ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ:ವಸತಿಗೃಹಗಳಲ್ಲಿ ಸ್ಥಳಾಭಾವ

Last Updated 12 ಸೆಪ್ಟೆಂಬರ್ 2011, 9:00 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ಕೊಪ್ಪಳ, ಗಂಗಾವತಿಯಲ್ಲಿನ ಎಲ್ಲಾ ವಸತಿಗೃಹಗಳು ಭರ್ತಿ. ನೆರೆಯ ಹೊಸಪೇಟೆ ಹಾಗೂ ಗದಗ ನಗರಗಳಲ್ಲಿನ ಬಹುತೇಕ ವಸತಿಗೃಹಗಳಲ್ಲಿ ಸಹ ಕೋಣೆಗಳು ಸಿಗುವುದಿಲ್ಲ!
- ಇದು ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಎಫೆಕ್ಟ್.

ಸೆ. 2ರಂದು ಉಪಚುನಾವಣೆಗೆ ಅಧಿಸೂಚನೆ ಹೊರ ಬಿದ್ದಾಗ ನಗರ ಹಾಗೂ ಗಂಗಾವತಿಯಲ್ಲಿನ ವಸತಿಗೃಹಗಳಲ್ಲಿ ಇನ್ನೂ ಕೋಣೆಗಳು ಲಭ್ಯವಿದ್ದವು. ಆದರೆ, ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಸೆ. 9 ಕೊನೆಯ ದಿನವಾಗಿದ್ದ ಹಿನ್ನೆಲೆಯಲ್ಲಿ ಸೆ. 8ರಿಂದಲೇ ಈ ಉಭಯ ನಗರಗಳಲ್ಲಿನ ವಸತಿಗೃಹಗಳ ಜೊತೆಗೆ ನೆರೆಯ ಹೊಸಪೇಟೆ ಹಾಗೂ ಗದಗ ನಗರಗಳಲ್ಲಿನ ವಸತಿಗೃಹಗಳ ಸಿಬ್ಬಂದಿ `ನೋ ರೂಮ್ ಸರ್~ ಎಂಬ ಉತ್ತರ ನೀಡುವ ಪರಿಸ್ಥಿತಿ ನಿರ್ಮಾಣವಾಯಿತು.

ನಮ್ಮ ಲಾಡ್ಜ್‌ನಲ್ಲಿ ಒಟ್ಟು 37 ರೂಮ್‌ಗಳಿವೆ. ಈ ಎಲ್ಲಾ ರೂಮ್‌ಗಳು ಸೆ. 8ರಿಂದಲೇ ಭರ್ತಿಯಾಗಿದ್ದು, ವಿವಿಧ ಪಕ್ಷಗಳ ಮುಖಂಡರು ತಂಗಲಿದ್ದಾರೆ ಎಂದು ನಗರದ ಶ್ರೀ ಮಾತಾ ಲಾಡ್ಜ್‌ನ ವ್ಯವಸ್ಥಾಪಕ ವಲ್ಲಭ ದೀಕ್ಷಿತ ಹೇಳುತ್ತಾರೆ.

ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, ಸೆ. 24ರ ವರೆಗೂ ಈ ರೂಮ್‌ಗಳು ಖಾಲಿಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಭವನದ ಎದುರಿರುವ ಹೊಟೇಲ್ ಹರ್ಷ ಇಂಟರ್‌ನ್ಯಾಶನಲ್‌ನ ಮಾಲಿಕ ಅಣ್ಣಪ್ಪ ಅಂಗಡಿ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಸೆ. 9ರಿಂದಲೇ ನಮ್ಮ ವಸತಿಗೃಹದಲ್ಲಿನ ರೂಮುಗಳನ್ನು ಕಾಯ್ದಿರಿಸಲಾಗಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರಿಗಾಗಿ ಈ ರೂಮುಗಳನ್ನು ಕಾಯ್ದಿರಿಸಲಾಗಿದ್ದು, ಸೆ. 26ರಂದು ಮತದಾನ ನಡೆಯಲಿರುವುದರಿಂದ ಅದಕ್ಕಿಂತ ಮೂರು ದಿನಗಳ ಮುಂಚೆ ಖಾಲಿಯಾಗಬಹುದು ಎಂದು ಹೇಳುತ್ತಾರೆ.

ಇನ್ನು, ಈ ವಸತಿಗೃಹಗಳಲ್ಲಿ ವಸತಿ ಸೌಲಭ್ಯ ಸಿಗದವರು ನಗರದಲ್ಲಿನ ಉಳಿದ ವಸತಿಗೃಹಗಳತ್ತ ಮುಖ ಮಾಡಿದರೆ, ಇನ್ನೂ ಹೆಚ್ಚಿನ ಐಷಾರಾಮಿ ವಸತಿ ಬಯಸುವ ಮುಖಂಡರು ಗಂಗಾವತಿ, ಹೊಸಪೇಟೆ ಇಲ್ಲವೇ ಗದಗ ನಗರಕ್ಕೆ ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದು ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಅಭಿಪ್ರಾಯಪಡುತ್ತಾರೆ.

ಅದರಲ್ಲೂ, ಹೊಸಪೇಟೆ ಮತ್ತು ಗದಗನಲ್ಲಿ ವಾಸ್ತವ್ಯ ಹೂಡಲು ಬಯಸುವುದಕ್ಕೆ ಪ್ರಮುಖ ಕಾರಣವೂ ಇದೆ. ಸೆ. 26ರಂದು ಮತದಾನ ನಡೆಯಲಿರುವುದರಿಂದ ಅದಕ್ಕಿಂತ ಮೂರು ದಿನಗಳ ಮುಂಚೆಯೇ ಎಲ್ಲಾ ಪಕ್ಷಗಳ ಮುಖಂಡರು ಕ್ಷೇತ್ರದಿಂದ ಹೊರ ಹೋಗಬೇಕು.

ಅಂತಹ ಸಂದರ್ಭದಲ್ಲಿ ಹೊಸಪೇಟೆ ಹಾಗೂ ಗದಗ ನಗರಗಳ ವಸತಿಗೃಹಗಳಿಗೆ ವಾಸ್ತವ್ಯವನ್ನು ಸ್ಥಳಾಂತರಗೊಳಿಸಿ, ಅಲ್ಲಿಂದಲೇ ಚುನಾವಣಾ ಪ್ರಚಾರ ಮತ್ತಿತರರ ಚಟುವಟಿಕೆಗಳ ಮೇಲೆ ನಿಗಾ ಇಡಬಹುದು ಎಂಬ ಲೆಕ್ಕಾಚಾರ ಎಲ್ಲಾ ರಾಜಕೀಯ ಪಕ್ಷಗಳದ್ದು ಎನ್ನಲಾಗುತ್ತಿದೆ.

ಹೀಗೆ ಮಾಡುವುದರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಅರೋಪ ಸಹ ಎದುರಾಗುವುದಿಲ್ಲ ಎಂಬುದು ಮತ್ತೊಂದು ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT