ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರಂ ಕೊರತೆ; ಸಭೆ ಮುಂದೂಡಿಕೆ

ಜಿಲ್ಲಾ ಪಂಚಾಯ್ತಿ ವಿಶೇಷ ಸಾಮಾನ್ಯಸಭೆ
Last Updated 8 ಡಿಸೆಂಬರ್ 2012, 6:40 IST
ಅಕ್ಷರ ಗಾತ್ರ

ಶಿವಮೊಗ್ಗ: ಅನುದಾನ ಬಳಕೆಗೆ ಸಂಬಂಧಿಸಿದಂತೆ ಸರ್ಕಾರದ ಸುತ್ತೋಲೆಯೊಂದರ ಪರಿಣಾಮದಿಂದ ಜಿಲ್ಲಾ ಪಂಚಾಯ್ತಿ ವಿಶೇಷ ಸಾಮಾನ್ಯ ಸಭೆ ಯಾವುದೇ ನಿರ್ಣಯ ಅಂಗೀಕರಿಸಲು ಸಾಧ್ಯವಾಗದೆ ಮುಂದೂಡಿದ ಘಟನೆ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2012-13ನೇ ಸಾಲಿನ ಜಿ.ಪಂ. ಅಧ್ಯಕ್ಷರ ಅಭಿವೃದ್ಧಿ ಅನುದಾನದ ್ಙ 2 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯುವ ಉದ್ದೇಶದಿಂದ ಈ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿತ್ತು.

ಆದರೆ, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿ ಸಭಾತ್ಯಾಗ ಮಾಡುವುದಾಗಿ ಹೇಳಿದರು. ಮತ್ತೊಂದೆಡೆ ಅನುಮೋದನೆ ಪಡೆಯಲು ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ಕೋರಂ ಕೊರತೆ ಎದುರಾಗಿದ್ದರಿಂದ ಅನಿವಾರ್ಯವಾಗಿ ಸಭೆ ಮುಂದೂಡಬೇಕಾಯಿತು.

ಕಾಂಗ್ರೆಸ್ ಸದಸ್ಯ ಕಲಗೋಡು ರತ್ನಾಕರ್ ಮಾತನಾಡಿ, ಸರ್ಕಾರ ಜಿ.ಪಂಗೆ. ್ಙ 2 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ಮೊದಲು ಜಿ.ಪಂ. ಅಧ್ಯಕ್ಷರ ವಿವೇಚನಾ ನಿಧಿಯೆಂದು ಹೇಳಲಾಗಿದ್ದು, ಇದೀಗ ಸರ್ಕಾರ ಸುತ್ತೋಲೆ ಹೊರಡಿಸಿ ಜಿ.ಪಂ. ಅಭಿವೃದ್ಧಿ ಅನುದಾನವೆಂದು ಹೇಳಿದೆ. ಆದರೆ, ಈ ಅನುದಾನವನ್ನು ಸೀಮಿತ ಸದಸ್ಯರಿಗೆ ಮಾತ್ರ ಹಂಚಿಕೆ ಮಾಡಲಾಗಿದೆ. ಇತರೆ ಸದಸ್ಯರನ್ನು ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನ ಈಸೂರು ಬಸವರಾಜ್ ಮಾತನಾಡಿ, ಅನುದಾನ ಹಂಚಿಕೆಯಲ್ಲಿ ಪಕ್ಷಪಾತ ಮಾಡಲಾಗಿದೆ. ಸದಸ್ಯರಿಗೆ ಸರಿಸಮಾನವಾಗಿ ಹಂಚಿಕೆ ಮಾಡಿಲ್ಲ. ಅಲ್ಲದೆ, ಈ ಕಡತಕ್ಕೆ ಸಿಇಓ ಸಹಿ ಹಾಕಿ ಒಪ್ಪಿಗೆ ನೀಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಸದಸ್ಯೆ ಶುಭಾ ಕೃಷ್ಣಮೂರ್ತಿ ಮಾತನಾಡಿ, ತಾವು ಅಧ್ಯಕ್ಷರಾಗಿದ್ದಾಗ ್ಙ 1 ಕೋಟಿ  ಅನುದಾನವನ್ನು ಅಧ್ಯಕ್ಷರ ವಿವೇಚನಾ ನಿಧಿ ಎಂದು ಸರ್ಕಾರ ಬಿಡುಗಡೆ ಮಾಡಿತ್ತು. ನಾನು ಎಲ್ಲ ಸದಸ್ಯರಿಗೂ ಸಮಾನವಾಗಿ ಹಂಚಿಕೆ ಮಾಡಿದ್ದೇನೆ ಎಂದರು.

ಪ್ರಸ್ತುತ ಅನುದಾನವನ್ನು ಅಧ್ಯಕ್ಷರ ವಿವೇಚನಾ ನಿಧಿ ಎಂದು ಪರಿಗಣಿಸದೆ ಜಿ.ಪಂ. ಅಭಿವೃದ್ಧಿ ಅನುದಾನ ಎಂದು ಪರಿಗಣಿಸುವಂತೆ ಸರ್ಕಾರದ ಸುತ್ತೋಲೆ ಬಂದಿದ್ದು, ಅನುಮೋದನೆ ನೀಡುವುದು ಅನಿವಾರ್ಯ ಎಂದರು.

ಮಧ್ಯಪ್ರವೇಶಿಸಿ ಮಾತನಾಡಿದ ಈಸೂರು ಬಸವರಾಜ್, ಇದನ್ನು ತಾವು ಒಪ್ಪುವುದಿಲ್ಲ ಎಂದು ಶುಭಾ ಮಾತಿಗೆ ಅಡ್ಡಿಪಡಿಸಿದರು. ಇದನ್ನು ಆಕ್ಷೇಪಿಸಿದ ಬಿಜೆಪಿ ಸದಸ್ಯ ಹುಣವಳ್ಳಿ ಗಂಗಾಧರಪ್ಪ, ಈಸೂರು ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ಶುಭಾರವರಿಗೆ ಮಾತನಾಡಲು ಅವಕಾಶ ನೀಡುವಂತೆ ಹೇಳಿದರು. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.

ಸಭೆಯಲ್ಲಿ ಗೊಂದಲ ಆಗುತ್ತಿರುವುದನ್ನು ಗಮನಿಸಿದ ಅಧ್ಯಕ್ಷರು, ಹತ್ತು ನಿಮಿಷಗಳ ಕಾಲ ಸಭೆ ಮುಂದೂಡಿದರು. ಈ ಸಂದರ್ಭ ಪ್ರತಿಪಕ್ಷದವರೊಂದಿಗೆ ನಡೆಸಿದ ಸಂಧಾನ ವಿಫಲವಾಯಿತು. ಮತ್ತೆ ಸಭೆ ಸೇರಿ ಸಭೆ ಮುಂದೂಡಿರುವುದಾಗಿ ಪ್ರಕಟಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT