ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆ ಮೊದಲಿಲ್ಲದ ಸಂಘರ್ಷ

Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನುಷ್ಯ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಜನಸಂಖ್ಯೆ ಏರುತ್ತಿದ್ದಂತೆ, ಕೃಷಿ ಭೂಮಿ ವಿಸ್ತರಣೆಗೆ, ಕೈಗಾರಿಕೆಗೆ, ಅಣೆಕಟ್ಟು, ರಸ್ತೆಗಳಿಗೆ, ನಗರೀಕರಣಕ್ಕೆ ಹೀಗೆ ನಾನಾ ಬಗೆಯ ಚಟುವಟಿಕೆಗಾಗಿ ಮಾನವ ಅರಣ್ಯವನ್ನು ಕರಗಿಸಲು ಶುರು ಮಾಡಿದ. ವನ್ಯಜೀವಿಗಳ ಆವಾಸ ಸ್ಥಾನ ಕ್ಷೀಣಿಸಲಾರಂಭಿಸಿತು. ಪರಿಣಾಮ: ಹುಲಿ, ಚಿರತೆ, ಕಾಡಾನೆ, ಕರಡಿ... ದಾಳಿಗೆ ಮನುಷ್ಯ ಬಲಿ. ವನ್ಯಜೀವಿಗಳಿಂದ ಬೆಳೆ ನಾಶ, ಆಸ್ತಿಪಾಸ್ತಿ ಹಾನಿ... ಎನ್ನುವ ವರದಿಗಳನ್ನು ನಿತ್ಯ ಕಾಣುವಂತೆ ಮತ್ತು ಕೇಳುವಂತೆ ಆಗಿದೆ.

ಎಲ್ಲದಕ್ಕೂ ಒಂದು ಚೌಕಟ್ಟು, ನಿಯಂತ್ರಣ ಇರಬೇಕಲ್ಲವೇ? ಆದರೆ, ವಾಸ್ತವದಲ್ಲಿ ನಡೆಯುತ್ತಿರುವುದೇ ಬೇರೆ. ಉದಾಹರಣೆಗೆ ಬೆಂಗಳೂರು ನಗರ ವ್ಯಾಪ್ತಿಗೂ ಒಂದು ಮಿತಿ ಬೇಕಿತ್ತು. ಆದರೆ, ಬೆಂಗಳೂರನ್ನು ಅತ್ತ ಮೈಸೂರುವರೆಗೆ, ಇತ್ತ ತುಮಕೂರು,  ಆ ಕಡೆಯಿಂದ ಕೋಲಾರ–ಚಿಕ್ಕಬಳ್ಳಾಪುರ, ಮತ್ತೊಂದು ಕಡೆ ಹೊಸೂರು–ತಮಿಳುನಾಡುವರೆಗೆ ವಿಸ್ತರಿಸಿದರೆ ನಡುವೆ ಇದ್ದ ಅರಣ್ಯ–ವನ್ಯಜೀವಿಗಳ ಪಾಡು ಏನಾಗಬೇಕು? ಇಂತಹ ಪರಿಸ್ಥಿತಿಯೇ ಎಲ್ಲ ಕಡೆಯೂ ಕಾಣಿಸುತ್ತಿದೆ. ಭೂ ಒತ್ತುವರಿ, ಅರಣ್ಯನಾಶ, ಗಣಿಗಾರಿಕೆ, ನೈಸರ್ಗಿಕ ಜಲಮೂಲಗಳಿಗೆ ಮಾನವ ನಿರ್ಮಿತ ಧಕ್ಕೆ, ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ಅಡ್ಡಿ ಉಂಟುಮಾಡಿದೆ.

ಬಂಡೀಪುರ, ನಾಗರಹೊಳೆ, ವೈನಾಡು, ಮಧುಮಲೈ, ಕಾವೇರಿ ಕಣಿವೆ, ಬನ್ನೇರುಘಟ್ಟ ಇವೆಲ್ಲ ಅರಣ್ಯಗಳಿಗೆ ಸಂಪರ್ಕ ಕೊಂಡಿಗಳು ಇದ್ದವು. ಒಂದು ಅರಣ್ಯದಿಂದ ಇನ್ನೊಂದು ಅರಣ್ಯದ ನಡುವೆ ಪ್ರಾಣಿಗಳ ಓಡಾಟ ಅಥವಾ ವಲಸೆ ಸಹಜವಾಗಿಯೇ ಇತ್ತು.  ಆಯಾ ಋತುವಿನಲ್ಲಿ ಸಿಗುವ ಆಹಾರ, ವಾತಾವರಣ, ಜಲಮೂಲ ಅವಲಂಬಿಸಿ ಪ್ರಾಣಿಗಳ ವಲಸೆ ನಡೆಯುತ್ತದೆ.  ವನ್ಯಜೀವಿಗಳು ನೀರು, ಆಹಾರ ಅನ್ವೇಷಣೆ ಮತ್ತು ವಂಶಾಭಿವೃದ್ಧಿಗೆ ಅವುಗಳದೇ ಆದ ಪಥದಲ್ಲಿ ಸಂಚರಿಸುತ್ತಿರುತ್ತವೆ.

ಅವುಗಳ ವಲಸೆ ಮತ್ತು ಆಹಾರ ಅನ್ವೇಷಣೆಗೂ ಒಂದು ‘ಕಾರಿಡಾರ್‌’ ಇರುತ್ತದೆ. ಆ ‘ಕಾರಿಡಾರ್‌’ಗಳನ್ನು ಈಗ ಜನವಸತಿ ಪ್ರದೇಶ, ಕೃಷಿ ಭೂಮಿ, ಕಾಫಿ ತೋಟ ವಿಸ್ತರಣೆಗೆ, ಹೊಸ ಹೊಸ ರಸ್ತೆ, ರೈಲು ಮಾರ್ಗ, ಕಿರು ವಿದ್ಯುತ್‌ ಯೋಜನೆಗಳು, ಜಲಾಶಯಗಳು, ನೀರು ಕಾಲುವೆಗಳು, ವಿದ್ಯುತ್‌ ತಂತಿ ಬೇಲಿಗಳು ನುಂಗಿವೆ. ಇದು ಸಹಜವಾಗಿ  ನಡೆಯುತ್ತಿದ್ದ ಪ್ರಾಣಿಗಳ ವಲಸೆ ಪದ್ಧತಿಗೆ ತೀವ್ರತರಹದ ಧಕ್ಕೆ ಉಂಟುಮಾಡಿದೆ.

ಇವತ್ತು ಮೀಸಲು ಅರಣ್ಯಗಳೇ ಒತ್ತುವರಿಗೆ ಒಳಗಾಗಿ ಕಾಫಿ ತೋಟಗಳಾಗಿವೆ ಎಂದ ಮೇಲೆ ಅರಣ್ಯದಲ್ಲಿ ಇರಬೇಕಾಗಿದ್ದ ವನ್ಯಜೀವಿ ಗಳು ನಾಡಿಗೆ ಬಾರದೆ ಮತ್ತೆಲ್ಲಿ ಜೀವಿಸಬೇಕು?  ಒಬ್ಬ ಮನುಷ್ಯ ವಾಸಿಸಲು 30–40 ಅಡಿ ನಿವೇಶನ ಕೇಳುವಾಗ ಒಂದು ವನ್ಯಜೀವಿ ಬದುಕಲು 30–40 ಎಕರೆ ಅರಣ್ಯವನ್ನು ನಾವು ಮೀಸಲಿಡುವುದು ಬೇಡವೇ? ಅರಣ್ಯದ ಮೇಲೆ ಪ್ರಯೋಗ ಮಾಡಲು ಹೋಗಬಾರದು. ಕಾಡಿನ ಬಿದಿರು ಕಡಿದು ನಾಶ ಮಾಡಿದ್ದರ ಫಲ ಆನೆಗಳು ನಾಡಿಗೆ ನುಗ್ಗುವಂತಾಯಿತು.

ಕಾಡುಹಂದಿ, ಕಡವೆ, ಜಿಂಕೆ, ಮೊಲ, ಬರ್ಕ, ಕಾಡುಕುರಿಗಳನ್ನು ಮನುಷ್ಯ ಬೇಟೆಯಾಡುತ್ತಿರುವ ಪರಿಣಾಮ ಹುಲಿ, ಚಿರತೆಗಳು ಅರಣ್ಯದ ಅಂಚಿನ ಗ್ರಾಮಗಳಿಗೆ ನುಗ್ಗಿ ಜಾನುವಾರುಗಳನ್ನು ಹೊತ್ತೊಯ್ಯುತ್ತಿವೆ. ಹೀಗೆ ಕಾಡಂಚಿಗೆ ಬರುವ ಹುಲಿ, ಚಿರತೆಗಳಿಗೆ ಮನುಷ್ಯನೂ ಸುಲಭದ ಬೇಟೆಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ನಗರದ ಹೊರ ಅಂಚಿನ ಸ್ಥಳಗಳಿಗೆ ಸುರಿಯುವ ಆಹಾರ ತ್ಯಾಜ್ಯಗಳಿಗೆ ಮೊದಲು ಹಂದಿ, ನಾಯಿಗಳು ಬರಲಾರಂಭಿಸುತ್ತವೆ.

ಇವೆರಡನ್ನು ಹುಡುಕಿಕೊಂಡು ಚಿರತೆಗಳು ಬರುತ್ತವೆ. ಒಂದು ದಿನ ಇಲ್ಲಿ ತ್ಯಾಜ್ಯ ಸುರಿಯಲು ಹೋದ ವ್ಯಕ್ತಿ ಅಥವಾ ಆ ಭಾಗದಲ್ಲಿ ಎಂದಿನಂತೆ ಓಡಾಡುವ ಮನುಷ್ಯ ಚಿರತೆ ದಾಳಿಗೆ ಸುಲಭ ತುತ್ತಾಗುತ್ತಾನೆ. ಎಷ್ಟೋ ಬಾರಿ ನಗರ ಪ್ರದೇಶಗಳಿಗೆ ಚಿರತೆಗಳು ನುಗ್ಗಿದ ಪ್ರಕರಣಗಳ ಹಿನ್ನೆಲೆ ಕೆದುಕುತ್ತಾ ಹೋದಾಗ ಹೊರ ವಲಯದಲ್ಲಿ ಸುರಿಯುವ ಮಾಂಸದಂಗಡಿಯ ತ್ಯಾಜ್ಯ ಮತ್ತು ಕಸವೇ ಮೂಲ ಕಾರಣವಾಗಿ ಕಾಣಿಸುತ್ತದೆ. ವನ್ಯಜೀವಿಗಳೊಂದಿಗಿನ ಸಂಘರ್ಷ ತಪ್ಪಿಸಿಕೊಳ್ಳಲು ಮನುಷ್ಯನ ಜೀವನ ಶೈಲಿಯೂ ಬದಲಾಗಬೇಕು.

ಹಿಂದೆಲ್ಲ ಬೇಸಿಗೆ ಬೆಳೆ ಪದ್ಧತಿ ಅಷ್ಟಾಗಿ ಇರಲಿಲ್ಲ. ಈಗ ನೀರಾವರಿ ಸೌಲಭ್ಯದಿಂದಾಗಿ ಬೇಸಿಗೆಯಲ್ಲೂ ಬೆಳೆ ಬೆಳೆಯಲು ರೈತರು ಶುರು ಮಾಡಿದ್ದಾರೆ. ಬೇಸಿಗೆಯಲ್ಲಿ ಅರಣ್ಯದಲ್ಲಿ ಮೊದಲೇ ಹಸಿರು ಕಡಿಮೆಯಾಗಿರುತ್ತದೆ. ಅರಣ್ಯದಂಚಿನಲ್ಲಿ ಬೇಸಿಗೆ ಕಾಲದಲ್ಲೂ ಹಸಿರು ಬೆಳೆ ಸಿಗುವಾಗ ಪ್ರಾಣಿಗಳು ದಾಳಿ ಮಾಡುವುದು ಸಹಜ. ಪ್ರಾಣಿ ಪ್ರಪಂಚದಲ್ಲಿ ಆಹಾರಕ್ಕಾಗಿ ಒಂದು ಜೀವಿ ಮತ್ತೊಂದು ಜೀವಿಯನ್ನು ಅವಲಂಬಿಸಿರುತ್ತದೆ.

ವನ್ಯಜೀವಿಗಳು ಮನುಷ್ಯನ ಆಹಾರವನ್ನು ಕೊಂಚ ಪ್ರಮಾಣದಲ್ಲಿ ಕಸಿದುಕೊಳ್ಳುವ ಪ್ರಯತ್ನ ನಡೆಸಿದರೆ, ಮನುಷ್ಯ ಪ್ರಾಣಿಗಳ ಆಹಾರವಷ್ಟೇ ಅಲ್ಲ, ಆವಾಸ ಸ್ಥಾನವನ್ನೇ ಕಸಿದುಕೊಳ್ಳುತ್ತಿದ್ದಾನೆ. ಮಾನವನಿಂದ ನಡೆಯುವ ಕಳ್ಳ ಬೇಟೆ ಕೂಡ ಯಾವುದೋ ಮತ್ತೊಂದು ಪ್ರಾಣಿಯ ಆಹಾರ ಕಸಿದುಕೊಳ್ಳುವುದಾಗಿರುತ್ತದೆ. ಈ ರೀತಿ ಆಹಾರ ಸರಪಳಿಯ ಕೊಂಡಿ ಕಳಚುವುದು ಸಂಘರ್ಷಕ್ಕೆ ಮುನ್ನುಡಿಯಾಗುತ್ತದೆ. ಮಲೆನಾಡಿನಲ್ಲಿ ಕಾಡಾನೆಗಳ ದಾಳಿಗೆ ಭತ್ತ, ಕಬ್ಬು, ಬಾಳೆ, ಅಡಿಕೆ, ಕಾಫಿ ಗಿಡಗಳು ಧ್ವಂಸವಾಗುತ್ತಿವೆ.

ಬಯಲು ಸೀಮೆಯಲ್ಲಿ ಕೃಷ್ಣಮೃಗ, ಜಿಂಕೆ, ಕಾಡುಹಂದಿಗಳ ಹಾವಳಿಗೆ ರಾಗಿ, ಜೋಳ ಇನ್ನಿತರ ಧಾನ್ಯಗಳ ಬೆಳೆ ಹಾನಿಯಾಗುತ್ತಿದೆ. ವನ್ಯಜೀವಿಗಳ ದಾಳಿಯಿಂದ ಜೀವಹಾನಿ, ಆಸ್ತಿಪಾಸ್ತಿ, ಬೆಳೆ ನಷ್ಟಕ್ಕೊಳಗಾದವರ ಅಳಲು ಹೇಳತೀರದಾಗಿದೆ. ಮನುಷ್ಯ–ವನ್ಯಜೀವಿ ಸಂಘರ್ಷ ಇರುವ ಭಾಗದಲ್ಲಿ ಜೀವ ವಿಮೆ ಜಾರಿಗೊಳಿಸುವ ಅಗತ್ಯವಿದೆ.   ವನ್ಯಜೀವಿ ದಾಳಿ ಮಾಡಿದ ತಕ್ಷಣ ಜನರು ಅರಣ್ಯ ಇಲಾಖೆ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಸಿಬ್ಬಂದಿಯನ್ನು ಥಳಿಸಿ, ಚೆಕ್‌ಪೋಸ್ಟ್‌ಗಳನ್ನು ಧ್ವಂಸ ಮಾಡುವುದರಿಂದ ಸಮಸ್ಯೆಗೆ ಪರಿಹಾರ ದೊರಕುವುದಿಲ್ಲ.

  ಇಲಾಖೆಯೊಂದಿಗೆ ಜನರ ಸಹಕಾರ ಕೂಡ ಮುಖ್ಯವಾಗುತ್ತದೆ. ವನ್ಯಜೀವಿಗಳು ಒಮ್ಮೊಮ್ಮೆ ದಿಕ್ಕು ತಪ್ಪಿ ನಾಡಿನತ್ತ ಬರುವುದು ಉಂಟು. ನಾಡಿನಲ್ಲಿ ಕಾಣಿಸಿಕೊಂಡಾಗ ಮನುಷ್ಯ, ಪ್ರಾಣ ಭಯಕ್ಕೆ ಬಿದ್ದು ತೋರುವ ವರ್ತನೆಯೂ ಅನೇಕ ಬಾರಿ ದೊಡ್ಡ ಅನಾಹುತಗಳಿಗೆ ದಾರಿ ಮಾಡಿಕೊಡುತ್ತದೆ. ವನ್ಯಜೀವಿಗಳು ಅಪಾಯಕಾರಿ ಎಂದು ಮನುಷ್ಯ ಭಾವಿಸಿರುವಂತೆ, ಅವು ಕೂಡ ತಮ್ಮ ಜೀವಕ್ಕೆ ಮನುಷ್ಯನಿಂದ ಆಪತ್ತು ಇದೆ ಎಂದು ವರ್ತಿಸುತ್ತವೆ. ಕಾಡುಪ್ರಾಣಿ ಹೇಗೆ ವರ್ತಿಸುತ್ತದೆ ಎನ್ನುವುದನ್ನು ಯಾರೂ ಊಹಿಸಲಾಗದು, ಪ್ರತಿ ಪ್ರಾಣಿಯ ವರ್ತನೆಯೂ ವಿಭಿನ್ನವಾಗಿರುತ್ತದೆ.

ಪ್ರಕೃತಿಯಲ್ಲಿ ಮನುಷ್ಯನಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೆಚ್ಚು ಅವಕಾಶಗಳಿವೆ. ಆದರೆ, ವನ್ಯಜೀವಿಗಳಿಗೆ ಆ ಅವಕಾಶ ಕಡಿಮೆ. ವನ್ಯಜೀವಿಗಳೊಂದಿಗೆ ಸಂಘರ್ಷಕ್ಕೆ ಇಳಿಯದೆ ಜಾಣ್ಮೆಯಿಂದ ಬದುಕಬೇಕಾಗಿದೆ. ಅಷ್ಟಕ್ಕೂ ನಾವು ವಾಸಿಸುತ್ತಿರುವ ನೆಲೆ ಇರುವುದು ಜಗತ್ತಿನ ಅತ್ಯಂತ ಸೂಕ್ಷ್ಮ ಪರಿಸರದ ನಡುವೆ. ಅದರಲ್ಲೂ ಪಶ್ಚಿಮಘಟ್ಟ ಪ್ರದೇಶ ಎಂದರೆ  ಜೀವ ವೈವಿಧ್ಯದ ತಾಣ. ಇಲ್ಲಿ ಮನುಷ್ಯ ಮತ್ತು ವನ್ಯಜೀವಿ ಭೂಮಿ ಹಂಚಿಕೊಂಡು ಬದುಕುತ್ತಿರುವುದು ವಾಸ್ತವ. ಆದರೆ, ಇಡೀ ಭೂಮಿ ತನಗೆ ಮಾತ್ರ ಎನ್ನುವ ಭಾವನೆ ಬೆಳೆಸಿಕೊಂಡು, ಆ ಭಾವನೆಗೆ ಪೂರಕವಾಗಿ ನಡೆದುಕೊಂಡರೆ ಪ್ರಾಣಿಗಳ ಉಪಸ್ಥಿತಿ ಸಹಿಸಿಕೊಳ್ಳಲು ಮನುಷ್ಯನಿಗೆ ಆಗುವುದಿಲ್ಲ.

ಈ ಭೂಮಿಯಲ್ಲಿ ತಾನೂ ಒಂದು ಜೀವಿಯಷ್ಟೇ, ಬದುಕಲು ತಮಗಿರುವಷ್ಟೇ ಅಧಿಕಾರ ಉಳಿದ ಜೀವಿಗಳಿಗೂ ಇದೆ ಎನ್ನುವ ವಾಸ್ತವ ಅರ್ಥ ಮಾಡಿಕೊಳ್ಳಬೇಕು. ವನ್ಯಜೀವಿಗಳಿಗೆ ಮೀಸಲಿರಬೇಕಾದ ಅರಣ್ಯ ಕಿರಿದಾದಂತೆ, ಅರಣ್ಯದೊಳಗೆ ಮನುಷ್ಯನ ಹಸ್ತಕ್ಷೇಪವಾದಂತೆ ಪ್ರಾಣಿಗಳ ಬದುಕಿನ ಮೇಲೆ ದುಷ್ಪರಿಣಾಮ ಬೀರುವುದು ಸಹಜ. ಅರಣ್ಯ ಸಮೃದ್ಧವಾಗಿರುವಂತೆ ಬಿಟ್ಟರೆ ಮನುಷ್ಯನಿಗೂ ವನ್ಯಜೀವಿಗಳಿಂದ ಉಪಟಳ ಆಗಲಾರದು. ಎಲ್ಲವನ್ನೂ ಸಮತೋಲನದಲ್ಲಿ ಇಡುವ ಶಕ್ತಿಯನ್ನು ಈ ಭೂಮಿ ನಿಸರ್ಗದತ್ತವಾಗಿಯೇ ತನ್ನಲ್ಲಿ ಹುದುಗಿಸಿಕೊಂಡಿದೆ. ಭೂಮಿಯ ಶಕ್ತಿ ಮತ್ತು ಪರಿಸರದ ಸಹನೆ ಪರೀಕ್ಷಿಸಲು ಹೋಗಬಾರದು.
(ಲೇಖಕರು: ವನ್ಯಜೀವಿ ಕಾರ್ಯಕರ್ತ)

ಸ್ವಯಂಕೃತ ಅಪರಾಧ
1994–95ರಲ್ಲಿ ಕಡೂರು ತಾಲ್ಲೂಕಿನ ತುರುವನಹಳ್ಳಿಯಲ್ಲಿ ಮಗು ಚಿರತೆಗೆ ಬಲಿಯಾದ ಪ್ರಕರಣ ಮೊದಲು ವರದಿಯಾಯಿತು. ಒಂದೆರಡು ತಿಂಗಳ ಅಂತರದಲ್ಲಿ ಮೂರು ಚಿರತೆ ದಾಳಿಗೆ ತುತ್ತಾಗಿ, ಐವರು ಗಾಯಗೊಂಡರು. ಆಗ ಎರಡು ನರಭಕ್ಷಕ ಚಿರತೆ ಕೊಲ್ಲುವ ಸಲುವಾಗಿ 22 ಚಿರತೆಗಳನ್ನು ಮತ್ತು 11 ಮರಿಗಳನ್ನು ಕೊಲ್ಲುವ ಪ್ರಮೇಯ ಬಂತು.

ಚಿರತೆ ದಾಳಿಗೆ ಕಾರಣ ಹುಡುಕುತ್ತಾ ಹೋದಾಗ ಬೀರೂರು ಭಾಗದಲ್ಲಿ ರೈಲು ಹಳಿಯನ್ನು ನ್ಯಾರೊಗೇಜ್‌ನಿಂದ ಬ್ರಾಡ್‌ ಗೇಜ್‌ಗೆ ಪರಿವರ್ತಿಸುವಾಗ ಕಾರ್ಮಿಕರು ಬೇರೆ ರಾಜ್ಯಗಳಿಂದ ವಲಸೆ ಬಂದಿದ್ದರು. ಆಗ ವಲಸೆ ಬಂದ ಹೊರರಾಜ್ಯದ ಕಾರ್ಮಿಕರಲ್ಲಿ ಸಹಜ ಸಾವನ್ನಪ್ಪಿದವರ ಅಂತ್ಯಸಂಸ್ಕಾರಕ್ಕೆ ಹೂಳುವ ಪದ್ಧತಿ ಇರಲಿಲ್ಲ. ಬಯಲು ಹೆಣವಾಗಿ ಬಿಸಾಡುತ್ತಿದ್ದರು.

ಇದರಿಂದ ಒಂದೆರಡು ಚಿರತೆಗಳಿಗೆ ಮನುಷ್ಯನ ಮಾಂಸದ ರುಚಿ ಸುಲಭವಾಗಿ ಹತ್ತಿತು. ಜನರ  ಭೀತಿ ಕೊನೆ ಗಾಣಿಸಲು ಕೊನೆಗೆ ಈ ಎರಡು ಚಿರತೆಗಳಿಗಾಗಿ 33 ಚಿರತೆಗಳನ್ನು ಬಲಿ ತೆಗೆದುಕೊಳ್ಳಬೇಕಾಯಿತು. ಈ ರೀತಿ ಚಿರತೆಗಳ ಸರಣಿ ಹತ್ಯೆ ನಡೆಸಿದ್ದರಿಂದ ನಂತರದ ವರ್ಷಗಳಲ್ಲಿ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಕಾಡುಹಂದಿಗಳ ಕಾಟ ಹೆಚ್ಚಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT