚಿನ ಹಣ ನೀಡುವಂತೆ ಒತ್ತಡ ತರುತ್ತಿದ್ದಾರೆ. ಇದರಿಂದ ಗ್ರಾಹಕರ ಮೇಲೆ ಅಧಿಕ ಹೊರೆ ಬೀಳುತ್ತದೆ. ಹಾಗಾಗಿ ಬ್ರಾಡ್‌ಕಾಸ್ಟರ್ ಮೇಲೆ ಟ್ರಾಯ್ ನಿಯಂತ್ರಣ ಹೇರಬೇಕು' ಎಂದು ಮನವಿ ಮಾಡಿದರು.

ಗ್ರಾಹಕ ಹಿತರಕ್ಷಣಾ ಸಮಾಜದ ರವೀಂದ್ರನಾಥ ಗುರು, `ಒಬ್ಬ ಸ್ಥಳೀಯ ಕೇಬಲ್ ಆಪರೇಟರ್‌ಗೆ ಸೇವೆ ನೀಡಲು ಒಂದು ನಿರ್ದಿಷ್ಟ ಪ್ರದೇಶವನ್ನು ನಿಗದಿಪಡಿಸುವುದರಿಂದ ಆತ ಗ್ರಾಹಕರ ಮೇಲೆ ಸವಾರಿ ಮಾಡುವ ಸಾಧ್ಯತೆಯಿರುತ್ತದೆ.  ಹಾಗಾಗಿ ಒಂದು ಬಡಾವಣೆಗೆ ಇಬ್ಬರು ಸ್ಥಳೀಯ ಕೇಬಲ್ ಆಪರೇಟರುಗಳಿದ್ದರೆ, ಸ್ಪರ್ಧಾತ್ಮಕ ಮನೋಭಾವ ಹೆಚ್ಚುವುದರಿಂದ ಗ್ರಾಹಕರು ಗುಣಮಟ್ಟದ ಸೇವೆ ಪಡೆಯಲು ಸಾಧ್ಯವಾಗುತ್ತದೆ' ಎಂದರು.

`ಕಳಪೆ ಗುಣಮಟ್ಟದ ಸೆಟ್ ಅಪ್ ಬಾಕ್ಸ್‌ಗಳಿಗೆ ಕೇಬಲ್ ಆಪರೇಟರುಗಳು ಮನಸೋ ಇಚ್ಛೆ ದರ ವಿಧಿಸಿ ಗ್ರಾಹಕರಿಂದ ಹಣ ಪಡೆಯುತ್ತಿದ್ದಾರೆ. ಗುಣಮಟ್ಟದ ಸೆಟ್ ಅಪ್ ಬಾಕ್ಸ್‌ಗೆ ನಿರ್ದಿಷ್ಟ ದರ ನಿಗದಿ ಮಾಡುವ ಮೂಲಕ ಗ್ರಾಹಕರಿಗೆ ನೆರವಾಗಬೇಕು' ಎಂದು ವಿನಂತಿಸಿದರು.

ಗೊಂದಲದ ವಾತಾವರಣ
ಇದೇ ಸಂದರ್ಭದಲ್ಲಿ ತಮಿಳುನಾಡಿನ ಕೇಬಲ್ ಆಪರೇಟರೊಬ್ಬರು, `ತಮಿಳುನಾಡಿನಲ್ಲಿ `ಅರಸು' ಹೆಸರಿನ ಸೇವೆ ಒದಗಿಸುವ ಕಂಪೆನಿ (ಎಂಎಸ್‌ಒ) ಏಕಸಾಮ್ಯ ಪ್ರವೃತಿಯನ್ನು ಪಡೆದಿದೆ. ಹೆಚ್ಚಿನ ಹಣಕ್ಕಾಗಿ ಸ್ಥಳೀಯ ಕೇಬಲ್ ಆಪರೇಟರುಗಳು ಹಾಗೂ ಗ್ರಾಹಕರ ಮೇಲೆ ವಿನಾಕಾರಣ ಒತ್ತಡ ಹೇರುತ್ತಾ ಹಣ ಕೀಳುವ ದಂಧೆ ಮಾಡಿಕೊಂಡಿದೆ. ಇದಕ್ಕೆ ಟ್ರಾಯ್ ಯಾವ ರೀತಿಯ ಕ್ರಮ ತೆಗೆದುಕೊಂಡಿದೆ?' ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸುವ ಗೋಜಿಗೆ ಖುಲ್ಲರ್ ಹೋಗಲಿಲ್ಲ. ಸಭಾಂಗಣದಲ್ಲಿದ್ದ ಗ್ರಾಹಕರು ಹಾಗೂ ಕೇಬಲ್ ಆಪರೇಟರುಗಳು ಈ ಪ್ರಶ್ನೆಗೆ  ಉತ್ತರ ನೀಡಲೇಬೇಕು ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ನಂತರ ಪ್ರತಿಕ್ರಿಯಿಸಿದ ಖುಲ್ಲರ್, `ಗ್ರಾಹಕರ ಹಾಗೂ ಕೇಬಲ್ ಆಪರೇಟರುಗಳ ಪ್ರಶ್ನೆಗಳಿಗೆ ದಿಢೀರನೇ ಉತ್ತರ ನೀಡುವ ಸಲುವಾಗಿ ನಾವು ಬಂದಿಲ್ಲ. ಯಾವುದೇ ಕೇಬಲ್ ಆಪರೇಟರುಗಳಿಗೆ  ಟ್ರಾಯ್ ಪರವಾನಗಿ ನೀಡುವುದಿಲ್ಲ. ಪರವಾನಗಿ ನೀಡುವ ವಿಚಾರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಬಿಟ್ಟಿದ್ದು' ಎಂದು ಖಾರವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT