ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕೆಗೆ ಭೂಮಿ: ರೈತರ ವಿರೋಧ

ಸಿಎಂಗೆ ಮನವಿ ಸಲ್ಲಿಸಲು ಅವಕಾಶ: ಶಾಸಕ ಮನವಿ
Last Updated 24 ಸೆಪ್ಟೆಂಬರ್ 2013, 8:47 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕಿನ ಕರಿನಾಯಕನಹಳ್ಳಿಯಲ್ಲಿ ಕೈಗಾರಿಕೆಗಳ ವಿಸ್ತರಣೆಗೆ ಅಗತ್ಯವಿರುವ ಭೂಮಿಯನ್ನು ಮಾರಲು ರೈತರು ಸಿದ್ಧರಿಲ್ಲ. ಆ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲು ಅವರಿಗೆ ಅವಕಾಶ ಕಲ್ಪಿಸಬೇಕು ಎಂದು ಮಾಲೂರು ಶಾಸಕ ಕೆ.ಎಸ್‌.ಮಂಜುನಾಥ್‌ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಕೋರಿದರು.

ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ರೈತರ ನಿಲುವನ್ನು ತಿಳಿಸಿದ ಶಾಸಕರು, ಫಲವತ್ತಾದ ಭೂಮಿಯನ್ನು ಸರ್ಕಾರ ನೀಡುವ ಕಡಿಮೆ ದರಕ್ಕೆ ಮಾರಲು ಅವರು ಸಿದ್ಧರಿಲ್ಲ. ಜಮೀನಿಗೆ ಮಾರುಕಟ್ಟೆ ದರವನ್ನು ನಿಗದಿ ಮಾಡಿ­ದರೆ ಮಾತ್ರ ರೈತರು ಭೂಸ್ವಾಧಿನಕ್ಕೆ ಒಪ್ಪಿಗೆ ನೀಡುತ್ತಾರೆ ಎಂದರು.

ಕರಿನಾಯಕನಹಳ್ಳಿ ವ್ಯಾಪ್ತಿಯ 200 ಎಕರೆ ಭೂಮಿ ಫಲವತ್ತತೆಯಿಂದ ಕೂಡಿದೆ. ಬೆಂಗಳೂರಿಗೆ ಹತ್ತಿರದಲ್ಲಿ­ರುವ ಈ ಪ್ರದೇಶದಲ್ಲೇ ಕೇವಲ ಒಂದು ಗುಂಟೆ ಜಮೀನು ರೂ. 11.50 ಲಕ್ಷ­ದಷ್ಟು ಮೊತ್ತಕ್ಕೆ ಮಾರಾಟವಾಗಿದೆ. ಸನ್ನಿವೇಶ ಹೀಗಿರುವಾಗ ಹೆಚ್ಚಿನ ದರ ನಿಗದಿ ಮಾಡಬೇಕು ಎಂದರು.

ರೈತರ ಒಪ್ಪಿಗೆ ಇಲ್ಲದೆ ಬಲವಂತ­ವಾಗಿ ಸರ್ಕಾರ ಭೂಸ್ವಾಧೀನ ಮಾಡ­ಬಾರದು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಹೀಗಾಗಿ ರೈತರು ತಮ್ಮ ಅಹವಾಲನ್ನು ಮುಖ್ಯಮಂತ್ರಿಗೆ ತಿಳಿಸಲು ಅವಕಾಶ ಕಲ್ಪಿಸಬೇಕು ಎಂದರು.

ಅದಕ್ಕೆ ಒಪ್ಪಿದ ಸಚಿವ ಮುನಿಯಪ್ಪ, ಜನಪ್ರತಿನಿಧಿಯಾಗಿ ಜನರ ಆಶೋತ್ತರ­ಗಳ ಕುರಿತು ಕಾಳಜಿ ವಹಿಸುವುದು ಸರಿಯಾದ ನಡೆ. ಆದರೆ ಕೈಗಾರಿಕೆಗಳು ಸ್ಥಾಪನೆಯಾಗುವುದರಿಂದ ಸ್ಥಳೀಯ ಜನಸಮುದಾಯಕ್ಕೆ ಆಗುವ ಪ್ರಯೋ­ಜನ­ಗಳ ಕುರಿತು ಅರಿವು ಮೂಡಿಸುವ ಕೆಲಸವನ್ನೂ ಜನಪ್ರತಿನಿಧಿಗಳು ಮಾಡ­ಬೇಕು. ರೈತರನ್ನು ಒಪ್ಪಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದರು.

ಮೊಯಿಲಿ ಕೊಡುಗೆ ಏನು?
ಇದೇ ಸಭೆಯಲ್ಲಿ, ಶಾಶ್ವತ ನೀರಾವರಿ ಸೌಲಭ್ಯವನ್ನು ಕಲ್ಪಿಸುವಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯ ಎಂ.ವೀರಪ್ಪ ಮೊಯಿಲಿ ಅವರ ಕೊಡುಗೆ ಏನು ಎಂದು ಮಾಲೂರು ಶಾಸಕ ಕೆ.ಎಸ್‌.ಮಂಜುನಾಥ್ ಪ್ರಶ್ನಿಸಿ­ದರು.

ನೀರಿನ ಕೊರತೆ ಸಮಸ್ಯೆಯನ್ನು ಎದುರಿಸುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಗೆ ಮೊಯಿಲಿ ಗಮನಾರ್ಹ ಕೊಡುಗೆ ನೀಡಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಿಂದ ಇಲ್ಲಿ ಬಂದು ಸಂಸದರಾಗಿರುವ ಅವರು ತಮ್ಮ ಸ್ವಂತ ಪ್ರದೇಶದ ಮುಲಾಜುಗಳಿಗೆ ಸಿಲುಕಿರುವುದರಿಂದ ಪ್ರತಿನಿಧಿಸುತ್ತಿರುವ ಕ್ಷೇತ್ರದ ಅಗತ್ಯಗಳನ್ನು ಪೂರೈಸುವುದು ಸಾಧ್ಯವಾಗುತ್ತಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT