ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ಮಳೆ: ಕಂಗಾಲಾದ ರೈತ

ಬರ ಬದುಕು ಭಾರ - ಧಾರವಾಡ ಜಿಲ್ಲೆ
Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಧಾರವಾಡ: ‘ಮಳಿ ಬಂತು ಅಂತ ಖುಷೀಲೆ 16 ಸಾವಿರ ರೂಪಾಯಿ ಸಾಲ ಮಾಡಿ ಎರಡು ಕ್ವಿಂಟಲ್ ಶೇಂಗಾ ಬಿತ್ತಿದೆ. ಮೊದಲ ಒಂದಿಷ್ಟ ದಿನಾ ಜಿಟಿ ಜಿಟಿ ಬಿದ್ದ ಮಳಿ ಆ ಮ್ಯಾಲ ಮಾಯಾ ಆಯ್ತು. ಬೆಳಿ ಒಣಗ್‌ ಹೋಯ್ತು. ಬೇಜಾರಾಗಿ ಇಡೀ ಹೊಲಾ ಹರಗಿ ಬಿಟ್ಟಿನ್ರಿ...’

-ಇಷ್ಟು ಹೇಳುವಾಗ, ಕುಂದಗೋಳ ತಾಲ್ಲೂಕಿನ ಬರದ್ವಾಡ ಗ್ರಾಮದ ಬಳಿ ಎಂಟು ಎಕರೆ ಹೊಲವನ್ನು ಹೊಂದಿರುವ ರೈತ ಬಸವರಾಜ ಸುರಣಗಿ ಅವರ ಮುಖದಲ್ಲಿ ವೇದನೆ ಎದ್ದು ಕಾಣುತ್ತಿತ್ತು. ಅವರ ಈ ಮಾತು ಬಹುತೇಕ ಇಡೀ ಜಿಲ್ಲೆಯ ರೈತರ ಅನುಭವವೂ ಹೌದು.

ಜೂನ್, ಜುಲೈ ತಿಂಗಳಲ್ಲಿ ನವಲಗುಂದ ತಾಲ್ಲೂಕು ಹೊರತುಪಡಿಸಿ ಉಳಿದೆಡೆ ಸತತವಾಗಿ ಮಳೆ ಸುರಿಯಿತು. ಇದರಿಂದ ಉತ್ಸಾಹಗೊಂಡ ರೈತರು ಸಾಲ-ಸೋಲ ಮಾಡಿ ಹತ್ತಿ, ಸೋಯಾಬೀನ್, ಉಳ್ಳಾಗಡ್ಡಿ, ಹೆಸರು, ಮೆಣಸಿನಕಾಯಿ, ಭತ್ತ ಬಿತ್ತನೆ ಮಾಡಿದರು. ಆದರೆ ರೈತರ ಮೊಗದಲ್ಲಿದ್ದ ಆ ಉಮೇದು ಆಗಸ್ಟ್ ಮೊದಲ ವಾರದ ಹೊತ್ತಿಗೆ ಬತ್ತಿ ಹೋಯಿತು. ಮಳೆ ಏಕಾಏಕಿ ಕೈಕೊಟ್ಟ ಪರಿಣಾಮ ಬಿತ್ತಿದ ಬೆಳೆಗಳೆಲ್ಲ ಒಣಗಲು ಆರಂಭಿಸಿದವು. ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಯುವ ಧಾನ್ಯಗಳಲ್ಲೊಂದಾದ ಹೆಸರು ಬೆಳೆಯ ಇಳುವರಿ ಮಳೆ ಕೊರತೆಯಿಂದ ದಿಢೀರ್ ಕುಸಿತ ಕಂಡಿತು.

ಇದು ಕುಂದಗೋಳ ತಾಲ್ಲೂಕಿನ ಕಥೆಯಾದರೆ, ನವಲಗುಂದ ತಾಲ್ಲೂಕಿನ ಇಬ್ರಾಹಿಂಪುರ, ನಾವಳ್ಳಿ, ತುಪ್ಪದ ಕುರಹಟ್ಟಿ, ಕಿತ್ತೂರ ಗ್ರಾಮಗಳ ರೈತರ ಕಥೆ ಇದಕ್ಕಿಂತಲೂ ಘೋರ. ಡಾ.ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ನವಲಗುಂದ ಅತ್ಯಂತ ಹಿಂದುಳಿದ ತಾಲ್ಲೂಕುಗಳ ಪಟ್ಟಿಯಲ್ಲಿದೆ. ಈ ತಾಲ್ಲೂಕಿನ ಹೊಲಗಳಲ್ಲಿ ಹಸಿರೆಲ್ಲ ಮಾಯವಾಗಿ ಕರಿಮಣ್ಣ ಹೆಂಟೆಗಳು ಕಾಣುತ್ತಿವೆ.

ಕಳೆ ಕೀಳಲು ಹೋಗಬೇಕಿದ್ದ ರೈತರು ಊರಿನ ಹರಟೆಕಟ್ಟೆಯ ಮೇಲೆ ಕುಳಿತಿದ್ದರೆ, ರೈತ ಮಹಿಳೆಯರು ದನಕರುಗಳ ಪೋಷಣೆಯಲ್ಲಿ ತೊಡಗಿದ್ದಾರೆ. ಮುಂಗಾರು ಹಂಗಾಮು ನಿರಾಶಾದಾಯಕವಾಗಿದ್ದು, ಹಾಕಿದ್ದ ಬೀಜ ವಾಪಸ್ ಬರುವುದೋ ಇಲ್ಲವೋ ಎಂದು ಧಾರವಾಡ ತಾಲ್ಲೂಕಿನ ಉಪ್ಪಿನ ಬೆಟಗೇರಿ, ಹೆಬ್ಬಳ್ಳಿ, ಅಮ್ಮಿನಭಾವಿ, ಶಿವಳ್ಳಿ, ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿ, ಸುಳ್ಳ ಗ್ರಾಮಗಳ ರೈತರು ಚಿಂತಾಕ್ರಾಂತರಾಗಿದ್ದಾರೆ.

ಕಲಘಟಗಿ ತಾಲ್ಲೂಕಿನಲ್ಲಿ ಉಳಿದ ತಾಲ್ಲೂಕುಗಳಿಗಿಂತ ಉತ್ತಮ ಮಳೆಯಾಗಿದೆ. ಆದರೆ ಕಬ್ಬು, ಸೋಯಾ ಅವರೆಯಂತಹ ಪ್ರಮುಖ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಅಲ್ಲಿನ ರೈತರಿಗೆ ಈಗ ಸುರಿದ ಮಳೆ ಏತಕ್ಕೂ ಸಾಲದಾಗಿದೆ.
ಧಾರವಾಡ ತಾಲ್ಲೂಕಿನ ಹಲವು ಕಡೆ ಹೆಸರುಕಾಳನ್ನು ಬಿತ್ತಲಾಗಿತ್ತು. ಆದರೆ ಸೂಕ್ತ ಸಮಯದಲ್ಲಿ ಮಳೆ ಬಾರದ ಪರಿಣಾಮ ಆ ಬೆಳೆ ಒಣಗಿ ಹೋಗಿದ್ದು, ರೈತರು ಹಿಂಗಾರಿ ಬಿತ್ತನೆಗೆ ಹೊಲವನ್ನು ಸಿದ್ಧಮಾಡಿಕೊಳ್ಳುತ್ತಿದ್ದಾರೆ.

ಕುಂದಗೋಳ ತಾಲ್ಲೂಕಿನ ಪೂರ್ವ ಭಾಗದಲ್ಲಿ ಉತ್ತಮ ಮಳೆ ಸುರಿದ ಪರಿಣಾಮ ಅಲ್ಲಿ ಬಿತ್ತಲಾದ ಮೆಣಸು, ಗೋವಿನಜೋಳದ ಬೆಳೆ ಉತ್ತಮವಾಗಿದೆ. ಆದರೆ ಯರೇಬೂದಿಹಾಳ ಸೀಮೆಯಿಂದ ಬರದ್ವಾಡದವರೆಗಿನ ಭೂಮಿಯಲ್ಲಿನ ಬೆಳೆಯೆಲ್ಲ ಒಣಗಲು ಆರಂಭಿಸಿದೆ. ಆಕಾಶದ ಕಡೆ ಮುಖ ಮಾಡಿ ‘ಯಾಕಪ್ಪ ದೇವ್ರೆ, ನಮಗೆ ಇಂಥ ಅಗ್ನಿಪರೀಕ್ಷೆ’ ಎಂದು ರೈತರು ಕೇಳುವಂತಾಗಿದೆ.

‘100 ಚೀಲದ ಬದಲು ಎಂಟೇ ಚೀಲ’
ಪ್ರತಿ ಸಲ ಉತ್ತಮ ಮಳೆಯಾದಾಗ ನಮ್ಮ 80 ಎಕರೆ ಜಮೀನಿನಲ್ಲಿ ಕನಿಷ್ಟ­ವೆಂದರೂ 100 ಚೀಲ ಹೆಸರು­ಕಾಳು ಬರುತ್ತಿತ್ತು. ಈಗಲೂ ಅಷ್ಟೇ ಪ್ರಮಾಣದ ಬೀಜ ಬಿತ್ತಿದ್ದೆವು. ಆದರೆ ಎಂಟು ಚೀಲ ಬಂದರೆ ಅದೇ ಹೆಚ್ಚು. ಇದರ ಮಾರಾಟ­ದಿಂದ ಬಂದ ಹಣವನ್ನು ಕೂಲಿಕಾರರಿಗೇ ಕೊಟ್ಟು ಖಾಲಿ ಕೈಯಲ್ಲಿ ಮನೆಗೆ ಹೋಗಬೇಕಾಗಿದೆ.
-ಎಂ.ವಿ.ಮಾಡಳ್ಳಿ, ಹಿರೇಗುಂಜಳ, ಕುಂದಗೋಳ ತಾಲ್ಲೂಕು

ಒಣಬೇಸಾಯ ನಂಬಿಕೊಂಡವರ ಗತಿ ಏನು?
ಇತ್ತೀಚೆಗಷ್ಟೇ ಮಲಪ್ರಭಾ ಬಲದಂಡೆ ಕಾಲುವೆಯ ಮೂಲಕ ನೀರನ್ನು ನವಲಗುಂದ ಹಾಗೂ ಹುಬ್ಬಳ್ಳಿ, ಗದಗ ಜಿಲ್ಲೆಯ ರೋಣ ಭಾಗದ ರೈತರ ಬೆಳೆಗಳನ್ನು ರಕ್ಷಿಸುವ ಸಲುವಾಗಿ ಹರಿಸ­ಲಾಗುತ್ತಿದೆ. ಇದು ಕಾಲುವೆಯ ಪಕ್ಕದ ರೈತರಿಗೆ ಮಾತ್ರ ಅನುಕೂಲ­ವಾಗಲಿದ್ದು, ಒಣಬೇಸಾಯವನ್ನೇ ನಂಬಿಕೊಂಡ ನಮ್ಮಂಥ ರೈತರ ಗತಿ ಏನು?
-ಹುಲಿಗೆಪ್ಪ, ಇಬ್ರಾಹಿಂಪುರ, ತಾ.ನವಲಗುಂದ

‘ಬೇಕಾದಾಗ ಮಳೆಯಾಗಲಿಲ್ಲ’

ಜಿಲ್ಲೆಯಾದ್ಯಂತ ನಿರೀಕ್ಷೆಗೂ ಮೀರಿ ಬಿತ್ತನೆಯಾಗಿದೆ. ಈ ಬಾರಿ 2,08,900 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗುತ್ತದೆ ಎಂದು ಅಂದಾಜು ಮಾಡಿದ್ದೆವು. ಆದರೆ 2,17,675 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಸರಿಯಾದ ಸಮಯಕ್ಕೆ ಮಳೆ ಬರದೇ ಇದ್ದುದರಿಂದ ರೈತರು ಮೆಣಸಿನಕಾಯಿ, ಉಳ್ಳಾಗಡ್ಡಿಯಂತಹ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಬದಲು ಅಲ್ಲಿ ಹತ್ತಿ, ಸೋಯಾ ಅವರೆಯನ್ನು ಹಾಕಿದರು.

ಇದರಿಂದಾಗಿ ನಮ್ಮ ಅಂದಾಜಿಗಿಂತ ಹೆಚ್ಚಿನ ಬಿತ್ತನೆ ಆಗಿದೆ. ಆದರೆ ಆಗಸ್ಟ್ ಮೊದಲ ವಾರದಲ್ಲಿ ಮಳೆ ಬರಬೇಕಿತ್ತು. ಅದಕ್ಕೂ ಮುನ್ನ ರಭಸದಿಂದ ಸುರಿದ ಮಳೆಯಿಂದ ಬೆಳೆಗೇನೂ ಪ್ರಯೋಜನವಾಗಲಿಲ್ಲ. ಜಿಟಿ ಜಿಟಿ ಮಳೆ ಬರಬೇಕಿತ್ತು. ಅಂದಾಗ ಭೂಮಿ ತೇವಾಂಶ ಹಿಡಿದುಕೊಳ್ಳುತ್ತಿತ್ತು. ಆಗಸ್ಟ್ ತಿಂಗಳಲ್ಲಿ ಮಳೆ ಬೀಳದೇ ಇದ್ದುದರಿಂದ ಹೆಸರು, ಅಲ್ಪಸ್ವಲ್ಪ ಬೆಳೆದ ಉಳ್ಳಾಗಡ್ಡಿ ಬೆಳೆಯೂ ಒಣಗಲು ಆರಂಭಿಸಿತು.
-ಎಸ್.ಎಂ.ಗಡಾದ, ಜಂಟಿ ನಿರ್ದೇಶಕ, ಕೃಷಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT