ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೊಂಡ ದಲಿತ-ಬ್ರಾಹ್ಮಣ ಭಾಯಿಚಾರಾ?

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕಾನ್ಪುರ : `ಕೌನ್ ಸಾ ಭಾಯಿಚಾರಾ ಸಮಿತಿ? ವೋ ತೋ ಪಿಚಲೇ ಎಲೆಕ್ಷನ್ ಕೆ ಸಾತ್ ಹೀ ಬಂದ್ ಹುವಾ ತಾ ನಾ? (ಯಾವ ಸಹೋದರತ್ವ ಸಮಿತಿ? ಅದು ಕಳೆದ ಚುನಾವಣೆಯ ಜತೆಯಲ್ಲಿ ನಿಂತು ಹೋಗಿದೆಯಲ್ಲಾ?) ಎಂದು ನನ್ನನ್ನೇ ದಡ್ಡನಂತೆ ನೋಡಿ ನಕ್ಕ ಸಪೀಪುರದಲ್ಲಿ ಸಿಕ್ಕ ಬಿಎಸ್‌ಪಿ ಕಾರ್ಯಕರ್ತ ದಶರಥ್ ಪ್ರಸಾದ್. ಕಳೆದ ಹನ್ನೆರಡು ದಿನಗಳ ಸುತ್ತಾಟದ ಕಾಲದಲ್ಲಿ ಈ ಪ್ರಶ್ನೆಯನ್ನು ಹಲವರಿಗೆ ಕೇಳಿದ್ದೇನೆ. ` ಅಂತಹದ್ದೊಂದು ಸಮಿತಿ ನಮ್ಮಲ್ಲಿದೆ~ ಎಂದು ಹೇಳಿದ ಯಾವ ದಲಿತ ಇಲ್ಲವೇ ಬ್ರಾಹ್ಮಣ ನನಗೆ ಸಿಕ್ಕಿಲ್ಲ. ಮೀಸಲು ಕ್ಷೇತ್ರವಾದ ಸಪೀಪುರದಲ್ಲಿಯಾದರೂ ಇಂತಹದ್ದೊಂದು ಸಮಿತಿ ಇರಬಹುದೇನೋ ಎನ್ನುವ ಕುತೂಹಲದಿಂದ ಲಖನೌದಿಂದ ಕಾನ್ಪುರಕ್ಕೆ ಹೋಗುವ ರಸ್ತೆಯಲ್ಲಿ ಸಿಗುವ ಈ ಊರು ಹೊಕ್ಕಿದ್ದೆ.

 ಶೇಕಡಾ 21ರಷ್ಟಿರುವ ಪರಿಶಿಷ್ಟ ಜಾತಿಗಳ ಮತಗಳನ್ನಷ್ಟೇ ನಂಬಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಸಾಧ್ಯವಾಗದು ಎಂದು ಮನವರಿಕೆಯಾದ ನಂತರ ಬಿಎಸ್‌ಪಿ ನಡೆಸಿದ `ಸೋಷಿಯಲ್ ಎಂಜನಿಯರಿಂಗ್~ನ ಒಂದು ಕಾರ್ಯಕ್ರಮ ಬ್ರಾಹ್ಮಣರು ಮತ್ತು ದಲಿತರನ್ನು ಒಟ್ಟು ಸೇರಿಸುವ ಈ `ಭಾಯಿಚಾರಾ ಸಮಿತಿ~. ಪ್ರತಿ ವಿಧಾನಸಭಾ ಕ್ಷೇತ್ರವನ್ನು 25 ಘಟಕಗಳಾಗಿ ವಿಂಗಡಿಸಿ 300 ಬ್ರಾಹ್ಮಣರು ಮತ್ತು 100 ದಲಿತರನ್ನೊಳಗೊಂಡ `ಭಾಯಿಚಾರ ಸಮಿತಿ~ಗಳನ್ನು ಬಿಎಸ್‌ಪಿ ಸ್ಥಾಪಿಸಿತ್ತು.

ಕನಿಷ್ಠ ತಿಂಗಳಿಗೊಂದು ಬಾರಿ ಈ ಸಮಿತಿ ಸಭೆ ನಡೆಸಬೇಕಿತ್ತು. ಊರಿನ ಬ್ರಾಹ್ಮಣರು ತಮ್ಮ ಮನೆಯಲ್ಲಿ ನಡೆಯುವ ಸಮಾರಂಭಗಳಿಗೆ ಮೊದಲ ಆಮಂತ್ರಣ ದಲಿತರಿಗೆ ನೀಡಬೇಕಿತ್ತು. ಅದೇ ರೀತಿ ದಲಿತರು ಮೊದಲ ಆಮಂತ್ರಣ ಬ್ರಾಹ್ಮಣರಿಗೆ ನೀಡಬೇಕಿತ್ತು. ಎರಡು ಜಾತಿಗಳ ನಡುವಿನ ಸಣ್ಣಪುಟ್ಟ ವ್ಯಾಜ್ಯಗಳನ್ನು ಸಮಿತಿಯಲ್ಲಿಯೇ ಚರ್ಚಿಸಿ ಬಗೆಹರಿಸಬೇಕಿತ್ತು. ಇದರ ಹಿಂದೆ ರಾಜಕೀಯ ಲಾಭಪಡೆಯುವ ಉದ್ದೇಶ ಇದ್ದದ್ದು ನಿಜ. ಆದರೆ  ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯ ಎರಡು ತುದಿಗಳಲ್ಲಿರುವ ಎರಡು ಜಾತಿಗಳು ರಾಜಕೀಯ ಕಾರಣಕ್ಕಾಗಿಯಾದರೂ ಈ ರೀತಿಯ ಸೋದರತ್ವದ ಪ್ರದರ್ಶನವನ್ನು ಮಾಡುವುದು ಕೂಡಾ ಒಂದು ಐತಿಹಾಸಿಕ ಪ್ರಯೋಗವೇ ಆಗಿತ್ತು.

 ಕಳೆದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಬಹಳಷ್ಟು ಕಡೆಗಳಲ್ಲಿ ಸಕ್ರಿಯವಾಗಿದ್ದ ಈ ಸಮಿತಿಗಳನ್ನುಕಂಡು ಇವೆಲ್ಲ `ಚುನಾವಣಾ ಗಿಮಿಕ್~ ಇರಬಹುದೇನೋ ಎಂದು ನಾನೂ ಅಂದುಕೊಂಡಿದ್ದೆ. ಆದರೆ ಚುನಾವಣಾ ಫಲಿತಾಂಶ ನನ್ನ ಅಭಿಪ್ರಾಯವನ್ನು ಸುಳ್ಳು ಮಾಡಿತ್ತು.

ಈ ಬಾರಿ ಮಾತ್ರ `ಭಾಯಿಚಾರಾ ಸಮಿತಿ~ಗಳು ಹುಡುಕಿದರೂ ಸಿಗುವುದಿಲ್ಲ. ಅಂದರೆ ದಲಿತರು ಮತ್ತು ಬ್ರಾಹ್ಮಣರ ನಡುವಿನ ಈ ಐತಿಹಾಸಿಕ ಸೋದರತ್ವ ಕೊನೆಗೊಂಡಿದೆಯೇ? ಹಾಗೆಂದು ಈಗಲೇ ತೀರ್ಪು ನೀಡಲಾಗದು, ಆದರೆ ಈ `ಭಾಯಿಚಾರಾ~ ಐದುವರ್ಷಗಳ ಹಿಂದೆ ಇದ್ದಷ್ಟು ಭದ್ರವಾಗಿಲ್ಲ. ಬಿಎಸ್‌ಪಿಗೆ ಸೇರಿದ ಬ್ರಾಹ್ಮಣ ಶಾಸಕರು ಇರುವ ಕ್ಷೇತ್ರಗಳಲ್ಲಿ ಆ ಪಕ್ಷದ ದಲಿತ ನಾಯಕರು ಅಧಿಕಾರಿಗಳ ವರ್ಗಾವಣೆ, ಕಾಮಗಾರಿಗಳ ಗುತ್ತಿಗೆ ನೀಡುವುದು ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಶಾಸಕರನ್ನು ನಿರ್ಲಕ್ಷಿಸಿ ಅಧಿಕಾರ ಚಲಾಯಿಸಲು ಹೋಗುತ್ತಾರೆ.  ಇನ್ನೊಂದೆಡೆ ಬಿಎಸ್‌ಪಿಗೆ ಸೇರಿದ ದಲಿತ ಶಾಸಕರಿರುವ ಕಡೆಗಳಲ್ಲಿ ಬ್ರಾಹ್ಮಣರು ಪಕ್ಷದ ಕಾರ್ಯಕರ್ತರಾಗಿದ್ದರೂ ಅವರಿಗೆ ದನಿ ಇಲ್ಲದಂತಾಗಿದೆ. ಎರಡು ಕಡೆಗಳಲ್ಲಿಯೂ ಪ್ರತಿಷ್ಠೆಯ ಗುದ್ದಾಟ ನಡೆಯುತ್ತಿದೆ. 

 ಬಿರುಕುಬಿಟ್ಟಿರುವ ಈ ಸಂಬಂಧದಿಂದಾಗಿ ಬಿಎಸ್‌ಪಿಯ ಮತಬ್ಯಾಂಕ್ ಒಡೆದರೆ ದಲಿತರು ಪಕ್ಷ ಬಿಟ್ಟು ಹೋಗಲಾರರು, ಆದರೆ ಬ್ರಾಹ್ಮಣರ ಬಗ್ಗೆ ಮಾತ್ರ ಇದೇ ಭರವಸೆಯನ್ನು ಇಟ್ಟುಕೊಳ್ಳಲಾಗದು. ಈಗಿನ ಬಿರುಕಿಗೆ  ಮೊದಲ  ಕಾರಣ ಬಿಎಸ್‌ಪಿಯ ಯಶಸ್ಸಿನ ವಾರಸುದಾರಿಕೆಯ ವಿಷಯದಲ್ಲಿ ಹುಟ್ಟಿಕೊಂಡಿರುವ ವಿವಾದ.

ಬಿಎಸ್‌ಪಿಯ ಗೆಲುವು ತಮ್ಮದೇ ಎಂದು ಎರಡು ದಶಕಗಳಿಂದ ತಿಳಿದುಕೊಂಡಿದ್ದ ತಮ್ಮ ಜತೆ ಬ್ರಾಹ್ಮಣರು ಸೇರಿಕೊಂಡಿರುವುದನ್ನು ದಲಿತರು ಇಷ್ಟಪಡುತ್ತಿಲ್ಲ. ಬ್ರಾಹ್ಮಣರು ಶಾಸಕರಾಗಿರುವುದು ಬೆಹೆನ್‌ಜಿ ಔದಾರ್ಯದಿಂದಾಗಿ ಎನ್ನುವ ಅಭಿಪ್ರಾಯ ದಲಿತರಲ್ಲಿದೆ. ನಾವು ಮತ ಹಾಕದಿದ್ದರೆ ಇಷ್ಟೊಂದು ದಲಿತ ಶಾಸಕರು ಹೇಗೆ ಆಯ್ಕೆಯಾಗುತ್ತಿದ್ದರು? ಎಂದು ಬಿಎಸ್‌ಪಿಯಲ್ಲಿರುವ ಬ್ರಾಹ್ಮಣರೂ ಕೇಳುತ್ತಿದ್ದಾರೆ.

`ಇಬ್ಬರೂ ಹೇಳುವುದರಲ್ಲಿ ಸತ್ಯ ಇದೆ. ಮಾಯಾವತಿಯವರು ದಲಿತರ ಮತಗಳನ್ನು ವರ್ಗಾಯಿಸಿದ್ದ ಕಾರಣಕ್ಕೆ ಬ್ರಾಹ್ಮಣ ಶಾಸಕರು ಆಯ್ಕೆಯಾಗಿದ್ದರು ಎನ್ನುವುದನ್ನು ಎಲ್ಲರೂ ಹೇಳುತ್ತಾರೆ. ಆದರೆ ಬ್ರಾಹ್ಮಣರು ಮತಹಾಕಿದ್ದರಿಂದಲೇ ದಲಿತ ಶಾಸಕರ ಹೆಚ್ಚಾಯಿತೆನ್ನುವುದು ಬಹಳ ಮಂದಿಗೆ ತಿಳಿದಿಲ್ಲ ~ ಎಂದು ಹೇಳಿ ಉತ್ತರ ಪ್ರದೇಶದ ರಾಜಕೀಯದ ಹೊಸ ಜಾತಿಗಣಿತವನ್ನು ವಾರಣಾಸಿಯ ಹಿರಿಯ ಪತ್ರಕರ್ತ ಬೃಜನಾಥ ದುಬೆ ಕೆಲದಿನಗಳ ಹಿಂದೆ ನನ್ನ ಮುಂದೆ ಬಿಡಿಸಿಟ್ಟಿದ್ದರು.

2007ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ್ದು ಮೀಸಲು ಕ್ಷೇತ್ರಗಳು. ರಾಜ್ಯದ 89 ಮೀಸಲು ಕ್ಷೇತ್ರಗಳ ಪೈಕಿ 62ರಲ್ಲಿ ಬಿಎಸ್‌ಪಿ ಅಭ್ಯರ್ಥಿಗಳು ಗೆದ್ದಿದ್ದರು. 2002ರಲ್ಲಿ ಬಿಎಸ್‌ಪಿಯ 24 ಮತ್ತು ಸಮಾಜವಾದಿ ಪಕ್ಷದ 34 ಅಭ್ಯರ್ಥಿಗಳು ಮೀಸಲು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದನ್ನು ನೆನಪು ಮಾಡಿಕೊಂಡರೆ ಈ ಫಲಿತಾಂಶದ ಮಹತ್ವ ಅರಿವಾಗಬಹುದು.

 ಬಿಎಸ್‌ಪಿಯ ಒಟ್ಟು ಸದಸ್ಯರ ಸಂಖ್ಯೆ ಶೇಕಡಾ ನೂರರಷ್ಟು ಮಾತ್ರ ಹೆಚ್ಚಾಗಿದ್ದರೆ ದಲಿತ ಶಾಸಕರ ಸಂಖ್ಯೆ ಶೇಕಡಾ 250ರಷ್ಟು ಹೆಚ್ಚಾಗಿತ್ತು. `2007ರಲ್ಲಿ ಮೀಸಲು ಕ್ಷೇತ್ರಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಬಿಎಸ್‌ಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಕ್ಕೆ ಆ ಕ್ಷೇತ್ರದಲ್ಲಿನ ಬ್ರಾಹ್ಮಣರು ಬೆಂಬಲಿಸಿದ್ದು ಕಾರಣ.

ಮೀಸಲು ಕ್ಷೇತ್ರಗಳಲ್ಲಿ ತಮ್ಮ ಜಾತಿಯ ಅಭ್ಯರ್ಥಿಗಳು ಇಲ್ಲದಿರುವ ಕಾರಣ ಬ್ರಾಹ್ಮಣರು ಬಿಎಸ್‌ಪಿಯ ಲಿತ ಅಭ್ಯರ್ಥಿಗಳನ್ನು ಸಂಪೂರ್ಣವಾಗಿ ಬೆಂಬಲಿಸಿದರು. ಆದುದರಿಂದ ದಲಿತರ ಮತಗಳಿಂದ ಬ್ರಾಹ್ಮಣರು ಶಾಸಕರಾಗಲು ಕಾರಣವಾದಂತೆ,  ದಲಿತ ಶಾಸಕರ ಸಂಖ್ಯೆ ಹೆಚ್ಚಲು ಬ್ರಾಹ್ಮಣರ ಮತಗಳೂ ಕಾರಣ~ ಎಂದಿದ್ದರು ದುಬೆ.

ತನ್ನ ಮತಬುಟ್ಟಿಯಿಂದ ಬಿಎಸ್‌ಪಿ ಕಿತ್ತುಕೊಂಡಿರುವ ದಲಿತ ಮತ್ತು ಬ್ರಾಹ್ಮಣರ ಮತಗಳನ್ನು ಮರಳಿ ಪಡೆಯಲು ಈ ಬಿಕ್ಕಟ್ಟನ್ನು ಬಳಸಿಕೊಂಡು ಕಾಂಗ್ರೆಸ್ ಬಲೆ ಬೀಸುತ್ತಿದೆ. ಆದರೆ ಈ ಎರಡು ಸಮುದಾಯಗಳನ್ನು ಸೆಳೆಯುವ ಶಕ್ತಿ ಇರುವ ಜನಪ್ರಿಯ ದಲಿತ ಇಲ್ಲವೇ ಬ್ರಾಹ್ಮಣ ನಾಯಕರು ಇಲ್ಲದಿರುವುದು ಆ ಪಕ್ಷದ ಸಮಸ್ಯೆ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಇಂದಿನ ದುಸ್ಥಿತಿಗೆ ಇದು ಮುಖ್ಯ ಕಾರಣ. ಕಮಲಾಪತಿ ತ್ರಿಪಾಠಿ, ಎನ್.ಡಿ.ತಿವಾರಿ ನಂತರ ಆ ವರ್ಚಸ್ಸಿನ ಬ್ರಾಹ್ಮಣ ನಾಯಕರು ಹಾಗೂ ಜಗಜೀವನ್‌ರಾಮ್ ನಂತರ ಇಡೀ ದೇಶದ ದಲಿತರು ಗುರುತಿಸಿಕೊಳ್ಳುವ ಮತ್ತೊಬ್ಬ ದಲಿತ ನಾಯಕನನ್ನು ನೀಡಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಿಲ್ಲ.

ಬಿಜೆಪಿಯಲ್ಲಿ ಎಂದೂ ದಲಿತ ನಾಯಕರು ಇರಲೇ ಇಲ್ಲ, ಅಟಲಬಿಹಾರಿ ವಾಜಪೇಯಿ ನಂತರ ಮುರಳಿಮನೋಹರ ಜೋಷಿ ತನ್ನನ್ನು ಬ್ರಾಹ್ಮಣ ನಾಯಕನೆಂದು ಬಿಂಬಿಸಲು ಪ್ರಯತ್ನ ಪಡುತ್ತಿದ್ದರೂ ಅವರನ್ನು ಒಪ್ಪಿಕೊಳ್ಳುವವರು ಇಲ್ಲ.

ಈ ಎರಡೂ ಜಾತಿಗಳ ಮತದಾರರು ಸಮಾಜವಾದಿ ಪಕ್ಷದ ಹಿಂದೆಹೋಗುವವರಲ್ಲ. ಹೋದರೆ ಕಾಂಗ್ರೆಸ್ ಇಲ್ಲವೇ ಬಿಜೆಪಿ ಹಿಂದೆಯೇ ಹೋಗಬೇಕು. ಬ್ರಾಹ್ಮಣರು ಹಳೆಯ ಗಂಡನ ಪಾದವೇ ಗತಿ ಎಂದು ಬಿಜೆಪಿಯನ್ನೆ ಮತ್ತೆ ಆಯ್ಕೆ ಮಾಡಿಕೊಳ್ಳಬಹುದು. ಆದರೆ ದಲಿತರಿಗೆ ಮಾಯಾವತಿ ಅಲ್ಲದೆ ಬೇರೆ ಗತಿ ಎಲ್ಲಿದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT