ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರದಲ್ಲಿ ನಿಲ್ಲದ ರಸ್ತೆ- ಮೋರಿ ಒತ್ತುವರಿ

Last Updated 14 ಅಕ್ಟೋಬರ್ 2012, 7:20 IST
ಅಕ್ಷರ ಗಾತ್ರ

ಕೋಲಾರ: `ನಗರದ ಪ್ರಮಖ ವೃತ್ತಗಳ ಮೂಲೆಗಳಲ್ಲಿ ಅನಧಿಕೃತ ಅಂಗಡಿಗಳು ತಲೆ ಎತ್ತುತ್ತಿರುವುದರಿಂದ ಬಸ್‌ಗಳ ನಿಲುಗಡೆಗೆ ತೊಂದರೆಯಾಗುತ್ತಿದೆ. ನಗರಸಭೆ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ವೃತ್ತಗಳಲ್ಲಿ ವಾಹನ ದಟ್ಟಣೆಗಿಂತ ಅನಧಿಕೃತ ಅಂಗಡಿಗಳ ದಟ್ಟಣೆ ಹೆಚ್ಚಾಗಲಿದೆ...~

-ಕಳೆದ ಅ 4ರಂದು ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಾರಿಗೆ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ರಮೇಶ್ ಅವರು ದೂರು ಮತ್ತು ಸಲಹೆಯ ರೂಪದಲ್ಲಿ ಆಡಿದ ಈ ಮಾತುಗಳನ್ನು ನಗರಸಭೆ ಇನ್ನೂ ಗಂಭೀರವಾಗಿ ಪರಿಗಣಿಸದ ಪರಿಣಾಮ ಮೆಕ್ಕೆ ವೃತ್ತದ ಹೊಸ ಮೋರಿ ಮೇಲೆ ಪೆಟ್ಟಿಗೆ ಅಂಗಡಿಯೊಂದು ತಲೆ ಎತ್ತಿದೆ.

ಮೋರಿಯ ಎರಡು ಬದಿಯ ಕಟ್ಟೆಯನ್ನೇ ತಳಪಾಯವಾಗಿ ಮಾಡಿಕೊಂಡಿರುವ ಇಂಥ ಅಂಗಡಿಗಳು ಹೆಚ್ಚಾದರೆ ಜನ-ವಾಹನಗಳ ಸುಗಮ ಸಂಚಾರಕ್ಕೂ ತೊಂದರೆಯಾಗುವುದಲ್ಲದೆ, ಮುಂದಿನ ದಿನಗಳಲ್ಲಿ ಅವುಗಳನ್ನು ತೆರವುಗೊಳಿಸುವುದು ಕಷ್ಟಸಾಧ್ಯವಾಗುತ್ತದೆ ಎಂದೂ ರಮೇಶ್ ಎಚ್ಚರಿಸಿದ್ದರು. ಆದರೆ ಅವರ ಮಾತಿಗೆ ಕವಡೆ ಕಿಮ್ಮತ್ತನ್ನೂ ನಗರಸಭೆ ನೀಡಿಲ್ಲ ಎಂಬುದಕ್ಕೆ ಮೆಕ್ಕೆ ವೃತ್ತದ ಹೊಸ ಪೆಟ್ಟಿಗೆ ಅಂಗಡಿ ನಿದರ್ಶನದಂತೆ ಕಾಣುತ್ತಿದೆ.

ಅಲ್ಲದೇ ಅದೇ ಸಭೆಯಲ್ಲಿ, ಬಸ್ ಶೆಲ್ಟರ್‌ಗಳ ನಿರ್ಮಾಣ ವಿಷಯ ಬಂದಾಗ, ವೃತ್ತಗಳಿಂದ ಕನಿಷ್ಠ 200 ಮೀಟರ್ ದೂರದಲ್ಲಿ ಶೆಲ್ಟರ್‌ಗಳನ್ನು ನಿರ್ಮಿಸಬೇಕು ಎಂಂಬ ಸಲಹೆಯನ್ನು ಒಪ್ಪಲಾಗಿತ್ತು. ಸಮಿತಿ ಈ ರೀತಿ ನಿರ್ಧರಿಸಿರುವ ವೇಳೆಯಲ್ಲೇ ವೃತ್ತದಲ್ಲಿ ಪೆಟ್ಟಿಗೆ ಅಂಗಡಿ ತಲೆ ಎತ್ತಿರುವುದು ವಿಪರ್ಯಾಸ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಸಿಬ್ಬಂದಿಯೊಬ್ಬರು. ರಸ್ತೆ ವಿಸ್ತರಣೆ, ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವ ವೇಳೆಯಲ್ಲಿ ರಸ್ತೆ ಚರಂಡಿಗಳ ಒತ್ತುವರಿಯೂ ನಿರಂತರವಾಗಿ ನಡೆಯುತ್ತಿದೆ. ಪಾದಚಾರಿ ರಸ್ತೆ ಇರುವುದು ಪಾದಚಾರಿಗಳಿಗೋ ಅಥವಾ ಅಂಗಡಿ ಮಾಲಿಕರಿಗೋ ಎಂಬುದು ಅವರ ಪ್ರಶ್ನೆ.

ಹಣ್ಣಿನಂಗಡಿ ಅಡ್ಡ: ಮೆಕ್ಕೆವೃತ್ತದಲ್ಲಿ ಪೆಟ್ಟಿಗೆ ಅಂಗಡಿಯಲ್ಲಿ ಚಿಲ್ಲರೆ ವ್ಯಾಪಾರ ನಡೆದಿದೆ. ಅದೇ ರೀತಿ, ಹೆಚ್ಚು ವಾಹನ ಮತ್ತು ಪ್ರಯಾಣಿಕರ ದಟ್ಟಣೆ ಇರುವ ಡೂಂಲೈಟ್ ವೃತ್ತದಲ್ಲಿಯೂ ಇಂಥದ್ದೇ ದೃಶ್ಯವನ್ನು ಕಾಣಬಹುದು. ಅಲ್ಲಿಯೂ ಸ್ವಾಮಿ ವಿವೇಕಾನಂದರ ಪ್ರತಿಮೆ-ಫಲಕದ ಹಿಂಭಾಗದ ಚರಂಡಿ ಮೇಲೆ ಹಣ್ಣಿನಂಗಡಿಯಲ್ಲಿ ನಿರ್ಮಿಸಲಾಗಿದೆ.

ಮೋರಿಯಂಚಿಗೆ ಶೆಡ್ ನಿರ್ಮಿಸಿಕೊಂಡಿರುವ ಹಣ್ಣಿನಂಗಡಿ ಮಾಲೀಕರು ರಸ್ತೆ ವಿಸ್ತರಣೆ ಕಾಮಗಾರಿಗೆ ಅಡ್ಡಿಯಾಗಿದ್ದರೂ ಅದನ್ನು ನಗರಸಭೆಯಾಗಲೀ, ಕಾಮಗಾರಿ ನಡೆಸುತ್ತಿರುವ ಲೋಕೋಪಯೋಗಿ ಇಲಾಖೆಯಾಗಲೀ ಪ್ರಶ್ನಿಸುವ, ತೆರವುಗೊಳಿಸುವ ಪ್ರಯತ್ನ ನಡೆಸಿಲ್ಲ.

ಪ್ರತಿ ಮಳೆಗಾಲದಲ್ಲೂ ಈ ವೃತ್ತದಲ್ಲಿ ಮಳೆ ನೀರು ತುಂಬಿತುಳುಕುತ್ತದೆ. ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ. ಅದರ ಸಮಸ್ಯೆ ಎಲ್ಲಿದೆ ಎಂದು ಎಲ್ಲರಿಗೂ ಗೊತ್ತು. ಆದರೆ ಅದನ್ನು ಸರಿಪಡಿಸುವ ಪ್ರಯತ್ನವನ್ನು ಯಾರೊಬ್ಬರೂ ಮಾಡಿಲ್ಲ ಎನ್ನುತ್ತಾರೆ ವ್ಯಾಪಾರಿಯೊಬ್ಬರು.

ವೃತ್ತದ ಮೂಲಕ ಕೆನರಾ ಬ್ಯಾಂಕ್ ಮಾರ್ಗ ಪ್ರವೇಶಿಸುವ ಮೂಲೆಯಲ್ಲಿಯೇ ಹಣ್ಣಿನಂಗಡಿ ಇದೆ. ಅಲ್ಲಿ ಅಂಗಡಿ ಇರುವುದರಿಂದ ಬ್ಯಾಂಕ್ ಕಡೆಯಿಂದ ಬರುವವರಿಗೆ ವೃತ್ತದ ಎಡಭಾಗದ ಪ್ರದೇಶ ಗೋಚರವಾಗುವುದೇ ಇಲ್ಲ. ಮಳೆ ಬಂದ ಸಂದರ್ಭದಲ್ಲಿ ಮಳೆ ನೀರು ರಸ್ತೆ- ವೃತ್ತದಲ್ಲೇ ನಿಲ್ಲುವಂತಾಗಲು ಈ ಅಂಗಡಿ ಕಾರಣ ಎನ್ನುತ್ತಾರೆ ಸುತ್ತಮುತ್ತಲಿನ ಜನ.

ಎಲ್ಲೆಲ್ಲೂ ಅಂಗಡಿ: ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಜಿಲ್ಲಾ ಪಂಚಾಯಿತಿ ಮುಂಭಾಗದಿಂದ ರಸ್ತೆಯ ಎರಡೂ ಬದಿಯಲ್ಲಿ ಪಾದಚಾರಿ ರಸ್ತೆ ಒತ್ತುವರಿಯಾಗಿದೆ. ಉದ್ದಕ್ಕೂ ಗ್ಯಾರೇಜ್‌ಗಳ ವಾಹನಗಳು ನಿಂತಿರುತ್ತವೆ. ಜನ, ಮಕ್ಕಳು ರಸ್ತೆಯಂಚಿನಲ್ಲೇ ನಡೆಯಬೇಕು. ಇದೇ ಸನ್ನಿವೇಶ, ಕ್ಲಾಕ್‌ಟವರ್‌ನಿಂದ ಹೊಸ ಬಸ್ ನಿಲ್ದಾಣದವರೆಗೂ ಇದೆ. ಅಲ್ಲಿಯೂ ಮಾಂಸದ ವ್ಯಾಪಾರಿಗಳು ಮತ್ತು ಗ್ಯಾರೇಜ್‌ಗಳ ಬಹುತೇಕ ಮಂದಿ ಪಾದಚಾರಿ ರಸ್ತೆ ಒತ್ತುವರಿ ಮಾಡಿದ್ದಾರೆ. ಮೋರಿಗಳ ಮೇಲೆಯೇ ಜಗುಲಿಗಳ ನಿರ್ಮಾಣವಾಗಿದೆ.

ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಾದ ದೊಡ್ಡಪೇಟೆ ರಸ್ತೆ, ಎಂ.ಜಿ.ರಸ್ತೆ, ಕಾಳಮ್ಮ ಗುಡಿ ರಸ್ತೆಯಲ್ಲೂ ಮೋರಿಗಳು ಒತ್ತುವರಿಯಾಗಿದೆ. ಈ ರಸ್ತೆಗಳಲ್ಲಿ ಸಂಚರಿಸುವ ಪಾದಚಾರಿಗಳು ಇಕ್ಕಟ್ಟಿನಲ್ಲೇ ಸುರಕ್ಷತೆಯನ್ನು ಹುಡುಕಬೇಕಾದ ಸನ್ನಿವೇಶವಿದೆ.

ಗಲಾಟೆ: ಎಂಜಿ ರಸ್ತೆಯ ಗಾಂಧಿ ಚೌಕದ ಸಮೀಪ ಕನ್ಸರ್‌ವೆನ್ಸಿ ರಸ್ತೆಯ ಆರಂಭದಲ್ಲೇ ಮೊಬೈಲ್ ಫೋನ್ ಸ್ಟೋರ್ ನಿರ್ಮಿಸಿ ವ್ಯಾಪಾರ ನಡೆಸಿದ್ದವರನ್ನು ಎತ್ತಂಗಡಿ ಮಾಡುವ ನಗರಸಭೆಯ ಪ್ರಯತ್ನಕ್ಕೆ ವ್ಯಾಪಾರಿಗಳು ತಡೆ ಉಂಟು ಮಾಡಿದ್ದರು. ಪ್ರಭಾವಿ ಸದಸ್ಯರು ನಗರಸಭೆಯ ಹಿಂದಿನ ನಗರಸಭೆ ಆಯಕ್ತೆ ಆರ್.ಶಾಲಿನಿ ಅವರ ಮೇಲೆ ಒತ್ತಡ ಹೇರಿದ್ದರು.

ಆ ಬಳಿಕ ಮತ್ತೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಲಿಲ್ಲ. ತೆರವು ಕಾರ್ಯಾಚರಣೆ, ಕಂದಾಯ ವಸೂಲಿಗೆ ಸದಸ್ಯರೇ ಅಡ್ಡಿ ಎಂದು ಶಾಲಿನಿ ಬಹಿರಂಗವಾಗಿಯೇ ಆರೋಪಿಸಿ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ, ಸಾರಿಗೆ ಪ್ರಾಧಿಕಾರ ಸಮಿತಿ ಸಭೆಯಲ್ಲಿ ನಗರಸಭೆ ಆಯುಕ್ತ ಮಹೇಂದ್ರಕುಮಾರ್ ಅವರಿಗೆ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಬುದ್ಧಿಮಾತುಗಳನ್ನು ಹೇಳಿದ್ದಾರೆ.

ನಗರವನ್ನು ಸಾಧ್ಯವಾದಷ್ಟು ಸಾರ್ವಜನಿಕ ಸ್ನೇಹಿಯನ್ನಾಗಿಸಲು ನಗರಸಭೆ ಮನಸ್ಸು ಮಾಡಬೇಕು. ಅದಕ್ಕೆ ಎಲ್ಲ ಬಗೆಯ ಸಹಕಾರ ನೀಡಲು ಸಿದ್ಧ ಎಂಬ ಭರವಸೆಯನ್ನೂ ನೀಡಿದ್ದಾರೆ. ನಗರಸಭೆಯು ಅವರಿಗೆ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT