ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕೇಸ್' ಒಂದು, ಸವಿ ಎರಡು...

Last Updated 25 ಜುಲೈ 2013, 19:59 IST
ಅಕ್ಷರ ಗಾತ್ರ

ರಡು ಸಿಹಿ ಸುದ್ದಿಗಳನ್ನು ಮುಟ್ಟಿಸಲು ಕುಳಿತಿದ್ದರು ನಿರ್ದೇಶಕ ಮಹೇಶ್ ರಾವ್. ಎರಡೂ ಸುದ್ದಿಗಳು `ಕೇಸ್ ನಂ 18/9'ಗೆ ಸಂಬಂಧಿಸಿದವು. ಮೊದಲನೆಯ ಸವಿ ವರ್ತಮಾನ ಎಂದರೆ ಚಿತ್ರದ ಉಪಗ್ರಹ ಹಕ್ಕು ಒಂದು ಕೋಟಿ ಐವತ್ತೇಳು ಲಕ್ಷದ ಎಂಬತ್ತು ಸಾವಿರ ರೂಪಾಯಿಗಳಿಗೆ ಬಿಕರಿಯಾಗಿರುವುದು.

ಸುವರ್ಣ ವಾಹಿನಿಯ ಮುಖ್ಯಸ್ಥರು ಚಿತ್ರವನ್ನು ನೋಡಿ ಹಕ್ಕುಗಳನ್ನು ಖರೀದಿಸಿದ್ದಾರೆ. ಚಿತ್ರಕ್ಕೆ ಹಾಕಿರುವ ಬಂಡವಾಳವೇ ಒಂದು ಕೋಟಿ ತೊಂಬತ್ತು ಲಕ್ಷ ರೂಪಾಯಿ. ಹೀಗಿರುವಾಗ ಹೊಸಬರೇ ತುಂಬಿರುವ ಚಿತ್ರಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದ ಮೊತ್ತ ಸಿಕ್ಕಿರುವುದು ಸವಿ ಸುದ್ದಿಯೇ ಸರಿ ಎನ್ನುತ್ತ ಖುಷಿಗೊಂಡರು ಮಹೇಶ್.

ಚಿತ್ರದ ಕೆಲವು ದೃಶ್ಯಗಳನ್ನು ಕತ್ತರಿಸಿ `ಯು' ಸರ್ಟಿಫಿಕೇಟ್ ಕೊಡಬಹುದಾಗಿದ್ದರೂ ಸೆನ್ಸಾರ್ ಮಂಡಳಿಯ ಅಧಿಕಾರಿಗಳು ಚಿತ್ರದ ಸಂದೇಶ ಜನರಿಗೆ ಮುಟ್ಟಲಿ ಎಂಬ ಕಾರಣಕ್ಕೆ ಕತ್ತರಿ ಪ್ರಯೋಗಕ್ಕೆ ಇಳಿಯಲಿಲ್ಲವಂತೆ. ದೃಶ್ಯಗಳನ್ನು ಹಾಗೆಯೇ ಉಳಿಸಿಕೊಂಡು `ಯು/ಎ' ಸರ್ಟಿಫಿಕೇಟ್ ಕೊಡಲಾಗಿದೆ. ಇದು ನಿರ್ದೇಶಕರ ಖುಷಿಗೆ ಮತ್ತೊಂದು ಕಾರಣ.

 

ನಿರಂಜನ್ ಶೆಟ್ಟಿ
ಸಿಂಧೂ ಲೋಕನಾಥ್
ಅಭಿಷೇಕ್

ಚಿತ್ರ ತಮಿಳಿನ `ವಳಕ್ಕು ಎನ್ 18/9'ನ ಕನ್ನಡ ಅವತರಣಿಕೆ. ಆದರೂ ತಮಿಳು ಚಿತ್ರದಲ್ಲಿ ಬರುವುದು ಬೆಂಗಳೂರಿನ ಕತೆಯಂತೆ. ಹೀಗಾಗಿ ಮಹೇಶ್ ರೀಮೇಕ್‌ಗೆ ಇಳಿದಿದ್ದರು. ಅವರ ಪ್ರಕಾರ ಸ್ವಮೇಕ್‌ಗಿಂತಲೂ ರೀಮೇಕ್ ಕಷ್ಟ. ಸ್ವಂತ ಬದುಕುವುದಕ್ಕೂ ಒಬ್ಬರನ್ನು ಅನುಕರಿಸುವುದಕ್ಕೂ ಇರುವ ವ್ಯತ್ಯಾಸವನ್ನು ತಾಳೆ ಹಾಕಿದ ಅವರಿಗೆ ರೀಮೇಕ್-ಸ್ವಮೇಕ್ ಎರಡೂ ಬೇಕಂತೆ.

ಹಾಗೆಂದು ಚಿತ್ರ ಯಥಾವತ್ತಾಗಿ ನಕಲಾಗಿಲ್ಲ. ದ್ವಿತೀಯಾರ್ಧದಲ್ಲಿ ಸಾಕಷ್ಟು ವೇಗ ನೀಡಲಾಗಿದೆ. ಮೂಲ ಚಿತ್ರದಲ್ಲಿ ಹಾಡುಗಳು ಇಲ್ಲ. ಆದರೆ ಇಲ್ಲಿ ಹರ್ಷಿಕಾ ಪೂಣಚ್ಚರ ವಿಶೇಷ ಗೀತೆ ಸೇರಿದಂತೆ ವಿವಿಧ ಹಾಡುಗಳನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೆಣೆದಿದ್ದಾರೆ.
`ಕೇಸ್...' ನೋಡಿ ಬದುಕನ್ನು ತಿದ್ದಿಕೊಳ್ಳಬಹುದು... ನಿರ್ಮಾಪಕ ಪ್ರವೀಣ್‌ಕುಮಾರ್ ಶೆಟ್ಟಿ ಖಚಿತ ಧ್ವನಿಯಲ್ಲಿ ಹೇಳುತ್ತಿದ್ದರು.

ಚಿತ್ರದ ಕತೆ ಅವರೂ ಸೇರಿದಂತೆ ಅನೇಕರ ಬದುಕಿಗೆ ಹತ್ತಿರವಾಗಿದೆಯಂತೆ. ಆಗಸ್ಟ್ ಮೊದಲ ವಾರದಲ್ಲಿ ಚಿತ್ರವನ್ನು ತೆರೆಗೆ ತರಲು ಅವರು ಯತ್ನಿಸಿದ್ದಾರೆ. ವಿ.ಕೆ. ಮೋಹನ್, ಶಿವಾನಂದ ಶೆಟ್ಟಿ ಹಾಗೂ ಕಾಂತಿ ಶೆಟ್ಟಿ ಚಿತ್ರದ ಇತರೆ ನಿರ್ಮಾಪಕರು. ಚಿತ್ರದಲ್ಲಿ ನಾಯಕ ನಾಯಕಿಯರ ಎರಡು ಜೋಡಿ ಇದೆ.

ಮೊದಲ ಜೋಡಿ ನಿರಂಜನ್ ಶೆಟ್ಟಿ ಹಾಗೂ ಸಿಂಧೂ ಲೋಕನಾಥ್. ಎರಡನೇ ಜೋಡಿ ಅಭಿಷೇಕ್ ಹಾಗೂ ಶ್ವೇತಾ ಪಂಡಿತ್. ಪೋಸ್ಟರ್‌ಗಳಲ್ಲಿ ಎರಡನೇ ಜೋಡಿ ಕಾಣುತ್ತಿಲ್ಲ ಎಂಬುದು ಮೋಹನ್ ದೂರು. `ಪೋಸ್ಟರ್‌ಗಳು ಸಿದ್ಧವಾಗಿವೆ' ಎನ್ನುತ್ತ ನಿರ್ದೇಶಕರು ಆಕ್ಷೇಪಕ್ಕೆ ತೆರೆ ಎಳೆದರು.

`ಕೇಸ್...' ಸುಗ್ಗಿಯಲ್ಲಿರುವ ಮಹೇಶ್ ತಮಿಳಿನ ಮತ್ತೊಂದು ಚಿತ್ರದ ರೀಮೇಕ್‌ಗೆ ಸಿದ್ಧವಾಗುತ್ತಿದ್ದಾರೆ. `ಎಂಗೆಯುಂ ಎಪ್ಪೊದುಂ'ನ ಕನ್ನಡ ರೂಪಕ್ಕೆ ಇನ್ನೂ ಹೆಸರಿಟ್ಟಿಲ್ಲ. ನಟ ವಿ. ರವಿಚಂದ್ರನ್‌ರ ಸಂಬಂಧಿ `ಪುಟ್ನಂಜ' ನಿರ್ಮಾಪಕ ನರಸಿಂಹನ್ ಈ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಇದೂ ಕೂಡ ಸಾಕಷ್ಟು ತಿದ್ದುಪಡಿಗಳೊಂದಿಗೆ ಕನ್ನಡೀಕರಣಗೊಳ್ಳುತ್ತಿದೆ.

`ಜಾಲಿಡೇಸ್' ಚಿತ್ರದಲ್ಲಿ ಅಮಾಯಕ ಎಂಜಿನಿಯರ್ ಆಗಿ ಕಾಣಿಸಿಕೊಂಡಿದ್ದ ನಿರಂಜನ್ ಶೆಟ್ಟಿ ಅವರಿಗೆ ಇಲ್ಲಿಯೂ ಅಮಾಯಕತೆಯ ಪೋಷಾಕು. ಆದರೆ ಅನಕ್ಷರಸ್ಥನ ಪಾತ್ರ. `ನಿರ್ದೇಶಕರು ಸರಿಯಾಗಿ ಊಟ ಹಾಕಲಿಲ್ಲ. ಉಗುರು ಕತ್ತರಿಸಿಕೊಳ್ಳೋಕೂ ಬಿಡುತ್ತಿರಲಿಲ್ಲ. ಸ್ನಾನ ಮಾಡಲೂ ಅವಕಾಶ ನೀಡುತ್ತಿರಲಿಲ್ಲ!' ಎಂದು ದೂರಿನ ಸುರಿಮಳೆ ಸುರಿಸುತ್ತ ನಿರಂಜನ್ ನಕ್ಕಾಗ ನಿರ್ದೇಶಕರ ಮೊಗದಲ್ಲೂ ನಗೆಯ ಲಾಸ್ಯ.

ಮುಗ್ಧನ ಪಾತ್ರಕ್ಕೆ ಒಪ್ಪುವಂತೆ ಕಾಣಲು ನಿರ್ದೇಶಕರು ಹರಸಾಹಸ ಮಾಡಿದ್ದರು. ಪರಿಣಾಮ ಹತ್ತು ಕಿಲೋ ಇಳಿಸಿಕೊಂಡ ನಿರಂಜನ್ ನಟನೆಯಲ್ಲೂ ಟ್ರಿಮ್ ಆದದ್ದನ್ನು ಸ್ಮರಿಸಿದರು. ನಟ ಕರಿಸುಬ್ಬು ಅವರೊಡಗೂಡಿ ಚಿತ್ರದಲ್ಲಿ ತಟ್ಟೆ ಇಡ್ಲಿ ಅಂಗಡಿ ತೆಗೆದದ್ದನ್ನು ಪ್ರಸಂಗದಂತೆ ವಿವರಿಸಿದರು.

ಚಿತ್ರ ನೋಡಿರುವ ತಂತ್ರಜ್ಞರೆಲ್ಲಾ ಸಿಂಧೂ ಲೋಕನಾಥ್ ಅವರನ್ನು ಅಭಿನಂದಿಸಿದ್ದಾರಂತೆ. ಹಳ್ಳಿ ಹುಡುಗಿಯ ಪಾತ್ರಕ್ಕೆ ಒಪ್ಪುವಂತೆ ಮಾಡಿದ ನಿರ್ದೇಶಕರಿಗೆ ಸಿಂಧೂ ಅವರ ಕೃತಜ್ಞತೆ ಸಂದಾಯವಾಯಿತು. ರೂಪದರ್ಶಿಯಂತೆ ಬಳುಕುತ್ತಿದ್ದ ಶ್ವೇತಾ ಪಂಡಿತ್‌ರನ್ನೂ ಶಾಲಾ ಹುಡುಗಿಯಂತೆ ಮಾಡಲು ನಿರ್ದೇಶಕರು ಹೆಣಗಿದ್ದಾರೆ.

ಸಣ್ಣ ಹುಡುಗಿಯಂತೆ ಚಿತ್ರಿಸಲು ಶ್ವೇತಾರ ತೂಕವನ್ನೂ ಇಳಿಸಲಾಗಿದೆ. ಹದಿಹರಯದ ಹುಡುಗಿಯ ತುಮುಲಗಳನ್ನು ಹೇಳುವ ಪಾತ್ರ ಅವರದಂತೆ. ಅಭಿಷೇಕ್ ಇದೇ ಮೊದಲ ಬಾರಿ ಕ್ಯಾಮೆರಾ ಎದುರಿಸಿದ್ದಾರೆ. ಹುಡುಗಾಟದ ಹುಡುಗನಾಗಿ ಅವರು ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT