ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಪ್ರವಾಸಿ ಭಾರತ ತಂಡಕ್ಕೆ ಲಕ್ಷ್ಮಣ್ , ರೈನಾ ಆಸರೆ

Last Updated 28 ಜೂನ್ 2011, 19:30 IST
ಅಕ್ಷರ ಗಾತ್ರ

ಬ್ರಿಜ್‌ಟೌನ್ (ಬಾರ್ಬಡಾಸ್): ವೇಗಿ ರವಿ ರಾಂಪಾಲ್ (38ಕ್ಕೆ3) ಅವರ ಪ್ರಭಾವಿ ಬೌಲಿಂಗ್ ದಾಳಿಗೆ ನಲುಗಿದ ಭಾರತ ತಂಡದವರು ಮಂಗಳವಾರ ಇಲ್ಲಿ ಆರಂಭವಾದ ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಆಘಾತ ಅನುಭವಿಸಿದರು.

ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ 60 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 172ರನ್ ಗಳಿಸಿತ್ತು. ವಿ.ವಿ.ಎಸ್.ಲಕ್ಷ್ಮಣ್ (ಬ್ಯಾಟಿಂಗ್ 82) ತಂಡಕ್ಕೆ ಆಸರೆಯಾಗಿದ್ದರು. ಲಕ್ಷ್ಮಣ್‌ಗೆ ಸಾಥ್ ನೀಡಿದ ರೈನಾ (53) ಅವರ ಬಲದಿಂದ ಭಾರತ ಆರಂಭಿಕ ಆಘಾತದಿಂದ ಚೇತರಿಸಿಕೊಂಡಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನ ಪಡೆದ ಭಾರತ ಎರಡನೇ ಓವರ್‌ನಲ್ಲಿಯೇ ಯುವ ಬ್ಯಾಟ್ಸ್‌ಮನ್ ಅಭಿನವ್ ಮುಕುಂದ್ ಅವರ ವಿಕೆಟ್ ಕಳೆದುಕೊಂಡಿತು. ದೇಶಿ ಕ್ರಿಕೆಟ್‌ನಲ್ಲಿ ಎರಡು ವರ್ಷಗಳಿಂದ ಅಮೋಘ ಪ್ರದರ್ಶನ ನೀಡುತ್ತಿರುವ ತಮಿಳುನಾಡಿನ ಈ ಬ್ಯಾಟ್ಸ್‌ಮನ್ ಕೆರಿಬಿಯನ್ ನಾಡಿನ ಪ್ರವಾಸದಲ್ಲಿ ಮತ್ತೆ ವಿಫಲರಾದರು.

ರಾಹುಲ್ ದ್ರಾವಿಡ್ ವಿಕೆಟ್ ಪಡೆದ ವಿಂಡೀಸ್ ತಂಡದ ನಾಯಕ ಡರೆನ್ ಸಮಿ ಸೇಡು ತೀರಿಸಿಕೊಂಡರು. ಕಳೆದ ಪಂದ್ಯದಲ್ಲಿ ರಾಹುಲ್ ಆರು ರನ್ ಗಳಿಸಿದ್ದಾಗ ಸಮಿ ಕ್ಯಾಚ್ ಕೈಚೆಲ್ಲಿದ್ದರು. ಆ ಪಂದ್ಯದಲ್ಲಿ ಶತಕ ಗಳಿಸಿದ್ದ ದ್ರಾವಿಡ್ ಭಾರತ ತಂಡ 1-0 ಮುನ್ನಡೆ ಗಳಿಸಲು ಕಾರಣರಾಗಿದ್ದರು.

ಈ ಹಂತದಲ್ಲಿ ಜೊತೆಗೂಡಿದ ಮುರಳಿ ವಿಜಯ್ ಹಾಗೂ ಲಕ್ಷ್ಮಣ್ ನಿಧಾನವಾಗಿ ಇನಿಂಗ್ಸ್ ಕಟ್ಟಲು ಪ್ರಯತ್ನಿಸಿದರು. ಆದರೆ ಪುಟಿದೆದ್ದು ಬರುತ್ತಿದ್ದ ಚೆಂಡನ್ನು ಎದುರಿಸಲು ವಿಜಯ್ ತಡಕಾಡಿದರು. 11 ರನ್ ಗಳಿಸಲು ಅವರು 75 ಎಸೆತಗಳನ್ನು ತೆಗೆದುಕೊಂಡರು.

ಅಷ್ಟರಲ್ಲಿ ವಿಜಯ್ ವಿಕೆಟ್ ಕಬಳಿಸಿದ ರಾಂಪಾಲ್ ಮತ್ತೊಂದು ಆಘಾತ ನೀಡಿದರು. ಈ ಸರಣಿಯ ಮೊದಲ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 8 ರನ್ ಗಳಿಸಿದ್ದ ತಮಿಳುನಾಡಿನ ಈ ಬ್ಯಾಟ್ಸ್‌ಮನ್ ದ್ವಿತೀಯ ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ್ದರು.

ಆಗ ಬಂದಿದ್ದು ವಿರಾಟ್ ಕೊಹ್ಲಿ. ಆದರೆ ಎದುರಿಸಿದ ಎರಡನೇ ಎಸೆತದಲ್ಲಿಯೇ ಔಟ್. ಇದು ರಾಂಪಾಲ್‌ಗೆ ಲಭಿಸಿದ ಮೂರನೇ ವಿಕೆಟ್. ರೈನಾ ನಂತರ ಬಂದ ದೋನಿ ವೈಯಕ್ತಿಕ ಮೂರು ರನ್ ಗಳಿಸಿದಾಗ ಪೆವಿಲಿಯನ್ ಹಾದಿ ತುಳಿದರು.
 
ಈ ಪಂದ್ಯದಲ್ಲಿ ಭಾರತ ಒಂದು ಬದಲಾವಣೆ ಮಾಡಿದೆ. ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಬದಲು ವೇಗಿ ಅಭಿಮನ್ಯು ಮಿಥುನ್ ಕಣಕ್ಕಿಳಿದಿದ್ದಾರೆ. ಬ್ರೆಂಡನ್ ನ್ಯಾಶ್ ಬದಲಿಗೆ ವಿಂಡೀಸ್ ಮಾರ್ಲೊನ್ ಸ್ಯಾಮುಯೆಲ್ಸ್‌ಗೆ ಸ್ಥಾನ ನೀಡಿದೆ.

ಸ್ಕೋರು ವಿವರ

ಭಾರತ ಮೊದಲ ಇನಿಂಗ್ಸ್ 60 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ172
ಅಭಿನವ್ ಮುಕುಂದ್ ಸಿ ಮಾರ್ಲೊನ್ ಸ್ಯಾಮುಯೆಲ್ಸ್ ಬಿ ರವಿ ರಾಂಪಾಲ್  01
ಮುರಳಿ ವಿಜಯ್ ಸಿ ಕಾರ್ಲ್‌ಟನ್ ಬಾ ಬಿ ರವಿ ರಾಂಪಾಲ್  11
ರಾಹುಲ್ ದ್ರಾವಿಡ್ ಸಿ ಕಾರ್ಲ್‌ಟನ್ ಬಾ ಬಿ ಡರೆನ್ ಸಮಿ  05
ವಿ.ವಿ.ಎಸ್.ಲಕ್ಷ್ಮಣ್ ಬ್ಯಾಟಿಂಗ್  82
ವಿರಾಟ್ ಕೊಹ್ಲಿ ಸಿ ಡರೆನ್ ಸಮಿ ಬಿ ರವಿ ರಾಂಪಾಲ್  00
ಸುರೇಶ್ ರೈನಾ ಸಿ ಭರತ್ ಬಿ ಬಿಶೂ  53
ಮಹೇಂದ್ರ ಸಿಂಗ್ ದೋನಿ ಸಿ ಚಂದ್ರಪಾಲ್ ಬಿ ಎಡ್ವರ್ಡ್ಸ್  02
ಹರಭಜನ್ ಸಿಂಗ್ ಬ್ಯಾಟಿಂಗ್  03
ಇತರೆ (ಬೈ-5, ಲೆಗ್‌ಬೈ-3, ವೈಡ್-5, ನೋ ಬಾಲ್-2)  15
ವಿಕೆಟ್ ಪತನ: 1-1 (ಮುಕುಂದ್; 1.3); 2-8 (ದ್ರಾವಿಡ್; 10.1); 3-38 (ವಿಜಯ್; 25.1); 4-38 (ಕೊಹ್ಲಿ; 25.3), 5-155 (ಸುರೇಶ್ ರೈನಾ; 55.4), 6-167(ದೋನಿ; 58.6).
ಬೌಲಿಂಗ್: ಫಿಡೆಲ್ ಎಡ್ವರ್ಡ್ಸ್ 15-2-38-1, ರವಿ ರಾಂಪಾಲ್ 16-6-38-3, ಡರೆನ್ ಸಮಿ 19-4-52-1, ದೇವೇಂದ್ರ ಬಿಶೂ 9-1-34-1
(ವಿವರ ಅಪೂರ್ಣ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT