ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ಗೆ ಎಚ್‌ಡಿಕೆ ದಂಪತಿ: ಬಾಂಡ್ ಸಲ್ಲಿಕೆ

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:  ವಕೀಲ ವಿನೋದ್      ಕುಮಾರ್ ಸಲ್ಲಿಸಿರುವ ಖಾಸಗಿ ದೂರಿಗೆ ಸಂಬಂಧಿಸಿದಂತೆ `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ಖುದ್ದು ಹಾಜರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಕುಮಾರಸ್ವಾಮಿ, ವೈಯಕ್ತಿಕ ಬಾಂಡ್ ಮತ್ತು ಭದ್ರತೆ ಸಲ್ಲಿಸಿದರು.

ಜಂತಕಲ್ ಗಣಿ ಕಂಪೆನಿಗೆ ಕಾನೂನುಬಾಹಿರವಾಗಿ ಗಣಿ ಗುತ್ತಿಗೆ ನವೀಕರಣಕ್ಕೆ ಶಿಫಾರಸು ಮಾಡಿರುವುದು ಮತ್ತು ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸಗಟು ನಿವೇಶನ ಮಂಜೂರು ಮಾಡಿದ ಆರೋಪದ ಮೇಲೆ ವಿನೋದ್‌ಕುಮಾರ್ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಗೆ ಖುದ್ದು ಹಾಜರಾಗುವಂತೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು.

ಆಗಸ್ಟ್ 30 ಮತ್ತು ಸೆಪ್ಟೆಂಬರ್ 5ರಂದು ಕುಮಾರಸ್ವಾಮಿ ದಂಪತಿ ಅನಾರೋಗ್ಯದ ಕಾರಣ ನೀಡಿ ಖುದ್ದು ಹಾಜರಿಯಿಂದ ವಿನಾಯಿತಿ ಪಡೆದಿದ್ದರು. ಸೆ. 7ರಂದು ಹೈಕೋರ್ಟ್ ಒಂದು ದಿನದ ಮಟ್ಟಿಗೆ ಖುದ್ದು ಹಾಜರಿಯಿಂದ ವಿನಾಯಿತಿ ನೀಡಿತ್ತು. ಪ್ರಕರಣದ ಸಂಬಂಧ ಗುರುವಾರ   ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಶುಕ್ರವಾರ ಮೊದಲ ಬಾರಿಗೆ ನ್ಯಾಯಾಲಯಕ್ಕೆ ಹಾಜರಾದ ದಂಪತಿ, ವಿಚಾರಣೆ ಎದುರಿಸಿದರು.

20 ನಿಮಿಷ ಮೊದಲೇ ಆಗಮನ
: ಬೆಳಿಗ್ಗೆ 11 ಗಂಟೆಗೆ ಪ್ರಕರಣದ ವಿಚಾರಣೆ ನಿಗದಿಯಾಗಿತ್ತು. 10.40ಕ್ಕೆ ಕುಮಾರಸ್ವಾಮಿ ಮತ್ತು ಅನಿತಾ ಇಬ್ಬರೂ ನ್ಯಾಯಾಲಯದ ಆವರಣಕ್ಕೆ ಬಂದರು. 10.50ಕ್ಕೆ ವಿಶೇಷ ನ್ಯಾಯಾಲಯದ ಸಭಾಂಗಣಕ್ಕೆ ಬಂದರು. ಪೊಲೀಸ್ ಭದ್ರತೆಯಲ್ಲಿ ಬಂದ ಅವರು 10 ನಿಮಿಷ ಕಾಲ ಸಭಾಂಗಣದ ಕುರ್ಚಿಯಲ್ಲಿ ಕೂತರು.

11 ಗಂಟೆಗೆ ಸರಿಯಾಗಿ ಇಬ್ಬರೂ ಕಟಕಟೆ ಏರಿದರು. ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಆಗಮಿಸುತ್ತಿದ್ದಂತೆ ಕೈಮುಗಿದರು. 25 ನಿಮಿಷಗಳಿಗೂ ಹೆಚ್ಚು ಕಾಲ ಕಟಕಟೆಯಲ್ಲಿ ನಿಂತ ದಂಪತಿ 11.30ರ ವೇಳೆಗೆ ನ್ಯಾಯಾಲಯದ ಸಭಾಂಗಣದಿಂದ ಹೊರಬಂದರು.

ಬಂಧನದ ಕುರಿತು ಪ್ರಶ್ನೆ: ವಿಚಾರಣೆ ಆರಂಭವಾಗುತ್ತಿದ್ದಂತೆ ನಿರೀಕ್ಷಣಾ ಜಾಮೀನಿಗೆ ಸಂಬಂಧಿಸಿದ ಹೈಕೋರ್ಟ್ ಆದೇಶದ ಪ್ರತಿಯನ್ನು ಕುಮಾರಸ್ವಾಮಿ ಪರ ವಕೀಲ ಹಸ್ಮತ್ ಪಾಷಾ ನ್ಯಾಯಾಲಯಕ್ಕೆ ಸಲ್ಲಿಸಿದರು. ಅದನ್ನು ಪರಿಶೀಲಿಸಿದ ನ್ಯಾಯಾಧೀಶರು, `ಈವರೆಗೂ ಆರೋಪಿಗಳ ಬಂಧನವೇ ಆಗಿಲ್ಲ. ಅವರು ನ್ಯಾಯಾಲಯಕ್ಕೆ ಶರಣಾಗುವ ಬಗ್ಗೆಯೂ ತಿಳಿಸಿಲ್ಲ. ಇಂತಹ ಸಂದರ್ಭದಲ್ಲಿ ಜಾಮೀನಿನ ಪ್ರಶ್ನೆ ಹೇಗೆ ಉದ್ಭವಿಸುತ್ತದೆ~ ಎಂದು ಪ್ರಶ್ನಿಸಿದರು.

ಬಳಿಕೆ ಮೆಮೊ ಸಲ್ಲಿಸಿದ ಪಾಷಾ, ಎಚ್‌ಡಿಕೆ ದಂಪತಿ ವೈಯಕ್ತಿಕ ಬಾಂಡ್ ಮತ್ತು ಭದ್ರತೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಅವಕಾಶ ಕೋರಿದರು. ಅದನ್ನು ನ್ಯಾಯಾಲಯ ಮಾನ್ಯ ಮಾಡಿತು. ನಂತರ ಹೈಕೋರ್ಟ್ ಆದೇಶದಂತೆ ಕುಮಾರಸ್ವಾಮಿ ತಲಾ 50 ಸಾವಿರ ರೂಪಾಯಿ ಬಾಂಡ್ ಸಲ್ಲಿಸಿದರು. ಸಂಪಂಗಿರಾಮನಗರ ನಿವಾಸಿ ವಿ.ವೆಂಕಟೇಶ್ ಎಂಬುವರು ಇಬ್ಬರ ಪರವಾಗಿಯೂ ಜಾಮೀನು ಭದ್ರತೆ ಸಲ್ಲಿಸಿದರು.

ಗೋಯಲ್‌ಗೆ ವಿನಾಯಿತಿ: ಈ ಮಧ್ಯೆ ವಿನೋದ್ ಗೋಯಲ್ ಪರ ವಕೀಲರು ಅರ್ಜಿ ಸಲ್ಲಿಸಿ, ಅನಾರೋಗ್ಯದ ಹಿನ್ನೆಲೆಯಲ್ಲಿ ತಮ್ಮ ಕಕ್ಷಿದಾರರಿಗೆ ಖುದ್ದು ಹಾಜರಿಯಿಂದ ವಿನಾಯಿತಿ ನೀಡುವಂತೆ ಕೋರಿದರು.
ಈ ಬೇಡಿಕೆಯನ್ನು ಮಾನ್ಯ ಮಾಡಿದ ನ್ಯಾಯಾಧೀಶರು ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಿದರು. ಮುಂದಿನ ವಿಚಾರಣೆಯ ವೇಳೆ ಕಡ್ಡಾಯವಾಗಿ ಹಾಜರಾಗುವಂತೆ ಮೂವರು ಆರೋಪಿಗಳಿಗೆ ಆದೇಶಿಸಿದರು.
 

`ನ್ಯಾಯಾಂಗದ ಬಗ್ಗೆ ಗೌರವವಿದೆ~
ವಿಚಾರಣೆ ಮುಗಿಸಿ ಹೊರಬಂದ ಕುಮಾರಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, `ನ್ಯಾಯಾಲಯದ ಬಗ್ಗೆ ನನಗೆ ಅಪಾರವಾದ ಗೌರವವಿದೆ. ವಕೀಲರ ಸಲಹೆಯಂತೆ ವಿಚಾರಣೆಗೆ ಹಾಜರಾಗಿದ್ದೇನೆ~ ಎಂದರು.
`ಬಂಧನದ ಭೀತಿಯಿಂದಾಗಿ ನಾನು ಮತ್ತು ನನ್ನ ಪತ್ನಿ ವಿಚಾರಣೆಗೆ ಹಾಜರಾಗಿಲ್ಲ ಎಂಬ ಪ್ರಚಾರ ನಡೆದಿದೆ. ಆದರೆ ಅದು ಸತ್ಯಕ್ಕೆ ದೂರವಾದ ಸಂಗತಿ. ನನಗೆ ಬಂಧನದ ಭೀತಿ ಇರಲಿಲ್ಲ~ ಎಂದು ಹೇಳಿದರು.

ಸಂಸದ ಎನ್.ಚೆಲುವರಾಯಸ್ವಾಮಿ, ಶಾಸಕರಾದ ಎಚ್.ಸಿ.ಬಾಲಕೃಷ್ಣ, ಬಿ.ಜೆಡ್.ಜಮೀರ್ ಅಹಮ್ಮದ್ ಖಾನ್, ಸುರೇಶ್‌ಬಾಬು, ಜೆಡಿಎಸ್ ಮುಖಂಡ ಎಸ್.ಎಲ್.ಭೋಜೇಗೌಡ ಮತ್ತಿತರರು ಎಚ್‌ಡಿಕೆ ದಂಪತಿಯ ಜೊತೆಗಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT